ಆರ್‌ಎಸ್‌ಎಸ್ ನೋಂದಣಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಒತ್ತಾಯವನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್‌ಗೆ ಕೋಟ್ಯಂತರ ಮೌಲ್ಯದ ಆಸ್ತಿ ಇದ್ದು, ಅದರ ವ್ಯವಹಾರಗಳ ಪರಿಶೀಲನೆಗೆ ನೋಂದಣಿ ಅಗತ್ಯ ಎಂದಿದ್ದಾರೆ. ಇದಕ್ಕೆ ಬಿಜೆಪಿ ನಾಯಕರಾದ ಏನು ಹೇಳಿದ್ರು?
ಮೈಸೂರು (ಜೂ.17): ಆರ್‌ಎಸ್‌ಎಸ್(RSS)ನ ಎಲ್ಲಾ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಹೀಗಾಗಿ, ಅದು ನೋಂದಣಿ(Registration) ಆಗಬೇಕು. ಗೃಹ ಸಚಿವ, ಪ್ರಿಯಾಂಕ್ ಖರ್ಗೆ(Priyank kharge)ಯವರು ಆರ್‌ಎಸ್ಎಸ್ ನೋಂದಣಿಗೆ ಒತ್ತಾಯ ಮಾಡ್ತಾ ಇರೋದು ಸರಿ ಇದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಪಾದಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಆರ್ ಎಸ್ಎಸ್ ನೋಂದಣಿಯಾಗದ ವಿಚಾರ ಕುರಿತು ಪ್ರತಿಕ್ರಿಯಿಸಿ, ದೇಶದ ಎಲ್ಲಾ ಕಡೆ ಆರ್ ಎಸ್ಎಸ್ ಗೆ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಅವರಿಗೆ ಕೋಟ್ಯಂತರ ರೂಪಾಯಿ ಹಣವೂ ಬರುತ್ತಿದೆ. ಇದರ ಲೆಕ್ಕವನ್ನು ಅವರು ಕೊಡಬೇಕು ತಾನೆ?. ಅವರ ಎಲ್ಲಾ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಹೀಗಾಗಿ, ಅದು ನೋಂದಣಿ ಆಗಬೇಕು. ಗೃಹ ಸಚಿವರು, ಆರ್ ಎಸ್ಎಸ್ ನೋಂದಣಿಗೆ ಒತ್ತಾಯ ಮಾಡ್ತಾ ಇರೋದು ಸರಿ ಇದೆ ಎಂದು ಅವರು ಸಮರ್ಥಿಸಿಕೊಂಡರು.
ಧರ್ಮದ ಹೆಸರಿನಲ್ಲಿ ಏನೂ ಬೇಕಾದರೂ ಮಾಡುತ್ತೇವೆ ಎಂಬುದು ನಡೆಯೋದಿಲ್ಲ. ದೇಶದ ಕಾನೂನಿಗಿಂತ ಯಾವ ಸಂಘಟನೆಯೂ ದೊಡ್ಡದಲ್ಲ. ಆರ್ ಎಸ್ಎಸ್ ಕೇವಲ ಸಾಂಸ್ಕೃತಿಕ ಸಂಘಟನೆ ಅಲ್ಲ, ಅದು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆ. ಆರ್ ಎಸ್ಎಸ್ ನವರು ಹಿಂದುಗಳೇ ಅಲ್ಲ. ಅವರು ಕೇವಲ ಹಿಂದುತ್ವವಾದಿಗಳು ಅಷ್ಟೇ ಎಂದರು
ದೇಶದ್ರೋಹಿಗಳ ರಕ್ಷಕರಿಗೆ, ದೇಶ ವಿಭಜಕರ ಮಿತ್ರರಿಗೆ ಆರ್‌ಎಸ್‌ಎಸ್ ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ? ದೆಹಲಿ ನಕಲಿ ಗಾಂಧಿ ಹೈಕಮಾಂಡ್‌ನ ಓಲೈಸಿ ತಾನೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂಬ ದುರಾಸೆಯಿಂದ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಅನ್ನು ಬೆದರುಬೊಂಬೆ ಮಾಡಿಕೊಳ್ಳಲು ಹೊರಟಿದ್ದಾರೆ. ಸಮಾಜದಲ್ಲಿ ಸೈದ್ಧಾಂತಿಕ ವಿವಾದ ಸೃಷ್ಟಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಿಯಾಂಕ್ ನಡೆಸುತ್ತಿರುವ ಕುತಂತ್ರ ಕನ್ನಡಿಗರಿಗೆ ಅರ್ಥವಾಗುವಷ್ಟು ರಹಸ್ಯವಾಗಿ ಉಳಿದಿಲ್ಲ.
-ಆರ್.ಅಶೋಕ್, ಪ್ರತಿಪಕ್ಷದ ನಾಯಕ
ರಾಷ್ಟ್ರದ್ರೋಹಿ ಸಂಸ್ಥೆ ಕುರಿತು ಪ್ರಶ್ನೆ ಏಕಿಲ್ಲ
ಆರ್‌ಎಸ್‌ಎಸ್ ಮದರಸಾ ರೀತಿ ಗುಪ್ತವಾಗಿ ಕಾರ್ಯ ನಿರ್ವಹಿಸಲ್ಲ. ಅಕ್ರಮ ವಿದೇಶಿ ದೇಣಿಗೆ ಪಡೆದು ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವ ಮಾಹಿತಿ ನಿಮ್ಮ ಗೃಹ ಇಲಾಖೆ ಬಳಿಯೇ ಇದೆ. ಈ ಬಗ್ಗೆ ಪತ್ರ ಬರೆದು ಆ ಸಂಸ್ಥೆಗಳಿಂದ ಯಾಕೆ ವಿವರ ಕೇಳುವುದಿಲ್ಲ?
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ


