ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಭರವಸೆಯ ಮೇಲೆ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಿದೆ. ಅಧಿಕಾರ ಹಂಚಿಕೆ ಒಪ್ಪಂದ ಪಾಲಿಸದಿದ್ದರೆ, ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಾಗಿ ರಾಜ್ಯ ಒಕ್ಕಲಿಗರ ಸಂಘದ ಮುಖಂಡರು ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ನ.27): ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆಂಬ ಕಾರಣಕ್ಕೆ ಒಕ್ಕಲಿಗ ಸಮುದಾಯ ಮತವನ್ನು ಕಾಂಗ್ರೆಸ್‌ಗೆ ನೀಡಿದ್ದೇವೆ. ಇಷ್ಟು ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಅವರು ಶ್ರಮ ಪಟ್ಟಿದ್ದಾರೆ. ಇದೀಗ ಡಿಕೆಶಿ ಅವರಿಗೆ ಅಕಸ್ಮಾತ್ ಸಿಎಂ ಪಟ್ಟ ವಂಚನೆಯಾದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬುದ್ದಿ ಕಲಿಸುತ್ತೇವೆ. ನಾವೆಲ್ಲರೂ ಡಿ.ಕೆ.ಶಿವಕುಮಾರ್ ಪರ ಹೋರಾಟಕ್ಕೆ ಸಿದ್ದವಾಗಿದ್ದೇವೆ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪ ಗೌಡ ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ರವಾನಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಗೊಂದಲದ ನಡುವೆಯೇ ರಾಜ್ಯ ಒಕ್ಕಲಿಗರ ಸಂಘದಿಂದ ಗುರುವಾರ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಇಷ್ಟು ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದ್ರೇ ಶ್ರಮ ಪಟ್ಟಿದ್ದಾರೆ. ಅವ್ರ ಕಾರಣಕ್ಕೆ ಒಕ್ಕಲಿಗ ಸಮುದಾಯ ಮತವನ್ನು ಕಾಂಗ್ರೆಸ್ ಗೆ ನೀಡಿದ್ದೇವೆ. 40-50 ವರ್ಷದಿಂದ ಕಷ್ಟಪಟ್ಟವರಿಗೆ ಅಧಿಕಾರ ಸಿಗಲಿ ಡಿಕೆಗೆ ಅಂತ ಕಾಂಗ್ರೆಸ್ ಗೆ ಅತೀ ಹೆಚ್ಚು ಮತವನ್ನು ನಮ್ಮ ಸಮುದಾಯ ನೀಡಿದೆ. ಯಾರು ಅಧ್ಯಕ್ಷರೋ ಅವ್ರಿಗೆ ಸಿಎಂ ಪಟ್ಟ ಸಿಗುತ್ತೆ. ಆದ್ರೇ ಸಿದ್ದರಾಮಯ್ಯ ಸಿಎಂ ಆಗುತ್ತೇನೆ ಅಂದರು.
ಕಾಂಗ್ರೆಸ್‌ಗೆ ಡಿಕೆ ಬೇಕಿದ್ದರೆ ಸಿಎಂ ಮಾಡಿ:
ನಮ್ಗೆ ಆರಂಭದಲ್ಲಿ ಸಂತೋಷವಾಯ್ತು. ಒಳ್ಳೆಯ ನಾಯಕರು ಒಳ್ಳೆಯ ಅನುಭವಿಗಳು, ಅಂತಾ ನಮ್ಗೂ ಖುಷಿಯಾಯಿತು. ಆದ್ರೇ ಅವತ್ತು ಅಧಿಕಾರ ಹಂಚಿಕೆಯ ಮಾತುಕತೆಯನ್ನು ರಾಹುಲ್ ಗಾಂಧಿ ಸೋನಿಯಾ ಗಾಂಧಿ ಖರ್ಗೆ ಯವರು ಭರವಸೆಯನ್ನು ಕೊಟ್ಟರು. ಅದರಂತೆ ಈಗ ಅಧಿಕಾರ ನೀಡಬೇಕು. ನಿನ್ನೆ ಸ್ವಾಮೀಜಿಯವರು ಹೇಳಿದಾಗ, ಯಾಕೆ ಬೇಕು ಸ್ವಾಮೀಜಿಗೆ ಈ ಮಾತುಗಳು ಅಂತಾರೆ. ಆದರೇ ಇದು ಅನಿವಾರ್ಯ
ಸಿಎಂ ಸಿದ್ದರಾಮಯ್ಯ ಅವಕಾಶ ಸಾಕಷ್ಟು ಸಿಕ್ಕಿದೆ. ಬೇರೆ ಸಮುದಾಯಕ್ಕೆ ಹೀಗೆ ಅನ್ಯಾಯವಾಗಿದ್ರೇ ಮಠಾದೀಶರು ಸುಮ್ನೆ ಇರ್ತಾ ಇದ್ರಾ? ಒಕ್ಕಲಿಗ ನಾಯಕರಾಗಿ ಬೇಡ, ಡಿ.ಕೆ. ಶಿವಕುಮಾರ್ ಅವಶ್ಯಕತೆ ಪಕ್ಷಕ್ಕೆ ಇದ್ದರೆ ಸಿಎಂ ಪಟ್ಟ ಕೊಡಬೇಕು ಎಂದು ಆಗ್ರಹ ಮಾಡಿದರು.
ಕಾಂಗ್ರೆಸ್ ಅಸ್ತಿತ್ವದಲ್ಲಿರಬೇಕದರೆ ಡಿಕೆಶಿ ಸಿಎಂ ಮಾಡಿ:
ಪ್ರಧಾನ ಕಾರ್ಯದರ್ಶಿ ಗಂಗಾಧರ್ ಮಾತನಾಡಿ, ಪಕ್ಷ ನಿಷ್ಟೆ ತೋರಿದ ಡಿ.ಕೆ.ಶಿವಕುಮಾರ ಅವರಿಗೆ ಸಿಎಂ ಪಟ್ಟ ಕೊಡಬೇಕು. ಹೈಕಮಾಂಡ್‌ಗೆ ಕೇಳಿಕೊಳ್ಳೋದು ಇಷ್ಟೇ. ಬೇರೆ ರಾಜ್ಯದ ಚುನಾವಣೆಯಾಗಿರಲಿ, ಇಡಿ ರೇಡ್ ಆಗಿರಲಿ, ಯಾವುದನ್ನು ಮನಸಿಗೆ ಹಾಕಿಕೊಳ್ಳದೇ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿ ಇರಬೇಕಾದರೆ ಡಿಕೆಗೆ ಸಿಎಂ ಕೊಡಬೇಕು ಎಂದು ಒತ್ತಾಯಿಸಿದರು.
ಸಿದ್ದಾರಾಮಯ್ಯನವರೇ ನೀವೇ ಡಿಕೆಶಿಗೆ ಸಿಎಂ ಸೀಟಿನಲ್ಲಿ ಕೂರಿಸಿ:
ಒಕ್ಕಲಿಗ ಸಂಘ ಮಾಜಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ರೆಡ್ಡಿ ಮಾತನಾಡಿ, ಎರಡೂವರೆ ವರ್ಷ ಸಿದ್ದರಾಮಯ್ಯ ಎರಡೂವರೆ ವರ್ಷ ಡಿಕೆಗೆ ಅಂತಾ ಒಪ್ಪಂದ ಆಗಿತ್ತು. ಹೀಗಾಗಿ ನಾವು ಮೊದಲ ಭಾಗದಲ್ಲಿ ಒಪ್ಪಿಕೊಂಡಿದ್ದೆವು. ಡಿಕೆಶಿ ಸಿಎಂ ಆಗ್ತಾರೆ ಅನ್ನುವ ಕಾರಣಕ್ಕೆ ಒಕ್ಕಲಿಗ ಮತಗಳು ಹರಿದು ಬಂತು. ನಾವು ಅತಿ ಹೆಚ್ಚು ಮತ ಕೊಟ್ಟವರು. ಹೀಗಾಗಿ ಕೊಟ್ಟ ಮಾತಿನಂತೆ ಸಿಎಂ ಆಗ್ಬೇಕು ಎಂದು ನಮ್ಮ ಒತ್ತಾಯ ಮಾಡುತ್ತೇವೆ. ನಾವು ಸಿಡಿದೇಳುವ ಮುನ್ನ ಡಿಕೆಗೆ ಪಟ್ಟ ಕೊಡಬೇಕು. 2028ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು. ಸಿದ್ದರಾಮಯ್ಯನವರೇ, ನೀವೇ ಶಿವಕುಮಾರ್ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿ ಎಂದು ಆಗ್ರಹಿಸಿದರು.


