ಟಿಸಿಎಸ್ ನೇಮಕಾತಿ ಪ್ರಕ್ರಿಯೆಯಲ್ಲಿ ತಪ್ಪು ಮಾಹಿತಿ ನೀಡಿ, ಸೇರ್ಪಡೆಯ ದಿನವೇ ಉದ್ಯೋಗಿಯೊಬ್ಬರಿಗೆ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಆಸ್ಟ್ರೇಲಿಯಾ ಶಿಫ್ಟ್ ಬದಲು ಯುಎಸ್ ಶಿಫ್ಟ್‌ಗೆ ನಿಯೋಜಿಸಿದ್ದನ್ನು ಪ್ರಶ್ನಿಸಿದ್ದಕ್ಕೆ, ಎಚ್‌ಆರ್ ವಿಭಾಗವು ರಾಜೀನಾಮೆಗೆ ಒತ್ತಾಯಿಸಿದೆ.

ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (TCS) ಮತ್ತೆ ಎಲ್ಲ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ತಪ್ಪು ಮಾಹಿತಿ ನೀಡಿ, ಸೇರ್ಪಡೆಯ ದಿನವೇ ಬಲವಂತವಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ ಎಂದು ಹೊಸ ನೇಮಕಾತಿಯೊಬ್ಬರು ಕಂಪನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಪುಣೆಯ ವಿಚ್ಛೇದಿತ ಮಹಿಳೆಯೊಬ್ಬರಿಗೆ ಅವರ ಕೆಲಸದ ಕ್ರಮ ಉತ್ತಮವಾಗಿದ್ದರೂ, ಬಲವಂತವಾಗಿ ರಾಜೀನಾಮೆ ನೀಡಬೇಕಾದ ಘಟನೆ ಬೆಳಕಿಗೆ ಬಂದಿದ್ದ ಸಂದರ್ಭದಲ್ಲಿ, ಮತ್ತೊಂದು ಹೊಸ ಆರೋಪ ಇದೀಗ ಉದ್ಭವಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್: ಉದ್ಯೋಗಿಯ ವಿವರಣೆ

ಈ ಪ್ರಕರಣವನ್ನು ಮಹಾರಾಷ್ಟ್ರದ ಐಟಿ ಉದ್ಯೋಗಿಗಳ ವೇದಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹೈಲೈಟ್ ಮಾಡಿ ವೈರಲ್ ಮಾಡಿದೆ. ಉದ್ಯೋಗಿಯೊಬ್ಬರು ಟಿಸಿಎಸ್‌ನಲ್ಲಿ ಎದುರಿಸಿದ ಅವಮಾನಕಾರಿ ಅನುಭವವನ್ನು ವಿವರಿಸುವ ಸ್ಕ್ರೀನ್‌ಶಾಟ್‌ಗಳನ್ನು ಉದ್ಯಮ ಸಂಘಟನೆ ಹಂಚಿಕೊಂಡಿದೆ. ನೇಮಕಾತಿಯವರಿಗೆ ಕಂಪನಿಯು ಭರವಸೆ ನೀಡಿದ್ದ ಆಸ್ಟ್ರೇಲಿಯಾದ ಶಿಫ್ಟ್ ಸಮಯವನ್ನು ಸೇರ್ಪಡೆಯ ದಿನದಲ್ಲಿ ಉಲ್ಲಂಘಿಸಿದ್ದು, ಹೊಸ ನಿಯೋಜನೆಗಾಗಿ ಅವರು ಒಪ್ಪದಿದ್ದ ಕಾರಣ ಅವರನ್ನು ಮೊದಲ ದಿನವೇ ರಾಜೀನಾಮೆ ನೀಡಲು ಬಲವಂತ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಆಸ್ಟ್ರೇಲಿಯಾ ಶಿಫ್ಟ್ ಎಂದು ಸ್ಪಷ್ಟವಾಗಿ ಹೇಳಿದರು: ನೇಮಕಾತಿಯ ಆರೋಪ

ಹೆಸರು ಬಹಿರಂಗಪಡಿಸಲು ನಿರಾಕರಿಸಿದ ಉದ್ಯೋಗಿ, ಸಂದರ್ಶನ ಸಮಯದಲ್ಲಿ ಟಿಸಿಎಸ್ ನೇಮಕಾತಿದಾರರು ಮತ್ತು ಸಲಹಾ ಸಂಸ್ಥೆಯಿಂದ ಸ್ಪಷ್ಟವಾಗಿ ತಿಳಿಸಲಾಗಿತ್ತಂತೆ, ಈ ಹುದ್ದೆಯು ಆಸ್ಟ್ರೇಲಿಯಾ ಶಿಫ್ಟ್ ವೇಳೆಯನ್ನು ಒಳಗೊಂಡಿದ್ದರಿಂದಲೇ ಅವರು ಕೆಲಸವನ್ನು ಒಪ್ಪಿಕೊಂಡಿದ್ದರು. ಅವರ ವೈಯಕ್ತಿಕ ಪರಿಸ್ಥಿತಿಗೆ ಈ ವೇಳಾಪಟ್ಟಿ ಹೆಚ್ಚು ಅನುಕೂಲವಾಗಿದ್ದರಿಂದ, ಅವರು ಆಫರ್ ಅನ್ನು ಸ್ವೀಕರಿಸಿದ್ದರು. ಆದರೆ, ಕಂಪೆನಿಗೆ ಸೇರಿದ ದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಉದ್ಯೋಗಿಗೆ ಯುಎಸ್ ಯೋಜನೆಗೆ ನಿಯೋಜನೆ ದೊರಕಿರುವುದಾಗಿ ತಿಳಿಸಲಾಯಿತು. ಇದರಿಂದ ಸಂಪೂರ್ಣವಾಗಿ ವಿಭಿನ್ನವಾದ, ಎಂದಿಗೂ ಚರ್ಚಿಸದ ಅಥವಾ ಒಪ್ಪಿಕೊಳ್ಳದ ಅಮೆರಿಕಾ ಶಿಫ್ಟ್ ಸಮಯವನ್ನು ಪಾಲಿಸಬೇಕಾಗುತ್ತದೆ.

HR ಪ್ರತಿಕ್ರಿಯೆ: ದಾಖಲೆಗಳಿದ್ದರೂ ನಿರಾಕರಣೆ?

ಸಂದರ್ಶನದಿಂದ ಹಿಡಿದು ನೇಮಕಾತಿವರೆಗಿನ ಎಲ್ಲಾ ಸಂವಹನದ ದಾಖಲೆಗಳು ನನ್ನ ಬಳಿ ಇವೆ. ಆಸ್ಟ್ರೇಲಿಯಾ ಶಿಫ್ಟ್ ಇರುವುದರ ಕಾರಣವೇ ನಾನು ಆಫರ್ ಸ್ವೀಕರಿಸಿದೆ ಎಂದು ನೊಂದ ಉದ್ಯೋಗಿ ಹೇಳಿದ್ದಾರೆ. ಈ ವಿವಾದದ ಬಗ್ಗೆ HR ಜೊತೆ ಮಾತನಾಡಿದಾಗ, "ನೀವು ಯುಎಸ್ ಶಿಫ್ಟ್‌ಗಾಗಿ ಸಂದರ್ಶನ ಮಾಡಿದ್ದೀರಿ" ಎಂದು HR ಸಂಪೂರ್ಣವಾಗಿ ನಿರಾಕರಿಸಿದ್ದಾಗಿ ಉದ್ಯೋಗಿ ಹೇಳಿದ್ದಾರೆ.

ವ್ಯತ್ಯಾಸ ಸರಿಪಡಿಸುವ ಬದಲು, ರಾಜೀನಾಮೆಗೆ ಒತ್ತಾಯ

ತಮ್ಮ ಬಳಿ ಇರುವ ಪುರಾವೆಗಳೊಂದಿಗೆ HR ಅನ್ನು ಸಂಪರ್ಕಿಸಿದಾಗ ವ್ಯತ್ಯಾಸ ಸರಿಪಡಿಸುವ ಬದಲಾಗಿ HR ಪ್ರತಿನಿಧಿಯು ಉದ್ಯೋಗಿಯನ್ನು ತಕ್ಷಣವೇ ರಾಜೀನಾಮೆ ನೀಡಲು ಒತ್ತಾಯಿಸಿದ ಆರೋಪ ಕೇಳಿಬಂದಿದೆ. ಆಸ್ಟ್ರೇಲಿಯಾ ಶಿಫ್ಟ್‌ಗಾಗಿ ಬೇರೆ ಯಾವುದೇ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿಲ್ಲ. ಆದ್ದರಿಂದ, ನೀವು ರಾಜೀನಾಮೆ ನೀಡಬೇಕು ಎಂದು HR ತಿಳಿಸಿದ್ದಾಗಿ ಉದ್ಯೋಗಿ ಹೇಳಿದ್ದಾರೆ. ಅವರು ಸೇರಿದ್ದ ದಿನವೇ ಒಂದು ದಿನದೊಳಗಿನ ರಾಜೀನಾಮೆ ನೀಡುವಂತೆ ಒತ್ತಡ ಹಾಕಲಾಗಿದೆ.

ಭಾರೀ ಆರ್ಥಿಕ ಮತ್ತು ಮಾನಸಿಕ ಹಾನಿ

ಸಂದರ್ಶನ, ದಾಖಲೆಗಳ ತಯಾರಿ, ಹಿನ್ನೆಲೆ ಪರಿಶೀಲನೆ ಹಾಗೂ ಸ್ಥಳಾಂತರದ ಸಿದ್ಧತೆಗಳಿಗೆ ಉದ್ಯೋಗಿಯವರು ಭಾರೀ ಹಣ ಮತ್ತು ಸಮಯ ಹೂಡಿಕೆಯಿದ್ದರೂ, ಈಗ ಅವರು ನಿರುದ್ಯೋಗಿಯಾಗಿ ಕಷ್ಟದಲ್ಲಿದ್ದಾರೆ. ನಾನು ಈಗಲೂ ನಿರುದ್ಯೋಗಿ. ದಾಖಲೆಗಳು, ಪ್ರಯಾಣ, ಸ್ಥಳಾಂತರ ಎಲ್ಲಾ ಸೇರಿ ನಾನು ಹೂಡಿದ ಮೊತ್ತ, ಸಮಯ ಮತ್ತು ಶ್ರಮ ಎಲ್ಲವೂ ವ್ಯರ್ಥವಾಗಿದೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.