ಪಾಕಿಸ್ತಾನ, ಇರಾನ್, ಉತ್ತರ ಭಾರತದಲ್ಲಿ ಇತ್ತೀಚೆಗೆ ಪ್ರತಿವರ್ಷ ಮಿಡತೆಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ದಾಳಿ ಮಾಡಿ ಆ ಭಾಗದ ಬೆಳೆಗಳನ್ನು ರಾತ್ರೋರಾತ್ರಿ ನಾಶ ಮಾಡಿ- ರೈತರನ್ನು ಕಂಗಾಲಾಗಿಸಿ, ದೇಶಕ್ಕೆ ಆರ್ಥಿಕ ಹೊಡೆತ ಕೊಡುತ್ತಿರುವುದರ ಸುದ್ದಿಯನ್ನು ನೀವೂ ಆಗಾಗ್ಗೇ ನ್ಯೂಸ್‌ಪೇಪರ್‌ಗಳಲ್ಲಿ ಓದಿರುತ್ತೀರಿ. ಕಣ್ಣಿಗೆ ಕಾಣದ ವೈರಸ್ ಒಂದು ಜಗತ್ತನ್ನೇ ಮೇಲುಕೆಳಗಾಗಿಸುತ್ತಿರುವಾಗ, ಕೀಟಗಳು ದಾಳಿ ನಡೆಸಿ ಹೆದರಿಸುವುದು ಅಷ್ಟೇನು ಆಶ್ಚರ್ಯ ಹುಟ್ಟಿಸದಿರಬಹುದು. ಆದರೂ ಕೂಡಾ ಪಾಪದ ಕೀಟದಂತೆ ಕಾಣುವ ಮಿಡತೆ ಹೀಗೆ ಹಿಂಡುಹಿಂಡಾಗಿ ಬರುವ ಕಾರಣವಾದರೂ ಏನು? ಎಲ್ಲಿಂದ ಏಕಾಗಿ ಬರುತ್ತವೆ?

'ಆ ದಿನಗಳ' ಹೊಟ್ಟೆನೋವಿಗೆ ಪಪ್ಪಾಯ ಬೀಜೌಷಧ

ಲೋಕಸ್ಟ್ ಪ್ಲೇಗ್
ಇವು ಮಿಡತೆ ಜಾತಿಗೆ ಸೇರಿದ ಲೋಕಸ್ಟ್ ಎಂಬ ಕೀಟಗಳು. ಇವು ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಆದರೆ, ಕೆಲವೊಂದು ಕಾರಣಗಳಲ್ಲಿ ಅವುಗಳ ಸಂಖ್ಯೆ ಮಿತಿ ಮೀರಿದಾಗ, ತಮ್ಮ ವರ್ತನೆಯನ್ನು ಬದಲಿಸುತ್ತವೆ. ಕೆಲವೊಂದು ಸರಿಯಾದ ವಾತಾವರಣ ಕಂಡುಬಂದಾಗ ಈ ಲೋಕಸ್ಟ್ ಮಿಡತೆಗಳು ಸಿಕ್ಕಾಪಟ್ಟೆ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಅವುಗಳ ಸಂಖ್ಯೆ ಕೋಟಿ ಕೋಟಿ ದಾಟಿ ಹೋಗುತ್ತಿರುವಾಗ ಹಿಂಡಿನಲ್ಲಿ ಬಂದು ತಾವು ಹೋಗುತ್ತಿರುವ ಪ್ರದೇಶದ ಬೆಳೆಗಳನ್ನೆಲ್ಲ ತಿಂದು ಹಾಳುಗೆಡವುತ್ತವೆ. ಹೀಗೆ ಹಿಂಡಾಗಿ ಬೆಳೆಗಳ ಮೇಲೆ ದಾಳಿ ಮಾಡಿ, ದೇಶದ ಕೃಷಿ ಆರ್ಥಿಕತೆಗೆ ಹೊಡೆತ ಕೊಡುವ ಕ್ರಮಕ್ಕೆ ಲೋಕಸ್ಟ್ ಪ್ಲೇಗ್ ಎಂದು ಹೆಸರು. 

ಲೋಕಸ್ಟ್ ಹಿಂಡಾಗುವುದು ಹೇಗೆ?
ಮಿಡತೆಗಳಲ್ಲಿ ಹಲವು ಜಾತಿ ಉಪಜಾತಿಗಳಿವೆ. ಅವುಗಳಲ್ಲಿ ನಾಲ್ಕು ವಿಧದ ಲೋಕಸ್ಟ್ ಮಿಡತೆಗಳು ಈ ರೀತಿ ಪ್ಲೇಗ್ ಹುಟ್ಟು ಹಾಕಬಲ್ಲವು. ವಲಸೆ ಲೋಕಸ್ಟ್, ಮರುಭೂಮಿ ಲೋಕಸ್ಟ್, ಬಾಂಬೆ ಲೋಕಸ್ಟ್ ಹಾಗೂ ಟ್ರೀ ಲೋಕಸ್ಟ್. ಈ ವರ್ಷ, ಅಂದರೆ ಕಳೆದ ವಾರ ಉತ್ತರ ಭಾರತದಲ್ಲಿ ದಾಳಿ ಮಾಡಿದವು ಡಸರ್ಟ್ ಲೋಕಸ್ಟ್. ಎಲ್ಲವುಕ್ಕಿಂತ ಹೆಚ್ಚು ಅಪಾಯಕಾರಿ ವರ್ಗ ಇದು. ಇವುಗಳಿಗೆ ಅನುಕೂಲಕರ ವಾತಾವರಣ ಸಿಕ್ಕಾಗ, ಅವು ವರ್ತನೆಯನ್ನು ಬದಲಾಯಿಸಿಕೊಳ್ಳುವ ಜೊತೆಗೆ ಬಣ್ಣವನ್ನೂ ಬದಲಾಯಿಸಿಕೊಂಡು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ. ಒಂಟಿಯಾಗಿರುವ ಜೀವನದಿಂದ ಕೋಟಿಗಳ ಸಂಖ್ಯೆಯಲ್ಲಿ ಮೊಟ್ಟೆ ಇಡುವ ವರ್ತನೆಗೆ ಹೊರಳುತ್ತವೆ. ಕೇವಲ 1 ಚದರ ಮೀಟರ್‌ನಲ್ಲಿ 5000 ಮೊಟ್ಟೆಗಳ ಕ್ಲಸ್ಟರ್ ಇಡಬಲ್ಲವು, ಇದರಿಂದ ದೊಡ್ಡ ಮಿಡತೆಗಳ ಹಿಂಡು ಜೀವ ತಳೆಯುತ್ತವೆ. ಬಹಳ ದಿನಗಳ ಕಾಲ ದೊಡ್ಡ ಸರಣಿ ಮಳೆ ಬಂದಾಗ ಅಥವಾ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಇತರೆ ವಾತಾವರಣ ಬದಲಾವಣೆಗಳಾದಾಗ ಸಾಮಾನ್ಯವಾಗಿ ಹೀಗಾಗುತ್ತದೆ. 

ಇಷ್ಟು ಮಟ್ಟದಲ್ಲಿ ಬೆಳೆದ ಮೇಲೆ ಈ ಮಿಡತೆಗಳು ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಹುಡುಕಲೇ ಬೇಕಲ್ಲ? ಹಾಗೆ ಹುಡುಕಿಕೊಂಡು ಹಿಂಡುಹಿಂಡಾಗಿ ಹೊರಡುತ್ತವೆ. ಸಾಮಾನ್ಯವಾಗಿ ತೆರೆದ ಫೀಲ್ಡ್‌ಗಳಲ್ಲಿ ಬೆಳೆಯುವ ಬೆಳೆಗಳನ್ನು ಕಂಡೊಡನೆ ಇವುಗಳ ಹಸಿವನ್ನು ನೀಗಿಸಿಕೊಳ್ಳಲು ಆಹಾರ ಸಿಕ್ಕಂತಾಗುತ್ತವೆ. ಅವು ಇಡೀ ಬೆಳೆಯನ್ನು ಸೇವಿಸುತ್ತವೆ. 

ಸೆಕೆ ತಡೆಯಲಾಗದೆ ಗುಪ್ತಾಂಗಕ್ಕೆ ಕುಲ್ಫೀ ಹಾಕಿದ ಮಹಿಳೆ: ಮುಂದಾಗಿದ್ದು ...

ಪರಿಣಾಮ
ಪಾಕಿಸ್ತಾನ ಇವನ್ನು ಎದುರಿಸಲಾಗದೆ ಲೋಕಸ್ಟ್ ತುರ್ತುಪರಿಸ್ಥಿತಿ ಘೋಷಿಸಿದೆ. ಈ ವರ್ಷ ಪಾಕಿಸ್ತಾನದಿಂದ ಭಾರತಕ್ಕೆ ಈ ಲೋಕಸ್ಟ್ ಪ್ಲೇಗ್ ಬರುತ್ತದೆಂದು ಮುನ್ಸೂಚನಾಧಿಕಾರಿಗಳು ತಿಳಿಸಿದ್ದರು. ಅದಾಗಲೇ ಕೋವಿಡ್ 19 ಹೊಡೆತಕ್ಕೆ ಸಿಲುಕಿರುವ ದೇಶಕ್ಕೆ ಇದೊಂದು ಹೊಸ ಕಂಟಕ. ಲೋಕಸ್ಟ್ ಹಿಂಡು ರಾಜಸ್ಥಾನ, ಪಂಜಾಬ್, ಹರ್ಯಾಣ ಹಾಗೂ ಮಧ್ಯಪ್ರದೇಶಕ್ಕೆ ಅವಧಿಗೆ ಮುನ್ನವೇ ದಾಳಿ ಇಟ್ಟಿವೆ. ಅದರಲ್ಲೂ ತರಕಾರಿ ಹಾಗೂ ಹತ್ತಿ ಬೆಳೆಗಳ ಮೇಲೆ ಇವುಗಳ ಕಣ್ಣು. ಈ ಡಸರ್ಟ್ ಲೋಕಸ್ಟ್‌ಗಳು ದೇಶದ ಆರ್ಥಿಕ ಸುರಕ್ಷತೆಗೇ ಧಕ್ಕೆ ತರುವಂಥವು. ಈ ಹಿಂಡುಗಳು ನೂರಾರು ಚದರ ಕಿಲೋಮೀಟರ್ ಹರಡಬಲ್ಲವು. 40 ದಶಲಕ್ಷ ಮಿಡತೆಗಳಿರುವ ಗುಂಪು ದಾಳಿ ನಡೆಸಿದರೆ 35,000 ಜನರ ದಿನದ ಹಸಿವನ್ನು ನೀಗಿಸಬಲ್ಲಷ್ಟು ಬೆಳೆಗಳು ಹಾನಿಯಾದವೆಂದೇ ಅರ್ಥ. ಆದರೆ, ಸಮಾಧಾನದ ವಿಷಯವೆಂದರೆ ಭಾರತ ಈ ಮಿಡತೆಗಳನ್ನು ತಡೆಯಲು ಅಗತ್ಯ ವೈಜ್ಞಾನಿಕ ಕ್ರಮಗಳನ್ನು ಹೊಂದಿದೆ.