Asianet Suvarna News Asianet Suvarna News

ಕೋಟಿ ಕೊಟ್ಟರೂ ಸಿಗೋದಿಲ್ಲ ಕೊಡೋದ್ರಲ್ಲಿರುವ ಸುಖ

ಕೈ ಚಾಚೋದಕ್ಕೆ ಸಂಕೋಚವಾಗುತ್ತೆ ನಿಜ. ಆದ್ರೆ ಅನಿವಾರ್ಯ ಸಂದರ್ಭಗಳಲ್ಲಿ ನಿಮ್ಮ ಮುಂದೆ ಕೈ ಚಾಚಿ ನಿಂತೋರಿಗೆ ಕೈ ಬಿಚ್ಚಿ ನೆರವು ನೀಡಲು ಹಿಂದೇಟು ಹಾಕಬೇಡಿ. ಏಕೆಂದ್ರೆ ನೆರವಿನಲ್ಲಿರುವ ಸುಖ ಅನುಭವಿಸಿದವರಿಗಷ್ಟೇ ಗೊತ್ತು.

Do you ever enjoy the pleasure of helping others
Author
Bangalore, First Published May 4, 2020, 8:26 PM IST

ಹೊಟ್ಟೆಪಾಡಿಗಾಗಿ ಹುಟ್ಟಿದ ಊರು ಬಿಟ್ಟು ಪರಸ್ಥಳ ಸೇರಿದವರೆಲ್ಲ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿಯನ್ನು ಕೊರೋನಾ ಸೃಷ್ಟಿಸಿದೆ. ಮಾಡಲು ಕೆಲಸವಿಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದಿರುವ ಸ್ಥಿತಿ ಕೆಲವರದಾದ್ರೆ, ಇನ್ನೂ ಕೆಲವರಿಗೆ ಅಗತ್ಯ ಮೆಡಿಸಿನ್ ಕೊಳ್ಳಲು ಕೈಯಲ್ಲಿ ಕಾಸಿಲ್ಲ. ಇಂಥ ಸಮಯದಲ್ಲಿ ಒಂದಿಷ್ಟು ಮಂದಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ರೆ, ಇನ್ನೂ ಕೆಲವರು ಅಗತ್ಯ ನೆರವು ನೀಡುತ್ತಿದ್ದಾರೆ. ನೆರವು ಅನ್ನೋದು ಮಾನವೀಯತೆಯ ಸಂಕೇತ. ಮಾನವನನ್ನು ಇತರ ಜೀವಿಗಳಿಗಿಂತ ಭಿನ್ನವಾಗಿ ನಿಲ್ಲಿಸಬಲ್ಲ ಗುಣಗಳಲ್ಲಿ ಇದೂ ಒಂದು. ನೆರವು ಅನ್ನೋದು ಪುಟ್ಟ ಪದವಾದ್ರೂ ಅದರಿಂದ ಸಿಗುವ ಆತ್ಮತೃಪ್ತಿ ತುಂಬಾ ದೊಡ್ಡದು. ನಮಗೋಸ್ಕರ ನಾವು ಎಷ್ಟು ಹಣ ಬೇಕಾದ್ರೂ ಖರ್ಚು ಮಾಡಬಹುದು, ಬಯಸಿದ್ದೆಲ್ಲ ಖರೀದಿಸಬಹುದು. ಆದ್ರೆ ಕಷ್ಟದಲ್ಲಿರುವವರಿಗೆ ನೆರವು ನೀಡಿದಾಗ ಸಿಗುವ ಆತ್ಮತೃಪ್ತಿ ಇದರಿಂದ ಸಿಗೋದಿಲ್ಲ. 

ಪ್ರತಿ 40 ಸೆಕೆಂಡ್‌ಗಳಿಗೊಬ್ಬ ಆತ್ಮಹತ್ಯೆ! ಉಳಿಸುವ ಬಗೆ ಹೇಗೆ?

ಕೆಲವೊಮ್ಮೆ ಅನ್ನಿಸಬಹುದು ‘ನನ್ಯಾಕೆ ಇನ್ನೊಬ್ಬರಿಗೆ ನೆರವು ನೀಡಬೇಕು? ಅದರಿಂದ ನನಗೇನು ಪ್ರಯೋಜನ?’ ನಿಜ, ಇನ್ನೊಬ್ಬರಿಗೆ ನೆರವು ನೀಡುವುದರಿಂದ ಯಾವುದೇ ಪ್ರಯೋಜನ ಸಿಗದಿರಬಹುದು. ಆದರೆ, ನೆರವು ವ್ಯಕ್ತಿತ್ವವನ್ನು ಇನ್ನಷ್ಟು ಎತ್ತರಕ್ಕೇರಿಸುತ್ತದೆ. ಸಮಾಜದಲ್ಲಿ ನಿಮ್ಮ ಬಗ್ಗೆ ಸದಾಭಿಪ್ರಾಯವನ್ನು ಹುಟ್ಟುಹಾಕುತ್ತದೆ. ಅಷ್ಟೇ ಅಲ್ಲ, ‘ನಾವು ಏನನ್ನು ನೀಡುತ್ತೇವೆಯೋ ಅದೇ ನಮಗೆ ಹಿಂತಿರುಗಿ ಸಿಗುತ್ತದೆ’ ಎಂಬ ಮಾತಿದೆ. ಅಂದರೆ ನೀವು ಇನ್ನೊಬ್ಬರಿಗೆ ಸಹಾಯ ಮಾಡಿದರೆ ನೀವು ಕಷ್ಟದಲ್ಲಿರುವಾಗ ಆ ನೆರವು ಯಾವುದೋ ರೂಪದಲ್ಲಿ ನಿಮ್ಮ ಕೈ ಹಿಡಿದು ಮೇಲೆತ್ತಬಹುದು. ಆದಕಾರಣ ನೆರವು ನೀಡುವಾಗ ಲಾಭ-ನಷ್ಟಗಳ ಲೆಕ್ಕಾಚಾರ ಹಾಕಬೇಡಿ. ಬದಲಿಗೆ ಪ್ರಾಮಾಣಿಕವಾಗಿ ನಿಮ್ಮ ಕೈಯಲ್ಲಾದ ಸಹಾಯ ಮಾಡಿ. 

ನೆರವು ನೀಡೋದ್ರಿಂದ ಸಮಾಧಾನ
ನಿಜ, ಇನ್ನೊಬ್ಬರಿಗೆ ನೆರವು ನೀಡಿದ ಬಳಿಕ ಮನಸ್ಸಿಗೆ ಏನೋ ಒಂದು ರೀತಿಯ ಸಮಾಧಾನವಂತೂ ಖಂಡಿತಾ ಸಿಗುತ್ತದೆ. ಅದೇ ಒಂದು ವೇಳೆ ನೀವು ಅವರ ಕಷ್ಟವನ್ನು ಕಣ್ಣಾರೆ ನೋಡಿದ ಬಳಿಕವೂ ನೆರವು ನೀಡದೆ ಮುಂದೆ ಸಾಗಿದರೆ ತುಂಬಾ ಸಮಯದ ತನಕ ಆ ವಿಷಯ ನಿಮ್ಮನ್ನು ಕಾಡಬಹುದು. ನೀವು ನಿರಾಳರಾಗಿರಲು ಸಾಧ್ಯವಾಗದೆ ಹೋಗಬಹುದು.‘ನಾನು ನೆರವು ನೀಡಬೇಕಿತ್ತು’ ಎಂಬ ಭಾವನೆ ನಿಮ್ಮಲ್ಲಿ ಅಪರಾಧಿ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ.

ಪ್ರೀತಿ, ಪ್ರೇಮ ಹೆಸರಲ್ಲಿ ಹುಟ್ಟಿಕೊಂಡ ಸುಳ್ಳಿನ ಸೌಧಗಳು

ನೆರವು ನೀಡಿದಾಗ ಸಿಗುವ ಖುಷಿಗೆ ಬೆಲೆ ಕಟ್ಟಲಾಗದು
ಯಾರಿಗಾದರೂ ನೆರವು ನೀಡಿದಾಗ ಸಿಗುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆ ಖುಷಿ ಎಷ್ಟು ಅಮೂಲ್ಯವಾದದ್ದು ಎಂಬುದು ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ. ಆದಕಾರಣ ನೆರವನ್ನು ಬೆಲೆಗಳಲ್ಲಿ ಅಳೆಯಲು ಹೋಗಬೇಡಿ. ಬದಲಿಗೆ ಅದರಿಂದ ಸಿಗುವ ಖುಷಿಯನ್ನು ಅನುಭವಿಸಿ ಅಷ್ಟೆ.

ಪ್ರತಿಫಲಾಪೇಕ್ಷೆ ಬೇಡ
ಅನಾಮಿಕರಿಗೆ ನೆರವು ನೀಡಿದ ಸಂದರ್ಭದಲ್ಲಿ ನಾವು ಯಾವುದೇ ಪ್ರತಿಫಲವನ್ನು ಅಪೇಕ್ಷಿಸುವುದಿಲ್ಲ. ಆದರೆ, ಸ್ನೇಹಿತರಿಗೆ ಅಥವಾ ಬಂಧುಗಳಿಗೆ ನೆರವು ನೀಡಿದ ಬಳಿಕ ಕೆಲವರು ಆ ವಿಚಾರವನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಿರುತ್ತಾರೆ. ಮುಂದೊಂದು ದಿನ ಆತ ತನ್ನ ನೆರವಿಗೆ ಬರಬಹುದು ಎಂಬ ನಿರೀಕ್ಷೆಯನ್ನಿಟ್ಟುಕೊಂಡಿರುತ್ತಾರೆ. ಆದರೆ, ಅನೇಕ ಬಾರಿ ಇಂಥ ನಿರೀಕ್ಷೆಗಳಿಂದ ಮಾಡುವ ಸಹಾಯದಿಂದ ನಮಗೆ ನೋವುಂಟಾಗುವ ಸಂದರ್ಭಗಳೇ ಹೆಚ್ಚಿರುತ್ತವೆ. ಎಷ್ಟೋ ಬಾರಿ ಇಂಥ ನಿರೀಕ್ಷೆಗಳಿಂದ ಸ್ನೇಹ- ಸಂಬಂಧಗಳು ಹಾಳಾಗುತ್ತವೆ. ಆದಕಾರಣ ಸಹಾಯ ಮಾಡುವಾಗ ಅದಕ್ಕೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸಬೇಡಿ. ನಿಮಗೆ ಸಹಾಯದ ಅವಶ್ಯಕತೆಯಿರುವಾಗ ಬೇರೆ ಯಾವುದೋ ರೂಪದಲ್ಲಿ ನಿಮಗೆ ನೆರವು ಸಿಗಬಹುದು. ಆದಕಾರಣ ನಿಮ್ಮ ಸಂತೃಪ್ತಿಗೋಸ್ಕರ ನೆರವು ನೀಡಿ.

ಅವರ ಗ್ರೂಪ್‌ ಚಾಟ್‌ನ ಗುರಿ ಹುಡುಗಿಯರ ಗ್ಯಾಂಗ್‌ರೇಪ್‌ !

ಸಮಾಜದಲ್ಲಿ ಗೌರವ
ಕೆಲವು ವ್ಯಕ್ತಿಗಳನ್ನು ನೀವು ಗಮನಿಸಿ ನೋಡಿ, ಎಂಥದ್ದೇ ಸಂದರ್ಭದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ಅವರ ಬಳಿ ಏನಾದರೂ ನೆರವು ಕೇಳಿದರೆ ‘ಇಲ್ಲ’ ಎನ್ನುವ ಉತ್ತರವೇ ಸಿಗದು. ಇಂಥ ವ್ಯಕ್ತಿಗಳನ್ನು ನೋಡಿದಾಗ ಗೌರವ ಮೂಡುತ್ತದೆ. ಅವರ ವ್ಯಕ್ತಿತ್ವವನ್ನು ನೋಡಿ ಹೆಮ್ಮೆ ಅನ್ನಿಸುತ್ತದೆ. ಸಮಾಜ ಕೂಡ ಇಂಥವರನ್ನು ಗುರುತಿಸುತ್ತದೆ, ಗೌರವಿಸುತ್ತದೆ. ಆದಕಾರಣ ಕೈಲಾಗುತ್ತದೆ ಎಂಬ ಹಂತದಲ್ಲಿ ಯಾರಿಗೂ ನೆರವು ನಿರಾಕರಿಸಬೇಡಿ. ನಾವೆಲ್ಲರೂ ಈ ಸಮಾಜದ ಅಂಗ. ಇಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿದರಷ್ಟೇ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು. 

Follow Us:
Download App:
  • android
  • ios