ಹೊಂದಾಣಿಕೆ ಅಸ್ತ್ರ ಬತ್ತಳಿಕೆಯಲ್ಲಿದ್ರೆ ಲೈಫ್‍ನಲ್ಲಿ ನೋ ವರಿಸ್
ಅಸಮಾಧಾನ, ಕಿರಿಕಿರಿ, ಜಗಳ ಇದಕ್ಕೆಲ್ಲ ಅನೇಕ ಸಂದರ್ಭಗಳಲ್ಲಿ ಹೊಂದಾಣಿಕೆ ಕೊರತೆಯೂ ಕಾರಣವಾಗಿರುತ್ತೆ. ಆದ್ರೆ ಅದನ್ನು ಒಪ್ಪಿಕೊಳ್ಳಲು ನಮ್ಮ ಅಹಂ ಬಿಡೋದಿಲ್ಲ ಅಷ್ಟೆ. ಹೊಂದಾಣಿಕೆ ಎಂಬ ಒಂದೇ ಒಂದು ಅಸ್ತ್ರ ನಿಮ್ಮ ಬತ್ತಳಿಕೆಯಲ್ಲಿದ್ರೆ ಸಾಕು, ಲೈಫ್‍ನಲ್ಲಿ ನೋ ಕಿರಿಕಿರಿ.
ಮದುವೆಯಾಗಿ ಗಂಡನ ಮನೆಗೆ ಬಂದ ಸ್ವಲ್ಪ ದಿನಗಳಲ್ಲೆ ಇಲ್ಲಿ ಏನೋ ಸರಿಯಿಲ್ಲ, ಕಂಫರ್ಟ್ ಆಗುತ್ತಿಲ್ಲ ಎಂಬ ಭಾವನೆ ಮೂಡುತ್ತೆ. ಹೊಸ ಆಫೀಸ್‍ಗೆ ಸೇರಿದ ಪ್ರಾರಂಭದಲ್ಲಿ ಎಲ್ಲವೂ, ಎಲ್ಲರೂ ಇಷ್ಟವಾಗುತ್ತಾರೆ. ಆದ್ರೆ ಕೆಲವೇ ತಿಂಗಳಲ್ಲಿ ಏನೋ ಕಿರಿಕಿರಿ, ಸಹೋದ್ಯೋಗಿಗಳ ಜೊತೆ ಹೊಂದಿಕೊಳ್ಳೋದು ಕಷ್ಟವಾಗುತ್ತೆ. ನಿಜ, ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಹೊಸ ಸ್ಥಳ, ವ್ಯಕ್ತಿಗಳು ಹಾಗೂ ಪರಿಸ್ಥಿತಿಗಳೊಂದಿಗೆ ಪ್ರಾರಂಭದಲ್ಲಿ ಹೊಂದಿಕೊಳ್ಳೋದು ಕಷ್ಟವಾಗುತ್ತೆ. ಆದ್ರೆ, ಸಮಯ ಕಳೆದಂತೆ ಒಂದೊಂದೇ ಪರಿಸ್ಥಿತಿಗೆ, ವ್ಯಕ್ತಿಗಳಿಗೆ ನಾವು ಹೊಂದಿಕೊಳ್ಳುತ್ತೇವೆ. ಆದ್ರೆ ಕೆಲವೊಮ್ಮೆ ಇದು ಸಾಧ್ಯವಾಗೋದಿಲ್ಲ. ಎಷ್ಟೋ ಬಾರಿ ಚಿಕ್ಕಪುಟ್ಟ ಹೊಂದಾಣಿಕೆಗೆ ಮನಸ್ಸು ಮಾಡದ ಕಾರಣಕ್ಕೆ ವಿಚ್ಛೇದನೆಯಂತಹ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಎಲ್ಲ ಮುಗಿದ ಮೇಲೆ ತಾಳ್ಮೆಯಿಂದ ಯೋಚಿಸಿದ್ರೆ ಒಂದು ಪುಟ್ಟ ಹೊಂದಾಣಿಕೆ ಮಾಡಿಕೊಂಡಿದ್ರೆ ಇಷ್ಟೆಲ್ಲ ಆಗ್ತಾನೆ ಇರಲಿಲ್ಲ ಎಂಬ ಭಾವನೆ ಮೂಡುತ್ತೆ. ಹೊಂದಾಣಿಕೆ ಸಾಧ್ಯವಾಗದಿರೋದಕ್ಕೆ ನಮ್ಮ ಅಹಂ ಕಾರಣ. ನಾನೇಕೆ ಬಗ್ಗಬೇಕು ಅಥವಾ ಅವರ ಮಾತು ಕೇಳಬೇಕು ಎಂಬ ಭಾವನೆಯೇ ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತೆ. ಹಾಗಾದ್ರೆ ಹೊಂದಿಕೊಂಡು ಹೋಗಲು ಏನ್ ಮಾಡ್ಬೇಕು?
ಮನುಷ್ಯ ಮನೆಯಲ್ಲಿದ್ದರೆ ತಪ್ಪೆಲ್ಲವೂ ತೆಪ್ಪಗಾಗುತ್ತದೆ
ಸಮಸ್ಯೆಯನ್ನು ಅರ್ಥಮಾಡಿಕೊಳ್ಳಿ
ಕೆಲವು ವ್ಯಕ್ತಿಗಳ ವರ್ತನೆ, ಮಾತು ನಮಗೆ ಕಿರಿಕಿರಿ ಉಂಟು ಮಾಡುತ್ತೆ. ಅವರೊಂದಿಗೆ ಹೊಂದಾಣಿಕೆ ಅಸಾಧ್ಯ ಎಂಬ ಭಾವನೆ ಮೂಡುತ್ತೆ. ಆದ್ರೆ, ಇಂಥ ಕಿರಿಕಿರಿ ಉಂಟು ಮಾಡುವ ವ್ಯಕ್ತಿಗಳ ಹಿಂದೆ ಒಂದು ಕಥೆಯಿರುತ್ತದೆ. ಒರಟು, ಅಹಂಕಾರ, ಅಸೂಯೆ ಹಾಗೂ ಹೊಂದಾಣಿಕೆ ಕೊರತೆಯಿರುವ ಇಂಥ ವ್ಯಕ್ತಿಗಳ ಬಾಲ್ಯದಲ್ಲಿ ಯಾವುದೋ ಆಘಾತಕಾರಿ ಘಟನೆ ನಡೆದಿರುತ್ತೆ. ಇದು ಅವರ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮ ಬೀರಿರುತ್ತೆ. ಇಲ್ಲವೆ ಅವರ ಕುಟುಂಬದಲ್ಲಿನ ಕಷ್ಟ ಕಾರ್ಪಣ್ಯಗಳು ಅವರಲ್ಲಿ ಒರಟುತನ ಮೈಗೂಡುವಂತೆ ಮಾಡಿರುತ್ತೆ. ಆದರೆ, ಇಂಥ ವ್ಯಕ್ತಿಗಳೊಂದಿಗೆ ಹೊಂದಾಣಿಕೆ ಅಸಾಧ್ಯ ಎಂದು ಭಾವಿಸುವ ನಾವು ಅವರ ವರ್ತನೆ ಹಿಂದಿನ ಕಾರಣವನ್ನು ಅರಿಯಲು ಪ್ರಯತ್ನಿಸುವುದಿಲ್ಲ. ಆಫೀಸ್‍ನಲ್ಲಿ ನಿಮ್ಮ ಗೆಳೆಯ ನಿಮ್ಮೊಂದಿಗೆ ಒರಟಾಗಿ ವರ್ತಿಸಿದ ತಕ್ಷಣ ನಿಮಗೆ ಆತನ ಮೇಲೆ ಸಿಟ್ಟು ಬರುತ್ತದೆ. ಆತನ ವರ್ತನೆಗೆ ಮನೆಯಲ್ಲಿನ ಯಾವುದೋ ಸಮಸ್ಯೆ ಕಾರಣವಾಗಿರಬಹುದು. ಮನಸ್ಸಿನಲ್ಲಿ ಆ ನೋವನ್ನು ತುಂಬಿಕೊಂಡು ಆಫೀಸ್‍ಗೆ ಬಂದ ಆತ ನೀವು ಏನೋ ಮಾತನಾಡಿದ ತಕ್ಷಣ ಕೋಪಗೊಂಡಿರಬಹುದು. ಹೀಗಾಗಿ ನಿಮ್ಮೊಂದಿಗೆ ನಿಮ್ಮ ಸುತ್ತಲಿನವರು ಒರಟಾಗಿ ನಡೆದುಕೊಂಡರೆ ನೀವು ಸಿಟ್ಟಿಗೆದ್ದು ಅವರೊಂದಿಗಿನ ಸಂಬಂಧ ಕಳೆದುಕೊಳ್ಳುವ ಮುನ್ನ ಅವರ ವರ್ತನೆ ಹಿಂದಿನ ಸತ್ಯವನ್ನು ಅರಿಯಲು ಪ್ರಯತ್ನಿಸಿ.
ಲೈಂಗಿಕ ಕ್ರಿಯೆಯಿಂದ ಕೊರೋನಾ ವೈರಸ್ ಹರಡದು!
ಯಾರೂ ಪರಿಪೂರ್ಣರಲ್ಲ
ನಮಗೆ ನಾವು ಪರಿಪೂರ್ಣರು, ಸತ್ಯವಂತರು, ಪ್ರಾಮಾಣಿಕರು, ನಿಷ್ಠಾವಂತರು ಎಂಬ ಭಾವನೆಗಳಿರಬಹುದು. ಆದರೆ, ಈ ಜಗತ್ತಿನಲ್ಲಿ ನಮ್ಮನ್ನೂ ಸೇರಿಸಿದಂತೆ ಯಾರೂ ಪರಿಪೂರ್ಣರಲ್ಲ. ಪ್ರತಿ ವ್ಯಕ್ತಿಯಲ್ಲೂ ಒಂದಲ್ಲ ಒಂದು ಅವಗುಣ ಇದ್ದೇಇರುತ್ತೆ. ಹೀಗಾಗಿ ಸುತ್ತಲಿನ ಜನರಲ್ಲಿ ತಪ್ಪುಗಳನ್ನು ಹುಡುಕುತ್ತ ಸಂಬಂಧ ಹದಗೆಡಿಸುವ ಬದಲು ಅವರ ತಪ್ಪನ್ನು ಮನ್ನಿಸಿ ಮುನ್ನಡೆಯುವ ಗುಣ ರೂಢಿಸಿಕೊಳ್ಳೋದು ಅಗತ್ಯ. ಕ್ಷಮೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತೆ. ಅಷ್ಟೇ ಅಲ್ಲ, ಕ್ಷಮಾ ಗುಣ ನಿಮ್ಮ ಪ್ರೌಢಿಮೆಯನ್ನು ತೋರಿಸುತ್ತದೆ. ಜೊತೆಗೆ ಸಂಬಂಧ ಹಾಗೂ ಸ್ನೇಹವನ್ನು ಉಳಿಸುತ್ತೆ.
ಇನ್ನೊಬ್ಬರ ಭಾವನೆಗಳಿಗೆ ಬೆಲೆ ನೀಡಿ
ಇನ್ನೊಬ್ಬರ ಭಾವನೆಗಳನ್ನು ಗೌರವಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ನಮ್ಮ ಭಾವನೆಗಳನ್ನು ಇನ್ನೊಬ್ಬರು ಗೌರವಿಸಬೇಕು ಎಂದು ಭಾವಿಸುವ ನಾವು ಅವರ ವಿಷಯದಲ್ಲೂ ಹಾಗೆಯೇ ನಡೆದುಕೊಂಡರೆ ಮಾತ್ರ ಹೊಂದಾಣಿಕೆ ಸಾಧ್ಯ. ಬಹುತೇಕ ಸಂದರ್ಭಗಳಲ್ಲಿ ತಪ್ಪು ತಿಳಿವಳಿಕೆ, ಜಗಳ ಮತ್ತು ಕೋಪಕ್ಕೆ ಕಾರಣವಾಗುವುದು ಇನ್ನೊಬ್ಬರ ಭಾವನೆಗಳನ್ನು ಗೌರವಿಸದಿರುವುದೇ ಆಗಿದೆ. ಆದಕಾರಣ ಕೋಪಗೊಳ್ಳುವ ಮುನ್ನ ಇನ್ನೊಬ್ಬರ ಭಾವನೆಗಳು ಏನಿವೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
ಪ್ರೀತಿಸುವುದೊಂದೇ ಅಲ್ಲ, ಅಭಿವ್ಯಕ್ತಿಯೂ ಒಂದು ಕಲೆ!
ಸ್ವಲ್ಪ ತ್ಯಾಗಕ್ಕೆ ಸಿದ್ಧರಾಗಿ
ನಿಜ, ಕೆಲವೊಂದು ಸಂದರ್ಭದಲ್ಲಿ ಹೊಂದಾಣಿಕೆಗಾಗಿ ನಾವು ಸ್ವಲ್ಪ ತ್ಯಾಗ ಮಾಡಲೇಬೇಕಾಗುತ್ತದೆ. ಸ್ವಲ್ಪ ತ್ಯಾಗ ಮಾಡೋದ್ರಿಂದ ನಾವು ಸಂಬಂಧ, ಪ್ರೀತಿ ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತೆ. ಇದು ಪತಿ-ಪತ್ನಿ, ಅತ್ತೆ-ಸೊಸೆ, ಅತ್ತಿಗೆ-ನಾದಿನಿ ಸೇರಿದಂತೆ ಎಲ್ಲ ಸಂಬಂಧಕ್ಕೂ ಅನ್ವಯಿಸುತ್ತದೆ. ಅತ್ತೆಯ ಉದ್ದೇಶ ಒಳ್ಳೆಯದಿದ್ದಾಗ ಸೊಸೆ ಅದನ್ನು ಒಪ್ಪಿಕೊಂಡು, ಪೂರ್ಣಗೊಳಿಸಲು ಸಮಯ ಮತ್ತು ಶ್ರಮ ವ್ಯಯಿಸೋದ್ರಿಂದ ಇಬ್ಬರ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತೆ. ಇದೇ ಸೂತ್ರ ಅತ್ತೆಗೂ ಅನ್ವಯವಾಗುತ್ತೆ.