ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಇನ್ನು ಮುಂದೆ ವಧು ಹಾಗೂ ವರರ ಜನ್ಮ ದಿನಾಂಕ ಕಡ್ಡಾಯವಾಗಿ ಉಲ್ಲೇಖಿಸಬೇಕು. ಈ ಕುರಿತು ಸರ್ಕಾರ ಹೊಸ ಆದೇಶ ಹೊರಡಿಸಿದೆ. ಇದಕ್ಕೆ ಕಾರಣವೇನು?
ಜೈಪುರ್(ಮಾ.01) ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು ವರರ ಹೆಸರು, ಮುಹೂರ್ತ, ದಿನಾಂಕ, ಮಂಟಪ, ಕುಟುಂಬಸ್ಥರ ಹೆಸರು, ವಿಳಾಸ ಸೇರಿದಂತೆ ಒಂದಷ್ಟು ಮಾಹಿತಿಗಳು ಇದ್ದೇ ಇರುತ್ತೆ. ಕುಲದೇವತಾ ಪ್ರಸನ್ನ, ಗುರು ಹಿರಿಯ ಆಶೀರ್ವಾದ ಹೀಗೆ ಒಂದೊಂದು ಮದುವೆ ಆಮಂತ್ರಣ ಪತ್ರಿಕೆಗಳು ಸಮುದಾಯ, ತಮ್ಮ ತಮ್ಮ ಆಚರಣೆಗೆ ಅನುಗುಣಾಗಿ ಇರುತ್ತೆ. ಇದರ ನಡುವೆ ಹಲವು ವಿಶೇಷ ಹಾಗೂ ಭಿನ್ನ ಮದುವೆ ಪತ್ರಿಕೆ ಮೂಲಕವೂ ಗಮನಸೆಳೆಯುತ್ತಾರೆ. ಇದೀಗ ವಧು ವರರ ಹೆಸರಿನ ಜೊತೆಗೆ ಡೇಟ್ ಆಫ್ ಬರ್ತ್ ಉಲ್ಲೇಖಿಸುವುದು ಕಡ್ಡಾಯ. ಇದು ಸರ್ಕಾರ ಹೊರಡಿಸಿದ ಆದೇಶ. ಹಾಗಂತ ಸುಮ್ಮನೆ ಒಂದು ಡೇಟ್ ಹಾಕಿ ಪ್ರಿಂಟ್ ಮಾಡಿದರೂ ಆಪಾಯ ತಪ್ಪಿದ್ದಲ್ಲ.
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು ಹಾಗೂ ವರರ ಜನ್ಮ ದಿನಾಂಕ ಕಡ್ಡಾಯವಾಗಿ ಹಾಕಬೇಕು. ಆಮಂತ್ರ ಪತ್ರಿಕೆ ಪ್ರಿಂಟ್ ಮಾಡುವ ಪ್ರೆಸ್‌ಗಳು ಸುಖಾಸುಮ್ಮನೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ಉಲ್ಲೇಖಿಸುವಂತಿಲ್ಲ. ಯಾರು ಮದುವೆ ಆಮಂತ್ರ ಪತ್ರಿಕೆ ಪ್ರಿಂಟ್ ಮಾಡಿಸುತ್ತಾರೋ, ಅವರು ತಮ್ಮ ಡೇಟ್ ಆಫ್ ಬರ್ತ್ ದಾಖಲೆ ನೀಡಬೇಕು. ಈ ದಾಖಲೆ ಪರಿಶೀಲಿಸಿ ಪ್ರಿಂಟಿಂಗ್ ಪ್ರೆಸ್ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ನಮೂದಿಸಬೇಕು. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ಕಡ್ಡಾಯ ಆದೇಶವನ್ನು ರಾಜಸ್ಥಾನ ಸರ್ಕಾರ ಹೊರಡಿಸಿದೆ. ವಿಶೇಷ ಅಂದರೆ ಈ ನಿಯಮ ಬಹುತೇಕ ಎಲ್ಲಾ ರಾಜ್ಯದಲ್ಲೂ ಜಾರಿಯಾಗುವ ಸಾಧ್ಯತೆ ಇದೆ.
ಮದುವೆಯಾದ ನವ ಜೋಡಿಯ ಸೋಶಿಯಲ್ ಮೀಡಿಯಾ ಕ್ರೇಜ್, ಚರ್ಚೆಗೆ ಗ್ರಾಸವಾದ ವಿಡಿಯೋ
ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ಯಾಕೆ?
ರಾಜಸ್ಥಾನ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆನಂದ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಾಲ್ಯ ವಿವಾಹ ತಡೆಗಟ್ಟಲು ಈ ನಿಯಮ ಜಾರಿಗೆ ತರಲಾಗಿದೆ. ರಾಜಸ್ಥಾನದಲ್ಲಿ ಬಾಲ್ಯ ವಿವಾಹ ಪದ್ಧತಿ ಹೆಚ್ಚಾಗಿದೆ. ಬಾಲ್ಯ ವಿವಾಹದ ಆಮಂತ್ರಣ ಪತ್ರಿಕೆ ಪ್ರಿಂಟ್ ಮಾಡಲು ಪ್ರೆಸ್‌ಗೆ ಮಾಹಿತಿ ಬಂದರೆ ಪೊಲೀಸರಿಗೆ ತಿಳಿಸಬೇಕು. ಒಂದು ವೇಳೆ ಮಾಹಿತಿ ನೀಡಲು ಪ್ರಿಂಟಿಂಗ್ ಪ್ರೆಸ್ ವಿಫಲವಾದರೆ, ಅಥವಾ ಮುಚ್ಚಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಬಾಲ್ಯ ವಿವಾಹ ತಡೆಗಟ್ಟಲು ಹಲವು ಕ್ರಮಗಳನ್ನು ರಾಜಸ್ಥಾನ ಸರ್ಕಾರ ಕೈಗೊಂಡಿದೆ. ಆದರೂ ಬಾಲ್ಯವಿವಾಹ ನಡೆಯುತ್ತಲೇ ಇದೆ. ಹೀಗಾಗಿ ಹೊಸ ಆದೇಶ ಹೊರಡಿಸಲಾಗಿದೆ.
ರಾಜಸ್ಥಾನ ಸರ್ಕಾರ ತೆಗೆದುಕೊಂಡ ಈ ನಿರ್ಧಾರ ಇದೀಗ ಇತರ ರಾಜ್ಯದಲ್ಲೂ ಜಾರಿಯಾಗುವ ಸಾಧ್ಯತೆ ಇದೆ. ಕಾರಣ ಉತ್ತರದ ಹಲವು ರಾಜ್ಯಗಳಲ್ಲಿ ಈಗಲೂ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿದೆ. ಒಂದು ಮಟ್ಟದಲ್ಲಿ ಈ ಕ್ರಮ ಬಾಲ್ ವಿವಾಹ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಆಯಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಗೃಹ ಇಲಾಖೆ ಈ ಕುರಿತು ಸೂಚನೆ ನೀಡಿದೆ. ಇದೇ ವೇಳೆ ಹಲವು ಸಾಮಾಜಿಕ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಹಲವರಿಗೆ ಈ ಕುರಿತು ಜಾಗೃತಿ ಕಾರ್ಯಕ್ರಮ ನೀಡಲಾಗುತ್ತಿದೆ. ಈ ಕಾರ್ಯಕರ್ತೆಯರು ಗ್ರಾಮ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ. ಇನ್ನು ಪ್ರತಿ ಸಮುದಾಯದ ಪ್ರಮುಖರು, ಹಿರಿಯರು, ಸ್ವಾಮೀಜಿಗಳ,ಮುಖಂಡರ ಜೊತೆ ಸರ್ಕಾರ ಮಾತುಕತೆ ನಡೆಸಿದೆ. ಈ ಮೂಲಕ ಬಾಲ್ಯ ವಿವಾಹ ಸಂಪೂರ್ಣ ಕಿತ್ತೊಗೆಯಲು ಕೆಲಸ ಮಾಡುತ್ತಿದೆ.
ರಾಜಸ್ಥಾನ ಸರ್ಕಾರದ ಹೊಸ ಪ್ರಯೋಗಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಎಷ್ಟರ ಮಟ್ಟಿಗೆ ಈ ಯೋಜನೆ ಸಫಲವಾಗಲಿದೆ ಅನ್ನೋದು ಕಾರ್ಯಗರ್ತವಾದಗಲೇ ತಿಳಿಯಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
