ಬೆಂಗಳೂರಿನಲ್ಲಿ ಶಿಕ್ಷಕಿ ಶ್ರೀದೇವಿ ಹನಿಟ್ರ್ಯಾಪ್‌ ಮೂಲಕ ಹಣ ಸುಲಿಗೆ ಮಾಡುತ್ತಿದ್ದಳು. ರಾಕೇಶ್ ಎಂಬುವವರನ್ನು ಪ್ರೀತಿಸಿ, ಆತನಿಂದ ಹಣ ಪಡೆದಿದ್ದಳು. ನಂತರ ಆತನಿಗೆ ಬ್ಲ್ಯಾಕ್‌ಮೇಲ್ ಮಾಡಿ 1.9 ಲಕ್ಷ ರೂ. ಪಡೆದಿದ್ದಳು. ರಾಕೇಶ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ ನಂತರ, ಶ್ರೀದೇವಿ ಮತ್ತು ಆಕೆಯ ಸಹಚರರಾದ ಅರುಣ್ ಹಾಗೂ ಸಾಗರ್ ಬಂಧನವಾಗಿದ್ದಾರೆ. ಗಣೇಶ್ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬೆಂಗಳೂರು (ಏ.01): ಬೆಂಗಳೂರಿನಲ್ಲಿ ಖಾಸಗಿ ಪ್ರೀ ಪ್ರೈಮರಿ ಶಾಲೆ ನಡೆಸುತ್ತಿದ್ದ ಶಿಕ್ಷಕಿ ಶ್ರೀದೇವಿ ಬರೋಬ್ಬರಿ ಒಂದೇ ಒಂದು ಮುತ್ತು ಕೊಡಲು 50 ಸಾವಿರ ರೂ. ಚಾರ್ಜ್ ಮಾಡಿದ್ದಾಳೆ. ಇಷ್ಟೊಂದು ದುಬಾರಿ ಕಿಸ್ ಕೊಡುವ ಸುಂದರಿ ಅಸಲಿ ಕಹಾನಿ ಬೇರೆಯೇ ಇದೆ. ಅಷ್ಟಕ್ಕೂ ಈಕೆಯ ಕಾಸ್ಟ್ಲಿ ಮುತ್ತಿನ ಕಹಾನಿ ಹುಡುಕಿದ ಪೊಲೀಸರಿಗೆ ಈಕೆಯ ಹಿಂದಿದ್ದ ಹನಿಟ್ರ್ಯಾಪ್ ಗ್ಯಾಂಗ್ ಸಿಕ್ಕಿಬಿದ್ದಿದೆ. ಈ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹೌದು, ಇದುಯ ಒಂದೇ ಒಂದು ಮುತ್ತಿಗೆ ಐವತ್ತು ಸಾವಿರ ಚಾರ್ಜ್ ಮಾಡಿದ ಟೀಚರ್ ಕಥೆ. ಬೆಂಗಳೂರಿನಲ್ಲಿ ಸುಲಿಗೆ ಹಾಗೂ ಹನಿಟ್ರ್ಯಾಪ್ ಗ್ಯಾಂಗ್ ಬಂಧನ. ಶಿಕ್ಷಕಿ ಸೇರಿ ಇಬ್ಬರನ್ನ ಬಂಧಿಸಿದ ಸಿಸಿಬಿ. ಖಾಸಗಿ ಪ್ರೀ ಪ್ರೈಮರಿ ಸ್ಕೂಲ್ ನಡೆಸ್ತಿದ್ದ ಆರೋಪಿತೆ ಶ್ರೀದೇವಿ.ಈ ವೇಳೆ ಮಗುವಿನ ಪೋಷಕರ ಪರಿಚಯವಾಗಿತ್ತು. ಶ್ರೀದೇವಿಗೆ 2023ರಲ್ಲಿ ರಾಕೇಶ್ ವೈಷ್ಣವ್ ಎಂಬಾತನ ಪರಿಚಯವಾಗಿತ್ತು. ತನ್ನ ಮಕ್ಕಳನ್ನು ಶ್ರೀದೇವಿಯ ಪ್ಲೇ ಹೋಮ್‌ಗೆ ರಾಕೇಶ್ ಕಳುಹಿಸುತ್ತಿದ್ದನು. ರಾಕೇಶ್‌ನಿಂದ ಶಾಲೆ ನಿರ್ವಹಣೆ ಸಲುವಾಗಿ ಶ್ರೀದೇವಿ 2 ಲಕ್ಷ ರೂ. ಸಾಲ ಪಡೆದಿದ್ದಳು. 2024ರಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು.

ಇನ್ನು ರಾಕೇಶ್ 2 ಲಕ್ಷ ರೂ. ಹಣವನ್ನು ವಾಪಸ್ ಕೇಳಿದಾಗ ನನಗೆ ಇನ್ನೂ ಕಷ್ಟವಿದೆ ನಾನು ನಡೆಸುವ ಶಾಲೆಗೆ ಪಾರ್ಟನರ್ ಆಗು ಎಂದಿದ್ದಳು. ಈ ವೇಳೆ ರಾಕೇಶ್ ಹಾಗೂ ಶ್ರೀದೇವಿ ನಡುವೆ ಸಲುಗೆ ಬೆಳೆದು, ಎಲ್ಲೆಡೆ ಸುತ್ತಾಡುವುದಕ್ಕೆ ಶುರು ಮಾಡಿದ್ದರು. ಇನ್ನು ರಾಕೇಶ್ ಶ್ರೀದೇವಿ‌ ಜೊತೆ ಮಾತನಾಡಲು ಹಾಗೂ ಸುತ್ತಾಡುವುದಕ್ಕೆಂದು ಮನೆಯಲ್ಲಿ ಗೊತ್ತಿಲ್ಲದಂತೆ ಹೊಸ ಸಿಮ್ ಹಾಗೂ ಪೋನ್ ಖರೀದಿಸಿದ್ದನು. ಜೊತೆಗೆ ಸುತ್ತಾಡಿದರೂ ವ್ಯವಹಾರ ಬಿಡದ ರಾಕೇಶ್ ಪುನಃ 2025ರ ಜನವರಿ ಮೊದಲ ವಾರದಲ್ಲಿ ಹಣ ವಾಪಸ್ ಕೇಳಿದ್ದನು.

ಹಣವಿಲ್ಲದೆ ಪರದಾಡುತ್ತಿದ್ದ ಶ್ರೀದೇವಿ ರಾಕೇಶನಿಗೆ ನಿನಗೆ ಏನು ಬೇಕು ಕೇಳು ಕೊಡುತ್ತೇನೆ. ಹಣಕಾಸಿನ ವ್ಯವಹಾರ ಒಂದೇ ಸಲ ಮುಗಿಸಿಬಿಡೋಣ ಎಂದಿದ್ದಳು. ಇದಾದ ನಂತರ ರಾಕೇಶನ ಮನೆಗೆ ತೆರಳಿದ್ದ ಟೀಚರ್ ಶ್ರೀದೇವಿ, ರಾಕೇಶ್‌ಗೆ ಒಂದು ಮುತ್ತು ಕೊಟ್ಟು ಬರೋಬ್ಬರಿ 50 ಸಾವಿರ ರೂ. ಹಣವನ್ನು ಪಡೆದುಕೊಂಡು ಹೋಗಿದ್ದಳು. ಬಳಿಕ, ನನ್ನಂತಹ ಸುಂದರವಾದ ಹುಡುಗಿ ನಿನ್ನ ಜೊತೆ ಸಂಬಂಧದಲ್ಲಿ ಇರುತ್ತೇನೆಂದು ಭರ್ಜರಿ ಆಫರ್ ಕೂಡ ಕೊಟ್ಟಿದ್ದಳು. ಇದಾದ ನಂತರ ಪುನಃ ಶಾಲೆ ನೆಪವೊಡ್ಡಿ ಮತ್ತೆ 15 ಲಕ್ಷ ರೂ. ಹಣ ಕೊಡು ಎಂದು ಡಿಮ್ಯಾಂಡ್ ಮಾಡಿದ್ದಳು.

ಇದನ್ನೂ ಓದಿ: ಈ ಹುಡುಗಿಗೆ ಮೂರು ಸೆಕೆಂಡಲ್ಲಿ ಮೂರು ದೇಶ ಟಚ್ ಮಾಡಲು ಆಗಿದ್ಹೇಗೆ?

ಸ್ವಲ್ಪ ಸ್ಥಿತಿವಂತನಾಗಿದ್ದ ರಾಕೇಶನಿಗೆ ಶ್ರೀದೇವಿ ಪದೇ ಪದೇ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರಿಂದ ಆಕೆಯ ಸಂಪರ್ಕವೇ ಬೇಡ ಎಂದು ಸಿಮ್ ಕಾರ್ಡ್ ಮುರಿದು ಬೀಸಾಡಿದ್ದಾನೆ. ನಂತರ, ಮಾರ್ಚ್ 12 ರಂದು ರಾಕೇಶ್ ಪತ್ನಿಗೆ ಟೀಚರ್ ಶ್ರೀದೇವಿ ಕರೆಮಾಡಿದ್ದಾಳೆ. ನಿಮ್ಮ ಮಕ್ಕಳ ಸ್ಕೂಲ್ ಟಿಸಿ ಕೊಡುತ್ತೇನೆ, ನಿಮ್ಮ ಪತಿಯನ್ನ ಕಳಿಸಿ ಎಂದಿದ್ದಳು. ಆಗ ರಾಕೇಶ್ ಶ್ರೀದೇವಿಯ ಪ್ರೀ ಸ್ಕೂಲ್‌ಗೆ ತೆರಳಿದ್ದನು. ಅಲ್ಲಿ ಶ್ರೀದೇವಿ ಜೊತೆ ಹಾಜರಿದ್ದ ಸಾಗರ್ ಹಾಗೂ ಗಣೇಶ್ ಎಂಬ ಇಬ್ಬರು ಇದ್ದರು.

ಸಾಗರ್ ಜೊತೆ ಶ್ರೀದೇವಿಗೆ ಎಂಗೇಜ್ಮೆಂಟ್ ಆಗಿದೆ. ಆದರೆ, ನೀನು ಆಕೆ ಜೊತೆ ಮಜಾ ಮಾಡ್ತಿದೀಯಾ? ಈ ವಿಚಾರವನ್ನ ಶ್ರೀದೇವಿಯ ತಂದೆ ಹಾಗೂ ನಿನ್ನ ಹೆಂಡತಿಗೆ ತಿಳಿಸುವುದಾಗಿ ರಾಕೇಶ್‌ಗೆ ಗಣೇಶ್ ಎನ್ನುವ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಶ್ರೀದೇವಿಗೆ ಬಾಯ್ ಫ್ರೆಂಡ್ ಇರೋ ವಿಚಾರ ತಿಳಿದಿಲ್ಲ ಎಂದು ರಾಕೇಶ್ ಹೇಳಿದ್ದಾನೆ‌. ನಂತರ, ಆಕೆ ಜೊತೆ ಊಟ ತಿಂಡಿ ಮಾಡಿದ್ದೇನಷ್ಟೇ, ಬೇರೇನೂ ಮಾಡಿಲ್ಲ ಎಂದು ರಾಕೇಶ್ ಹೇಳಿದ್ದಾನೆ. ಆಗ ಮೊಬೈಲ್‌ನಲ್ಲಿ ಮುರಳಿ ಎಂಬಾತನ ಪೊಟೋ ತೋರಿಸಿದ ಗಣೇಶ್ ಹಾಗೂ ಸಾಗರ್, ಪೊಲೀಸ್ ಠಾಣೆಗೆ ಹೋಗೋಣ ಎಂದು ಕಾರಿನಲ್ಲಿ ರಾಕೇಶ್‌ನನ್ನ ಕರೆದೊಯ್ದಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನ ರಾಕೇಶ್ ಮನೆ ಬಳಿಯೇ ಕರೆದೊಯ್ದು ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.

ಇದನ್ನೂ ಓದಿ: ಪಕ್ಕದ ಮನೆಯಲ್ಲೇ ಪರಸ್ತ್ರೀ ಜೊತೆ ಗಂಡನ ಚಕ್ಕಂದ, ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು!

ನೀನು ಹಣ ಕೊಡದಿದ್ದರೆ ಶ್ರೀದೇವಿ ಜೊತೆಗೆ ನೀನು ಸಂಬಂಧದಲ್ಲಿ ಇರುವ ವಿಚಾರವನ್ನು ನಿನ್ನ ಹೆಂಡತಿಗೆ ತಿಳಿಸಿ, ಅವಳನ್ನು ಕರೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಗೊರಗುಂಟೆಪಾಳ್ಯದ ಕಡೆ ಕಾರು ನಿಲ್ಲಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಕಡೆಗೆ ಫೈನಲ್ ಸೆಟಲ್ಮೆಂಟ್ ಆಗಿ 20 ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದಾರೆ. ಅಷ್ಟೂ ಹಣ ಇಲ್ಲವೆಂದಾಗ ಕೇವಲ 1.90 ಲಕ್ಷ ಹಣವನ್ನು ಪಡೆದು ಆತನನ್ನು ಬಿಟ್ಟು ಕಳುಹಿಸಿದ್ದಾರೆ.

ಇಷ್ಟೆಲ್ಲಾ ಘಟನೆ ನಡೆದ ನಂತರ ಮಾ.17 ರಂದು ಶ್ರೀದೇವಿ ಪುನಃ ರಾಕೇಶ್‌ಗೆ ಕರೆ 15 ಲಕ್ಷ ರೂ. ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾಳೆ. ಹಣ ಕೊಟ್ಟರೇ ಅಶ್ಲೀಲ ವಿಡಿಯೋ ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ನಿನ್ನ ಸಂಸಾರವನ್ನ ಹಾಳು ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾಳೆ. ಇದರಿಂದ ಬೇಸತ್ತ ರಾಕೇಶ್ ಬೆಂಗಳೂರು ಸಿಸಿಬಿಗೆ ದೂರು ನೀಡಿದ್ದಾನೆ. ಇವರ ದೂರಿನ ಅನ್ವಯ ಸಿಸಿಬಿ ಪೊಲೀಸರು ಸದ್ಯಕ್ಕೆ ಶ್ರೀದೇವಿ, ಗಣೇಶ್ ಮತ್ತು ಸಾಗರ್ ಮೂವರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.