ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕ ಅನಂತ್ ಅಂಬಾನಿ ಅವರು ಪ್ರಾಣಿ ಕಲ್ಯಾಣ ಮತ್ತು ಸಮಾಜ ಸೇವೆಯಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸೈಕಲ್ನಲ್ಲಿ ಡೆಲಿವರಿ ಮಾಡುತ್ತಿದ್ದ ಯುವಕನಿಗೆ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆಯಾಗಿ ನೀಡಿ ಕಣ್ಣೀರು ತರಿಸಿದ್ದಾರೆ. ಜೊತೆಗೆ ವನ್ಯಜೀವಿ ಸಂರಕ್ಷಣೆಗಾಗಿ 'ಗ್ಲೋಬಲ್ ಹ್ಯುಮಾನಿಟೇರಿಯನ್ ಅವಾರ್ಡ್' ಕೂಡ ಪಡೆದಿದ್ದಾರೆ.
ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕ ಅನಂತ್ ಅಂಬಾನಿ ಅವರು ಇದಾಗಲೇ ಹಲವರು ಬಾರಿ ಹೃದಯ ಶ್ರೀಮಂತಿಕೆಯನ್ನೂ ಮೆರೆದಿದ್ದಾರೆ. ವಿಕೃತ ಮನಸ್ಸಿನವರು ಅವರ ಬಾಡಿ ಶೇಮಿಂಗ್ ಮಾಡುತ್ತಿದ್ದರೂ, ಅದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ, ಪ್ರಚಾರವನ್ನೂ ಬಯಸದೇ ಸದ್ದಿಲ್ಲದೇ ತಮ್ಮ ಸಮಾಜ ಸೇವೆಯನ್ನು ಮುಂದುವರೆಸುತ್ತಿದ್ದಾರೆ ಅನಂತ್ ಅಂಬಾನಿ. ಅವರು ಸಮಾಜ ಸೇವೆ ಹಾಗೂ ಮುಖ್ಯವಾಗಿ ಪ್ರಾಣಿ ಕಲ್ಯಾಣ ಮತ್ತು ವನ್ಯಜೀವಿ ಸಂರಕ್ಷಣಾ ಕ್ಷೇತ್ರಗಳಲ್ಲಿ ಬೃಹತ್ ಕೊಡುಗೆಗಳನ್ನು ನೀಡುತ್ತಿದ್ದಾರೆ. ತಮ್ಮ ಸನಾತನ ಸಿದ್ಧಾಂತವಾದ 'ಜೀವ ಸೇವೆ'ಯನ್ನು (ಎಲ್ಲಾ ಜೀವಿಗಳ ಸೇವೆ) ಜೀವನದ ಮುಖ್ಯ ಉದ್ದೇಶವಾಗಿಸಿಕೊಂಡು ಅವರು ಹಲವು ಜನಪರ ಹಾಗೂ ಪ್ರಾಣಿ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ತಮ್ಮ ಹುಟ್ಟುಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಜಾಮ್ನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೃಹತ್ ಜನಸೇವೆಯನ್ನು ಕೈಗೊಳ್ಳುತ್ತಾರೆ. ಬಡ ರೋಗಿಗಳಿಗೆ ಮಲ್ಟಿ-ಸ್ಪೆಷಾಲಿಟಿ ಆರೋಗ್ಯ ಶಿಬಿರಗಳು ಮತ್ತು ಉಚಿತ ಕಣ್ಣಿನ ತಪಾಸಣೆಗಳನ್ನು ಆಯೋಜಿಸುತ್ತಾರೆ. ಗುರು ಗೋವಿಂದ್ ಸಿಂಗ್ ಆಸ್ಪತ್ರೆಯ ಲಕ್ಷಾಂತರ ರೋಗಿಗಳಿಗೆ ಹಾಗೂ ಸ್ಥಳೀಯ ಜನರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕೂಲ್ ಕಿಟ್, ಶಾಲಾ ಕಟ್ಟಡಗಳ ನವೀಕರಣ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸುತ್ತಾರೆ. ಅನಂತ್ ಅಂಬಾನಿ ಅವರು ರಿಲಯನ್ಸ್ ಫೌಂಡೇಶನ್ ಮೂಲಕ ದೇಶದ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಹಾಗೂ ವಿಪತ್ತು ನಿರ್ವಹಣಾ ಕಾರ್ಯಗಳಿಗೂ ಬೆಂಬಲ ನೀಡುತ್ತಿದ್ದಾರೆ.
ಡೆಲಿವರಿ ಬಾಯ್ಗೆ ಸ್ಕೂಟರ್ ಗಿಫ್ಟ್
ಇಂಥ ಹತ್ತು ಹಲವು ಕಾರ್ಯಗಳನ್ನು ಸೈಲೆಂಟ್ ಆಗಿಮಾಡುವ ಕಾರಣ, ಅವರ ಈ ಮಹತ್ಕಾರ್ಯಗಳು ಉಳಿದವರಿಗೆ ತಿಳಿಯುವುದೇ ಇಲ್ಲ. ಇದೀಗ ಅವರು, ಸೈಕಲ್ನಲ್ಲಿ ಡೆಲಿವರಿ ಮಾಡುತ್ತಿದ್ದ ಬ್ಲಿಂಕಿಟ್ ಡೆಲಿವರಿ ಕೆಲಸಗಾರನಿಗೆ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆಯಾಗಿ ನೀಡುವ ಮೂಲಕ ಜನರ ಹೃದಯ ಗೆದ್ದಿದ್ದಾರೆ. ಸೈಕಲ್ ಮೇಲೆ ಡೆಲವರಿ ಮಾಡುತ್ತಿದ್ದ ಸಿಬ್ಬಂದಿಯೊಬ್ಬರಿಗೆ, ಇದಾಗಲೇ ಜನಸೇವೆ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನರ ಮನಸ್ಸನ್ನು ಗೆದ್ದಿರುವ ಹುಸೇನ್ ಮನ್ಸೂರಿ ಅವರ ಮೂಲಕ, ಈ ಉಡುಗೊರೆಯನ್ನು ನೀಡಿದ್ದಾರೆ ಅನಂತ್ ಅಂಬಾನಿ.
ಹುಸೇನ್ ಮನ್ಸೂರಿ ಅವರು ಈ ವಿಡಿಯೋ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸೈಕಲ್ ಮೇಲೆ ಹೋಗುವ ಡೆಲವರಿ ಬಾಯ್ ಅನ್ನು ಮಾತನಾಡಿಸಿ, ಕೊನೆಗೆ, ಅವರ ಕಣ್ಣಿಗೆ ಬಟ್ಟೆ ಕಟ್ಟಿ, ಅನಂತ್ ಅಂಬಾನಿ ಅವರು ನೀಡಿರುವ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆಯನ್ನು ತೋರಿಸಿದಾಗ, ಆ ವ್ಯಕ್ತಿಗೆ ಕಣ್ಣೀರು ತಡೆಯಲು ಆಗಲಿಲ್ಲ. ಅನಂತ್ ಅಂಬಾನಿ ಅವರಿಗೆ ಹೃದಯಪೂರ್ವಕವಾಗಿ ಆಶೀರ್ವದಿಸಿದ್ದಾರೆ ಅವರು. ಇದರ ವಿಡಿಯೋ ವೈರಲ್ ಆಗಿದ್ದು, ಅಂಬಾನಿ ಕುಟುಂಬಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಯುವಕನ ಕಣ್ಣೀರು
ಇನ್ನು ಅನಂತ್ ಅಂಬಾನಿ ಅವರ ಕುರಿತು ಹೇಳುವುದಾದರೆ, ಇವರಿಗೆ 'ಗ್ಲೋಬಲ್ ಹ್ಯುಮಾನಿಟೇರಿಯನ್ ಅವಾರ್ಡ್' (Global Humanitarian Award) ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಹಾಗೂ ಮೊದಲ ಏಷ್ಯಾದ ವ್ಯಕ್ತಿ ಇವರಾಗಿದ್ದಾರೆ. ಗುಜರಾತ್ನ ಜಾಮ್ನಗರದಲ್ಲಿ ಸುಮಾರು 3,500 ಎಕರೆ ಪ್ರದೇಶದಲ್ಲಿ ಈ ಅತ್ಯಾಧುನಿಕ ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಜಗತ್ತಿನಾದ್ಯಂತ ಹಿಂಸೆ, ಅನಾರೋಗ್ಯ ಹಾಗೂ ಅಪಾಯಕ್ಕೆ ಸಿಲುಕಿದ್ದ ಸುಮಾರು 1.5 ಲಕ್ಷಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಿ ಇಲ್ಲಿ ಪೋಷಿಸಲಾಗುತ್ತಿದೆ. ಇದರಲ್ಲಿ ಆನೆಗಳು, ಚಿರತೆಗಳು, ಹುಲಿಗಳು ಮತ್ತು ವಿವಿಧ ಪಕ್ಷಿ ಪ್ರಭೇದಗಳು ಸೇರಿವೆ. ಇಲ್ಲಿ ಆನೆಗಳಿಗಾಗಿಯೇ ಜಗತ್ತಿನ ಅತ್ಯಂತ ದೊಡ್ಡ ಹೈಟೆಕ್ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಗಾಯಗೊಂಡ ಆನೆಗಳಿಗೆ ಹೈಡ್ರೋಥೆರಪಿ ಹಾಗೂ ಸುಧಾರಿತ ಶಸ್ತ್ರಚಿಕಿತ್ಸೆಗಳನ್ನು ನೀಡಲಾಗುತ್ತದೆ.• ಇತ್ತೀಚಿನ ವರದಿಗಳ ಪ್ರಕಾರ, ಅವರ ನೇತೃತ್ವದ ತಂಡವು ಸುಮಾರು ೯ ಲಕ್ಷ ಗೋವುಗಳ ರಕ್ಷಣೆ ಮತ್ತು ಆರೈಕೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಇದರಲ್ಲಿ ಹಾಲು ನೀಡದ ಸುಮಾರು 7 ಲಕ್ಷಕ್ಕೂ ಅಧಿಕ ವೃದ್ಧ ಹಾಗೂ ಅಶಕ್ತ ಗೋವುಗಳನ್ನು ವಿಶೇಷ ಕಾಳಜಿಯಿಂದ ಸಾಕಿ ಸಲಹಲಾಗುತ್ತಿದೆ. ಸಮುದಾಯದಲ್ಲಿರುವ ಪ್ರಾಣಿಗಳ ಕಲ್ಯಾಣಕ್ಕಾಗಿ ಅವರು 'Champions of Care' ಎಂಬ ರಾಷ್ಟ್ರೀಯ ಯೋಜನೆಯನ್ನು ಘೋಷಿಸಿದ್ದಾರೆ. ಈ ಮೂಲಕ ಭಾರತದಾದ್ಯಂತ ಇರುವ 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳನ್ನು ಒಟ್ಟುಗೂಡಿಸಿ, ಬೀದಿ ನಾಯಿಗಳು, ಬೆಕ್ಕುಗಳು ಮತ್ತು ಇತರೆ ಪ್ರಾಣಿಗಳಿಗೆ ಉಚಿತ ಅಂಬುಲೆನ್ಸ್, ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲು ನೆರವು ನೀಡುತ್ತಿದ್ದಾರೆ







