ಮೈಸೂರಲ್ಲೇ ಸಿದ್ದು ಸ್ಪರ್ಧೆ: ಪುತ್ರ ಯತೀಂದ್ರ ಒತ್ತಾಯ
ನಾನೂ ಸಹ ವರುಣ ಕ್ಷೇತ್ರದ ಮತದಾರರ ಆಶಯಕ್ಕೆ ಬೆಂಬಲ ನೀಡಿದ್ದೇನೆ. ವರುಣದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರನ್ನು ಕೋರಿದ್ದೇನೆ: ಶಾಸಕ ಡಾ.ಯತೀಂದ್ರ
ಕೊಪ್ಪಳ(ಜ.28): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ವರುಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು ಎನ್ನುವುದು ವರುಣ ಕ್ಷೇತ್ರದ ಮತದಾರರ ಒತ್ತಾಯ. ಇದು ಅವರ ಕೊನೆಯ ಚುನಾವಣೆ ಆಗಿರುವುದರಿಂದ ಅವರು ವರುಣದಿಂದಲೇ ಸ್ಪರ್ಧಿಸಿ ರಾಜಕೀಯ ಸೇವೆ ಸಲ್ಲಿಸಲಿ ಎಂಬುದು ಕ್ಷೇತ್ರದ ಹಲವು ನಾಯಕರ, ಕಾರ್ಯಕರ್ತರ ಒತ್ತಾಸೆ ಎಂದು ಸಿದ್ದರಾಮಯ್ಯಅವರ ಪುತ್ರ, ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನೂ ಸಹ ವರುಣ ಕ್ಷೇತ್ರದ ಮತದಾರರ ಆಶಯಕ್ಕೆ ಬೆಂಬಲ ನೀಡಿದ್ದೇನೆ. ವರುಣದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರನ್ನು ಕೋರಿದ್ದೇನೆ’ ಎಂದರು.
ಸಿದ್ದರಾಮಯ್ಯ ಅವರಿಗೆ ಸ್ಪರ್ಧೆ ಮಾಡುವುದಕ್ಕೆ ಕ್ಷೇತ್ರವಿಲ್ಲ ಎನ್ನುವ ಪ್ರತಿಪಕ್ಷಗಳ ಆರೋಪ, ಅವರ ಪ್ರಚಾರದ ಕಾರ್ಯತಂತ್ರವಷ್ಟೇ. ಅವರಿಗೆ ರಾಜ್ಯದ ಅನೇಕ ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ಇರುವುದರಿಂದಲೇ ಇಷ್ಟೆಲ್ಲ ಚರ್ಚೆಯಾಗುತ್ತಿದೆ. ವಿರೋಧ ಪಕ್ಷದವರು ಈ ವಿಷಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರನ್ನೇ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ. ಇದರಿಂದ ಅವರಿಗೆ ಹೆಚ್ಚು ಲಾಭವಾಗುತ್ತದೆ ಎಂದು ತಿಳಿದುಕೊಂಡಿದ್ದಾರೆ ಎಂದು ಆರೋಪಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸರ್ಕಾರ ಬರೋದು ಖಚಿತ: ಸಿದ್ದರಾಮಯ್ಯ
ಮರಳಿ ಬಾದಾಮಿಯಲ್ಲಿಯೇ ಸ್ಪರ್ಧೆ ಮಾಡುವಂತೆ ಆ ಕ್ಷೇತ್ರದ ಜನರು ಒತ್ತಾಯಿಸುತ್ತಿದ್ದಾರೆ. ಕೊಪ್ಪಳದಿಂದಲೂ ಅವರ ಸ್ಪರ್ಧೆಗೆ ಒತ್ತಡವಿದೆ. ಆದರೆ, ಈ ಬಾರಿ ಉತ್ತರ ಕರ್ನಾಟಕದಿಂದ ಸ್ಪರ್ಧೆ ಮಾಡದಿರಲು ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ. ಹೀಗಾಗಿ, ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಚಿಂತನೆ ನಡೆಸಿದ್ದಾರೆ ಎಂದರು.
ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎನ್ನುವ ಕುರಿತು ದೇವರ ಹೇಳಿಕೆಯಾಗಿರುವ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದು ನಮ್ಮ ಮನೆದೇವರು ಅಲ್ಲ. ನಾನು ಅಚಾನಕ್ಕಾಗಿ ಹೋಗಿದ್ದಾಗ ಆಗಿರುವ ಬೆಳವಣಿಗೆ ಅಷ್ಟೆ ಎಂದರು.