Asianet Suvarna News Asianet Suvarna News

ಸೋಷ್ಯಲ್ ಮೀಡಿಯಾದಲ್ಲಿ ಬೇಡ ನಿಮ್ಮ #Relationship ಸ್ಟೇಟಸ್

ಸಾರ್ವಜನಿಕ ವೇದಿಕೆಗಳಲ್ಲಿ ನಿಮ್ಮ ರಿಲೇಶನ್‌ಶಿಪ್ ಬಗ್ಗೆ ಅಧಿಕೃತ ಹೇಳಿಕೆ ನೀಡುವುದರಿಂದ ಒಂದಿಷ್ಟು ನೆಗೆಟಿವ್ ಪರಿಣಾಮಗಳನ್ನು ಎದುರಿಸಬೇಕಾಗಬಹುದು. 

Dont Disclose Your Relationship Status on Social Media
Author
Bangalore, First Published May 27, 2020, 6:25 PM IST

ಸಂಬಂಧವು ಇಬ್ಬರು ವ್ಯಕ್ತಿಗಳ ನಡುವಿನದೇ ಹೊರತೂ ಇಡೀ ಜಗತ್ತಿನೊಂದಿನದಲ್ಲ. ಮುಂಚೆಯೆಲ್ಲ ಸಂಬಂಧಗಳು ಮದುವೆಯವರೆಗೂ ಖಾಸಗಿಯಾಗಿಯೇ ಇರುತ್ತಿದ್ದವು. ಆದರೆ ಈಗ ಹಾಗಲ್ಲ. ಈಗಿನ ಯುವ ಜನತೆಗೆ ತಾವು ಲಿವ್ ಇನ್‌ನಲ್ಲಿದ್ದರೂ, ಲವ್‌ಗೆ ಬಿದ್ದರೂ, ಬ್ರೇಕಪ್ ಆದರೂ ಅವನ್ನೆಲ್ಲ ಸೋಷ್ಯಲ್ ಮೀಡಿಯಾದಲ್ಲಿ ಹಾಕುವ ತುಡಿತ. ತಮ್ಮಿಬ್ಬರ ಸಂಬಂಧದ ವಿಷಯಕ್ಕೆ ಪರಿಚಿತರು ಅಪರಿಚಿತರೆಲ್ಲರನ್ನೂ ಎಳೆತರುವ ಆಸೆ. ಆದರೆ, ಹಾಗೆ ಮಾಡುವುದರಿಂದ ಏನೆಲ್ಲ ನೆಗೆಟಿವ್ ಪರಿಣಾಮಗಳಾಗಬಹುದೆಂಬುದು ಯಾರಿಗೂ ಗೊತ್ತಿರುವುದಿಲ್ಲ. 

ನಿಮ್ಮ ಖಾಸಗಿ ಬದುಕಿನ ಬಗ್ಗೆ ಫ್ರೆಂಡ್ಸ್ ಹಾಗೂ ಫ್ಯಾಮಿಲಿಗೆ ತಿಳಿಸುವುದು ಪರವಾಗಿಲ್ಲ, ಆದರೆ, ಸೋಷ್ಯಲ್ ಮೀಡಿಯಾದಲ್ಲಿ ಜಗಜ್ಜಾಹೀರು ಮಾಡುವುದರಿಂದ ನೀವು ಅನಗತ್ಯ ಗಾಸಿಪ್, ಗಮನ ಹಾಗೂ ಡ್ರಾಮಾವನ್ನು ಬದುಕಿಗೆಳೆದುಕೊಳ್ಳುತ್ತೀರಿ. ಇವೆಲ್ಲವೂ ಕಡೆಗೆ ನಿಮ್ಮದೇ ಮಾನಸಿಕ ಆರೋಗ್ಯವನ್ನು ಹಾಳುಗೆಡವುತ್ತವೆ. ಸಾರ್ವಜನಿಕ ವೇದಿಕೆಯಲ್ಲಿ ನಿಮ್ಮ ರಿಲೇಶನ್‌ಶಿಪ್ ಬಗ್ಗೆ ಹೇಳಿಕೊಳ್ಳುವುದರಿಂದ ಕೆಲವೊಂದು ಪರಿಣಾಮಗಳನ್ನು ಎದುರಿಸಲು ನೀವು ಸಿದ್ಧರಿರಬೇಕಾಗುತ್ತದೆ. ನಿಮ್ಮ ಸಂಬಂಧದ ಕುರಿತು  ಸೋಷ್ಯಲ್ ಮೀಡಿಯಾದಲ್ಲಿ ಏಕೆ ಹಾಕಬಾರದು ಎಂಬುದಕ್ಕೆ ಇಲ್ಲೊಂದಿಷ್ಟು ಕಾರಣಗಳಿವೆ ನೋಡಿ. 

ನಾಲ್ಕು ಮಕ್ಕಳನ್ನು ಹೆತ್ತೂ ಕನ್ಯತ್ವ ಉಳಿಸಿಕೊಂಡ ಹೆಣ್ಣಿವಳು!

ಮಿನಿ ರಿಯಾಲಿಟಿ ಶೋ ಅಲ್ಲ
ನಿಮ್ಮ ಸಂಬಂಧ ಮಿನಿ ರಿಯಾಲಿಟಿ ಶೋ ಅಲ್ಲ.  ನಿಮ್ಮ ನಡುವೆ ಆಗುವುದನ್ನೆಲ್ಲ ಜಗತ್ತು ಕಾಣಬೇಕಿಲ್ಲ. ಅಷ್ಟಾಗಿಯೂ ನೀವು ಸೋಷ್ಯಲ್ ಮೀಡಿಯಾದಲ್ಲಿ ತೋರಿಸಿದ್ದರ ವಿರುದ್ಧ ಚಿತ್ರಣಗಳು ಸಂಬಂಧದಲ್ಲಿ ಹಲವಷ್ಟು ಬರುತ್ತವೆ. ಆರಂಭದಲ್ಲಿ ನಿಮ್ಮದು ಆದರ್ಶ ಜೋಡಿ ಎಂದು ತೋರಿಸಿಕೊಳ್ಳಲು ಅವನ್ನೆಲ್ಲ ಮುಚ್ಚಿಹಾಕುತ್ತೀರಿ. ಬರಬರುತ್ತಾ, ಮುಂಚೆ ಕೊಚ್ಚಿಕೊಂಡಿದ್ದಕ್ಕಾಗಿ ಈಗ ಮುಚ್ಚಿಹಾಕಬೇಕಾದ ಸ್ಥಿತಿ ಬರುತ್ತದೆ. ಮುಚ್ಚಿಟ್ಟುಕೊಳ್ಳುವುದೇ ಸವಾಲಾಗಿರುವ ಈ ದಿನಗಳಲ್ಲಿ ಸಂಬಂಧಕ್ಕೆ ಸ್ವಲ್ಪ ಖಾಸಗಿತನ ನೀಡಿ. 

ಮೂರನೆಯವರ ರಂಗಪ್ರವೇಶ ತಡೆಯಲು
ನೀವು ನಿಮ್ಮ ಸಂಬಂಧವನ್ನು ಜಾಹೀರುಗೊಳಿಸುತ್ತಿದ್ದಂತೆಯೇ ಜನರಿಗೆ ಮಾತನಾಡಲೊಂದು ಹಾಟ್ ಸ್ಪೈಸಿ ಟಾಪಿಕ್ ಸಿಕ್ಕಂತಾಗುತ್ತದೆ. ಅವರು ನೀವು ಹಾಗೂ ನಿಮ್ಮ ಪಾರ್ಟ್ನರ್ ಕುರಿತು ಸೋಷ್ಯಲ್ ಮೀಡಿಯಾದಲ್ಲಿ ಸ್ಟ್ಯಾಕ್ ಮಾಡಲಾರಂಭಿಸುತ್ತಾರೆ. ಅಷ್ಟೇ ಅಲ್ಲ, ನೇರವಾಗಿ ನೋಡದೆ, ನಿಮ್ಮ ಮಾತುಗಳಲ್ಲಿ ಕೇಳದೆಯೇ ನಿಮ್ಮಿಬ್ಬರ ಬಗ್ಗೆ ಒಂದಿಷ್ಟು ಅಭಿಪ್ರಾಯ ಬೆಳೆಸಿಕೊಳ್ಳುವುದಷ್ಟೇ ಅಲ್ಲ, ನಿಮ್ಮ ಬಗ್ಗೆ ಬಿಸಿ ಬಿಸಿ ಕತೆಗಳನ್ನೂ ಕಟ್ಟಿ ಮಾತನಾಡಲಾರಂಭಿಸುತ್ತಾರೆ. ಕೆಲವೊಮ್ಮೆ ನಿಮಗಾಗದವರು ನಿಮ್ಮಿಬ್ಬರ ನಡುವೆ ಅಪನಂಬಿಕೆಗಳನ್ನು ಸೃಷ್ಟಿಸಲೂ ಅವರಿಗೆ ಸರಕು ಹಾಗೂ ಅವಕಾಶ ನೀಡಿದಂತಾಗುತ್ತದೆ. ಈ ಎಲ್ಲ ಬೇಡದ ಡ್ರಾಮಾಗಳನ್ನು ತಡೆಯಲು ನಿಮ್ಮ ಖಾಸಗಿ ಬದುಕನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳುವುದು ಒಳ್ಳೆಯದು. 

ನಿಮ್ಮ ಸಂಗಾತಿಗಾಗಿ
ನೀವು ನಿಮ್ಮ ಸಂಬಂಧದ ಬಗ್ಗೆ ಓಪನ್ ಆಗಿ ಇದ್ದೀರೆಂದ ಮಾತ್ರಕ್ಕೆ ನಿಮ್ಮ ಸಂಗಾತಿಯೂ ಈ ವಿಷಯವನ್ನು ಜಗಜ್ಜಾಹೀರುಗೊಳಿಸಲು ಬಯಸುತ್ತಾರೆಂಬುದು ಸುಳ್ಳು. ಸಂಬಂಧದ ವಿಷಯದಲ್ಲಿ ಸ್ವಲ್ಪ ಖಾಸಗಿತನ ಉಳಿಸಿಕೊಳ್ಳಲು ಅವರು ಬಯಸಿರಬಹುದು. ಆತ ಅಥವಾ ಆಕೆ ಸಂಬಂಧದ ವಿಷಯದಲ್ಲಿ ಇನ್ನೂ ಶೇ.100ರಷ್ಟು ನಿರ್ಧರಿಸಿರಲಾರರು. ಅವರಿಗಿನ್ನೂ ಸಮಯ ಬೇಕಿರಬಹುದು. ಇಂಥ ಸಂದರ್ಭದಲ್ಲಿ ನೀವಿದನ್ನು ಅನೌನ್ಸ್ ಮಾಡಿದರೆ ಅವರಿಗೆ ಮನಸ್ಸಿಗೆ ಕಸಿವಿಸಿಯಾಗಬಹುದು. 

ಎಕ್ಸಿಟ್ ಆಯ್ಕೆಗೆ ಬೀಗ
ಸಂಬಂಧಗಳು ಆರಂಭವಾದಾಗ ಅವು ಎಲ್ಲರಿಗೂ ಶಾಶ್ವತವೇ ಎನಿಸುತ್ತದೆ. ಆಕಾಶದಲ್ಲಿ ತೇಲಾಡುವಂತಾಗುತ್ತದೆ. ಆದರೆ, ಹೆಚ್ಚಿನ ಸಂಬಂಧಗಳು ಅರ್ಧದಲ್ಲಿ, ಕೆಲ ವರ್ಷಗಳಲ್ಲಿ ಮುರಿದು ಬೀಳುತ್ತವೆ. ಬ್ರೇಕಪ್ ಎಂಬುದು ಯಾರ ಜೀವನದಲ್ಲಿ ಬೇಕಾದರೂ ಆಗಬಹುದು. ನೀವಿಬ್ಬರೂ ಬಹಳ ಒಳ್ಳೆಯವರೇ ಆಗಿದ್ದಾಗಲೂ ಬದುಕು ತಂದೊಡ್ಡುವ ಅನಿರೀಕ್ಷಿತ ಸವಾಲುಗಳು ನಿಮ್ಮನ್ನು ಬೇರ್ಪಡಿಸಬಹುದು. ನೀವು ಯಾವಾಗ ಸಂಬಂಧವನ್ನು ಖಾಸಗಿಯಾಗಿಟ್ಟುಕೊಂಡಿರುತ್ತೀರೋ ಆಗ ಬ್ರೇಕಪ್ ಬಳಿಕ ಬೇಗ ಚೇತರಿಸಿಕೊಳ್ಳಬಹುದು. ಆದರೆ, ಸೋಷ್ಯಲ್ ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾಗ, ನಿಮ್ಮ ಬ್ರೇಕಪ್ ದೊಡ್ಡ ಸುದ್ದಿಯಾಗಬಹುದು ಅಥವಾ ಮರೆಯಬೇಕೆಂದರೂ ಜನ ಮರೆಯಲು ಬಿಡಲಾರರು... ಭವಿಷ್ಯದ ಬದುಕಿಗೆ ಈ ನಿಮ್ಮ ಸ್ಟೇಟಸ್ ಅಪ್ಡೇಟ್ ಅಡ್ಡಗಾಲಾಗಬಹುದು. 

ಮಿಡತೆ ಏನೀ ನಡತೆ? ಬಿರುಗಾಳಿಯಂತೆ ದಾಳಿ ಮಾಡುವ ಕೀಟಗಳು

ವರ್ಚ್ಯುಯಲ್ ಕಾಂಪಿಟೇಶನ್
ಸಂಬಂಧದ ಸ್ಟೇಟಸ್ ಹೇಳಿಕೊಳ್ಳುವ ಮೂಲಕ ನೀವು ನಿಮಗೇ ಗೊತ್ತಿಲ್ಲದಂತೆ ವರ್ಚ್ಯುಯಲ್ ಸ್ಪರ್ಧೆಯೊಂದಕ್ಕೆ ಇಳಿದಿರುತ್ತೀರಿ. ಯಾರ ಜೋಡಿ ಬೆಸ್ಟ್, ನಿಮ್ಮದು ಉಳಿದವರಿಗಿಂತ ಹೇಗೆ ಭಿನ್ನ, ನಿಮ್ಮ ಪ್ರೀತಿಯೇ ಹೆಚ್ಚು ಎಂಬುದನ್ನು ತೋರಿಸಿಕೊಳ್ಳುವ, ಹೋಲಿಸಿಕೊಳ್ಳುವ ಕೆಲಸದಲ್ಲಿ ತೊಡಗುತ್ತೀರಿ. ನೀವು ಸಂತೋಷವಾಗಿರುವುದನ್ನು ಪ್ರತಿ ಕ್ಷಣ ಪ್ರೂವ್ ಮಾಡಲಾರಂಭಿಸುತ್ತೀರಿ. ನಿಮ್ಮಿಬ್ಬರ ಸಂಗತಿಗಳನ್ನೆಲ್ಲ ಜಗತ್ತು ಮೆಚ್ಚಬೇಕು, ಹಾಡಿ ಹೊಗಳಬೇಕು, ನಿಮ್ಮದು ಸೂಪರ್ ಜೋಡಿ ಎನ್ನಲಿ ಎಂದು ಕಾತರಿಸುತ್ತೀರಿ. ಈ ಕಾಂಪಿಟೇಶನ್  ಮಾನಸಿಕ ನೆಮ್ಮದಿಗೆ ಒಳ್ಳೆಯದಲ್ಲ. 

Follow Us:
Download App:
  • android
  • ios