ಜಿಯೋ ಐಪಿಒ ಯಶಸ್ಸಿನ ಹಿನ್ನೆಲೆಯಲ್ಲಿ ಮುಂಬೈನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಅನಂತ್ ಅಂಬಾನಿ ಅವರು ಕಣ್ಣೀರಿಡುತ್ತಿದ್ದ ಬಡ ಮಹಿಳೆಯೊಬ್ಬಳ ಕಷ್ಟಕ್ಕೆ ಮಿಡಿದಿದ್ದಾರೆ. ಆಕೆಯ ತಾಯಿಯ ತುರ್ತು ಶಸ್ತ್ರಚಿಕಿತ್ಸೆಗೆ ತಕ್ಷಣವೇ ಸಂಪೂರ್ಣ ವೈದ್ಯಕೀಯ ನೆರವು ಒದಗಿಸುವಂತೆ ತಮ್ಮ ತಂಡಕ್ಕೆ ಆದೇಶಿಸಿದ್ದಾರೆ.
ಮುಂಬೈ (ಅ.28): ಭಾರತದ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ, ಅನಂತ್ ಅಂಬಾನಿ (Anant Ambani) ತಮ್ಮ ಸರಳತೆ ಹಾಗೂ ಮಾನವೀಯತೆಯ ಮೂಲಕ ಮತ್ತೊಮ್ಮೆ ಎಲ್ಲರ ಹೃದಯ ಗೆದ್ದಿದ್ದಾರೆ. ಜಿಯೋ (Jio IPO) ಷೇರು ಮಾರುಕಟ್ಟೆಯಲ್ಲಿ ಅತ್ಯಂತ ಯಶಸ್ವಿಯಾಗಿ ಲಿಸ್ಟಿಂಗ್ ಆದ ಶುಭ ಸಂದರ್ಭದಲ್ಲಿ, ಅಣ್ಣ ಆಕಾಶ್ ಅಂಬಾನಿ (Akash Ambani) ಅವರೊಂದಿಗೆ ಮುಂಬೈನ ಪ್ರಸಿದ್ಧ ಬಬೂಲ್ನಾಥ ಹಾಗೂ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಹೊರಬರುವ ವೇಳೆ ಈ ಅತ್ಯಂತ ಹೃದಯಸ್ಪರ್ಶಿ ಘಟನೆ ನಡೆದಿದೆ. ದೇವಸ್ಥಾನದ ಹೊರಗೆ ಕಣ್ಣೀರಿಡುತ್ತಾ ನಿಂತಿದ್ದ ಬಡ ಮಹಿಳೆಯೊಬ್ಬಳ ದೀನಸ್ಥಿತಿಗೆ ತಕ್ಷಣವೇ ಮಿಡಿದ ಅನಂತ್ ಅಂಬಾನಿ, ಅವರ ತಾಯಿಯ ಶಸ್ತ್ರಚಿಕಿತ್ಸೆಗೆ (Surgery) ಬೇಕಾದ ಸಂಪೂರ್ಣ ವೈದ್ಯಕೀಯ ನೆರವನ್ನು ತಕ್ಷಣವೇ ಒದಗಿಸುವಂತೆ ತಮ್ಮ ತಂಡಕ್ಕೆ ಸ್ಥಳದಲ್ಲೇ ಆದೇಶ ನೀಡಿ ಮಾದರಿಯಾಗಿದ್ದಾರೆ.
ದೇವಸ್ಥಾನದ ಬಾಗಿಲಲ್ಲಿ ನಡೆದಿದ್ದೇನು?
ಷೇರು ಮಾರುಕಟ್ಟೆಯಲ್ಲಿ ಜಿಯೋ ಐಪಿಒ ಐತಿಹಾಸಿಕವಾಗಿ ಲಿಸ್ಟ್ ಆದ ಹಿನ್ನೆಲೆಯಲ್ಲಿ ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆಮಾಡಿತ್ತು. ಈ ಯಶಸ್ಸಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲು ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಮುಂಬೈನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು.
ಪೂಜೆ ಮುಗಿಸಿ ದೇವಸ್ಥಾನದಿಂದ ಹೊರಬರುತ್ತಿದ್ದಂತೆಯೇ, ಅಲ್ಲೇ ಕಾಯುತ್ತಿದ್ದ ಬಡ ಮಹಿಳೆಯೊಬ್ಬಳು ಅನಂತ್ ಅಂಬಾನಿ ಅವರ ಹತ್ತಿರ ಬರುವ ಪ್ರಯತ್ನ ಮಾಡಿ ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಿದ್ದರು.'ನನ್ನ ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ತುರ್ತಾಗಿ ಶಸ್ತ್ರಚಿಕಿತ್ಸೆಯ (Surgery) ಅಗತ್ಯವಿದೆ. ಆದರೆ, ಬಡತನದ ಕಾರಣದಿಂದಾಗಿ ನಮಗೆ ಚಿಕಿತ್ಸೆಯ ಭಾರಿ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ' ಎಂದು ಕಣ್ಣೀರಿಡುತ್ತಾ ತಮ್ಮ ಅಸಹಾಯಕತೆಯನ್ನು ವಿವರಿಸಿದರು.
ಇಂದೇ ಟ್ರೀಟ್ಮೆಂಟ್ ಕೊಡಿಸಿ, ತಡ ಮಾಡ್ಬೇಡಿ
ಮಹಿಳೆಯ ಅಳಲನ್ನು ತಾಳ್ಮೆಯಿಂದ ಆಲಿಸಿದ ಅನಂತ್ ಅಂಬಾನಿ, ಸ್ವಲ್ಪವೂ ತಡಮಾಡದೆ ತಕ್ಷಣವೇ ತಮ್ಮ ಜೊತೆಗಿದ್ದ ತಂಡವನ್ನು ಹತ್ತಿರಕ್ಕೆ ಕರೆದರು. ಆಕೆ ನೀಡಿದ ದಾಖಲೆಗಳನ್ನು ನೋಡುತ್ತಾ, 'ಈ ಕೂಡಲೇ ಆಸ್ಪತ್ರೆಯ ಜೊತೆ ಮಾತನಾಡಿ ಇಂದೇ ಟ್ರೀಟ್ಮೆಂಟ್ ಕೊಡಿಸಿ, ಯಾವುದೇ ಕಾರಣಕ್ಕೂ ಇದರಲ್ಲಿ ತಡ ಮಾಡಬೇಡಿ. ಅವರ ತಾಯಿಗೆ ಬೇಕಾದ ಸಂಪೂರ್ಣ ಶಸ್ತ್ರಚಿಕಿತ್ಸೆ ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಅತ್ಯಂತ ಶೀಘ್ರವಾಗಿ ಒದಗಿಸಿ' ಎಂದುನಿರ್ದೇಶನ ನೀಡಿದರು. ಅಂಬಾನಿ ಅವರ ಈ ಕ್ಷಿಪ್ರ ನಿರ್ಧಾರದಿಂದಾಗಿ ಬಡ ಕುಟುಂಬವೊಂದಕ್ಕೆ ತಕ್ಷಣದ ಆಸರೆ ಸಿಕ್ಕಂತಾಯಿತು.
ಅಹಂಕಾರವಿಲ್ಲದ ಯುವ ಉದ್ಯಮಿಗೆ ದೇಶಾದ್ಯಂತ ಮೆಚ್ಚುಗೆಯ ಮಹಾಪೂರ
ದೇಶದ ಅತ್ಯಂತ ಶ್ರೀಮಂತ ಕುಟುಂಬದ ಕುಡಿ ಹಾಗೂ ಯಶಸ್ವಿ ಉದ್ಯಮಿಯಾಗಿದ್ದರೂ ಸಹ, ಅನಂತ್ ಅಂಬಾನಿ ಅವರಲ್ಲಿದ್ದ ಕರುಣೆ, ಶೂನ್ಯ ಅಹಂಕಾರ ಮತ್ತು ಬಡವರ ಮೇಲಿನ ಕಾಳಜಿ ಪ್ರತಿಯೊಬ್ಬರ ಮನ ಮುಟ್ಟಿದೆ. ಶ್ರೀಮಂತಿಕೆಯ ಮದವಿಲ್ಲದೇ, ಸ್ವತಃ ತಾವೇ ನಿಂತು ಬಡ ರೋಗಿಯ ನೆರವಿಗೆ ಧಾವಿಸಿದ ಅವರ ಈ ನಡೆಯನ್ನು ಸಾರ್ವಜನಿಕರು ಹಾಗೂ ನೆಟ್ಟಿಗರು ಕೊಂಡಾಡುತ್ತಿದ್ದಾರೆ. "ಅನಂತ್ ಅಂಬಾನಿ ಕೇವಲ ಉದ್ಯಮಿಯಷ್ಟೇ ಅಲ್ಲ, ಅತ್ಯಂತ ಅಪರೂಪದ ಒಳ್ಳೆಯ ಹೃದಯವಿರುವ ವ್ಯಕ್ತಿ. ಬಡವರ ಕಷ್ಟಕ್ಕೆ ತಕ್ಷಣ ಮಿಡಿಯುವ ಇಂತಹ ಉದ್ಯಮಿಗಳು ಜಗತ್ತಿನಲ್ಲಿ ಅತ್ಯಂತ ವಿರಳ. ತಮ್ಮ ದಯೆ, ಕರುಣೆ ಮತ್ತು ಮಾನವೀಯ ಗುಣದಿಂದ ಅವರು ಸಮಾಜದ ಸಕಲ ಗೌರವ ಮತ್ತು ಪ್ರಶಂಸೆಗೆ ಅರ್ಹರು" ಎಂದು ಜನರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.






