ಅಪ್ಪ ಅಂದ್ರೆ ಆಕಾಶ ಅವನೇ ಸರ್ವಸ್ವ ಕೂಡ, ನನ್ನ ಜೀವನದಲಿ ಅಪ್ಪ ಅನ್ನೋ ಎರಡಕ್ಷರದ ಪದವೇ ಕಣ್ಮರೆ ಆದಿತು. ಯಾಕೆಂದರೆ ಇಂದಿಗೆ 20 ವರ್ಷ ದಾಟಿಯೇ ತೀರಿತು ಅಪ್ಪ ಅಗಲಿ.

ನನ್ನ ಜೊತೆ ಇಂದಿಗೂ ಜೀವಂತವಾಗಿ ಉಳಿದಿದೆ ನಿನ್ನ ನೆನಪುಗಳು ಮಾತ್ರ. ಜೀವನ ಅಂದ್ರೆನೆ ಹೀಗೆನಾ ಇಷ್ಟಪಟ್ಟವರೂ ನಮ್ಮ ಜೊತೆ ಕೊನೆ ಕಾಲದವರೆಗೂ ನಮ್ಮ ಜೊತೆ ಇರಲ್ಲಾ. ಅವನ ಅಂತಿಮ ಹಂತ ಮರುಕಳಿಸಿದಾಗ, ಇಷ್ಟಪಟ್ಟವರನ್ನೂ ಒಬ್ಬಂಟಿಯಾಗಿ ಬಿಟ್ಟು ಹೋಗುವವರೇ ಜಾಸ್ತಿ. ನೀನು ಕೂಡ ನನ್ನ ಬಿಟ್ಟು ದೂರ ಹೋದೆ.

ಬಿಟ್ಟು ಹೋಗಿದ್ದು ಸಣ್ಣ ವಿಷಯಕ್ಕೆ; ವೇದನೆ ಮಾತ್ರ ಕೊನೆತನಕ!

ನನ್ನ ಜೊತೆ ಕಣ್ಣಮುಚ್ಚಾಲೇ ಆಟ ಆಡಿದ ನೆನಪು, ನನ್ನ ಮುದ್ದು ಮಾಡಿ ಸ್ಕೂಲ್‌ಗೆ ಬಿಟ್ಟು ಬರುವ ಕ್ಷಣದಲಿ ನಾನು ಅಳುವುದನ್ನು ಕಂಡು ನೀನು ಒಮ್ಮೆಮ್ಮೆ ಅತ್ತುಬಿಡುತ್ತಿದ್ದೆ. ಬೆಳದಿಂಗಳ ಬಾನಲಿ ಹುಣ್ಣಿಮೆ ಚಂದ್ರಮಾಮನ ತೋರಿಸಿ ಊಟ ಮಾಡಿಸಿದ ಅಣ್ಣ ಜೊತೆ ಆಡಲು ಹೋದಾಗ ನಾನು ಕಾಲು ಜಾರಿ ಕೆರೆಗೆ ಬಿದ್ದಾಗ ಓಡೋಡಿ ಬಂದು ನನ್ನ ಕಾಪಾಡಿದೆ. ಮತ್ತೆ ಮರು ಜೀವ ಕೊಟ್ಟದೇವರು ನೀನಪ್ಪಾ. ಆದರೆ ನಿನ್ನ ಜೀವ ಉಳಿಸಿಕೊಳ್ಳುವಲ್ಲಿ ಕೊನೆಗೂ ಸೋತು ಬಿಟ್ಟೇ. ಇವತ್ತು ನಾನು ಜೀವಂತ ಇದೇನೆ ಅಂದರೆ ಅದಕ್ಕೆ ನೀನೆ ಕಾರಣ ಅಂತ ಹೆಮ್ಮೆಯಿಂದ ಹೇಳುಕೊಳ್ಳುತ್ತೀನಿ.

ಅಮ್ಮ ನಿನ್ನ ಸ್ಥಾನದಲ್ಲಿ ನಿಂತು ಎಷ್ಟೇ ಧೈರ್ಯ ತುಂಬಿದರೂ ಅದು ಅಷ್ಟೇ, ನಿನ್ನ ಸ್ಥಾನಾನ ಯಾರು ತುಂಬೋಕೆ ಸಾಧ್ಯವಿಲ್ಲ. ನೀನು ಕಲಿಸಿದ ಶಿಸ್ತಿನ ಪಾಠ, ಧೈರ್ಯ ಇವೆಲ್ಲವನ್ನು ಹೇಗೆ ಮರೆಯೋಕೆ ಸಾಧ್ಯ ಹೇಳು ಅಪ್ಪಾ. ಕೊನೆಗೂ ನಮ್ಮನ್ನು ಅಪ್ಪನಿಲ್ಲದ ಮಕ್ಕಳು ಎಂಬ ಪಟ್ಟಕ್ಕೆ ಏರಿಸೇ ಬಿಟ್ಟೇ.

ನಾನು ಸಣ್ಣ ಮಗುವಿದ್ದಾಗ ನೀನು ತಂದು ಕೊಟ್ಟ ಆ ಒಂದು ಗೊಬ್ಬೆ ಇನ್ನು ನನ್ನಲ್ಲಿ ಜೋಪಾನ ಮಾಡಿದ್ದೇನೆ ಅಪ್ಪ. ಎಷ್ಟೇ ವರ್ಷಗಳೇ ಕಳೆದರೂ ನಿನ್ನ ನೆನಪು ಎಂದಿಗೂ ಮರೆಯಾಗದು. ನಮ್ಗೆ ಅದೃಷ್ಟಇಲ್ವ ಅಥವಾ ನಿಂಗೆ ನಮ್ಮ ಜೊತೆ ಇರಲು ಅದೃಷ್ಟಇರಲಿಲ್ವ ಗೊತ್ತಿಲ್ಲ ಇದೇ ತಾನೇ ಜೀವನ.

ಒಂದು ವಸ್ತು ನಮ್ಮ ಜೊತೆ ಇದ್ದಾಗ ಅದರ ಬೆಲೆ ಗೊತ್ತಾಗಲ್ಲ, ಅದೇ ವಸ್ತು ನಮ್ಮಿಂದ ದೂರ ಸರಿದಾಗೆ ಅರಿವು ಆಗುತ್ತೆ. ಆ ವಸ್ತುವಿನ ಬೆಲೆ ಏನಾಂತ. ಇದೇ ನಾವು ಮಾಡುತ್ತಿರುವ ದೊಡ್ಡ ತಪ್ಪು. ನನ್ನ ಅಪ್ಪ ಜೀವಂತವಾಗಿ ಇದ್ದಾಗ ಅವರ ಪ್ರೀತಿ ಅರ್ಥ ಆಗುತ್ತ ಇರಲ್ಲಿ, ಅವರ ಜೊತೆ ಕೂತು ಮಾತಾನಾಡುವಷ್ಟುಸಮಯ ಇರಲ್ಲಿ ಇವತ್ತು, ಎಲ್ಲನಾ ಕಳೆದುಕೊಂಡು ಬರೀ ಕೈಯಲ್ಲಿ ನಿಂತಿರುವೆ.

ಪ್ರೀತಿಯ ತೀವ್ರತೆಯಷ್ಟೇ ವಿರಹವೂ ಸುಖವೇ!

ನನ್ನ ಗೆಳತಿಯರು ಅಪ್ಪನ ನಡುವಿನ ಒಡನಾಟದ ಬಗ್ಗೆ ಪ್ರೀತಿಯಿಂದ ಹೇಳುವಾಗ, ನನ್ನ ಕಣ್ಣಲ್ಲಿ ಅಪ್ಪನ ನೆನಪುಗಳು ಕಣ್ತುಂಬಿಕೊಳ್ಳುತ್ತಿದ್ದವು. ನಿನ್ನ ಬಗ್ಗೆ ಹೆಮ್ಮೆಯಿಂದ ಹೊಗಳಲು ನನಗೆ ಅದೃಷ್ಟಇಲ್ಲದಾಯಿತೇ, ಇದೀಗ ನೀನು ನನ್ನ ಜೊತೆ ಇಲ್ಲ ಎಂದು ಎಷ್ಟೇ ಕಣ್ಣೀರು ಹಾಕಿದರು ಏನು ಪ್ರಯೋಜನ ಎಲ್ಲ ನನ್ನ ವಿಧಿ ಆಟ.

- ಸೌಮ್ಯ ಕಾರ್ಕಳ