Karnataka Congress power sharing row: ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.
ಕುಂದೂರು(ನ.26): ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಹಂಚಿಕೆ ಕುರಿತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕುಂದೂರಿನ ಬಿಜಿಎಸ್ ಮಠದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪರವಾಗಿ ಬ್ಯಾಟಿಂಗ್ ಮಾಡಿದ ಶ್ರೀಗಳು, ಡಿಕೆಶಿ ಅವರು ಉಳಿದ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಅಭಿಲಾಷೆ ನಮಗಿದೆ ಎಂದು ಸ್ಪಷ್ಟಪಡಿಸಿದರು.
ಡಿಕೆ ಶಿವಕುಮಾರ್ ಪರ ನಿರ್ಮಲಾನಂದ ಶ್ರೀಗಳು ಬ್ಯಾಂಟಿಂಗ್:
ಸದ್ಯ ರಾಜಕೀಯ ಬೆಳವಣಿಗೆಯನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಡಿಕೆ ಶಿವಕುಮಾರ್ ಅವರು ಸಿಎಂ ಆಗುವ ಆಕಾಂಕ್ಷಿಯಾಗಿದ್ದು, ಪ್ರಸ್ತುತ ಡಿಸಿಎಂ ಆಗಿದ್ದಾರೆ. ನಮಗೆ ಎರಡೂವರೆ ವರ್ಷ ಆದ ಮೇಲೆ ನಮ್ಮ ಸಮುದಾಯದವರು (ಒಕ್ಕಲಿಗ ಸಮುದಾಯ) ಸಿಎಂ ಆಗುತ್ತಾರೆ ಎಂದು ಅಂದುಕೊಂಡಿದ್ದೆವು. ಡಿಕೆ ಶಿವಕುಮಾರ್ ಶಿಸ್ತಿನ ಸಿಪಾಯಿ ಹಾಗೂ ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಸಾವಿರಾರು ಭಕ್ತರು ಮಠಕ್ಕೆ ಕರೆ ಮಾಡಿ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಡಿಕೆ ಶಿವಕುಮಾರ್‌ಗೆ ರಾಜಕೀಯ ಒಳಸುಳಿ ಚೆನ್ನಾಗಿ ಗೊತ್ತಿದೆ:
ಅಧಿಕಾರ ಹಂಚಿಕೆ ಕುರಿತು ಜನರು ಚರ್ಚೆ ಮಾಡುತ್ತಿರುವ ಈ ಸಂದರ್ಭದಲ್ಲಿ, ಡಿಕೆಶಿಯವರಿಗೆ ರಾಜಕೀಯ ಒಳಸುಳಿಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. ರಾಜಕೀಯ ಅಸ್ಥಿರತೆ ಉಂಟಾದರೆ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ ಮತ್ತು ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು.
ಹೈಕಮಾಂಡ್ ಶೀಘ್ರ ಬಿಕ್ಕಟ್ಟು ಬಗೆಹರಿಸಲಿ:
ರಾಜ್ಯದ ಹಿತದೃಷ್ಟಿಯಿಂದ ಹೈಕಮಾಂಡ್ ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು. ಅಲ್ಲದೆ, ಬಿಕ್ಕಟ್ಟು ಮುಂದುವರೆದರೆ, ಶ್ರೀಮಠದ ಸದ್ಭಕ್ತರಾಗಿರುವ ಡಿಕೆ ಶಿವಕುಮಾರ್ ಅವರು ನಮ್ಮೊಂದಿಗೆ ಚರ್ಚಿಸುತ್ತಾರೆ ಎಂದು ಶ್ರೀ ನಿರ್ಮಲಾನಂದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.


