Asianet Suvarna News Asianet Suvarna News

ಶಾಸಕರಿಗೆ ಮೋಟಿವೇಶನ್‌! ಬಿಸಿಬಿಸಿ ಚರ್ಚೆ ಹುಟ್ಟು ಹಾಕಿದ ಸ್ಪೀಕರ್‌ ಖಾದರ್ ನಡೆ!

  • ವಿಧಾನಸಭೆ ಚುನಾವಣೆಯಲ್ಲಿ 70ಕ್ಕೂ ಹೆಚ್ಚು ಶಾಸಕರು ಮೊದಲ ಬಾರಿಗೆ ಆಯ್ಕೆ
  • ನೆಲಮಂಗಲದ ಧರ್ಮಸ್ಥಳ ಕ್ಷೇಮವನದಲ್ಲಿ ಶಾಸಕರಿಗೆ 3 ದಿನಗಳ ತರಬೇತಿ ಶಿಬಿರ
  • ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮೋಟಿವೇಶನ್ ಸ್ಪೀಕರ್ಸ್!
ut khader plans training for mlas by religious leaders
Author
First Published Jun 22, 2023, 9:14 PM IST

ಕಳೆದ ವಿಧಾನಸಭೆ ಚುನಾವಣೆಯಲ್ಲಿ 70ಕ್ಕೂ ಹೆಚ್ಚು ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಸಹಜವಾಗಿ, ಅವರ ತರಬೇತಿ ಸ್ಪೀಕರ್‌ ಹೊಣೆ. ಶಾಸಕರನ್ನು ಉತ್ತಮ ಸಂಸದೀಯ ಪಟುವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅವರಿಗೆ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ಬಾರಿ ನೂತನ ಶಾಸಕರಿಗೆ 3 ದಿನಗಳ ತರಬೇತಿ ಶಿಬಿರವನ್ನು ನೆಲಮಂಗಲದಲ್ಲಿರುವ ಧರ್ಮಸ್ಥಳ ಕ್ಷೇಮವನದಲ್ಲಿ ಆಯೋಜಿಸಲಾಗಿದೆ. ನೂತನ ಶಾಸಕರ ಜ್ಞಾನವೃದ್ಧಿ ಹಾಗೂ ಆರೋಗ್ಯಕ್ಕೆ  ಸಂಬಂಧಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶಾಸಕರ ಹೊಣೆಗಾರಿಕೆ, ಹಕ್ಕು & ಕರ್ತವ್ಯ, ಶಾಸನ ರಚನೆ, ಕಲಾಪದಲ್ಲಿ ಭಾಗವಹಿಸುವಿಕೆ, ವಿಧಾನ ಮಂಡಲದ ಕಾರ್ಯಚಟುವಟಿಕೆ, ಸಮಿತಿಗಳು, ಶೂನ್ಯವೇಳೆ, ಪ್ರಶ್ನೋತ್ತರ ಮತ್ತಿತರ ಹತ್ತು ಹಲವು ವಿಚಾರಗಳ ಬಗ್ಗೆ ಇಲ್ಲಿ ತರಬೇತಿ ನೀಡುವ ಉದ್ದೇಶ ಸ್ಪೀಕರ್‌ ಯು.ಟಿ. ಖಾದರ್‌ರವರದ್ದಾಗಿದೆ.

Also Read: ಜು.3ರಿಂದ 10 ದಿನ ವಿಧಾನಸಭೆ ಅಧಿವೇಶನ: ಜು.7ಕ್ಕೆ ಬಜೆಟ್‌ ಮಂಡನೆಜು.3ರಿಂದ 10 ದಿನ ವಿಧಾನಸಭೆ ಅಧಿವೇಶನ: ಜು.7ಕ್ಕೆ ಬಜೆಟ್‌ ಮಂಡನೆ

ಶಾಸಕರ ತರಬೇತಿ ಸಭೆಗೆ ಸಂಪನ್ಮೂಲ ವ್ಯಕ್ತಿಗಳ ಪಟ್ಟಿಯಲ್ಲಿ ಸಿಎಂ, ಮಾಜಿ ಸಿಎಂಗಳು, ಹಿರಿಯ ಅನುಭವಿ ಶಾಸಕರು ಕೂಡಾ ಇದ್ದಾರೆ. ಆದರೆ ಸ್ಪೀಕರ್‌ ಯು.ಟಿ. ಖಾದರ್‌ ನಡೆ ಈಗ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.  ಕಾರಣ ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ 'ಮೋಟಿವೇಶನ್‌' ಭಾಷಣಕಾರರ ಪಟ್ಟಿ!  ಧಾರ್ಮಿಕ ಕ್ಷೇತ್ರದಿಂದ  ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಡಾ. ಗುರುರಾಜ ಕರ್ಜಗಿ, ಜಮಾತೆ ಇಸ್ಲಾಮಿ ಹಿಂದ್‌ನ ಮುಹಮ್ಮದ್‌ ಕುಂಞ, ಆರ್ಟ್‌ ಆಫ್‌ ಲಿಂವಿಂಗ್‌ನ ರವಿಶಂಕರ್‌ ಗುರೂಜಿ ಹೆಸರು ಈ  'ಮೋಟಿವೇಶನ್‌  ಸ್ಪೀಕರ್‌'ಗಳ ಪಟ್ಟಿಯಲ್ಲಿದೆ. 

ಸೋಶಿಯಲ್‌ ಮೀಡಿಯಾದಲ್ಲಿ ಈ ವಿಚಾರವಾಗಿ ಡಿಬೇಟ್‌ ನಡೆಯುತ್ತಿದ್ದು, ಯಾರ್‌ ಏನಂದ್ರು ನೋಡೋಣ ಬನ್ನಿ...


ಕುಂತಾಡಿ ನಿತೇಶ್‌ ಬರೆಯುತ್ತಾರೆ: 'ಮಾನ್ಯ ಸ್ಪೀಕರ್ ಅವ್ರೇ , ಶಾಸನ ಸಭೆಯ ಕುರಿತಾದ  ಇಷ್ಟು ಸವಿಸ್ತಾರವಾದ ಕೃತಿ ಬರೆದ ಬಿ ಎಲ್ ಶಂಕರ್ ತರದವರು ನಿಮ್ಮಲ್ಲೇ  ಇರುವಾಗ  ಶಾಸನ ರಚನೆಗೂ ಅವರ ಚಟುವಟಿಕೆಗಳಿಗೂ ಸಂಬಂಧ ಇರದವರನ್ನು ಕರೆದು ಪಾಠ ಹೇಳಿಸಿಕೊಳ್ಳುತ್ತಿರುವುದು ಯಾವ ಕರ್ಮಕ್ಕೆ ಮಾರಾಯರೇ' 

Also Read: ಸಂಸತ್ ಚುನಾವಣೆ: 450 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳ ನೇರ ಸ್ಪರ್ಧೆಸಂಸತ್ ಚುನಾವಣೆ: 450 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳ ನೇರ ಸ್ಪರ್ಧೆ

ಇಸ್ಮತ್‌ ಪಜೀರ್‌ ಬರೆಯುತ್ತಾರೆ: ನಮ್ಮ ಸಂವಿಧಾನಕ್ಕಿಂತ ದೊಡ್ಡ ಮೋಟಿವೇಟರ್ ಯಾವುದೂ ಇಲ್ಲ. ಸಂವಿಧಾನವನ್ನು ಅರ್ಥೈಸಲು ಜಸ್ಟಿಸ್ ನಾಗಮೋಹನ್ ದಾಸ್ ಅವರು ಸಂಪಾದಿಸಿದ " ಸಂವಿಧಾನ ಓದು" ಎಂಬ ಚಿಕ್ಕ ಪುಸ್ತಕವನ್ನು ಎಲ್ಲಾ ಜನಪ್ರತಿನಿಧಿಗಳಿಗೆ ಓದಲು ಕೊಟ್ಟು ಒಂದು ವಾರದ ಬಳಿಕ ನಮ್ಮ ಸಂವಿಧಾನ ತಜ್ಞರು ವಿಧಾನ ಸಭೆಯಲ್ಲೇ ಪ್ರಶ್ನೆಗಳನ್ನು ಕೇಳಿ  ಶಾಸಕರ ಮೌಲ್ಯಮಾಪನ ಮಾಡುವಂತಹ ವ್ಯವಸ್ಥೆ ಮಾಡಿಸಿ. ಶಾಸಕರು ಸಂವಿಧಾನವನ್ನು ಅರಿಯುವುದರಿಂದ ಶಾಸಕರಿಗೂ ರಾಜ್ಯಕ್ಕೂ ಒಳ್ಳೆಯದಾಗಬಹುದು. ಈ ಧಾರ್ಮಿಕ ವ್ಯಕ್ತಿಗಳ ಬೋಧನೆ ಮಸೀದಿ, ಮಂದಿರ ಮತ್ತು ಚರ್ಚುಗಳಲ್ಲಿದ್ದರೆ ಸಾಕು. ನಾವು ಶಾಸಕರನ್ನು ಚುನಾಯಿಸುವ ಹಕ್ಕನ್ನು ನೀಡಿದ್ದು ಮತ್ತು ನಿಮಗೆ ಅಧಿಕಾರ ನೀಡಿದ್ದು ನಮ್ಮ ಸಂವಿಧಾನವೇ ಹೊರತು ನಿಮ್ಮ ಧರ್ಮಗಳಲ್ಲ.

 


ಬಿ.ಎಂ. ಹನೀಫ್‌ ಹೇಳುತ್ತಾರೆ:  ಸನ್ಮಾನ್ಯ ಸ್ಪೀಕರ್ ಉಪ್ಪಳತೋಟ (ಯುಟಿ) ಖಾದರ್ ಅವರ ಬಗ್ಗೆ ಅನೇಕ ಗೆಳೆಯರು ಸಿಟ್ಟಿಗೆದ್ದು ಕಟು ಟೀಕೆ ಮಾಡುತ್ತಿದ್ದಾರೆ. ಅದರಲ್ಲೂ ಚುನಾವಣೆಯ ಸಂದರ್ಭದಲ್ಲಿ ಅವರನ್ನು ಹಾಡಿ ಹೊಗಳಿದವರು ಈಗ ವಿಪರೀತ ಸಿಟ್ಟಿಗೆದ್ದಿದ್ದಾರೆ. ಶಾಸಕರಿಗೆ ಮೋಟಿವೇಶನ್ ತರಗತಿ ತೆಗೆದುಕೊಳ್ಳಲು ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ, ಶ್ರೀ ವೀರೇಂದ್ರ ಹೆಗ್ಗಡೆ, ಗುರುರಾಜ ಕರಜಗಿ, ಮೊಹಮ್ಮದ್ ಕುಂಞಿ ಮುಂತಾದವರನ್ನು ಸ್ಪೀಕರ್ ಕರೆಸುತ್ತಿರುವುದು ಈ ಸಿಟ್ಟಿಗೆ ಕಾರಣ.
ನನಗೆ ತಿಳಿದಿರುವಂತೆ ಯುಟಿ ಖಾದರ್ ಅವರು ಎಲ್ಲರಿಂದಲೂ ಒಳ್ಳೆಯವರು ಅನ್ನಿಸಿಕೊಂಡ ಜನ. ಅವರ ಕ್ಷೇತ್ರದಲ್ಲಿ ಇಡೀ ರಾಜ್ಯದಲ್ಲೇ ಅತ್ಯಧಿಕ ಶೇಕಡಾವಾರು (ಶೇಕಡಾ 61) ಮುಸ್ಲಿಂ ಮತದಾರರಿದ್ದಾರೆ. ಹಾಗೆಂದು ಅವರು ಮುಸ್ಲಿಂ ಮತದಾರರನ್ನೇ ನಂಬಿ ಕುಳಿತವರಲ್ಲ. ಎಲ್ಲ ಧರ್ಮಗಳ ಆರಾಧನಾಲಯಕ್ಕೂ ಭೇಟಿ ಕೊಟ್ಟು ಅವರ ಜೊತೆಗೆ ಬೆರೆಯುತ್ತಾರೆ. ಎಲ್ಲ ಧರ್ಮದ ಮತದಾರರೂ ಅವರಿಗೆ ಮತ ಕೊಡುತ್ತಾರೆ.
ವೈಯಕ್ತಿಕವಾಗಿ ಅವರು ಬಿಜೆಪಿ, ಆರೆಸೆಸ್ ನವರ ಜೊತೆಗೂ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ಸಾರೆ. ಆರೆಸೆಸ್ ನ ಪ್ರಭಾವಶಾಲಿ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರ ಜೊತೆಗೂ ಖಾದರ್ ಸಂಪರ್ಕ, ಸಂಬಂಧ ಚೆನ್ನಾಗಿದೆ. ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುವುದರಲ್ಲೂ ಖಾದರ್ ಅವರಿಗೆ ತಕರಾರೇನಿಲ್ಲ. ಹಿಂದೂ ದೇವಾಲಯಗಳಿಗೆ ಭೇಟಿ ಕೊಟ್ಟು ಅಲ್ಲಿ ಪ್ರಸಾದ ಸ್ವೀಕರಿಸಿದಾಗ, ಅವರ ಕ್ಷೇತ್ರದಲ್ಲೇ ಕಟ್ಟಾ ಮುಸ್ಲಿಮರು ಅನೇಕರು ಬಹಿರಂಗವಾಗಿ ಟೀಕಿಸಿದ್ದಿದೆ. ಖಾದರ್ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. 
ನಾನೊಮ್ಮೆ ಈ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, "ಧರ್ಮ ಬೇರೆ, ರಾಜಕೀಯ ಬೇರೆ. ರಾಜಕೀಯದಲ್ಲಿ ನಾವು ಎಲ್ಲ ಮತದಾರರ ಭಾವನೆಗಳನ್ನೂ ಗೌರವಿಸಬೇಕು. ನಮಗೆ ಎಲ್ಲರೂ ಒಂದೇ. ನಮ್ಮವರು ಧರ್ಮವನ್ನು ಅತಿಯಾಗಿ ತಲೆಗೆ ಹಚ್ಚಿಕೊಳ್ಳುವುದು ಸರಿಯಲ್ಲ" ಅಂದಿದ್ದರು.
ಇನ್ನು ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ, ಬಂಡವಾಳವಾದ, ಧಾರ್ಮಿಕ ಬಂಡವಾಳವಾದ ಮುಂತಾದ ನಮ್ಮ ಗೆಳೆಯರ ವಾದಗಳು ಖಾದರ್ ಅವರಿಗೆ ಅಷ್ಟಾಗಿ ಅರ್ಥ ಆಗುವ ಸಾಧ್ಯತೆ ಕಡಿಮೆ. ವೈಯಕ್ತಿಕವಾಗಿ ಅವರು ಕೋಮುವಾದಿ ಅಲ್ಲ. ಆದರೆ ಚತುರ ರಾಜಕಾರಣಿ. ಈ ಸಲ ಚುನಾವಣೆಗೆ ಆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಆಯ್ಕೆ ನಡೆದದ್ದರಲ್ಲಿ ಖಾದರ್ ಕೈವಾಡವೂ ಇತ್ತು ಎಂದು ಅವರ ಬೆಂಬಲಿಗರೇ ಹೆಮ್ಮೆಯಿಂದ ಹೇಳಿದ್ದನ್ನೂ ನಾನು ಕೇಳಿಸಿಕೊಂಡಿದ್ದೇನೆ. 
ಧಾರ್ಮಿಕ ಬಂಡವಾಳವಾದ, ಧರ್ಮ ನಿರಪೇಕ್ಷತೆ ಮುಂತಾದ ದೊಡ್ಡ ಶಬ್ದಗಳ ಬಗ್ಗೆ ಅವರು ಅಧ್ಯಯನ ಮಾಡಿದವರೂ ಅಲ್ಲ, ಅದರ ಬಗ್ಗೆ ಅಷ್ಟು ಖಚಿತ ವೈಜ್ಞಾನಿಕ ತಿಳುವಳಿಕೆಯೂ ಅವರಿಗೆ ಇದ್ದಂತಿಲ್ಲ. 
"ಈಗ ಏನು? ದೇವನೂರು ಅವರನ್ನು, ಪುರುಷೋತ್ತಮ ಬಿಳಿಮಲೆ ಅವರನ್ನು ಶಾಸಕರಿಗೆ ಉಪನ್ಯಾಸ ಕೊಡಿಸಲು ಕರೆಯಬೇಕಾ? ಕರೆಯೋಣ, ಅವರೂ ನಮ್ಮವರೇ.‌ ನಾವು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕು" ಎಂದೂ ಖಾದರ್ ಅವರು ನಾಳೆ ಹೇಳುವುದು ಖಚಿತ.
ಅವರದ್ದೇನಿದ್ದರೂ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಾದರಿಯ ರಾಜಕಾರಣ.
ಕೊನೆಯ ಮಾತು: ಈ ಮೋಟಿವೇಶನ್ ಸ್ಪೀಕರುಗಳ ಪೈಕಿ ಮೊಹಮದ್ ಕುಂಞಿ ಅವರು ವೈಯಕ್ತಿಕವಾಗಿ  ಸಜ್ಜನ. ಅವರು ಜಮಾತೆ ಇಸ್ಲಾಮಿ ಸಂಘಟನೆಯವರು ಅನ್ನೋದು ನಿಜ. ಆದರೆ ಗೆಳೆಯರು ಎಲ್ಲರನ್ನೂ ಒಂದೇ ಗ್ರೈಂಡರ್ ನಲ್ಲಿ ಹಾಕಿ ರುಬ್ಬುವುದು ಸರಿಯಲ್ಲ. ಇ‌ನ್ನು ಕೆಲವರು ಬರೆದಂತೆ ಇವರು ಯೆನಪೋಯ ಅಲ್ಲ. ಶಾಂತಿ ಪ್ರಕಾಶನದ ಮೊಹಮದ್ ಕುಂಞಿ.

 

ಸ್ಪೀಕರ್ ಯು ಟಿ ಖಾದರ್ ನೂತನ ಶಾಸಕರಿಗೆ ಏರ್ಪಡಿಸಿರುವ ಶಿಬಿರದಲ್ಲಿ ಪ್ರೇರಣಾ ಉಪನ್ಯಾಸ ನೀಡಲು ವಿಶ್ವ ಹಿಂದೂಪರಿಷತ್ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಧರ್ಮಸ್ಥಳದ ಡಾ. ವಿರೇಂದ್ರ ಹೆಗ್ಡೆ, ಕಾರ್ಪೊರೇಟ್ ಆಧ್ಯಾತ್ಮದ ವ್ಯಾಪಾರಿ ರವಿಶಂಕರ್ ಗುರೂಜಿ, ಜಮಾತೆ ಇಸ್ಲಾಮಿ ಹಿಂದ್ ನ ಮುಹಮ್ಮದ್ ಕುಂಞ, ಬಲಪಂಥೀಯ ಬರಹಗಾರ ಗುರುರಾಜ ಕರ್ಜಗಿಯವರನ್ನು ಆಯ್ಕೆ ಮಾಡಿದ್ದಾರೆ.

ಕೋಮುವಾದಿ ಸರಕಾರವನ್ನು ಸೋಲಿಸಲು ನಿಸ್ವಾರ್ಥವಾಗಿ ನಿರಂತರ ಶ್ರಮಿಸಿದ ನಾಡಿನ ಖ್ಯಾತನಾಮ ಸಾಹಿತಿಗಳೂ, ಉಪನ್ಯಾಸಕರೂ, ಬರಹಗಾರರೂ ಆದಂತಹ ದೇವನೂರ ಮಹಾದೇವ, ರಹಮತ್ ತರೀಕೆರೆ, ಜಸ್ಟೀಸ್ ನಾಗಮೋಹನ ದಾಸ್, ಪುರುಷೋತ್ತಮ ಬಿಳಿಮಲೆ, ಡಾ. ವಿಜಯಮ್ಮ, ಬರಗೂರು ರಮಾಚಂದ್ರಪ್ಪ, ಬಂಜಗೆರೆ ಜಯಪ್ರಕಾಶ ಮತ್ತಿತರರು ಇನ್ನು ಹಿಮಾಲಯಕ್ಕೆ ಹೊರಡುವುದು ಲೇಸು. ಅವರ ಮಾತುಗಳು "ಸೆಕ್ಯುಲರ್" ಸರಕಾರದ ಸಂದರ್ಭದಲ್ಲೂ ಪ್ರೇರಣೆ ಪಡೆಯುವಂತದ್ದಲ್ಲ, ಅದರ ಅಗತ್ಯ ಕರ್ನಾಟಕದ ಶಾಸಕರುಗಳಿಗೆ ಇಲ್ಲ ಎಂದು ಗೌರವಾನ್ವಿತ ಸ್ಪೀಕರ್ ರೂಲಿಂಗ್ ನೀಡಿದಂತಾಗಿದೆ.

 

ಶಾಸಕರಿಗೆ ಧಾರ್ಮಿಕ ಹಿನ್ನೆಲೆ ವ್ಯಕ್ತಿಗಳಿಂದ ಮೋಟಿವೇಶನ್ ಅಗತ್ಯ ಇದೆಯಾ? ಅಥ್ವಾ ಧರ್ಮಸೂಕ್ಷತೆ ಬಗ್ಗೆ ಅರಿವು ಮೂಡಿಸಿದರೆ ತಪ್ಪೇನು? ಸಂವಿಧಾನದ ಬಗ್ಗೆ ಸಂವಿಧಾನ ತಜ್ಞರಿಂದ ತರಬೇತಿ  ಸಾಲದೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ಸೋಶಿಯಲ್‌ ಮೀಡಿಯಾದಲ್ಲಿ ಬಿಸಿಯೇರಿಸಿದೆ. ನೀವ್‌ ಏನಂತೀರಿ?
 

Follow Us:
Download App:
  • android
  • ios