ಬೆಳಗ್ಗೆ ಆಫೀಸ್‍ಗೆ ಹೋಗುವ ಟೆನ್ಷನ್ ಜೊತೆಗೆ ಮಕ್ಕಳನ್ನು ಸ್ಕೂಲ್‍ಗೆ ಸಮಯಕ್ಕೆ ಸರಿಯಾಗಿ ರೆಡಿ ಮಾಡಬೇಕಾದ ಒತ್ತಡ. ಇನ್ನು ಸಂಜೆ ಮನೆಗೆ ಬಂದ್ರೆ ರಾತ್ರಿ ಊಟಕ್ಕೆ ಸಿದ್ಧತೆ, ಮಕ್ಕಳ ಹೋಂವರ್ಕ್, ಆಫೀಸ್ ಮತ್ತು ಟ್ರಾಫಿಕ್ ಜಂಜಾಟದ ಸುಸ್ತು ಎಲ್ಲವೂ ಒಟ್ಟಾಗಿ ನಮ್ಮೊಳಗಿನ ಸಹನೆ ಎಂಬ ಶಕ್ತಿಯನ್ನು ಬಲಹೀನಗೊಳಿಸಿರುತ್ತೆ.ಇನ್ನು ಮಕ್ಕಳೋ ಅಮ್ಮ,ಅಪ್ಪನ ಸ್ಪರ್ಶ ಸುಖ ಸಿಕ್ಕರೆ ಸಾಕು ಎಂಬ ಹಪಾಹಪಿಯಲ್ಲಿ ಮೈಗೆ ಮೈ ತಾಗಿಸಲು ತವಕಿಸುತ್ತಿರುತ್ತವೆ. ಕೆಲವು ಮನೆಗಳಲ್ಲಂತೂ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಕ್ಕ ಅಮ್ಮ- ಅಪ್ಪನಿಗೆ ಮಕ್ಕಳ ಇಚ್ಛೆಯನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನವಂತೂ ಕಡಿಮೇನೆ ಇರುತ್ತೆ. ಹೀಗಾಗಿ ಅವರು ಒಂದೆಡೆ ಕೂತರೆ ಸಾಕು ಎಂಬ ಕಾರಣಕ್ಕೆ ಮೊಬೈಲ್ ಕೈಯಲ್ಲಿ ಕೊಟ್ಟು ಇಲ್ಲವೆ ಟಿವಿಯಲ್ಲಿ ಕಾರ್ಟೂನ್ ಚಾನಲ್ ಹಾಕಿಕೊಟ್ಟು ನಿಟ್ಟುಸಿರು ಬಿಡುತ್ತಾರೆ.ಇನ್ನು ಪತಿ-ಪತ್ನಿ ಟೆನ್ಷನ್ ಇಲ್ಲದೆ ಒಬ್ಬರ ಮುಖವನ್ನೊಬ್ಬರು ಪ್ರೀತಿಯಿಂದ ದಿಟ್ಟಿಸುತ್ತ ರೊಮ್ಯಾನ್ಸ್ ಮಾಡಲು ಕೂಡ ಇಷ್ಟು ದಿನ ಟೈಮ್ ಸಿಗುತ್ತಿರಲಿಲ್ಲ. ಆದ್ರೆ ಈ ಕೊರೋನಾ ಬಂದ ಮೇಲೆ ಮನೆಯ ವಾತಾವರಣವೇ ಬದಲಾಗಿ ಬಿಟ್ಟಿದೆ.

ಮನೆಯೇ ಮಂತ್ರಾಲಯ ಅಂತ ಪ್ರೂವ್‌ ಮಾಡಿದ ಕೊರೋನಾ

ಕೈ ತುತ್ತಿನ ರುಚಿ ಸಿಗುತ್ತಿದೆ
ಅಪ್ಪ-ಅಮ್ಮ ಇಬ್ಬರೂ ಆಫೀಸ್‍ಗೆ ಹೋಗುವ ಕಾರಣ ಮಕ್ಕಳು ಡೇ ಕೇರ್‍ನಲ್ಲಿ ಇಲ್ಲವೆ ಆಯಾ ಜೊತೆಗೆ ಮನೆಯಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆಗೆ ಸಿಕ್ಕಿದ್ರು. ಖುಷಿಯಿದ್ದರೂ ಇಲ್ಲದಿದ್ದರೂ ಇಂಥದೊಂದು ಬದುಕಿಗೆ ಒಗ್ಗಿಕೊಳ್ಳಲೇಬೇಕಾದ ಅನಿವಾರ್ಯತೆ ಈ ಮಕ್ಕಳದ್ದು. ಹಗಲಿನಲ್ಲಿ ಅಮ್ಮನ ಕೈ ತುತ್ತು, ಮುದ್ದು ಎಲ್ಲ ಮಿಸ್ ಮಾಡಿಕೊಳ್ಳುತ್ತಿದ್ದರು. ಆದ್ರೆ ಕೊರೋನಾ ಮಕ್ಕಳಿಗೆ ಮಧ್ಯಾಹ್ನವೂ ಅಮ್ಮನ ಕೈ ತುತ್ತಿನ ರುಚಿ ಸಿಗುವಂತೆ ಮಾಡಿದೆ. ಇಡೀ ದಿನ ಅಮ್ಮ ಮನೆಯೊಳಗಿದ್ರೆ ನಮಗದೇ ಕೋಟಿ ರೂಪಾಯಿ ಎಂದು ನಗರದ ಮಕ್ಕಳು ಹಾಡಿ ಕುಣಿಯುವಂತೆ ಮಾಡಿದ ಶ್ರೇಯಸ್ಸು ಕೊರೋನಾಕ್ಕೆ ಸಿಗಲೇಬೇಕು ಬಿಡಿ! 

ಬೆಳಗ್ಗಿನ ಗಡಿಬಿಡಿ ಇಲ್ಲ
ಆಫೀಸ್‍ಗೆ ಹೋಗುವವರಿಗೆ ಒತ್ತಡದ ಸಮಯ ಅಂದ್ರೆ ಅದು ಬೆಳಗ್ಗೆ. ಅದರಲ್ಲೂ ಉದ್ಯೋಗಸ್ಥೆ ಮಹಿಳೆಯರಿಗೆ ರಜೆ ದಿನ ಹೊರತುಪಡಿಸಿ ಉಳಿದೆಲ್ಲ ದಿನ ಐದು ನಿಮಿಷ ತಡವಾಗಿ ಎದ್ದರೆ ಇಡೀ ದಿನದ ನೆಮ್ಮದಿ ಹಾಳಾಗೋದು ಗ್ಯಾರಂಟಿ. ಬೆಳಗ್ಗೆ ಅಷ್ಟು ಬ್ಯುಸಿ ಶೆಡ್ಯೂಲ್ ಇರುತ್ತೆ. ಬ್ರೇಕ್‍ಫಾಸ್ಟ್ ಸಿದ್ಧಪಡಿಸೋದ್ರಿಂದ ಹಿಡಿದು ಮಕ್ಕಳನ್ನು ಸ್ಕೂಲ್‍ಗೆ ರೆಡಿ ಮಾಡೋದು, ಪತಿರಾಯರಿಗೆ ಆಫೀಸ್‍ಗೆ ಹೋಗೋಕೆ ಅಗತ್ಯವಾದ ಎಲ್ಲ ವಸ್ತುಗಳನ್ನು ಹುಡುಕಿ ನೀಡೋದರ ಜೊತೆಗೆ ತಾನೂ ಕೆಲಸಕ್ಕೆ ಹೋಗಲು ಸಿದ್ಧಗೊಳ್ಳಬೇಕು. ಗೃಹಿಣಿಯರಿಗೂ ಬೆಳಗ್ಗಿನ ಸಮಯ ದಿನದ ಅತ್ಯಂತ ಒತ್ತಡದ ಸಮಯವೇ ಆಗಿರುತ್ತೆ. ಆದ್ರೆ ಕೊರೋನಾ ಕಾಟಕ್ಕೆ ಹೆದರಿ ಸ್ಕೂಲ್‍ಗೆ ರಜೆ, ಆಫೀಸ್‍ಗೆ ಹೋಗೋರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿರೋದ್ರಿಂದ ಸ್ವಲ್ಪ ದಿನಗಳಿಂದ ಮಹಿಳೆಯರ ಬೆಳಗ್ಗಿನ ಒತ್ತಡ ತಗ್ಗಿದೆ ಎಂದೇ ಹೇಳಬಹುದು. ಇನ್ನು ಆಫೀಸ್‍ಗೆ ಹೋಗೋದಿಲ್ಲವಾದ್ದರಿಂದ ಸ್ವಲ್ಪ ತಡವಾಗಿ ಎದ್ದರೂ ಏನೂ ಪ್ರಾಬ್ಲಂ ಇಲ್ಲ. ಹೀಗಾಗಿ ವಿಶ್ರಾಂತಿ ತೆಗೆದುಕೊಳ್ಳಲು ತುಸು ಜಾಸ್ತಿ ಸಮಯ ಸಿಗುತ್ತಿದೆ ಎಂದೇ ಹೇಳಬಹುದು.

ಆಫೀಸ್ ಟೆನ್ಷನ್‍ಗೆ ದಾಂಪತ್ಯ ಬ್ರೇಕ್ ಅಪ್ ಆದೀತು, ಜೋಪಾನ

ಎಕ್ಸಾಂ ಟೆನ್ಷನ್ ಇಲ್ಲವೇ ಇಲ್ಲ
ಮಾರ್ಚ್ ಅಂದ್ರೆ ಮಕ್ಕಳಿಗೆ ಪರೀಕ್ಷಾ ತಿಂಗಳು. ಆದ್ರೆ ಈ ಬಾರಿ ಕೊರೋನಾದಿಂದಾಗಿ ಕೆಲವು ಮಕ್ಕಳು 2-3 ಪರೀಕ್ಷೆ ಬರೆದಿದ್ರೆ ಇನ್ನೂ ಕೆಲವರಿಗೆ ಪರೀಕ್ಷೆಯಿಂದ ಸಂಪೂರ್ಣ ವಿನಾಯ್ತಿ ಸಿಕ್ಕಿದೆ. ಜೊತೆಗೆ ಬೇಸಿಗೆ ರಜೆ ನಿಗದಿಗಿಂತ ಬೇಗನೇ ಪ್ರಾರಂಭವಾಗಿದೆ. ಹೀಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಬೇಕಾದ ತಿಂಗಳಲ್ಲಿ ಮಕ್ಕಳು ಮನೆಯೊಳಗೆ ಪರೀಕ್ಷೆಯ ಭಯವಿಲ್ಲದೆ ಆರಾಮವಾಗಿ ಆಟ ಆಡಿಕೊಂಡು, ತೋಚಿದ್ದು ಗೀಚಿಕೊಂಡು ಖುಷಿಯಾಗಿದ್ದಾರೆ. ಅಪ್ಪ-ಅಮ್ಮಂದಿರಿಗೂ ಮಾರ್ಚ್ ಅಂದ್ರೆ ಟೆನ್ಷನ್. ಮಕ್ಕಳು ಹೇಗೆ ಓದುತ್ತಾರೋ, ಹೇಗೆ ಬರೆಯುತ್ತಾರೋ ಎಂಬ ಚಿಂತೆಯನ್ನೇ ತಲೆತುಂಬಾ ಹೊತ್ತುಕೊಂಡು ಸಂಕಟ ಪಡುತ್ತಿರುತ್ತಾರೆ. ಆದ್ರೆ ಈ ಬಾರಿ ನೋ ಎಕ್ಸಾಂ ಟೆನ್ಷನ್. ಆದ್ರೆ ಅದರ ಬದಲಿಗೆ ಹೊಸ ಟೆನ್ಷನ್‍ವೊಂದು ಶುರುವಾಗಿದೆ. ಅದೇ ಕೊರೋನಾ ವೈರಸ್. 

ಮುನಿಸಿಕೊಂಡ ಯಜಮಾನ್ರ ಮನಸ್ಸು ಗೆಲ್ಲೋದು ಹೇಗೆ?

ಟೈಮ್ ಇದ್ರೂ ಹೊರಗೆ ಸುತ್ತಾಡೋ ಹಾಗಿಲ್ಲ
ಮನೆಮಂದಿಯ ಈಗಿನ ಸ್ಥಿತಿ ಒಂಥರಾ ಹಲ್ಲಿರುವಾಗ ಕಡಲೆಯಿಲ್ಲ, ಕಡಲೆಯಿರುವಾಗ ಹಲ್ಲಿಲ್ಲ ಅನ್ನುವಂತಾಗಿದೆ. ಸಂಜೆ ಕೆಲಸ ಮುಗಿದ ತಕ್ಷಣ ಲ್ಯಾಪ್‍ಟಾಪ್ ಮಡಚಿ ಮನೆಮಂದಿಯೊಂದಿಗೆ ಸೇರಬಹುದು. ಆಫೀಸ್‍ನಿಂದ ಮನೆಗೆ ಬರಲು ತಗಲುತ್ತಿದ್ದ ಸಮಯ ಈಗ ಸಂಪೂರ್ಣ ಫ್ರೀ. ಆದ್ರೆ ಏನು ಪ್ರಯೋಜನ? ಮನೆಯೊಳಗೇ ಹರಟೆ, ಮಾತುಕತೆ ನಡೆಸಬೇಕು. ಏನಾದ್ರೂ ತಿನ್ನುವ ಬಯಕೆಯಾದ್ರೂ ಮನೆಯಲ್ಲೇ ತಯಾರಿಸಬೇಕು. ಹೊರಗಿನಿಂದ ತರುವಂತೆಯೂ ಇಲ್ಲ. ಮಕ್ಕಳೊಂದಿಗೆ ಪಾರ್ಕ್‍ಗೆ ಹೋಗಿ ಒಂದು ಸುತ್ತು ಹಾಕಿ, ಪಾನಿಪೂರಿ, ಮಸಾಲಪೂರಿ ತಿನ್ಕೊಂಡ ಬರೋಣ ಅಂದ್ರೆ ಅದೂ ಇಲ್ಲ. ಇನ್ನು ಐಸ್‍ಕ್ರೀಂ ಅಂತೂ ಮುಟ್ಟೋದಕ್ಕೂ ಭಯ. ಒಟ್ಟಾರೆ ಏನೇ ಆಸೆಯಿದ್ರೂ, ಬಯಕೆ ಮೂಡಿದ್ರೂ ಅದನ್ನೆಲ್ಲ ಅದುಮಿಟ್ಟುಕೊಂಡು ಮನೆಯೊಳಗೇ ತೆಪ್ಪಗೆ ಬಿದ್ದುಕೊಳ್ಳೋದು ಹೇಗೆ ಎಂಬುದನ್ನು ಕೊರೋನಾ ಕಲಿಸುತ್ತಿದೆ.