ಮದುವೆಯಾಗಿ 25 ವರ್ಷ ಕಳೆದಿದೆ. ನಾಲ್ಕು ಮಕ್ಕಳಿವೆ. ಮಕ್ಕಳಿಗೆ ಮದುವೆ ಮಾಡ್ಬೇಕು ಅನ್ನೋ ಟೈಂನಲ್ಲಿ ಪತ್ನಿ ಮನೆ ಬಿಟ್ಟಿದ್ದಾಳೆ. ಎಲ್ಲ ಗೊತ್ತಾದ್ಮೇಲೆ ಪತಿ ಮಾಡಿದ್ದೇನು ಗೊತ್ತಾ?
ಇತ್ತೀಚಿಗೆ ಯಾರಿಗೆ, ಯಾರ ಜೊತೆ, ಯಾವಾಗ ಪ್ರೀತಿ (Love) ಹುಟ್ಟುತ್ತೆ ಹೇಳೋಕೆ ಸಾಧ್ಯವಿಲ್ಲ. ಮದುವೆಯಾಗಿ 25 -30 ವರ್ಷ ಸಂಸಾರ ನಡೆಸಿದ ಮೇಲೆ ಅನೇಕರು ಪರ ಸ್ತ್ರೀ ಅಥವಾ ಪುರುಷನ ಪ್ರೀತಿಗೆ ಬಿದ್ದು, ವಿಚ್ಛೇದನ (divorce) ಪಡೆಯುತ್ತಿದ್ದಾರೆ. ಮತ್ತೆ ಕೆಲವರು ಹೊಸ ಪ್ರೀತಿಗಾಗಿ ಸಂಗಾತಿ, ಮಕ್ಕಳನ್ನು ನೋಡ್ದೆ ಮನೆ ಬಿಟ್ಟು ಓಡಿ ಹೋಗ್ತಿದ್ದಾರೆ. ಈಗ ಅಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ಬೆಳಕಿಗೆ ಬಂದಿದೆ. 25 ವರ್ಷ ಸಂಸಾರ ಮಾಡಿ, ನಾಲ್ಕು ಮಕ್ಕಳನ್ನು ಹೆತ್ತ ಮಹಿಳೆಗೆ ಈಗ ಪ್ರೀತಿ ಹುಟ್ಕೊಂಡಿದೆ. ಬರೀ ಪ್ರೀತಿ ಮಾಡಿದ್ದು ಮಾತ್ರವಲ್ಲ ಮನೆ ಬಿಟ್ಟು ಓಡಿ ಹೋಗಿ ತನಗಿಂತ 25 ವರ್ಷ ಕಿರಿಯ ವ್ಯಕ್ತಿ ಜೊತೆ ಕೋರ್ಟ್ ಮ್ಯಾರೇಜ್ (Court Marriage) ಮಾಡ್ಕೊಂಡಿದ್ದಾಳೆ. ಇದೆಲ್ಲವನ್ನು ನೋಡಿದ ಪತಿ, ಪತ್ನಿಯನ್ನು ಬಂಧನದಿಂದ ಬಿಡಿಸಿದ್ದಾನೆ. ಹೋಗು, ಲೈಫ್ ಎಂಜಾಯ್ ಮಾಡು ಅಂತ ಪತ್ನಿಯನ್ನು ಬಿಟ್ಕೊಟ್ಟಿದ್ದಾನೆ.
ಘಟನೆ ಭವಾನಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ 25 ವರ್ಷಗಳ ಹಿಂದೆ ಇಲ್ಲಿನ ವ್ಯಕ್ತಿಯೊಬ್ಬನಿಗೆ ಪಕ್ಕದ ಊರಿನ ಹುಡುಗಿ ಜೊತೆ ಮದುವೆ ಆಗಿತ್ತು. ಮದುವೆ ನಂತ್ರ ಸಂಸಾರ ಚೆನ್ನಾಗಿ ಸಾಗಿತ್ತು. ಇಬ್ಬರಿಗೂ ನಾಲ್ಕು ಮಕ್ಕಳು. ದೊಡ್ಡ ಮಗಳ ವಯಸ್ಸು 20 ವರ್ಷ. ಎರಡನೇ ಮಗಳ ವಯಸ್ಸು 18 ವರ್ಷ. ಇನ್ನು ಇಬ್ಬರು ಗಂಡು ಮಕ್ಕಳಿದ್ದು, ದೊಡ್ಡವನಿಗೆ 17 ವರ್ಷವಾದ್ರೆ ಚಿಕ್ಕವನಿಗೆ 10 ವರ್ಷ. ಗಂಡ ಕೆಲ್ಸದ ಮೇಲೆ ಪರ ಊರಿಗೆ ಹೋಗ್ತಿದ್ದ. ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡು ಇರ್ತಿದ್ದ ಪತ್ನಿಗೆ ದೂರದ ಸೋದರಳಿಯನ ಜೊತೆ ಸಲಿಗೆ ಜಾಸ್ತಿಯಾಗಿದೆ. ಆತ ಮನೆಗೆ ಬಂದು ಹೋಗೋದು ಹೆಚ್ಚಾಗಿದೆ. ಆತನ ವಯಸ್ಸು 25 ವರ್ಷ ಎನ್ನಲಾಗಿದೆ. ಸಂಬಂಧ ನಿಧಾನವಾಗಿ ಪ್ರೀತಿಗೆ ತಿರುಗಿದೆ.
2024ರಲ್ಲಿ, ಗಂಡ ಮತ್ತು ಮಕ್ಕಳನ್ನು ಬಿಟ್ಟು ಮಹಿಳೆ ಆತನ ಜೊತೆ ಓಡಿ ಹೋಗಿದ್ದಾಳೆ. ಇಬ್ಬರೂ ಕೋರ್ಟ್ ಮ್ಯಾರೇಜ್ ಮಾಡ್ಕೊಂಡಿದ್ದಾರೆ. ಪತಿ, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದ. ಕೆಲ ತಿಂಗಳ ನಂತ್ರ ಪ್ರೇಮಿಯನ್ನು ಬಿಟ್ಟು ಮಹಿಳೆ ಗಂಡನ ಮನೆಗೆ ವಾಪಸ್ ಆಗಿದ್ದಳು. ಆದ್ರೆ ಅಲ್ಲಿಗೆ ಪ್ರಕರಣ ನಿಲ್ಲಲಿಲ್ಲ. ಪ್ರೇಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ನಾವಿಬ್ಬರು ಕೋರ್ಟ್ ಮ್ಯಾರೇಜ್ ಮಾಡ್ಕೊಂಡಿದ್ದು, ಆಕೆಗೆ ಪತಿ ಜೊತೆ ಜೀವನ ನಡೆಸೋದು ಇಷ್ಟವಿಲ್ಲ ಎಂದಿದ್ದ. ಈ ಮಧ್ಯೆ ಕೆಲ ದಿನಗಳ ಹಿಂದೆ ಮಹಿಳೆ ಮತ್ತೆ ಪತಿ ಬಿಟ್ಟು ಪ್ರೇಮಿ ಮನೆ ಸೇರಿದ್ದಳು.
ನಿನ್ನೆ ಮಹಿಳೆ ತನ್ನ ಪ್ರೇಮಿ ಜೊತೆ ಊರಿಗೆ ವಾಪಸ್ ಬಂದಿದ್ದಾಳೆ. ಪಂಚಾಯತಿ ಕರೆಸಿದ್ದಾಳೆ. ಊರಿನ ಹಿರಿಯರೆಲ್ಲ ಸೇರಿ, ಪ್ರಕರಣ ಇತ್ಯರ್ಥಗೊಳಿಸುವ ಪ್ರಯತ್ನ ನಡೆಸಿದ್ದಾರೆ. ನಾನು ಗಂಡನ ಜೊತೆ ಜೀವನ ನಡೆಸೋದಿಲ್ಲ. ಪ್ರೇಮಿ ಜೊತೆಗಿರ್ತೇನೆ ಅಂತ ಮದುವೆ ದಾಖಲೆ ತೋರಿಸಿದ್ದಾಳೆ. ಪೊಲೀಸ್ ಠಾಣೆಯಲ್ಲೂ ಮಹಿಳೆ ಇದನ್ನೇ ಹೇಳಿದ್ದಾಳೆ. ಪತಿ ಸಮಾಜದ ಸಂಪ್ರದಾಯಗಳು ಮತ್ತು ವೈಯಕ್ತಿಕ ಭಾವನೆಗಳನ್ನು ಮೀರಿ ನಿರ್ಧಾರ ತೆಗೆದುಕೊಂಡಿದ್ದಾನೆ. ನಿನ್ನಿಷ್ಟದಂತೆ ಬದುಕು ಅಂತ ಸ್ವಾತಂತ್ರ್ಯ ನೀಡಿದ್ದಾನೆ. ಸ್ವಲ್ಪ ದಿನ ಅಲ್ಲಿ ಇನ್ನೊಂದು ಸ್ವಲ್ಪ ದಿನ ಇಲ್ಲಿ ಅಂತಿದ್ದ ಮಹಿಳೆ ಈಗ ಪ್ರೇಮಿ ಜೊತೆಗಿರೋದಾಗಿ ಪೊಲೀಸರಿಗೆ ಭರವಸೆ ನೀಡಿದ ನಂತ್ರ ಅವಳನ್ನು ಬಿಡಲಾಗಿದೆ.
