ನಿಮ್ಮ ಪತಿ ಮುಂಚಿನಂತೆ ನಿಮಗೆ ಅಟೆನ್ಷನ್ ಕೊಡುತ್ತಿಲ್ಲವೆಂದೆನಿಸುತ್ತದೆಯೇ? ಅಥವಾ ಆತ ಬೇರೆ ಯಾರಿಗೋ ಹತ್ತಿರವಾಗುತ್ತಿರಬಹುದೇ, ಅದಕ್ಕಾಗಿಯೇ ನಿಮ್ಮನ್ನು ಸ್ವಲ್ಪ ಕಡೆಗಣಿಸುತ್ತಿದ್ದಾನೆಂಬ ಅನುಮಾನ ಹುಟ್ಟಿದೆಯೇ? ಮುಂಚಿನಂತೆ ಇಬ್ಬರ ನಡುವೆ ಒಂದೇ ಕೆಮಿಸ್ಟ್ರಿ ಇಲ್ಲ, ಎಲ್ಲೋ ಏನೋ ಎಡವಟ್ಟಾಗಿದೆ ಎಂಬ ಭಾವ ಕಾಡುತ್ತಿದೆಯೇ? ಬಹಳಷ್ಟು ಸಮಯ ಮಹಿಳೆಗೆ ತನ್ನ ಕೆಲವು ವರ್ತನೆಗಳೇ ಪತಿಯನ್ನು ತನ್ನಿಂದ ಕೊಂಚಕೊಂಚ ದೂರಗಿಸುತ್ತಿದೆ ಎಂಬ ಅರಿವಿರುವುದಿಲ್ಲ. ಹಾಗೆ ಆಕೆಯ ಗಮನಕ್ಕೆ ಬಾರದೆಯೇ ಅವಳು ಮಾಡುವ ಯಾವೆಲ್ಲ ತಪ್ಪುಗಳು ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತವೆ ತಿಳಿಯೋಣ.

ಆತ ಏನೆಲ್ಲ ಮಾಡಬಹುದೆಂದು ಲೆಕ್ಕವಿಡುವುದು

ಇದು ಬಹಳ ಸಾಮಾನ್ಯ ಸನ್ನಿವೇಶ. ಆತ ನಿಮಗಾಗಿ ಏನೆಲ್ಲ ಮಾಡಬಹುದು ಎಂದು ಯಾವಾಗಲೂ ಲೆಕ್ಕ ಹಾಕುತ್ತಾ, ಆತ ಏನೂ ಮಾಡುತ್ತಲೇ ಇಲ್ಲ ಎಂದು ದೂರುತ್ತೀರಾ? ವೈವಾಹಿಕ ಜೀವನದ ಆರಂಭದ ದಿನಗಳಲ್ಲಿ ಹೇಗೆಲ್ಲ ನೋಡಿಕೊಳ್ಳುತ್ತೀನಿ, ಏನೆಲ್ಲ ಮಾಡುತ್ತೀನೆಂದು ಆತ ಹೇಳಿದ್ದನೋ ಅವನ್ನೆಲ್ಲ ನೆನಪಿನಲ್ಲಿಟ್ಟುಕೊಂಡು ದಿನಾ ಚುಚ್ಚಿ ಚುಚ್ಚಿ ಮಾತನಾಡುತ್ತೀರಾ? ಇದರಿಂದ ಆತನ ಮೇಲೆ ಅತಿಯಾದ ನಿರೀಕ್ಷೆಗಳ ಭಾರ ಬೀಳುತ್ತಿದೆ. ಪೂರೈಸಬಹುದಾದ ಕನಸುಗಳನ್ನು ಆತ ಖಂಡಿತವಾಗಿಯೂ ಮಾಡುತ್ತಾನೆ. ಉಳಿದವಕ್ಕೆ ಸಮಯ ಹಿಡಿವ ಕಾರಣದಿಂದಲೇ ಆತ ಅವನ್ನು ಮುಂದೂಡಿರಬಹುದು. ಅವ್ಯಾವುದನ್ನೂ ಯೋಚಿಸದೆ ಪದೇ ಪದೆ ಆತ ನಿಮಗಾಗಿ ಏನೂ ಮಾಡುತ್ತಿಲ್ಲ ಎನ್ನುತ್ತಿದ್ದರೆ ಖಂಡಿತಾ ಅವನಿಗೆ ನಿಮ್ಮ ಮೇಲೆ ಸಕ್ತಿ ಕಡಿಮೆಯಾಗುತ್ತದೆ. ಆತ ಕಷ್ಟ ಪಡುತ್ತಿರುವುದಕ್ಕೆ ಬೆಲೆ ಕೊಡದೆ, ನಿಮ್ಮ ಸಂತೋಷವನ್ನೇ ಹುಡುಕುತ್ತಿರುವುದು ಆತನಿಗೆ ಖಂಡಿತಾ ನಿಮ್ಮ ಮೇಲಿನ ಪ್ರೀತಿ ಕಡಿಮೆ ಮಾಡುತ್ತದೆ. 

ಬೇರೆಯವರೊಂದಿಗೆ ಹೋಲಿಸುವುದು

ಈ ಸೋಷ್ಯಲ್ ಮೀಡಿಯಾಗಳ ಭರಾಟೆಯಲ್ಲಿ ನಮಗೆ ಇನ್ನೊಬ್ಬರ ಬದುಕಿನ ಒಳಗಿಣುಕುವುದು ಸುಲಭವಾಗಿ ಬಿಟ್ಟಿದೆ. ಇದರಿಂದ ಪ್ರತಿಯೊಬ್ಬರೂ ತಮ್ಮ ಬದುಕನ್ನು ಮತ್ತೊಬ್ಬರ ಬದುಕಿಗೆ ಹೋಲಿಸಲಾರಂಭಿಸಿದ್ದಾರೆ. ಇದೇ ಅಭ್ಯಾಸದಲ್ಲಿ ನೀವು ನಿಮ್ಮ ಗಂಡನನ್ನು ಇತರರ ಪತಿಯೊಂದಿಗೆ ಹೋಲಿಸಿ ನೋಡಿ ಅಳೆಯುವುದು, ನಿಮ್ಮ ಬದುಕಲ್ಲಿ ಕಳೆದುಕೊಳ್ಳುತ್ತಿರುವ ಎಲ್ಲ ಸಂಗತಿಗಳಿಗೂ ಪತಿಯೇ ಕಾರಣ ಎಂದು ಚುಚ್ಚಿ ಮಾತನಾಡುವುದರಿಂದ- ತಾನು ಬದುಕಿನಲ್ಲಿ ಒಬ್ಬ ವಿಫಲ ವ್ಯಕ್ತಿ ಎಂದು ಅತಿಯಾಗಿ ಪ್ರೀತಿಸುವ ಪತ್ನಿಯೇ ಸರ್ಟಿಫಿಕೇಟ್ ನೀಡಿದಂತೆ ಆತನಿಗೆನಿಸುತ್ತದೆ. ನೆನಪಿಡಿ, ಪ್ರತಿಯೊಬ್ಬರ ಜೀವನವೂ ಬೇರೆಯೇ. ಹೋಲಿಕೆಯಲ್ಲಿ ಅರ್ಥವೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸೋಷ್ಯಲ್ ಮೀಡಿಯಾಗಳಲ್ಲಿ ತೋರಿಸಿಕೊಳ್ಳುವಷ್ಟು ಸಂತೋಷ, ಸುಖ, ಯಶಸ್ಸು ಖಂಡಿತಾ ಯಾರೊಬ್ಬರ ಬದುಕಿನಲ್ಲೂ ತುಂಬಿ ತುಳುಕುತ್ತಿರುವುದಿಲ್ಲ!

ಕೃತಜ್ಞತೆ ಇಲ್ಲದಿರುವುದು

ವರ್ಷಗಳು ಉರುಳಿದಂತೆಲ್ಲ ನಾವು ನಮ್ಮ ಸಂಗಾತಿಯನ್ನು ಅದೆಷ್ಟು ಲಘುವಾಗಿ ತೆಗೆದುಕೊಳ್ಳಲಾರಂಭಿಸುತ್ತೇವೆಂದರೆ ನಮ್ಮ ಖುಷಿಗಾಗಿ ಆತ ಮಾಡುವ ಸಣ್ಣ ಸಣ್ಣ ಸಂಗತಿಗಳತ್ತ ಗಮನವನ್ನೇ ಹರಿಸುವುದಿಲ್ಲ. ನಿಮ್ಮ ಪತಿಯೊಂದಿಗಿನ ಚೆಂದದ ಸಂಬಂಧಕ್ಕಾಗಿ, ಅದು ಪ್ರತಿದಿನ ನಿಮ್ಮ ಬದುಕಿನಲ್ಲಿ ತರುವ ನೆಮ್ಮದಿ, ಸಂತೋಷಕ್ಕಾಗಿ ಕೃತಜ್ಞತೆ ಹೊಂದಿಲ್ಲವೆಂದರೆ ಆತನನ್ನು ನೀವು ಗೊತ್ತಿಲ್ಲದೆಯೇ ಮೂಲೆಗೆ ತಳ್ಳುತ್ತಿರುತ್ತೀರಿ. ಪತಿಯ ಮನಸ್ಸಿನಲ್ಲಿ ಆತನ ಅಗತ್ಯ ನಿಮಗಿಲ್ಲ, ಅಥವಾ ಎಷ್ಟು ಮಾಡಿದರೂ ಅಷ್ಟೆಯೇ ಎಂಬ ನಿರ್ಲಕ್ಷ್ಯ ಹುಟ್ಟಿಕೊಳ್ಳಬಹುದು.

ನಿಮ್ಮ ಬಗ್ಗೆ ನೀವು ಕಾಳಜಿ ತೆಗೆದುಕೊಳ್ಳದಿರುವುದು

ನಿಮ್ಮ ಸಂಬಂಧದ ಆರಂಭದ ದಿನಗಳನ್ನು ನೆನೆಸಿಕೊಳ್ಳಿ. ಆತನನ್ನು ಭೇಟಿಯಾಗಲು ಹೋಗುವುದೆಂದರೆ ನೀವು ಎಷ್ಟು ಚೆನ್ನಾಗಿ ರೆಡಿಯಾಗುತ್ತಿದ್ದಿರಿ? ಮೇಕಪ್, ಬಟ್ಟೆ, ಹೇರ್‌ಸ್ಟೈಲ್  ಪ್ರತಿಯೊಂದರತ್ತಲೂ ಗಮನ ಹರಿಸುತ್ತಿದ್ದಿರಿ. ಆದರೆ ವರ್ಷಗಳುರುಳಿದಂತೆ ನೀವು ಈ ಆಸಕ್ತಿ ಕಳೆದುಕೊಂಡರೆ,  ಪತಿಯನ್ನು ಖುಷಿ ಪಡಿಸಲು ನಿಮ್ಮನ್ನು ನೀವು ಚೆಂದಗೊಳಿಸಿಕೊಳ್ಳುವ ಪ್ರಯತ್ನ ಹಾಕದಿದ್ದರೆ - ಅದು ಮುಂಚೆ ಆತನೊಂದಿಗಿರಲು ನಿಮಗಿದ್ದ ಉತ್ಸಾಹ ಈಗಿಲ್ಲ ಎಂಬುದನ್ನು ಸೂಚಿಸುತ್ತದೆ. ಇದು ಖಂಡಿತವಾಗಿಯೂ ಆತನಿಗೆ ಬೇಜಾರಾಗುವಂಥದ್ದೇ. 

ಲೈಂಗಿಕ ಉತ್ಸಾಹ

ಬಹಳಷ್ಟು ಜನ ಯಾವಾಗಲೂ ಪುರುಷನೇ ಲೈಂಗಿಕ ಕ್ರಿಯೆಗೆ ಮುನ್ನುಡಿ ಹಾಕಬೇಕು, ಅದು ಆತನ ಜವಾಬ್ದಾರಿ ಎಂದು ನಂಬಿಬಿಟ್ಟಿದ್ದಾರೆ. ಆದರೆ, ನೀವು ಯಾವಾಗಲೂ ರೊಮ್ಯಾನ್ಸ್‌ನ್ನು ಪತಿಯೇ ಆರಂಭಿಸಿಲಿ ಎಂಬ ಯೋಚನೆಯಲ್ಲಿದ್ದರೆ, ಇದರಿಂದ ನಿಮಗೆ ಅವರಲ್ಲಿ ಆಸಕ್ತಿ ಇಲ್ಲ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಇದರಿಂದ ಕೂಡಾ ಆತ ನಿಮ್ಮಿಂದ ದೂರ ಸರಿಯುತ್ತಿರಬಹುದು. 

ಆತನಿಗಿಂತ ಕೆಲಸ, ಮನೆ, ಮಕ್ಕಳಿಗೆ ಪ್ರಾಶಸ್ತ್ಯ ಹೆಚ್ಚಿಸುವುದು

ಸಮಯ ಕಳೆದಂತೆಲ್ಲ ನಮ್ಮ ಪ್ರಾಶಸ್ತ್ಯಗಳು ಬದಲಾಗುತ್ತವೆ. ನಮ್ಮ ಜವಾಬ್ದಾರಿಗಳು ಹೆಚ್ಚುತ್ತವೆ. ಲಿತಾಂಶವಾಗಿ, ಬಹಳಷ್ಚು ಮಹಿಳೆಯರು ತಮ್ಮ ಮಕ್ಕಳು ಹಾಗೂ ಉದ್ಯೋಗಕ್ಕೆ ಹೆಚ್ಚಿನ ಗಮನ ನೀಡಲು ಆರಂಭಿಸುತ್ತಾರೆ. ಆದರೆ, ಇದರಿಂದ ಪತಿಗೆ ತಾನು ಪತ್ನಿಯ ಮೊದಲ ಪ್ರಾಶಸ್ತ್ಯವಲ್ಲ, ತಾನಿಲ್ಲದೆಯೂ ಆಕೆ ಇರಬಲ್ಲಳು ಎಂಬ ಭಾವ ಬೆಳೆಯತೊಡಗುತ್ತದೆ. 

ಆತನ ಸಾಮರ್ಥ್ಯಗಳಲ್ಲಿ ನಂಬಿಕೆ ಕಳೆದುಕೊಳ್ಳುವುದು

ಎಲ್ಲ ಪತಿಗೂ ತನ್ನ ಪತ್ನಿಯ ಕಣ್ಣಲ್ಲಿ ತಾನು ಹೀರೋ ಆಗಿರಬೇಕೆಂಬ ಬಯಕೆ ಇರುತ್ತದೆ. ಸಂಬಂಧದ ಆರಂಭದಲ್ಲಿ ನೀವು ಅವರನ್ನು ಹಾಗೆಯೇ ಟ್ರೀಟ್ ಮಾಡಿರುತ್ತೀರಿ ಕೂಡಾ. ಇದರಿಂದ ತಮ್ಮ ಸಾಮರ್ಥ್ಯದಲ್ಲಿ ಪತ್ನಿಗಿರುವ ನಂಬಿಕೆಯೇ ಆತನಿಗೆ ಆತ್ಮವಿಶ್ವಾಸ ತುಂಬುತ್ತಿರುತ್ತದೆ. ಆದರೆ, ವರ್ಷಗಳುರುಳಿದಂತೆಲ್ಲ ನೀವು ಪತಿಯ ಸಾಮರ್ಥ್ಯವನ್ನು ಕಡೆಗಣಿಸುತ್ತೀರಷ್ಟೇ ಅಲ್ಲ, ಅವುಗಳ ಬಗ್ಗೆ ಚಕಾರವನ್ನೇ ಎತ್ತುವುದಿಲ್ಲ. ಇದರಿಂದ ಪತಿಯು ತನ್ನ ಮೇಲೆ ತಾನು ನಂಬಿಕೆ ಕಳೆದುಕೊಳ್ಳತೊಡಗುತ್ತಾನೆ. ನಿಮಗೆ ತನ್ನ ಮೇಲೆ ನಂಬಿಕೆಯಿಲ್ಲ ಎಂದು ನಿದಾನವಾಗಿ ದೂರಾಗತೊಡಗುತ್ತಾನೆ.