ವೈರಲ್ ಆಡಿಯೋ ವಿವಾದದಿಂದ ತಮಗೆ ರಾಜಕೀಯವಾಗಿ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಒಪ್ಪಿಕೊಂಡಿದ್ದಾರೆ. ಸಂಪುಟದ ಎರಡನೇ ಪಟ್ಟಿಯಲ್ಲಿ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದು, ತಾವು ಸಿದ್ದರಾಮಯ್ಯನವರಿಗೆ ದ್ರೋಹ ಮಾಡಿಲ್ಲ ಮತ್ತು ಕಾಂಗ್ರೆಸ್ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮವರೇ ರಾಜಕೀಯದಲ್ಲಿ ಬೆಳೆಯಲು ಬಿಡುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಪುಟ ವಿಸ್ತರಣೆ ಮತ್ತು ಮಂತ್ರಿ ಸ್ಥಾನದ ಕಸರತ್ತು ಜೋರಾಗಿ ನಡೆಯುತ್ತಿರುವ ಬೆನ್ನಲ್ಲೇ, ಹಿರಿಯ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ವೈರಲ್ ಆಡಿಯೋ ವಿವಾದ ತಮಗೆ ರಾಜಕೀಯವಾಗಿ ಹಿನ್ನಡೆ ತಂದಿರುವುದನ್ನು ಒಪ್ಪಿಕೊಂಡಿದ್ದಾರೆ.
ಆಡಿಯೋ ವೈರಲ್‌ನಿಂದ ಹಿನ್ನಡೆ
ವೈರಲ್ ಆದ ಆಡಿಯೋದಿಂದ ನನಗೆ ತೊಂದರೆಯಾಗಿದ್ದು ನಿಜ. ಆ ಆಡಿಯೋದಲ್ಲಿ ಇರುವುದು ನನ್ನ ಧ್ವನಿಯಲ್ಲ ಎಂದು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಯಾರು ಈ ಬಗ್ಗೆ ಮಾತನಾಡಿದ್ದಾರೋ ಅವರು ದೂರು ಕೂಡ ನೀಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಹೊರಬರಲಿದೆ. ಆದರೆ ಈ ವಿವಾದದಿಂದ ನನಗೆ ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಹಿನ್ನಡೆಯಾಗಿದೆ ಎಂಬುದು ಸತ್ಯ ಎಂದು ಜಮೀರ್ ಅಸಮಾಧಾನ ವ್ಯಕ್ತಪಡಿಸಿದರು.
ಎರಡನೇ ಪಟ್ಟಿಯಲ್ಲಿ ಮಂತ್ರಿ ಸ್ಥಾನದ ನಿರೀಕ್ಷೆ
ಸಂಪುಟ ಸೇರ್ಪಡೆ ಕುರಿತು ಮಾತನಾಡಿದ ಅವರು, ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಬರುತ್ತದೆ ಎಂಬ ನಿರೀಕ್ಷೆ ಇತ್ತು, ಅದು ಆಗದಿದ್ದಕ್ಕೆ ಬೇಜಾರಿದೆ. ಆದರೆ ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಬರಬಹುದು ಎಂಬ ವಿಶ್ವಾಸ ನನಗಿದೆ. ಹೈಕಮಾಂಡ್ ಯಾರನ್ನೇ ಮಂತ್ರಿ ಮಾಡುವ ಮೊದಲು ಆಂತರಿಕ ಸರ್ವೆ ನಡೆಸುತ್ತದೆ. ಸುಮ್ಮನೆ ದೆಹಲಿಗೆ ಹೋದ ತಕ್ಷಣ ಅಥವಾ ಕೇಳಿದ ತಕ್ಷಣ ಮಂತ್ರಿ ಮಾಡುವುದಿಲ್ಲ. ಯಾರಿಂದ ಪಕ್ಷಕ್ಕೆ ಮತ್ತು ಜನರಿಗೆ ಅನುಕೂಲವಾಗುತ್ತದೋ ಅವರನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ ಎಂದರು.
ಸಿದ್ದರಾಮಯ್ಯ ಅವರಿಗೆ ದ್ರೋಹ ಮಾಡಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಸಿದ್ದರಾಮಯ್ಯ ಅವರಿಗೆ ಅಥವಾ ಪಕ್ಷಕ್ಕೆ ದ್ರೋಹ ಮಾಡಿದ್ದೇನೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ಅವರ ತಲೆ ಕೆಡಿಸಿದ್ದಾರೆ. ನಾನು ಎಂದಿಗೂ ದ್ರೋಹ ಮಾಡುವವನಲ್ಲ. ಒಂದು ವೇಳೆ ನನ್ನಿಂದ ಪಕ್ಷಕ್ಕೆ ದ್ರೋಹವಾಗಿದ್ದರೆ ನಾನು ಈಗಾಗಲೇ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಎಲ್ಲ ಹಿರಿಯ ನಾಯಕರ ಕ್ಷಮೆ ಕೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಜಾತಿ ಜಾತಿನೇ ವಿರೋಧ
ರಾಜಕೀಯದಲ್ಲಿನ ಕಾಲೆಳೆಯುವ ತಂತ್ರದ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಜಮೀರ್, ರಾಜಕೀಯದಲ್ಲಿ ಬೇರೆಯವರು ವಿರೋಧ ಮಾಡಲ್ಲ, ಸ್ವಜಾತಿಯವರೇ ಬೆಳೆಯುವುದನ್ನು ಸಹಿಸುವುದಿಲ್ಲ. ಇದು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತವಲ್ಲ, ಎಲ್ಲ ಜಾತಿಗಳಲ್ಲೂ ಇದೇ ಪರಿಸ್ಥಿತಿ ಇದೆ. ನಮ್ಮವರೇ ಬೆಳೆದರೆ ಅದನ್ನು ಸಹಿಸಿಕೊಳ್ಳುವ ಗುಣ ನಮ್ಮಲ್ಲಿ ಕಡಿಮೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ
ಜೆಡಿಎಸ್ ಸೇರ್ಪಡೆ ಎಂಬ ಊಹಾಪೋಹಗಳಿಗೆ ತೆರೆ ಎಳೆದ ಅವರು, ನಾನು ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಹೋಗುತ್ತೇನೆ ಎನ್ನುವುದು ಕೇವಲ ಸುಳ್ಳು ಸುದ್ದಿ. ಕಾಂಗ್ರೆಸ್ ನನಗೆ ಮಂತ್ರಿ ಸ್ಥಾನ ನೀಡಿದೆ, ಗೌರವ ಕೊಟ್ಟಿದೆ. ನಾನು ಪಕ್ಷ ಬಿಡುವ ಅಥವಾ ದ್ರೋಹ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಮಂತ್ರಿ ಮಾಡದಿದ್ದರೂ 2028ರ ಚುನಾವಣೆಗೆ ಪಕ್ಷದ ಕೆಲಸ ಮಾಡಲು ಹೇಳಿದರೆ ನಾನು ಸಿದ್ಧನಿದ್ದೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ, ಸಂಪುಟ ಸೇರ್ಪಡೆಯ ಆಕಾಂಕ್ಷಿಯಾಗಿರುವ ಜಮೀರ್ ಅಹ್ಮದ್ ಆಡಿಯೋ ವಿವಾದದಿಂದಾದ ಹಾನಿಯನ್ನು ಸರಿಪಡಿಸಿಕೊಳ್ಳುವ ಹಾಗೂ ಹೈಕಮಾಂಡ್ ವಿಶ್ವಾಸ ಗಳಿಸುವ ಪ್ರಯತ್ನದಲ್ಲಿದ್ದಾರೆ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತಿದೆ.


