ಶಿವಾನಂದ ಗೊಂಬಿ

ಇವರೆಲ್ಲ 6ರಿಂದ 8 ವಯಸ್ಸಿನ ಮಕ್ಕಳು. ಆದರೆ ಅರಳು ಹುರಿದಂತೆ ಇಂಗ್ಲಿಷ್‌ ಮಾತಾಡ್ತಾರೆ. ಇಂಗ್ಲಿಷ್‌ನಲ್ಲೇ ಡ್ರಾಮಾ ಮಾಡಿ ತೋರಿಸ್ತಾರೆ. ದೇಹದ ಅಂಗಾಂಗ ರಚನೆಗಳ ಕುರಿತು ಪಟಪಟನೆ ವಿವರ ನೀಡುತ್ತಾರೆ. ಈ ಕ್ಲಾಸ್‌ಗಳಲ್ಲಿ ಹೋಗಿ ಯಾವುದೇ ಪ್ರಶ್ನೆ ಕೇಳಿದರೂ ‘ಮಿಸ್‌ ನಾ ಹೇಳ್ತೇನೆ’ ಅಂತ ಎಲ್ಲರೂ ಕೈ ಎತ್ತುತ್ತಾರೆ!

ಇದು ಯಾವುದೇ ಪ್ರತಿಷ್ಠಿತ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಾಗಲಿ, ಸಿಬಿಎಸ್‌ಸಿ ಶಾಲೆಯಲ್ಲಿನ ದೃಶ್ಯವಲ್ಲ. ಬದಲಾಗಿ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಪ್ರತಿಭೆ.

ಡಿಜಿಟಲ್‌ ಜಗತ್ತಿನಲ್ಲಿ ಕನ್ನಡಕ್ಕೆ ಮಹತ್ವ ಕಲ್ಪಿಸಿದ ಓಂಶಿವಪ್ರಕಾಶ್‌

ಇದು ಬರೀ ಒಂದೇ ಸರ್ಕಾರಿ ಶಾಲೆಯಲ್ಲಿನ ಮಕ್ಕಳ ಸ್ಥಿತಿಯೂ ಅಲ್ಲ. ಹುಬ್ಬಳ್ಳಿಯ 20ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ 1ರಿಂದ 3ನೆಯ ತರಗತಿಗಳಲ್ಲಿನ ಮಕ್ಕಳು ಈ ರೀತಿ ಪಟಪಟನೆ ಉತ್ತರ ಕೊಡುವುದನ್ನು ನೋಡಬಹುದು. ಈ 20 ಶಾಲೆಗಳಲ್ಲಿ 1ರಿಂದ 3ನೆಯ ತರಗತಿಯಲ್ಲಿ ಓದುವ ಮಕ್ಕಳ್ಯಾರೂ ಶಾಲೆಗೆ ಹೋಗಲು ನಿರಾಕರಿಸುವುದಿಲ್ಲ, ತಂದೆ-ತಾಯಿಗಳೇ ಶಾಲೆ ಬಿಡಿಸಲು ಮುಂದಾದರೂ ಅತ್ತು ಕರೆದು ಶಾಲೆಗೆ ಹೋಗುತ್ತೇನೆ ಎಂದು ಹಠ ಹಿಡಿದು ಬರುತ್ತಾರೆ. ಅದಕ್ಕೆ ಏನು ಕಾರಣ ಎಂದು ಕೇಳಿದರೆ ಹೇಳಬಹುದಾದ ಎರಡು ಪದದ ಉತ್ತರ ಅರ್ಲಿ ಸ್ಪಾರ್ಕ್.

ಮಕ್ಕಳನ್ನು ಸಣ್ಣ ವಯಸ್ಸಿನಲ್ಲಿದ್ದಾಗಲೇ ಬೇಕಾದಂತೆ ತಿದ್ದಬಹುದಾಗಿದೆ. ಹೀಗಾಗಿ 8 ವರ್ಷದೊಳಗಿನ ಮಕ್ಕಳನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ಒಂದು ವರ್ಷದಲ್ಲಿ ಸಾಕಷ್ಟುಯಶಸ್ವಿಯಾಗಿದ್ದೇವೆ. ಆದರೂ ಸದ್ಯ ಪೈಲಟ್‌ ಪ್ರಾಜೆಕ್ಟ್ ಎಂದೇ ಪರಿಗಣಿಸಿದ್ದೇವೆ. ಮುಂದಿನ ವರ್ಷದಿಂದ 100 ಶಾಲೆಯಲ್ಲಿ ಪ್ರಾರಂಭಿಸುವ ಗುರಿ ಇದೆ. - ಸ್ಮಿತಾ ಪಾಟೀಲ(ದೇಶಪಾಂಡೆ)

ಏನಿದು ಅರ್ಲಿ ಸ್ಪಾರ್ಕ್?

8 ವರ್ಷದೊಳಗಿನ ಮಕ್ಕಳಿಗೆ ಏನೇ ಕಲಿಸಿದರೂ; ಏನೇ ಹೇಳಿಕೊಟ್ಟರೂ ಅದು ಕೊನೆಯವರೆಗೂ ಶಾಶ್ವತವಾಗಿರುತ್ತದೆ ಎಂಬುದು ಮನಃಶಾಸ್ತ್ರಜ್ಞರ ಅಭಿಮತ. ಈ ಹಿನ್ನೆಲೆಯಲ್ಲಿ ಸಣ್ಣ ವಯಸ್ಸಿನಲ್ಲೇ ಮಕ್ಕಳಲ್ಲಿ ಶಿಕ್ಷಣದ ‘ಕಿಡಿ’ ಹೊತ್ತಿಸುವುದೇ ಈ ‘ಅರ್ಲಿ ಸ್ಪಾರ್ಕ್’. ಈ ಅರ್ಲಿ ಸ್ಪಾರ್ಕ್ ಎಂಬ ಸಂಸ್ಥೆ ದೇಶಪಾಂಡೆ ಫೌಂಡೇಷನ್‌ನ ಅಂಗ ಸಂಸ್ಥೆ. ದೇಶಪಾಂಡೆ ಫೌಂಡೇಷನ್‌ನ ಸ್ಮಿತಾ ಪಾಟೀಲ (ದೇಶಪಾಂಡೆ) ಎಂಬುವವರೇ ಇದರ ಮುಖ್ಯಸ್ಥೆ.

ಭಾಷಾ ಪ್ರೀತಿಗೆ ಎಲ್ಲೆ ಎಲ್ಲಿ.. ಅಮೆರಿಕಾದ ಕನ್ನಡ 'ಕಲಿ'ಗಳು

ಬಡವರಿಗೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲು ಸಾಧ್ಯವಾಗಲ್ಲ. ಹೀಗಾಗಿ ಸರ್ಕಾರಿ ಶಾಲೆಗೆ ಕಳುಹಿಸಬೇಕು. ವಿವಿಧ ಕಾರಣಗಳಿಂದ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಕೆಲವರು ತಂದೆ-ತಾಯಿ ಜತೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಮನೆಗಿಂತ ಶಾಲೆಯಲ್ಲೇ ಹೆಚ್ಚು ಆಸಕ್ತಿ ಬರುವಂತೆ ಮಕ್ಕಳಲ್ಲಿ ಮಾಡುವುದು, ಕಲಿಕಾ ಗುಣಮಟ್ಟವನ್ನು ಸುಧಾರಿಸುವ ಮೂಲಕ ಮಕ್ಕಳಲ್ಲಿ ಶಿಕ್ಷಣದ ಕಿಡಿ ಹೊತ್ತಿಸಿದರೆ ಆ ಕಿಡಿಯೇ ಮುಂದೆ ಸಮಾಜ ಬೆಳಗುವ ದೀಪವಾಗಬಹುದು ಎಂಬ ಸದುದ್ದೇಶವೇ ‘ಅರ್ಲಿ ಸ್ಪಾರ್ಕ್’ ಹುಟ್ಟಿಗೆ ಕಾರಣ.

ಪೈಲಟ್‌ ಯೋಜನೆ

ಒಂದು ವರ್ಷದ ಹಿಂದೆ ‘ಅರ್ಲಿ ಸ್ಪಾರ್ಕ್’ ಹುಟ್ಟಿಕೊಂಡಿತು. ಮೊದಲಿಗೆ ಇಲ್ಲಿನ ಹಿಂದುಳಿದ ಪ್ರದೇಶದ ಸಹಸ್ರಾರ್ಜುನ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಲಾಯಿತು. ಅಲ್ಲಿ 3 ತಿಂಗಳ ಯೋಜನೆ ಹಾಕಿಕೊಂಡು ಯಶಸ್ವಿಯಾದ ನಂತರ ಹಂತ ಹಂತವಾಗಿ ಸರ್ಕಾರಿ ಶಾಲೆಗಳಲ್ಲಿ ಹಬ್ಬಿತು. ನಗರದ ಹಿಂದುಳಿದ ಪ್ರದೇಶಗಳಲ್ಲಿನ 20 ಸರ್ಕಾರಿ ಶಾಲೆಗಳಲ್ಲಿ ಈ ಅರ್ಲಿ ಸ್ಪಾರ್ಕ್ ಕೆಲಸ ಮಾಡುತ್ತಿದೆ. ಸದ್ಯ ಪೈಲಟ್‌ ಪ್ರಾಜೆಕ್ಟ್ ಆಗಿ ಕೆಲಸ ಮಾಡಲಾಗುತ್ತಿದೆ. ಮುಂದೆ 100 ಶಾಲೆಗಳಿಗೆ, ಬಳಿಕ ಬೇರೆ ಜಿಲ್ಲೆಗಳಿಗೆ, ತದನಂತರ ಬೇರೆ ರಾಜ್ಯಗಳಿಗೂ ವಿಸ್ತರಿಸುವ ಗುರಿ ‘ಅರ್ಲಿ ಸ್ಪಾರ್ಕ್’ನದು.

ಹೇಗೆ ಕಲಿಸುತ್ತಾರೆ?

ಮೊದಲಿಗೆ ಸರ್ಕಾರಿ ಶಾಲೆ ಮಕ್ಕಳಿಗೆ ಶಿಸ್ತು ಕಲಿಸಲಾಗುತ್ತದೆ. ಹಾಗಂತ ಮಕ್ಕಳನ್ನು ದಂಡಿಸುವುದಿಲ್ಲ. ಮಕ್ಕಳು ಮನೆಯಲ್ಲಿ ಹೇಗಿರಬೇಕು. ಪ್ರತಿನಿತ್ಯ ಏನೇನು ಮಾಡಬೇಕು. ದೇಹವನ್ನು ಯಾವ ರೀತಿ ಶುಚಿಯಾಗಿಟ್ಟುಕೊಳ್ಳಬೇಕು. ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದನ್ನು ಕಲಿಸಿಕೊಡಲಾಗುತ್ತದೆ. ಖಾಸಗಿ ಶಾಲೆಗಳಂತೆ ಇಲ್ಲಿನ ಮಕ್ಕಳಿಗೆ ರೈಮ್ಸ್‌, ಆಂಗ್ಲ ಭಾಷೆಯಲ್ಲಿ ಚಿಕ್ಕ ಪುಟ್ಟಸಂಭಾಷಣೆ, ಮಕ್ಕಳ ಶೋಷಣೆ, ದೌರ್ಜನ್ಯ ತಡೆಯುವಂಥ ‘ಬ್ಯಾಡ್‌ ಟಚ್‌, ಗುಡ್‌ ಟಚ್‌’ಗಳ ಮಾಹಿತಿ, ಪ್ರಾರ್ಥನೆ... ಹೀಗೆ ಮಕ್ಕಳ ಶಿಸ್ತುಬದ್ಧ ಜೀವನಕ್ಕೆ ಅಡಿಪಾಯವಾಗುವಂಥ ಮೌಲಿಕ ಶಿಕ್ಷಣ ಇಲ್ಲಿ ನೀಡಲಾಗುತ್ತದೆ. ಮಕ್ಕಳಿಗೆ ಪ್ರಶ್ನೆ ಕೇಳಿ ಮಕ್ಕಳಿಂದಲೇ ಉತ್ತರ ಹೇಳಿಸುವಂತೆ ಮಾಡುವ ಪ್ರಯತ್ನ ನಡೆಯುತ್ತದೆ.

ಕನ್ನಡ ಕಟ್ಟಿದವರು:ಐಟಿ ಮಂದಿಯನ್ನು ಸಾಹಿತ್ಯದೆಡೆಗೆ ಸೆಳೆಯುತ್ತಿರುವ 'ಕಹಳೆ'!

ಶಿಕ್ಷಕರಿಗೆ ತರಬೇತಿ; ಪಾಲಕರ ಸಭೆ

ಮಕ್ಕಳಿಗೆ ಪಾಠ ಮಾಡುವ ವಿಧಾನದ ಬಗ್ಗೆ ಕೆಲ ದಿನ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತದೆ. ಪಾಲಕರ ಸಭೆ ನಡೆಸಿ, ಮಕ್ಕಳೊಂದಿಗೆ ಪಾಲಕರು ಯಾವ ರೀತಿ ನಡೆದುಕೊಳ್ಳಬೇಕು? ನಿತ್ಯ ಶಾಲೆಗೆ ಯಾಕೆ ಕಳುಹಿಸಬೇಕು ಎಂಬ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಹೀಗಾಗಿ ಮಕ್ಕಳ ಹಾಜರಾತಿ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮಕ್ಕಳ ಜಾಣ್ಮೆಯೂ ಹೆಚ್ಚಾಗುತ್ತಿದೆ. ಇದು ಪಾಲಕರು, ಶಿಕ್ಷಕರಿಗೆ ತೃಪ್ತಿ ನೀಡಿದೆ.

ಟೀಂ ವರ್ಕ್

ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯೂನಿಕೇಶನನಲ್ಲಿ ಎಂಜಿನಿಯರಿಂಗ್‌, ಬಾಸ್ಟನ್‌ ವಿಶ್ವ ವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಓದಿರುವ ಸ್ಮಿತಾ ಪಾಟೀಲ (ದೇಶಪಾಂಡೆ) ಈ ಅರ್ಲಿ ಸ್ಪಾರ್ಕ್ ಪ್ರಾರಂಭದ ರೂವಾರಿ. ಅರ್ಲಿ ಸ್ಪಾರ್ಕ್ಗೆ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಸ್ಮಿತಾ ಪಾಟೀಲ, ಯುಎಸ್‌ನಲ್ಲಿ ನೆಲೆಸಿ ಇಲ್ಲಿ ಕಾರ್ಯಕ್ರಮ ಜಾರಿಗೊಳಿಸುತ್ತಿದ್ದಾರೆ. ಇದಕ್ಕಾಗಿಯೇ ಪ್ರತಿ ತಿಂಗಳಿಗೊಮ್ಮೆ ಬಂದು ಹೋಗುತ್ತಾರೆ. ಬಾಸ್ಟನ್‌ ವಿವಿಯ ಪ್ರಾಧ್ಯಾಪಕರಾಗಿರುವ ನೆರಮನ್‌ ದಶೌಶ್‌ ಶಿಕ್ಷಣದ ಸಲಹೆಗಾರರಾಗಿದ್ದರೆ, ಕ್ಯಾಲಿಪೋರ್ನಿಯಾದ ಅನುಜಾ ಬರ್ನ್‌ ಯಾವ ರೀತಿ ಯೋಜನೆಯನ್ನು ಜಾರಿಗೊಳಿಸಬೇಕು ಎಂಬುದರ ನಿರ್ದೇಶಕರಾಗಿದ್ದಾರೆ. ಇನ್ನು ಇಲ್ಲಿ ಐವರು ಶಿಕ್ಷಕರನ್ನು ಅರ್ಲಿ ಸ್ಪಾರ್ಕ್ ನೇಮಿಸಿಕೊಂಡಿದೆ. ಈ ರೀತಿ ಟೀಂ ವರ್ಕ್ದಿಂದ ಇದು ಸಾಧ್ಯವಾಗಿದೆ.

ಕಾರ್ಯನಿರ್ವಾಹಕ ನಿರ್ದೇಶಕರು, ಅರ್ಲಿ ಸ್ಟಾರ್ಕ್

ಮೂರು ತಿಂಗಳಿಂದ ನಾವು ಮಕ್ಕಳಿಗೆ ಕಲಿಸುತ್ತೇವೆ. ಇದೇ ವೇಳೆ ಶಿಕ್ಷಕರಿಗೂ ತರಬೇತಿ, ಪಾಲಕರ ಸಭೆಯನ್ನೂ ನಡೆಸುತ್ತೇವೆ. ಮೊದಲಿಗೆ ನಾವು ಪಾಠ ಮಾಡುವಾಗ ಶಾಲೆಯ ಶಿಕ್ಷಕರು ಕುಳಿತು ಕೇಳುತ್ತಾರೆ. ಬಳಿಕ ನಾವು ಕೇಳುತ್ತಾ ಅವರಿಂದ ಪಾಠ ಮಾಡಿಸುತ್ತೇವೆ. ಏನಾದರೂ ತಪ್ಪಿದರೆ ಅಲ್ಲೇ ತಿದ್ದುತ್ತೇವೆ.- ಪ್ರತಿಭಾ ಪಾಟೀಲ

ಅರ್ಲಿ ಸ್ಪಾರ್ಕ್ನ ಶಿಕ್ಷಕಿ

ಅರ್ಲಿ ಸ್ಪಾರ್ಕ್ನ ಶಿಕ್ಷಕರು ಶಾಲೆಗೆ ಬಂದು ಹೇಳಿಕೊಡುತ್ತಿರುವುದರಿಂದ ಮಕ್ಕಳು ಎಲ್ಲರೂ ಭಾಗವಹಿಸುತ್ತಿದ್ದಾರೆ. ಮೊದಲು ಕೆಲವೇ ಕೆಲವು ಮಕ್ಕಳು ಕಲಿಕೆಯಲ್ಲಿ ಆಸಕ್ತಿ ತೋರಿಸುತ್ತಿದ್ದರು. ಆದರೆ ಈಗ ಹಾಗಿಲ್ಲ. ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ. ಹಾಜರಾತಿಯೂ ಹೆಚ್ಚಳವಾಗಿದೆ. ಪಾಲಕರು ಮಕ್ಕಳ ಶಿಕ್ಷಣದ ಬೆಳವಣಿಗೆ ನೋಡಿ ಖುಷಿಯಾಗಿದ್ದಾರೆ.- ಮಹೇಶ್ವರಿ ಗಾಣಗೇರ, ಶಿಕ್ಷಕಿ, ಚಿಕ್ಕಮಠ ಸರ್ಕಾರಿ ಶಾಲೆ ಹುಬ್ಬಳ್ಳಿ

ನಮ್ಮ ಮಗು ಬಹಳ ಚಂದ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದೆ. ಕೇಳಲು ಖುಷಿಯಾಗುತ್ತದೆ. ಸರ್ಕಾರಿ ಶಾಲೆಯಲ್ಲೂ ಇಷ್ಟೆಲ್ಲ ಕಲಿಸುತ್ತಾರೆ ಎಂಬುದು ಗೊತ್ತಾಗಿದ್ದೇ ಈಗ. ನಾವು ಎಷ್ಟೇ ಕಷ್ಟವಾದರೂ ಮಗುವನ್ನು ಶಾಲೆ ಬಿಡಿಸಲ್ಲ. ಕೂಲಿನಾಲಿನಾದರೂ ಶಾಲೆಗೆ ಕಳುಹಿಸುತ್ತೇವೆ.- ದ್ಯಾಮವ್ವ, ಮಗುವೊಂದರ ತಾಯಿ