HD Kumaraswamy slams Congress ಮೈಸೂರಿನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮೈಸೂರು (ನ.17): ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಪರಿಸ್ಥಿತಿ ಏನಾಗಿದೆ ಅಂತಾ ಎಲ್ಲರಿಗೂ ಗೊತ್ತು. ಈ ಸರ್ಕಾರದಲ್ಲಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಕಾಣಿಸುತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಟೀಕಿಸಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಎರಡು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ದೇವಾಲಯಕ್ಕೆ ಭೇಟಿ ನೀಡಿದ್ದೆ. ಮಂಡ್ಯ ಮಳವಳ್ಳಿ ಮದ್ದೂರಿನಲ್ಲಿ ಕಾರ್ಯಕ್ರಮಗಳಿವೆ. ಅವುಗಳನ್ನ ಮುಗಿಸಿಕೊಂಡು ಇಂದು ರಾತ್ರಿ 12 ಗಂಟೆಗೆ ಮತ್ತೆ ದೆಹಲಿಗೆ ಹೋಗಬೇಕಿದೆ ಎಂದು ತಮ್ಮ ಬ್ಯುಸಿ ಕಾರ್ಯಕ್ರಮ, ಪ್ರವಾಸಗಳ ಬಗ್ಗೆ ವಿವರಿಸಿದರು.
ರಾಜ್ಯದ ತೆರಿಗೆ ಹಣ ವ್ಯರ್ಥವಾಗುತ್ತಿದೆ..
ರಾಜ್ಯದ ಜನರ ತೆರಿಗೆ ಹಣವನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾನು ಇವರ ಯೋಜನೆಗಳನ್ನು ನೋಡಿ ಅಸೂಯೆಪಟ್ಟು ಈ ಮಾತು ಹೇಳುತ್ತಿಲ್ಲ. ಆದರೆ ರಾಜ್ಯದ ಜನರ ತೆರಿಗೆ ಹಣ ಅವರಿಗೆ ಸರಿಯಾಗಿ ಬಳಕೆಯಾಗದೆ ಹೇಗೆ ವ್ಯರ್ಥವಾಗುತ್ತಿದೆ ಎಂಬ ಬೇಜಾರಿದೆ. ರಾಜ್ಯದ ಜನಸಮಾನ್ಯರು ಕಟ್ಟಿದ ತೆರಿಗೆ ಹಣದಲ್ಲಿ 1 ಸಾವಿರ ಕೋಟಿ ರೂಪಾಯಿ ಹಣವನ್ನು ಭಾರತ ಜೋಡೋ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಡುತ್ತಿದ್ದಾರೆ! ಇಷ್ಟು ಸಾಲದು ಎಂಬಂತೆ ಈಗ ಪ್ರಧಾನಿ ಬಳಿ 22 ಸಾವಿರ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಲವರು ಪ್ರಧಾನಿ ಮುಂದೆ ಇಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಂಥ ತೀವ್ರ ಬರಗಾಲದ ನಡುವೆಯೂ ಜನರಿಗೆ ಭಿಕ್ಷೆ ರೀತಿ 2500 ಪರಿಹಾರ ಹಣ ಸಮರ್ಪಕವಾಗಿ ತಲುಪಿದೆಯೋ ಇಲ್ಲವೋ ಆದರೆ ಅದೇ ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುವ ಭರಪೂರ ಯೋಜನೆಗಳು ನಡೆಯುತ್ತಿವೆ. ರಾಜ್ಯದ ರೈತರು ಸಂಕಷ್ಟದಲ್ಲಿರುವಾಗ ಇವೆಲ್ಲ ಬೇಕಾ? ಇದು ಈ ಸರ್ಕಾರ ನಾಡಿನ ಜನರ ಬಗ್ಗೆ ಇವರಿಗಿರೋ ಕಾಳಜಿ ಎಂತಹದ್ದು ಅನ್ನೋದು ತೋರಿಸಿದೆ ಎಂದು ವಾಗ್ದಾಳಿ ನಡೆಸಿದರು.
ಹೆಣ್ಣುಮಕ್ಕಳಿಗೆ ಉಚಿತ ಪಯಾಣ, ಗಂಡುಮಕ್ಕಳಿಗೆ ಬರೆ
ಬಸ್ ಪ್ರಯಾಣ ದರ ಏರಿಕೆಯಾಗುತ್ತಲೇ ಇದೆ. ಒಂದು ಕಡೆ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಎಂದು ಹೇಳುವ ಸರ್ಕಾರ ಇನ್ನೊಂದೆ ಗಂಡುಮಕ್ಕಳಿಗೆ ಬರೆ ಟಿಕೆಟ್ ದರ ಹೆಚ್ಚಳ ಮಾಡಿ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಯಾವುದರ ಅಭಿವೃದ್ಧಿಗೆ ಈ ರೀತಿ ಹಣ ಸಂಗ್ರಹಿಸುತ್ತಿದ್ದಾರೆ? 9.5 ಸಾವಿರ ಕೋಟಿ ಕೆಎಸ್ಆರ್ಟಿಸಿಗೆ ಬೇಕು. ಇನ್ನು ಏನೇನು ಮಾಡ್ತಾರೆ, ಯಾವ ಕೊಡುಗೆ ಕೊಡ್ತಾರೆ ನೋಡೋಣ ಎಂದು ವ್ಯಂಗ್ಯ ಮಾಡಿದರು.










