ವಿದೇಶದಲ್ಲಿ ದುಡಿಯುವ ಮಗ ತಿಂಗಳಿಗೆ 70 ಸಾವಿರ ರೂ. ಹಣವನ್ನು ಕಳಿಸಿದರೂ ಅದು ಇಲ್ಲಿ ಜೀವನ ಮಾಡಲು ಸಾಕಾಗುತ್ತಿಲ್ಲ ಎಂದು ದೂರು ಹೇಳಿದ್ದಾರೆ. ಪೋಷಕರು ಮನೆ ಖರ್ಚಿಗೆ ಕಳಿಸಿದ ಹಣ ಚೀಟಿಗೆ ಹಾಕಿ,  25 ಲಕ್ಷ ವಾಪಸ್ ಕೇಳುತ್ತಿದ್ದಾರೆ! ಈ ಯುವಕನ ಕಥೆ ತಿಳಿಯಿರಿ.

ವಿದೇಶದಲ್ಲಿ ಕೆಲಸ ಮಾಡಿ (Working abroad) ತಾಯ್ನಾಡಿನಲ್ಲಿರುವ ಮನೆಗೆ ದುಡ್ಡು ಕಳಿಸುವ ಎಷ್ಟೋ ಯುವಕರು ಇಂಥದ್ದೇ ಸಮಸ್ಯೆ ಫೇಸ್ ಮಾಡ್ತಾರೆ. ಆದರೆ, ಹೊರಗಡೆ ಹೇಳಿಕೊಳ್ಳಲಾಗದೆ ಒಳಗೆಯೇ ಕೊರಗುತ್ತಾರೆ. ಇದೀಗ ಕೆನಡಾದಲ್ಲಿ (Canada) ಕೆಲಸ ಮಾಡುವ 22 ವರ್ಷದ ಯುವಕನೊಬ್ಬ ಇದೇ ರೀತಿಯ ಸಂಕಷ್ಟಕ್ಕೆ ಸಿಲುಕಿ, ಸಲಹೆ ಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾನೆ. ತನ್ನ ಕುಟುಂಬಕ್ಕೆ ತಾನೇ ಏಕೈಕ ಆದಾಯದ ಮೂಲವಾಗಿದ್ದು (Sole breadwinner), ಪ್ರತಿ ತಿಂಗಳು ಭಾರಿ ಮೊತ್ತವನ್ನು ಮನೆಗೆ ಕಳಿಸಿದರೂ ಪೋಷಕರ ಹಣಕಾಸಿನ ಶಿಸ್ತು ಇಲ್ಲದ ವರ್ತನೆಯಿಂದ (Financial indiscipline) ಆತ ರೋಸಿಹೋಗಿದ್ದಾನೆ.

70 ಸಾವಿರದಲ್ಲಿ 50 ಸಾವಿರ 'ಚಿಟ್ ಫಂಡ್ಸ್‌' ಪಾಲು!

ಈ ಯುವಕ ಭಾರತದಲ್ಲಿರುವ ತನ್ನ ಕುಟುಂಬಕ್ಕೆ (ಅಪ್ಪ, ಅಮ್ಮ ಮತ್ತು ತಂಗಿ) ಪ್ರತಿ ತಿಂಗಳು ಬರೋಬ್ಬರಿ 70,000 ರೂ. ಮನೆಗೆ ಕಳಿಸುತ್ತಿದ್ದಾನೆ. ಭಾರತದಲ್ಲಿ ಮೂರರಿಂದ ಐದು ಜನರ ಒಂದು ಕುಟುಂಬಕ್ಕೆ ಆತ ಕಳಿಸುವ ದುಡ್ಡು ಧಾರಾಳವಾಗಿ ಸಾಕಾಗುತ್ತೆ. ಆದರೆ, ಆತನ ಪೋಷಕರು ಈ ಹಣದ ಬಹುಪಾಲು ಮೊತ್ತವನ್ನು ಚಿಟ್ ಫಂಡ್ಸ್‌ (Chit funds / Kameti) ಅಥವಾ ಇತರೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

'ನನ್ನ ತಾಯಿ ₹25,000 ಮತ್ತು ತಂದೆ ₹25,000 ಚಿಟ್‌ ಫಂಡ್‌ಗೆ ಹಣ ಕಟ್ಟುತ್ತಾರೆ. ಇದನ್ನ ಅವರು ಒಂದು ಕಡ್ಡಾಯ ಉಳಿತಾಯ (Forced savings) ಅಂದುಕೊಂಡಿದ್ದಾರೆ. ಆದರೆ, ಇದರಿಂದ ಒಂದು ವರ್ಷದವರೆಗೆ ಅವರ ಹಣ ಲಾಕ್ ಆಗುತ್ತೆ. ನಾನು ಕಳಿಸೋ ₹70,000 ರೂಪಾಯಿಯಲ್ಲಿ ₹50,000 ಹೀಗೆ ತೆಗೆದಿಟ್ಟರೆ, ದಿನಸಿ, ಕರೆಂಟ್ ಬಿಲ್, ತಂಗಿಯ ಸ್ಕೂಲ್ ಅಡ್ಮಿಷನ್ ಫೀಸ್ ಸೇರಿದಂತೆ ಇಡೀ ಮನೆ ಖರ್ಚಿಗೆ ಕೇವಲ ₹20,000 ರೂಪಾಯಿ ಮಾತ್ರ ಉಳಿಯುತ್ತೆ. ಈ ಹಣದಲ್ಲಿ ಜೀವನ ನಡೆಸೋಕೆ ಸಾಧ್ಯವಾಗುತ್ತಿಲ್ಲ' ಎಂದು ನೆರೆಹೊರೆಯಬರು ಹಾಗೂ ಸಂಬಂಧಿಕರ ಮುಂದೆ ಅಳಲು ತೋಡಿಕೊಂಡು ನನ್ನನ್ನ ಕೆಟ್ಟವನಂತೆ ಬಿಂಬಿಸುತ್ತಿದ್ದಾರೆ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.

ಮಗನಿಗೆ ಹೆಚ್ಚುವರಿ ಹಣದ ಡಿಮ್ಯಾಂಡ್

ಮನೆ ಖರ್ಚಿಗೆ ದುಡ್ಡು ಸಾಲಲ್ಲ ಅಂತ ಪೋಷಕರು ಪದೇ ಪದೇ ದೂರಿದಾಗ, ಯುವಕ ಅನಿವಾರ್ಯವಾಗಿ ಹೆಚ್ಚು ಹಣ ಕಳಿಸಬೇಕಾಗಿ ಬರುತ್ತಿದೆ. ಇದು ವಿದೇಶದಲ್ಲಿರುವ ಅವನಿಗೆ ಆರ್ಥಿಕವಾಗಿ ದೊಡ್ಡ ಹೊಡೆತ (Financial burden) ನೀಡುತ್ತಿದೆ. 'ಹೀಗೆ ದೂರು ಹೇಳಿ ಹೇಳಿ, ಇತ್ತೀಚೆಗೆ ಪ್ರತಿ ತಿಂಗಳು ಕಳಿಸೋ ₹70,000 ಜೊತೆಗೆ ಹೆಚ್ಚುವರಿಯಾಗಿ ₹25,000 ಕಳಿಸಬೇಕಾಯ್ತು. ಇದು ಕೆನಡಾದಲ್ಲಿನ ನನ್ನ ಸ್ವಂತ ಬಜೆಟ್‌ (Personal budget) ಅನ್ನೇ ಹಾಳು ಮಾಡಿದೆ' ಅಂತ ಯುವಕ ಬೇಸರ ವ್ಯಕ್ತಪಡಿಸಿದ್ದಾನೆ.

ನನ್ನ 25 ಲಕ್ಷ ವಾಪಸ್ ಕೊಡು ಎಂದ ಪೋಷಕರು!

ಮನೆಯ ಮೂಲ ಅಗತ್ಯಗಳಿಗೇ ದುಡ್ಡಿಲ್ಲದಿದ್ದಾಗ ಈ ರೀತಿ ಚಿಟ್‌ ಫಂಡ್‌ಗಳಿಗೆ ಸೇರಬೇಡಿ ಅಂತ ಯುವಕ ಹೇಳಿದರೂ ಪೋಷಕರು ಕೇಳೋಕೆ ತಯಾರಿಲ್ಲ. 'ನನ್ನ ಸ್ವಂತ ಜೀವನವನ್ನೇ ಬದಿಗಿಟ್ಟು, ಪೋಷಕರಿಗೆ ಹೀಗೆ ಹಣ ಸಂಪಾದಿಸಿ ಕೊಡೋಕೆಂದೇ ಕೆನಡಾದಲ್ಲಿ ಕೆಲಸ ಮಾಡ್ತಿದ್ದೀನಿ. ನನಗೆ ಈಗಲೇ ಸುಸ್ತಾಗಿದೆ (Completely burnt out)' ಅಂತ ಯುವಕ ಹೇಳಿದ್ದಾನೆ.

ಪೋಷಕರಿಗೆ ಸಹಾಯ ಮಾಡೋಕೆ ಆತ ಹಿಂದೇಟು ಹಾಕಿಲ್ಲ, ಆದರೆ ಪ್ರತಿ ತಿಂಗಳು ಇಷ್ಟೊಂದು ಹಣ ಕಳಿಸಿದರೂ ಚೀಟಿಗೆ ಕಟ್ಟಲು ಹಣ ಸಾಲುತ್ತಿಲ್ಲ ಎನ್ನುತ್ತಿದ್ದಾರೆ. ಮಗ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, 'ಹಾಗಾದರೆ, ನಿನ್ನ ಓದಿಗೆ ಹಾಗೂ ಕೆನಡಾಗೆ ಕಳುಹಿಸಲು ನಾವು ಖರ್ಚು ಮಾಡಿದ 25 ಲಕ್ಷ ರೂ.ಗಳನ್ನು (25 Lakhs) ಈಗಲೇ ವಾಪಸ್ ಕೊಡು' ಎಂದು ಪೋಷಕರು ಎಮೋಷನಲ್ ಬ್ಲಾಕ್‌ಮೇಲ್ (Emotional blackmail) ಮಾಡಲು ಶುರು ಮಾಡಿದ್ದಾರೆ.

ನೆಟ್ಟಿಗರ ಬೆಂಬಲ

ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಯುವಕನ ಪರ ನಿಂತಿದ್ದಾರೆ. 'ಪೋಷಕರ ಜೊತೆ ಮುಕ್ತವಾಗಿ ಮಾತನಾಡು. ಇದುವರೆಗೆ ಕಳಿಸಿದ ಹಣವನ್ನು ಲೆಕ್ಕ ಹಾಕಿ, ಅದನ್ನೇ ಅವರು ಕೇಳುತ್ತಿರುವ 25 ಲಕ್ಷಕ್ಕೆ ಇಎಂಐ (EMI) ರೂಪದಲ್ಲಿ ಜಮಾ ಮಾಡಿಕೊಳ್ಳಿ ಎಂದು ಹೇಳು. ಪೋಷಕರೇ ಆಗಿದ್ದರೂ, ಹಣಕಾಸಿನ ವಿಚಾರದಲ್ಲಿ ಒಂದು ಗಡಿ (Financial boundaries) ಇರಲೇಬೇಕು' ಎಂದು ಹಲವರು ಕಮೆಂಟ್ ಮೂಲಕ ಸೂಕ್ತ ಸಲಹೆಗಳನ್ನು ನೀಡಿದ್ದಾರೆ.

ಮಗನ ಭವಿಷ್ಯದ ಬಗ್ಗೆ ಯೋಚಿಸದೆ ಕೇವಲ 'ಚಿಟ್ ಫಂಡ್' ಹಿಂದೆ ಬಿದ್ದಿರುವ ಪೋಷಕರ ಈ ವರ್ತನೆ ಸರಿನಾ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ.