ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಒತ್ತಡಕ್ಕೆ ಮಣಿದು ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. 

ಶಿವಮೊಗ್ಗ (ಜ.24): ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಒತ್ತಡಕ್ಕೆ ಮಣಿದು ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಲೀನ್ ಚಿಟ್ ಕೊಟ್ಟರೆ ಲೋಕಾಯುಕ್ತ ತನಿಖೆ ಸರಿಯಾಗಿಲ್ಲ ಎಂಬ ನಮ್ಮ ಆರೋಪ ಸತ್ಯವಾದಂತೆ ಎಂದರು. 

ಲೋಕಾಯುಕ್ತ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆಂದು ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ. ಇ.ಡಿ ಮುಡಾದಲ್ಲಿ ಎಷ್ಟು ಹಗರಣ ಆಗಿದೆ ಎಂದು ಮಾಹಿತಿ ಸಂಗ್ರಹ ಮಾಡುತ್ತಿದೆ. ಹೈಕೋರ್ಟ್ ಕೂಡ ಹಗರಣದ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಹೇಳಿದರು. ಈ ಪ್ರಕರಣದಲ್ಲಿ ರಾಜ್ಯಪಾಲರನ್ನು ನಿಂದಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಅಲ್ಲದೆ, ಹೈಕೋರ್ಟ್‌ನಲ್ಲಿ ತೀರ್ಪು ಬರುವ ಮುನ್ನವೇ ಲೋಕಾಯುಕ್ತ ವರದಿ ನೀಡಿದೆ. ಮುಖ್ಯಮಂತ್ರಿಯವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

ವರದಿ ಸತ್ಯವಾದರೆ ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ತನಿಖೆ ನಡೆಯುವಾಗ ಆಧಾರ ರಹಿತ ವರದಿ ನೀಡಲು ಸಾಧ್ಯವಿಲ್ಲ. ಆತುರ, ಆತುರವಾಗಿ ಕ್ಲಿನ್ ಚೀಟ್ ಪಡೆಯುವ ಕೆಲಸವನ್ನು ಸಿಎಂ ಮಾಡಿದ್ದಾರೆ ಎಂದು ಆರೋಪಿಸಿದರು. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಬೃಹತ್‌ ಹೋರಾಟ ನಡೆಸಿತ್ತು. ವಾಸ್ತವವಾಗಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ಈಗಾಗಲೇ ರಾಜೀನಾಮೆ ನೀಡಬೇಕಿತ್ತು. ಆದರೂ, ನೀಡಿಲ್ಲ. ಈಗಲಾದರೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಕೆಲಸ ಇಲ್ಲದವರ ಬಗ್ಗೆ ಮಾತನಾಡಲ್ಲ: ‘ಯತ್ನಾಳ ಇರಲಿ ಅಥವಾ ಯಾರೇ ಆಗಲಿ. ನಾನು ತಲೆ‌ಕೆಡಿಸಿಕೊಳ್ಳಲ್ಲ. ನನ್ನ ಕೆಲಸ ಮಾಡಿಕೊಂಡು ಹೋಗುತ್ತೇನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ. ಕೆಲಸ ಇಲ್ಲದವರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಕೆಲಸ ಮಾಡಲು ಬಂದಿದ್ದೇನೆ, ಕೆಲಸ ಮಾಡಿಕೊಂಡು ಹೋಗುತ್ತೇನೆ ಅಷ್ಟೇ ಎಂದರು.

ಬಿಜೆಪಿ ಸಭೇಲಿ 80% ನಾಯಕರ ಬೆಂಬಲ ನನಗೆ ಸಿಕ್ಕಿದೆ: ವಿಜಯೇಂದ್ರ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಯಾರು ಕ್ರಮ ಕೈಗೊಳ್ಳಬೇಕೋ ಅವರು ತೆಗೆದುಕೊಳ್ಳುತ್ತಾರೆ. ಫೆಬ್ರವರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಇದೆ. ಪಕ್ಷದ ಇಂದಿನ ಬೆಳವಣಿಗೆಗಳ ಬಗ್ಗೆ ಕಾರ್ಯಕರ್ತರಲ್ಲಿ ನೋವು ಇದೆ. ಆ ನೋವು ಏನು ಅಂತ ಅರ್ಥ ಆಗುತ್ತದೆ. ಇದೆಲ್ಲದಕ್ಕೂ ಶೀಘ್ರ ಇತೀಶ್ರೀ ಹಾಡುವ ಕೆಲಸ ಹೈಕಮಾಂಡ್ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.