ಮದುವೆಯ ಸಂದರ್ಭದಲ್ಲಿ ಇನ್ನೇನು ವರ ಸಿಂದೂರ ಹಚ್ಚಿ ಮದುವೆ ಶಾಸ್ತ್ರವನ್ನು ಪೂರ್ಣಗೊಳಿಸುವಾಗಲೇ ಆತನ ಕೈನಡುಗಿದೆ. ಇದರಿಂದಾಗಿ ವಧು, ಆತ ಸರಿಯಿಲ್ಲ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಮಾತೇ ಇದೆ. ಇವೆರಡೂ ಸಲೀಸಾಗಿ ನಡೆಯುವುದು ಬಹಳ ಕಷ್ಟ ಎನ್ನುವ ಅರ್ಥದಲ್ಲಿ ಈ ಗಾದೆ ಹುಟ್ಟಿಕೊಂಡಿದೆ. ಆದರೆ ಇಂದಿನ ದಿನಗಳಲ್ಲಿ, ಮದುವೆಯ ಮಂಟಪದಲ್ಲಿಯೇ ಆಗುತ್ತಿರುವ ಆವಾಂತರಗಳನ್ನು ನೋಡಿದರೆ, ಮದುವೆನೂ ಸಾಕು, ಸಂಸಾರನೂ ಸಾಕು ಎನ್ನುವ ಸ್ಥಿತಿ ಬರುತ್ತಿದೆ. ಅದರಲ್ಲಿಯೂ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳೇ ಮದುವೆಯನ್ನು ಕ್ಯಾನ್ಸಲ್ ಮಾಡ್ತಿರೋ ಘಟನೆಗಳು ನಡೆಯುತ್ತಿವೆ. ಇದೀಗ ಇನ್ನೇನು ಸಿಂದೂರ ಹಚ್ಚುವ ವೇಳೆ ವರನ ಕೈ ನಡುಗಿಬಿಟ್ಟಿದೆ. ಉತ್ತರ ಭಾರತದಲ್ಲಿ ಸಿಂದೂರ ಹಚ್ಚಿದರೆ ಮದುವೆ ಮುಗಿದಂತೆ. ಆ ಸಮಯದಲ್ಲಿಯೇ ವರನ ಕೈ ನಡುಗಿದ್ದರಿಂದ ವಧು ಮದುವೆನೇ ಕ್ಯಾನ್ಸಲ್ ಮಾಡಿಬಿಟ್ಟಿದ್ದಾಳೆ!
ಈ ಘಟನೆ ನಡೆದಿರುವುದು ಬಿಹಾರದ ಕೈಮೂರ್ ಜಿಲ್ಲೆಯಲ್ಲಿ. ವಧುವಿನ ಹಣೆಗೆ ವರ ಸಿಂದೂರ ಹಚ್ಚುವ ಸಮಯದಲ್ಲಿ ಆತನ ಕೈಗಳು ನಡುಗಿದೆ. ಇದು ವಧುವಿನ ಗಮನಕ್ಕೆ ಬಂದಿದೆ. ಇದನ್ನು ಗಮನಿಸಿದ ಆಕೆ, ಆತ ಹುಚ್ಚ, ನಾನು ಅವನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ವರ ಮತ್ತು ಅವನ ಕುಟುಂಬದವರು ಮದುವೆಗೆ ಅವಳನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವಳು ಈ ಮದುವೆ ಬೇಡವೇ ಬೇಡ ಎಂದು ನಿರಾಕರಿಸಿ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ! ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕುಟುಂಬಗಳನ್ನು ಭಭುವಾ ಪೊಲೀಸ್ ಠಾಣೆಗೆ ಕರೆದು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ವಧು ಮದುವೆಗೆ ನಿರಾಕರಿಸಿದ ಕಾರಣಕ್ಕೆ ಮದುವೆ ರದ್ದುಗೊಂಡಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಮದುವೆಯ ಸಂಭ್ರಮವು ಅದ್ಧೂರಿಯಾಗಿಯೇ ಆರಂಭವಾಯಿತು. ವರನ ಕಡೆಯಿಂದ ದೊಡ್ಡ ಮೆರವಣಿಗೆಯೊಂದಿಗೆ ವಧುವಿನ ಮನೆಗೆ ಆಗಮಿಸಲಾಯಿತು. ಎಲ್ಲಾ ಶಾಸ್ತ್ರ-ಸಂಪ್ರದಾಯಗಳು ಸುಗಮವಾಗಿ ನಡೆಯುತ್ತಿದ್ದವು. ಮದುವೆಯ ವಿಧಿವಿಧಾನಗಳು ಒಂದೊಂದಾಗಿ ನೆರವೇರಿದವು. ಆದರೆ, ಸಿಂದೂರದ ವೇಳೆ ಈ ಎಡವಟ್ಟು ಆಗಿದೆ. ವರನ ಕೈಗಳು ಲಘುವಾಗಿ ನಡುಗಲು ಆರಂಭಿಸಿದೆ. ಅವನು ಹೆದರಿದ್ದರಿಂದ ಹಾಗೆ ಆಯ್ತೋ ಗೊತ್ತಿಲ್ಲ. ಆದರೆ ಸಿಂದೂರ ಹಚ್ಚಲು ನಡುವವನು ಇನ್ನೇನು ಮಾಡಿಯಾನು ಎಂದು ಎನ್ನಿಸಿತೋ ಗೊತ್ತಿಲ್ಲ. ರೊಚ್ಚಿಗೆದ್ದು ಮದುವೆಯನ್ನೇ ಕ್ಯಾನ್ಸಲ್ ಮಾಡಿಬಿಟ್ಟಿದ್ದಾಳೆ.
ಅವನು ಆರೋಗ್ಯವಾಗಿಲ್ಲ ಎಂದು ಆರೋಪಿಸಿದಳು. ಇದರ ಜೊತೆಗೆ, ವರನನ್ನು “ಹುಚ್ಚ” ಎಂದು ಕರೆದಿದ್ದಾಳೆ ವಧು. ಈ ಆಕಸ್ಮಿಕ ನಿರ್ಧಾರವು ಎಲ್ಲರಿಗೂ ಆಘಾತವನ್ನುಂಟು ಮಾಡಿತ್ತು. ವಧುವಿನ ಕುಟುಂಬದವರು ಆಕೆಯನ್ನು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ, ಆಕೆ ತನ್ನ ನಿರ್ಧಾರದಲ್ಲಿ ದೃಢವಾಗಿದ್ದಳು.ರಡೂ ಕಡೆಯವರು ಚರ್ಚೆಯಲ್ಲಿ ತೊಡಗಿದರೂ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊನೆಗೆ, ಈ ವಿಷಯವು ಸ್ಥಳೀಯ ಪೊಲೀಸ್ ಠಾಣೆಗೆ ತಲುಪಿತು. ಅಲ್ಲಿಯೂ ಸಮಸ್ಯೆ ಬಗೆಹರಿಯದ್ದರಿಂದ ಮದುವೆ ರದ್ದಾಯಿತು. ಆದ್ದರಿಂದ ಗಂಡುಮಕ್ಕಳು ತಮ್ಮ ಮದುವೆಯ ದಿನ ಹೆದರಿದರೆ ಅವರ ಮದುವೆನೇ ಕ್ಯಾನ್ಸಲ್ ಆಗಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಹರಿದಾಡುತ್ತಿದೆ.


