Asianet Suvarna News Asianet Suvarna News

ನಾನು ಒಳ್ಳೇ ಅಪ್ಪ ಅಲ್ಲ! ನನ್ನ ಥರಾ ನೀವೂ ಆಗಬೇಡಿ: ಅರ್ಜುನ ಹೇಗ್ಯಾಕ್ಹೇಳಿದ್ದು?

ಮಹಾಭಾರತದ ಅರ್ಜುನ ಇಲ್ಲಿ ತನ್ನ ನಾಲ್ಕು ಮಕ್ಕಳ ಮತ್ತು ತನ್ನ ಬಾಂಧವ್ಯದ ಕತೆಯನ್ನು ಹೇಳಿಕೊಂಡಿದ್ದಾನೆ. ಓದಿ ನೋಡಿ.

Arjuna in Mahabharata once repented that he was not good father
Author
Bengaluru, First Published Jun 21, 2021, 10:29 AM IST

ನನ್ನ ಹೆಸರು ಅರ್ಜುನ. ಮಹಾಭಾರತ ಕತೆ ಗೊತ್ತಿದ್ದರೆ ನನ್ನ ಬಗ್ಗೆ ನಿಮಗೆ ತಿಳಿದಿರುತ್ತದೆ. ನಾನು ಪಾಂಡವರಲ್ಲಿ ಒಬ್ಬ. ಕುಂತಿಯ ಮಗ. ನನ್ನ ತಂದೆ ಪಾಂಡು. ನನಗೆ ಬುದ್ಧಿ ತಿಳಿಯುವ ಹೊತ್ತಿಗೆ ನನ್ನ ತಂದೆ ಸತ್ತುಹೋಗಿದ್ದರು. ನನ್ನ ನಿಜವಾದ ತಂದೆ ದೇವೇಂದ್ರ. ಆದರೂ ಪಾಂಡುವನ್ನೇ ನಾನು ಅಪ್ಪನೆಂದು ತಿಳಿದು ಬದುಕಬೇಕಾಯಿತು. ಹೀಗಾಗಿ ಅಪ್ಪ ಎಂದರೆ ನನ್ನ ಜಗತ್ತಿನಲ್ಲಿ ಇಬ್ಬರು. ಆದರೆ ಒಬ್ಬರೂ ನನ್ನ ಬಳಿ ಇರಲಿಲ್ಲ. 

ನಾನು ನನ್ನ ದೊಡ್ಡಣ್ಣ ಧರ್ಮರಾಯನನ್ನೇ ಅಪ್ಪನೆಂದು ಭಾವಿಸಿದೆ. ಅವನು ಹೇಳಿದಂತೆ ನಡೆದೆ. ದೊಡ್ಡವರಾದ ಮೇಲೂ ನಮಗೆ ನಮ್ಮ ಮಾತಿಗೆ ಯಾವುದೇ ಬೆಲೆ ಇರಲಿಲ್ಲ. ನಾವು ಐವರಿಗೂ ಸೇರಿದ ಪತ್ನಿಯಾದ ದ್ರೌಪದಿಯನ್ನು ಧರ್ಮರಾಯ ನಮ್ಮನ್ಯಾರನ್ನೂ ಕೇಳದೇ ದ್ಯೂತದಲ್ಲಿ ಪಣವಿಟ್ಟ. ಆದರೂ ನಮಗೆ ಮಾತನಾಡಲು ಸಾಧ್ಯವಾಗಲಿಲ್ಲ. ಧರ್ಮರಾಯನ ಧರ್ಮ ನಮ್ಮ ಕೈಗಳನ್ನು ಕಟ್ಟಿತ್ತು. ಆ ಧರ್ಮದ ಬಗ್ಗೆ ಜಿಜ್ಞಾಸೆ ಮಾಡಲು ಅವನಿಂದ ಮಾತ್ರ ಸಾಧ್ಯ.

ನಮ್ಮ ಬಾಳಿನ ಕಡು ಕಷ್ಟದ ದಿನಗಳು, ಒತ್ತಡಗಳಿಂದಾಗಿ ನನಗೆ ನನ್ನ ಮಕ್ಕಳ ಕಡೆಗೂ ಗಮನ ಕೊಡಲು ಆಗಲಿಲ್ಲ. 
 

Arjuna in Mahabharata once repented that he was not good father

ನನ್ನ ಮೊದಲ ಮಗ ಶ್ರುತಕರ್ಮ. ಇವನು ದ್ರೌಪದಿಯಲ್ಲಿ ಜನಿಸಿದವನು. ಎಲ್ಲ ಐವರಂತೆ ನಾನೂ ಒಂದು ವರ್ಷ ದ್ರೌಪದಿಯ ಜೊತೆಗಿದ್ದು, ಆಕೆಯಲ್ಲಿ ಶ್ರುತಕರ್ಮನನ್ನು ಪಡೆದೆ. ಆದರೆ ನಮ್ಮ ಜೊತೆಗೆ ಅವನೂ ಕಾಡುವಾಸವನ್ನು ಅನುಭವಿಸಬೇಕಾಯಿತು. ಹದಿನಾಲ್ಕು ವರ್ಷಗಳ ವನವಾಸ- ಅಜ್ಞಾತವಾಸದಿಂದ ಮಕ್ಕಳು ಜರ್ಝರಿತರಾದರು. ನಂತರ ನಾಡಿಗೆ ಬಂದರೂ ಅವರನ್ನು ಸುಖವಾಗಿಡಲು ಸಾಧ್ಯವಾಗಲಿಲ್ಲ. ಕುರುಕ್ಷೇತ್ರ ಯುದ್ಧದಲ್ಲಿ ಇವನೂ ಪಾಲ್ಗೊಂಡ. ಆದರೆ ಮಹಾವಿಕ್ರಮಿಯಾಗಿ ಇವನನ್ನು ಬೆಳೆಸಲು ನನ್ನಿಂದ ಸಾಧ್ಯವಾಗಲಿಲ್ಲ. ಯುದ್ಧದ ಕೊನೆಯ ದಿನ, ದುರ್ಯೋಧನನು ತೊಡೆ ಮುರಿದು ಬಿದ್ದ ದಿನ ರಾತ್ರಿ, ಅಶ್ವತ್ಥಾಮ ಬಂದು ನಟ್ಟ ನಡು ರಾತ್ರಿ ಶಿಬಿರದಲ್ಲಿ ಮಲಗಿದ್ದ ನನ್ನ ಮಗನೂ ಸೇರಿದಂತೆ ಪಂಚ ಉಪಪಾಂಡವರ ತಲೆಗಳನ್ನು ಕೊಯ್ದು ಎತ್ತಿಕೊಂಡು ಹೋದ. ಅವನನ್ನು ರಕ್ಷಿಸಲು ನನ್ನಿಂದ ಸಾಧ್ಯವಾಗಲಿಲ್ಲ. 

ಅಪ್ಪ ಅಗ್ತಾ ಇದ್ದೀರಾ? ಹಾಗಿದ್ದರೆ ತಂದೆತನ ಅನುಭವಿಸಲು ಕೆಲವು ಟ್ರಿಕ್ಸ್! ...

ನನ್ನ ಎರಡನೇ ಮಗ ಇರಾವಾನ್‌. ಇರಾವಂತನೆಂದೂ ಕರೆಯುತ್ತಾರೆ. ನಾನು ಒಂದು ವರ್ಷ ತೀರ್ಥಕ್ಷೇತ್ರ ಯಾತ್ರೆಯಲ್ಲಿ ಇದ್ದಾಗ, ಗಂಗೆಯಲ್ಲಿ ಮುಳುಗಿ ಸ್ನಾನ ಮಾಡುತ್ತಿದ್ದಾಗ ಉಲೂಪಿ ಎಂಬ ನಾಗಕನ್ಯೆ ನನ್ನನ್ನು ನಾಗಲೋಕಕ್ಕೆ ಸೆಳೆದೊಯ್ದಳು. ಅಲ್ಲಿ ಅವಳ ಹಾಗೂ ನನ್ನ ಸಂಯೋಗದಿಂದ ಜನಿಸಿದವನು ಇರಾವಾನ್. ಅವನನ್ನೂ ನನ್ನ ಜೊತೆಗೆ ಕರೆದುಕೊಂಡು ಬರಲಿಕ್ಕೆ ನನಗೆ ಆಗಲಿಲ್ಲ. ಯಾಕೆಂದರೆ ಅಲ್ಲಿ ನಾಗಕನ್ಯೆಯರು ಪುರುಷರಿಂದ ಮಕ್ಕಳನ್ನು ಪಡೆಯಬಹುದು, ಆದರೆ ಅವರ ಜೊತೆ ಗಂಡನ ಮನೆಗೆ ಹೋಗಬೇಕಿಲ್ಲ. ಉಲೂಪಿ ಸ್ವತಂತ್ರ ವ್ಯಕ್ತಿತ್ವದವಳು. ನಾನು ಊರಿಗೆ ಮರಳಿ ಬಂದ ಬಳಿಕ ನನ್ನ ಮಗ ಇರಾವಾನ್ ಹೇಗಿದ್ದಾನೆ, ಏನಾಗಿದ್ದಾನೆ ಎಂಬುದನ್ನು ನೋಡಲೂ ಹೋಗಲು ನನಗೆ ಸಾಧ್ಯವಾಗಲಿಲ್ಲ. ಅವನ ಬಾಲಲೀಲೆಗಳನ್ನು ನೋಡಲು ಆಗಲಿಲ್ಲ. ನಾನು ಸ್ವರ್ಗಕ್ಕೆ ಹೋಗಿದ್ದಾಗ ಅವನು ಅಲ್ಲಿಗೆ ಬಂದು, ''ನಾನು ನಿನ್ನ ಮಗ'' ಎಂದು ಪರಿಚಯಿಸಿಕೊಂಡ. ವಿನಯವಂತ ಪುತ್ರ. ಆದರೆ ಅವನು, ಕುರುಕ್ಷೇತ್ರ ಯುದ್ಧದಲ್ಲಿ ನಮಗೆ ನೆರವಾಗಲು ಬಂದವನು, ಯುದ್ಧದ ಎಂಟನೇ ದಿನ, ಆರ್ಯಶೃಂಗಿ ಎಂಬ ರಾಕ್ಷಸನ ಜೊತೆಗೆ ಹೋರಾಡಿ ಮಾಯಾಯುದ್ಧದಲ್ಲಿ ಮರಣವನ್ನಪ್ಪಿದ. ಅವನನ್ನೂ ಉಳಿಸಿಕೊಳ್ಳಲು ನನಗೆ ಆಗಲಿಲ್ಲ. 

ಇನ್ನು ನನ್ನ ಪ್ರೀತಿಯ ಇನ್ನೊಬ್ಬ ಮಗ, ಅಭಿಮನ್ಯು, ಅವನ ಕತೆಯನ್ನು ಹೇಳಲೇಬೇಕೇನು?  ನಿಮಗೇ ಗೊತ್ತಿದೆ. ಅವನ ಬಾಲ್ಯವನ್ನೂ ನಾನು ನೋಡಲಾಗಲಿಲ್ಲ. ಅವನು ಬೆಳೆಯುವ ಸಮಯದಲ್ಲಿ ನಾವು ಕಾಡಿನಲ್ಲಿದ್ದೆವು. ಅವನು ಅವನ ಮಾವ ಕೃಷ್ಣ ಮತ್ತು ತಾಯಿ ಸುಭದ್ರೆಯ ಜೊತೆಗೆ ದ್ವಾರಕೆಯಲ್ಲಿದ್ದ. ಕುರುಕ್ಷೇತ್ರ ಯುದ್ಧದ ವೇಳೆ ದ್ರೋಣಾಚಾರ್ಯರಯ ಹೆಣೆದ ಚಕ್ರವ್ಯೂಹದಲ್ಲಿ ಸೆಣಸುವುದಕ್ಕೆ ಹೋಗಿ ಹತನಾದ. ಅವನೊಂದು ವೀರಸಿಂಹ. ಅವನನ್ನೂ ನನ್ನಿಂದ ರಕ್ಷಿಸಿಕೊಳ್ಳಲು ಆಗಲಿಲ್ಲ. 

ಭೀಮನ ಮೊಮ್ಮಗನನ್ನು ಶ್ರೀಕೃಷ್ಣ ಕೊಂದ ಕತೆ ನಿಮಗೆ ಗೊತ್ತೇ? ...

ಇನ್ನೊಬ್ಬ ಮಗ ಬಭ್ರುವಾಹನ. ಇವನು ಮಣಿಪುರದ ರಾಣಿ ಚಿತ್ರಾಂಗದೆ ಮತ್ತು ನನ್ನ ದಾಂಪತ್ಯದಲ್ಲಿ ಜನಿಸಿದವನು. ಚಿತ್ರಾಂಗದೆಯೂ ಆ ರಾಜ್ಯಕ್ಕೆ ಮುಂದಿನ ರಾಜನನ್ನು ಒದಗಿಸುವ ಹೊಣೆಗಾರಿಕೆಯವಳಾಗಿದ್ದಳು. ಹೀಗಾಗಿ ಅವಳೂ ನನ್ನ ಜೊತೆಗೆ ಬರಲಿಲ್ಲ. ಇಲ್ಲೂ ಬಭ್ರುವಾಹನ ಜನಿಸುವ ಮುನ್ನವೇ ನಾನು ಮಣಿಪುರ ತೊರೆದೆ. ಅವನ ಬಾಲ್ಯ ಯವ್ವನಗಳನ್ನು ನೋಡಲು ನನ್ನಿಂದ ಆಗಲಿಲ್ಲ. ಮುಂದೆ ಯಾವತ್ತೂ ಅಶ್ವಮೇಧ ಯಾಗ ಮಾಡುವ ಸಂದರ್ಭದಲ್ಲಿ ನನ್ನ ಮತ್ತು ಅವನ ಮುಖಾಮುಖಿ ಆಯಿತು. ಅವನು ನನ್ನ ಮಗ ಎಂಬ ನೆನಪೇ ನನಗೆ ಆಗಲಿಲ್ಲ. ಇದು ನನ್ನ ತಪ್ಪಲ್ಲ. ಯಾವುದೋ ಹೆಣ್ಣಿನ ಶಾಪದ ಫಲ. 

ಒಂದಲ್ಲ ನಾಲ್ವರು ವೀರ ಮಕ್ಕಳಿದ್ದರೂ ಮೂವರನ್ನು ನನ್ನಿಂದ ಉಳಿಸಿಕೊಳ್ಳಲಾಗಲಿಲ್ಲ. ನಾನು ಸಾಯುವ ಮುನ್ನವೇ ಅವರ ಮರಣವನ್ನು ಕಾಣಬೇಕಾಯಿತು. ಇದ್ದೊಬ್ಬ ಮಗ ಬಭ್ರುವಾಹನನೂ ದೂರ ಮಣಿಪುರದಲ್ಲಿದ್ದಾನೆ. ಅವನಿಷ್ಟದ ಪ್ರಕಾರ. ನನಗೂ ಅವನಿಗೂ ಅಂಥಾ ಹಾರ್ದಿಕ ಸಂಬಂಧವೇನೂ ಇಲ್ಲ.

ಇದರಿಂದ ನೀವು ಕಲಿಯಬಹುದಾದ ಪಾಠ ಎಂದರೆ, ಕೆಲಸ ಕೆಲಸ, ಹೋರಾಟ, ಒತ್ತಡ ಎಂದು ಸದಾಕಾಲ ಅದರಲ್ಲೇ ಬ್ಯುಸಿಯಾಗಿ ಇರಬೇಡಿ. ಕೊನೆಗೆ ನೀವು ಎಷ್ಟೇ ದೊಡ್ಡ ಸಾಮ್ರಾಜ್ಯದ ರಾಜರಾದರೂ ಅದನ್ನು ಸಂತೋಷದಿಂದ ಅನುಭವಿಸಲು ನಿಮ್ಮ ಮಕ್ಕಳೇ ನಿಮ್ಮ ಜೊತೆಗೆ ಇರುವುದಿಲ್ಲ. ಮಕ್ಕಳೊಡನೆ ಮಕ್ಕಳಂತೆ ಸಮಯ ಕಳೆಯಿರಿ, ಆಡಿ, ನಕ್ಕು ನಲಿಯಿರಿ. ಅದೇ ಅಪ್ಪ- ಮಕ್ಕಳ ಬಾಂಧವ್ಯದ ಕೊಂಡಿ. 

ನನಗೆ ಮನೆಯಲ್ಲೇ ರಮೇಶ್ ಓಟಿಟ:ನಿಹಾರಿಕಾ ...
 

Follow Us:
Download App:
  • android
  • ios