ಕರ್ನಾಟಕದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವಿನ ಅಧಿಕಾರ ಸಂಘರ್ಷ ತಾರಕಕ್ಕೇರಿದ್ದು, ಈ ಕುರಿತು ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ಸಭೆಯಲ್ಲಿ ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. 

ಬೆಂಗಳೂರು (ನ.27): ಕರ್ನಾಟಕದಲ್ಲಿ ಸಿಎಂ ಹಾಗೂ ಡಿಸಿಎಂ ನಡುವೆ ಅಧಿಕಾರ ಸಂಘರ್ಷ ತಾರಕಕ್ಕೆ ಏರಿರುವ ನಡುವೆಯೇ ಇಂದು ಡಿಸಿಎಂ ಡಿಕೆ ಶಿವಕುಮಾರ್‌ ಸಿಎಂ ಆಗುವ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದೆಹಲಿಯಲ್ಲಿ ಇಂದು ನಡೆಯಲಿರುವ ಹೈವೋಲ್ಟೇಜ್ ಸಭೆಯಲ್ಲಿ ಡಿಸಿಎಂ ಅವರ ಸಿಎಂ ಭವಿಷ್ಯ ತೀರ್ಮಾನವಾಗಲಿದೆ. 28 ಅಥವಾ 29 ಕ್ಕೆ ಸಿಎಂ ಹಾಗೂ ಡಿಸಿಎಂಗೆ ದೆಹಲಿಗೆ ಹೈಕಮಾಂಡ್‌ ಬುಲಾವ್‌ ನೀಡುವ ಸಾಧ್ಯತೆ ಇದ್ದು, ಡಿಸೆಂಬರ್ ಅಧಿವೇಶನಕ್ಕೆ ಮುಂಚೆ ಹೈಕಮಾಂಡ್‌ ತನ್ನ ನಿರ್ಧಾರ ತಿಳಿಸಲಿದೆ.

ಇಬ್ಬರನ್ನು ಒಂದೇ ವೇದಿಕೆಗೆ ತಂದು ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಇವತ್ತಿನ ಸಭೆಯಲ್ಲಿ ಕರ್ನಾಟಕ ವಿಚಾರ ಪ್ರಮುಖವಾಗಿ ಚರ್ಚೆ ಆಗಲಿದೆ. ಶಾಸಕರ ಪರೇಡ್, ನಾಯಕರ ವಿರುದ್ದ ಆರೋಪಗಳ, ಸಿಎಂ ಮತ್ತು ಡಿಸಿಎಂ ನಡುವಿನ ಅಸಮಧಾನ ಬಗ್ಗೆಯೂ ಚರ್ಚೆ ನಡೆಯಲಿದೆ. ರಾಹುಲ್ ಗಾಂಧಿ ಸಮ್ಮುಖದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ, ಕೆ ಸಿ ವೇಣುಗೋಪಾಲ ಚರ್ಚೆ ನಡೆಸಲಿದ್ದಾರೆ.

ಸಂಘರ್ಷಕ್ಕೆ ಇಂದು ಬೀಳುತ್ತಾ ತೆರೆ?

ಸಿಎಂ ಸ್ಪಷ್ಟತೆಯೋ ? ಅಥವಾ ಡಿಸಿಎಂ ಕೇಳುವ ಒಪ್ಪಂದವೋ? ಎನ್ನುವ ಬಗ್ಗೆ ನಿರ್ಧಾರವಾಗಲಿದೆ. ಸಂಘರ್ಷಕ್ಕೆ ಮದ್ದು ಅರೆಯುವ ಕೆಲಸಕ್ಕೆ ಹೈಕಮಾಂಡ್ ಸಿದ್ದತೆ ನಡೆದಿದೆ. ಕಾಂಗ್ರೆಸ್ ನ ಹೈಕಮಾಂಡ್ ಎಲ್ಲಾ ನಾಯಕರು ಇಂದು ದೆಹಲಿಯಲ್ಲಿ ಇರಲಿದ್ದಾರೆ. ಇಂದು ಮಧ್ಯಾಹ್ನ‌ 3 ಗಂಟೆಯ ಮೇಲೆ ಬಿಹಾರ ಚುನಾವಣಾ ಸೋಲು ಕುರಿತು ಇಂದಿರಾಭವನದಲ್ಲಿ ಪರಾಮರ್ಶೆ ಸಭೆ ನಡೆಯಲಿದೆ. ಬಿಹಾರದ ಸಭೆಯ ಬಳಿಕ ಕರ್ನಾಟಕದ ವಿಚಾರವೂ ಚರ್ಚೆ ಆಗಲಿದೆ. ಕರ್ನಾಟಕ ಉಸ್ತುವಾರಿ ಸುರ್ಜೇವಾಲ‌ ಕೂಡ ದೆಹಲಿಯಲ್ಲಿ ಇರಲಿದ್ದಾರೆ. ವಾಸ್ತವ ಸ್ಥಿತಿಯ ಬಗ್ಗೆ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಡಲು ಸುರ್ಜೇವಾಲ ಸಿದ್ದತೆ ನಡೆಸಿದ್ದಾರೆ.

ಎಲ್ಲರನ್ನೂ ಕರೆದು ಮಾತನಾಡಿಸ್ತೀನಿ ಎಂದ ಖರ್ಗೆ

ನಾನು ದೆಹಲಿಗೆ ಹೋದ ಮೇಲೆ ಪ್ರಮುಖವಾಗಿರು ಮೂರ್ನಾಲ್ಕು ಜನರನ್ನ ಕರೆಸಿ ಮಾತಾಡ್ತಿನಿ. ಮೂರ್ನಾಲ್ಕು ಜನರಿಗೆ ಕರೆಸಿ ಮಾತಾಡ್ತೀನಿ. ಯಾವ ರೀತಿ ಮುಂದೆ ನಡೆಯಬೇಕು ಅಂತ ತೀರ್ಮಾನ ಮಾಡ್ತೀನಿ. ಸಿಎಂ-ಡಿಸಿಎಂ ಅವರನ್ನು ಕರೆಸಿಯೇ ಮಾತಾಡಿ ಸೆಟಲ್ ಮಾಡ್ತೀವಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳುವ ಮುನ್ನ ಹೇಳಿದ್ದಾರೆ.