ಕರ್ನಾಟಕ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಸೂತ್ರದ ಗೊಂದಲ ನಿವಾರಿಸಲು ಕಾಂಗ್ರೆಸ್ ಹೈಕಮಾಂಡ್ ಸಿದ್ಧತೆ ನಡೆಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ.

ಬೆಂಗಳೂರು (ನ.27): ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಅಧಿಕಾರ ಹಂಚಿಕೆ ಸೂತ್ರ ಮತ್ತು ಆಡಳಿತದ ಮುಂದಿನ ನಡೆಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಸಿದ್ಧತೆ ನಡೆಸಿದೆ. ಈ ಮಹತ್ವದ ನಿರ್ಧಾರಕ್ಕೂ ಮುನ್ನ ಪಕ್ಷದ ಉನ್ನತ ಮಟ್ಟದ ನಾಯಕರ ಸಭೆ ನಡೆಸಲು ನಿರ್ಧರಿಸಲಾಗಿದ್ದು, ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಖಚಿತಪಡಿಸಿದ್ದಾರೆ.

ಪಕ್ಷದಲ್ಲಿನ ಯಾವುದೇ ರೀತಿಯ ಗೊಂದಲಗಳನ್ನು ನಿವಾರಿಸಿ, ಸುಗಮ ಆಡಳಿತಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಮೊದಲು ಸುದೀರ್ಘ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.

ಸಿಎಂ-ಡಿಸಿಎಂಗೆ ಸದ್ಯದಲ್ಲೇ ಆಹ್ವಾನ

ಪಕ್ಷದ ಉನ್ನತ ನಾಯಕರು ಸಮಾಲೋಚನೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿಗೆ ಆಗಮಿಸುವಂತೆ ಆಹ್ವಾನ ನೀಡಲಾಗುತ್ತದೆ. ಅವರನ್ನೂ ಕರೆಸಿ, ಎಲ್ಲ ವಿಷಯಗಳನ್ನು ಚರ್ಚಿಸಿ ಇತ್ಯರ್ಥಗೊಳಿಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ದೆಹಲಿಗೆ ಹೊರಡುವ ಮುನ್ನ ಮಾತನಾಡಿದ ಖರ್ಗೆ, 'ನಾನು ದೆಹಲಿಗೆ ಹೋದ ಮೇಲೆ ಇಂಪಾರ್ಟೆಂಟ್ ಮೂರ್ನಾಲ್ಕು ಜನರನ್ನ ಕರೆಸಿ ಮಾತಾಡ್ತೀನಿ. ಯಾವ ರೀತಿ ಮುಂದೆ ನಡೆಯಬೇಕು ಅಂತ ತೀರ್ಮಾನ ಮಾಡುತ್ತೇನೆ. ಆಗ ಗೊಂದಲಗಳು ನಿವಾರಣೆ ಆಗುತ್ತವೆ' ಎಂದಿದ್ದಾರೆ. ಅಲ್ಲದೆ, ಸಿಎಂ ಮತ್ತು ಡಿಸಿಎಂ ಅವರನ್ನು ಕರೆಸಿ ಮಾತನಾಡುವ ವಿಚಾರಕ್ಕೆ ಸಂಬಂಧಿಸಿದಂತೆ, ಅವರಿಗೆಲ್ಲಾ ಕರೆಸೇ ಮಾತಾಡಿ ಸೆಟಲ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಮೂಹಿಕ ನಿರ್ಧಾರದ ಮೇಲೆ ಹೈಕಮಾಂಡ್ ತೀರ್ಮಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ, ಎಲ್ಲರೊಂದಿಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಖರ್ಗೆ ತಿಳಿಸಿದ್ದಾರೆ. 'ರಾಹುಲ್ ಗಾಂಧಿ ಕೂಡ ಸಭೆಯಲ್ಲಿ ಇರುತ್ತಾರೆ. ಸಿಎಂ, ಡಿಸಿಎಂ ಇಬ್ಬರೂ ಇರುತ್ತಾರೆ. ಹೈಕಮಾಂಡ್ ಎಂದರೆ ಏಕಾಂಗಿ ಅಲ್ಲ. ಹೈಕಮಾಂಡ್ ಟೀಮ್ ಕುಳಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ' ಎಂದು ಹೇಳುವ ಮೂಲಕ, ಇದು ಸಾಮೂಹಿಕ ತೀರ್ಮಾನವಾಗಿರುತ್ತದೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

ಒಟ್ಟಾರೆಯಾಗಿ, ಕರ್ನಾಟಕ ರಾಜಕೀಯದಲ್ಲಿನ ಹಲವು ತಿಂಗಳ ಕಗ್ಗಂಟಿಗೆ ತೆರೆ ಎಳೆಯಲು ಹೈಕಮಾಂಡ್ ಗಂಭೀರ ಹೆಜ್ಜೆ ಇರಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಭವಿಷ್ಯದ ಆಡಳಿತ ಸೂತ್ರ ಇನ್ನು ಕೆಲವೇ ದಿನಗಳಲ್ಲಿ ದೆಹಲಿಯಿಂದ ಪ್ರಕಟವಾಗುವ ಸಾಧ್ಯತೆ ಇದೆ. ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ದೆಹಲಿಯತ್ತ ಪ್ರಯಾಣ ಬೆಳೆಸಿದ್ದು, ಸದ್ಯದಲ್ಲೇ ಅಧಿಕಾರ ಹಂಚಿಕೆಯ ಸ್ಪಷ್ಟ ಚಿತ್ರಣ ಹೊರಬೀಳಲಿದೆ.