ನೂತನ ಶಾಸಕರಿಗೆ ಮೂರು ದಿನ ತರಬೇತಿ ಶಿಬಿರ: ಸ್ಪೀಕರ್ ಯು.ಟಿ.ಖಾದರ್
ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದ 70 ಮಂದಿ ಶಾಸಕರಿಗೆ ಜೂ.26 ರಿಂದ 28ರವರೆಗೆ ಮೂರು ದಿನಗಳ ಕಾಲ ನೆಲಮಂಗಲದ ಕ್ಷೇಮವನದಲ್ಲಿ ತರಬೇತಿ ಶಿಬಿರ ಆಯೋಜಿಸಿರುವುದಾಗಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಬೆಂಗಳೂರು (ಜೂ.22): ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದ 70 ಮಂದಿ ಶಾಸಕರಿಗೆ ಜೂ.26 ರಿಂದ 28ರವರೆಗೆ ಮೂರು ದಿನಗಳ ಕಾಲ ನೆಲಮಂಗಲದ ಕ್ಷೇಮವನದಲ್ಲಿ ತರಬೇತಿ ಶಿಬಿರ ಆಯೋಜಿಸಿರುವುದಾಗಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ. ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಗ್ಯ ಸುಸ್ಥಿರತೆ, ಜ್ಞಾನಾಭಿವೃದ್ಧಿ, ವಿಧಾನಸಭೆ ಕಲಾಪಗಳ ನಿಯಮಾವಳಿಗಳ ಕುರಿತು ತರಬೇತಿ ನೀಡಲು ನಿರ್ಧರಿಸಲಾಗಿದೆ. ಜೂ.25 ರಂದು ಸಂಜೆ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ.
ಜೂ.26ರಂದು ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಭಾಗವಹಿಸಲಿದ್ದಾರೆ. ಯುವ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಸದೀಯ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಯುವ ಜನರ ಆಲೋಚನೆಗಳು, ದೂರದೃಷ್ಟಿ, ಪ್ರತಿಭೆ ಗುರುತಿಸಲು ಧರ್ಮಸ್ಥಳದ ಕ್ಷೇಮವನದಲ್ಲಿ ಶಿಬಿರ ಆಯೋಜಿಸಲಾಗಿದೆ.
ರಾಜ್ಯದ ದೇವಸ್ಥಾನಗಳಲ್ಲಿ ಹಿರಿಯ ನಾಗರೀಕರಿಗೆ ಶೀಘ್ರ ದೇವರ ದರ್ಶನ ಭಾಗ್ಯ!
ಮೂರು ದಿನಗಳ ಕಾಲ ಪ್ರತಿ ದಿನ ಬೆಳಗ್ಗೆ 6 ರಿಂದ 9 ಗಂಟೆವರೆಗೆ ಆರೋಗ್ಯ ಸಂಬಂಧಿ ಚಟುವಟಿಕೆ ಇರಲಿದೆ. ಬೆಳಗ್ಗೆ 10 ರಿಂದ ಸಂಜೆವರೆಗೆ ಹಿರಿಯ ಸದಸ್ಯರಿಂದ ವಿವಿಧ ವಿಷಯಗಳ ಕುರಿತು ಮಾಹಿತಿ ಕೊಡಿಸಲಾಗುವುದು. ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಪ್ರತ್ಯೇಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ನೂತನ ಶಾಸಕರ ಜತೆ ಸಂವಾದ ಏರ್ಪಡಿಸಲಾಗಿದೆ.
ಶಾಸಕರ ಹಕ್ಕುಗಳು ಮತ್ತು ಕರ್ತವ್ಯಗಳು, ಶಾಸನಗಳ ರಚನೆ ಮತ್ತು ಸದಸ್ಯರ ಭಾಗವಹಿಸುವಿಕೆ, ಶೂನ್ಯವೇಳೆ, ಪ್ರಶ್ನೋತ್ತರ, ಜನಮೆಚ್ಚಿಸುವ ಶಾಸಕನಾಗುವುದು ಹೇಗೆ, ವಿಧಾನಮಂಡಲದ ಸಮಿತಿಗಳು ಮತ್ತು ಸದಸ್ಯರ ಭಾಗವಹಿಸುವಿಕೆ ಸೇರಿದಂತೆ ವಿಧಾನಮಂಡಲದ ಕಾರ್ಯಕಲಾಪಗಳು ಮತ್ತು ಶಾಸಕರ ಜವಾಬ್ದಾರಿಗಳ ಕುರಿತು ಹಿರಿಯ ಸದಸ್ಯರು ತರಬೇತಿ ಶಿಬಿರದಲ್ಲಿ ತಮ್ಮ ಅನುಭವಗಳನ್ನ ಹಂಚಿಕೊಳ್ಳಲಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಮತ್ತೆ 3 'ನಮ್ಮ ಮೆಟ್ರೋ' ಮಾರ್ಗ: ಸರ್ಕಾರಕ್ಕೆ ಪ್ರಸ್ತಾವ
ಬಜೆಟ್ ಬಗ್ಗೆ ಮಾಜಿ ಸಭಾಪತಿ ಬಿ.ಎಲ್. ಶಂಕರ್, ಶಾಸನ ರಚನೆ ಬಗ್ಗೆ ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರ ಹಕ್ಕು ಬಾಧ್ಯತೆಗಳ ಬಗ್ಗೆ ಮಾಜಿ ಸಚಿವ ಟಿ.ಬಿ. ಜಯಚಂದ್ರ, ವಿವಿಧ ವಿಷಯಗಳ ಬಗ್ಗೆ ರಾಜ್ಯಸಭೆ ಸದಸ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಡಾ. ಗುರುರಾಜ ಕರಜಗಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಹಾಜರಿದ್ದರು.