ಜು.3ರಿಂದ 10 ದಿನ ವಿಧಾನಸಭೆ ಅಧಿವೇಶನ: ಜು.7ಕ್ಕೆ ಬಜೆಟ್ ಮಂಡನೆ
ವಿಧಾನಮಂಡಲ ಅಧಿವೇಶನ ಜು.3 ರಿಂದ ಜು.14 ರವರೆಗೆ ನಡೆಯಲಿದೆ. ಜು.3 ರಂದು ಮಧ್ಯಾಹ್ನ 12 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಜು.7 ರಂದು ಬಜೆಟ್ ಮಂಡನೆಯಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಬೆಂಗಳೂರು (ಜೂ.22): ವಿಧಾನಮಂಡಲ ಅಧಿವೇಶನ ಜು.3 ರಿಂದ ಜು.14 ರವರೆಗೆ ನಡೆಯಲಿದೆ. ಜು.3 ರಂದು ಮಧ್ಯಾಹ್ನ 12 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಜು.7 ರಂದು ಬಜೆಟ್ ಮಂಡನೆಯಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜು.3ರಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರ ಭಾಷಣ ಹಾಗೂ ಜು.7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಜೆಟ್ ಮಂಡನೆಯಾಗಲಿದೆ.
16ನೇ ವಿಧಾನಸಭೆಯ ಮೊದಲ ಅಧಿವೇಶನದ ಮುಂದುವರೆದ ಭಾಗವಾಗಿ ಜು.3 ರಂದು ಬಜೆಟ್ ಅಧಿವೇಶನ ಶುರುವಾಗಲಿದೆ. ಒಟ್ಟು 10 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಮೊದಲ ದಿನ ರಾಜ್ಯಪಾಲರ ಭಾಷಣ ನಡೆಯಲಿದೆ. ಬಳಿಕ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಬಳಿಕ ಜು.7 ರಂದು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮೇಲಿನ ಸಾಮಾನ್ಯ ಚರ್ಚೆ ಬಳಿಕ ಅನುದಾನದ ಬೇಡಿಕೆಗಳನ್ನು ಅಂಗೀಕರಿಸಲಾಗುವುದು ಎಂದು ಮಾಹಿತಿ ನೀಡಿದರು.
ನೂತನ ಶಾಸಕರಿಗೆ ಮೂರು ದಿನ ತರಬೇತಿ ಶಿಬಿರ: ಸ್ಪೀಕರ್ ಯು.ಟಿ.ಖಾದರ್
ವಿಧೇಯಕಗಳ ಬಗ್ಗೆಯೂ ಚರ್ಚೆ: ಜತೆಗೆ ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾದ ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ತನ್ಮೂಲಕ ಮತಾಂತರ ನಿಷೇಧ ಕಾಯಿದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಯಂತಹ ಮುಖ್ಯ ತಿದ್ದುಪಡಿ ವಿಧೇಯಕಗಳು ಇದೇ ಅಧಿವೇಶನದಲ್ಲಿ ಮಂಡನೆಯಾಗುವ ಬಗ್ಗೆ ಪರೋಕ್ಷ ಸುಳಿವು ನೀಡಿದರು.
8 ದಿನ ಪ್ರಶ್ನೋತ್ತರ ಕಲಾಪ: ಹತ್ತು ದಿನಗಳ ಕಲಾಪದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಬಜೆಟ್ ಮಂಡನೆ ದಿನ ಹೊರತುಪಡಿಸಿ ಉಳಿದ ಎಂಟು ದಿನಗಳ ಕಾಲ ಪ್ರಶ್ನೋತ್ತರ ಕಲಾಪ ನಡೆಯಲಿದೆ. ಜತೆಗೆ ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆ ಸೇರಿದಂತೆ ಎಲ್ಲಾ ಕಾರ್ಯಕಲಾಪಗಳು ನಡೆಯಲಿವೆ ಎಂದು ಯು.ಟಿ. ಖಾದರ್ ಅವರು ವಿವರಿಸಿದರು.
ರಾಜ್ಯದ ದೇವಸ್ಥಾನಗಳಲ್ಲಿ ಹಿರಿಯ ನಾಗರೀಕರಿಗೆ ಶೀಘ್ರ ದೇವರ ದರ್ಶನ ಭಾಗ್ಯ!
ಸಾವರ್ಕರ್ ಫೋಟೋ ಹಾಗೇ ಇರುತ್ತೆ: ಸುವರ್ಣಸೌಧದ ವಿಧಾನಸಭೆಯಲ್ಲಿ ಅಳವಡಿಸಿರುವ ಸಾವರ್ಕರ್ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ. ಖಾದರ್, ಅಗತ್ಯವಿರುವ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು. ಹಿಂದಿನದ್ದು ಯೋಚನೆ ಮಾಡುತ್ತಾ ಕೂತರೆ ಹಿಂದೆಯೇ ಉಳಿಯುತ್ತೇವೆ. ಹಿಂದೆ ವಿಧಾನಸಭೆ ಹೇಗಿತ್ತೋ ಹಾಗೆಯೇ ಇರಲಿದೆ ಎಂದಷ್ಟೇ ಹೇಳಿದರು. ಈ ಹಿಂದೆ ಬೆಳಗಾವಿ ಸುವರ್ಣಸೌಧದ ವಿಧಾನಸಭೆ ಹಾಲ್‌ನಲ್ಲಿ ವೀರ ಸಾವರ್ಕರ್ ಫೋಟೋ ಅಳವಡಿಕೆ ಖಂಡಿಸಿ ವಿಧಾನಸಭೆ ಕಾರ್ಯ ಕಲಾಪಗಳ ಸಮಿತಿ ಸಭೆಗೆ ಕಾಂಗ್ರೆಸ್ ಸದಸ್ಯರು ಬಹಿಷ್ಕಾರ ಹಾಕಿದ್ದರು. ರಾಜಕೀಯ ಲಾಭಕ್ಕಾಗಿ ಭಾವಚಿತ್ರ ಹಾಕಿದ್ದು, ಇದಕ್ಕೆ ಸೈದ್ಧಾಂತಿಕವಾಗಿ ನಮ್ಮ ವಿರೋಧವಿದೆ ಎಂದು ಅಂದಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿದ್ದ ಯು.ಟಿ. ಖಾದರ್ ಹೇಳಿದ್ದರು.