ಹಿರಿಯೂರು ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ಅವಕಾಶ ಕೋರಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಕಳೆದ 15 ವರ್ಷಗಳ ಮತಗಳ ಪರಿಶೀಲನೆ ಮಾಡೋಣ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಬಿಜೆಪಿಗೆ ಮನವಿ ಮಾಡಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಕುಟುಂಬದೊಂದಿಗೆ ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವಚಂಡಿ ಯಾಗ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯೂರಿನಲ್ಲಿ ತಮ್ಮ ಅಭ್ಯರ್ಥಿ ಸ್ಪರ್ಧಿಸಬೇಕು ಎನ್ನುವ ಆಸೆ ಬಿಜೆಪಿಯದ್ದು. ಆದರೆ ಹಿಂದಿನಿಂದಲೂ ಹಿರಿಯೂರು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹೋರಾಟದ ಕ್ಷೇತ್ರ ಎಂದು ಅವರು ತಿಳಿಸಿದರು.
2013ರಲ್ಲಿ ಜೆಡಿಎಸ್ ಅಭ್ಯರ್ಥಿ ಕೇವಲ 1200 ಮತಗಳ ಅಂತರದಲ್ಲಿ ಸೋತಿದ್ದರು, 2018ರಲ್ಲಿ ಬಿಜೆಪಿ ಅಭ್ಯರ್ಥಿ ಅನುಕಂಪದ ಆಧಾರದಲ್ಲಿ ಜಯಗಳಿಸಿದ್ದರು. ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ನ 40 ಸಾವಿರ ಮತಗಳಿವೆ. ಆದ್ದರಿಂದ ಜೆಡಿಎಸ್ ಅಭ್ಯರ್ಥಿ ಜಯಗಳಿಸುವ ಎಲ್ಲಾ ಸಾಧ್ಯತೆಗಳಿವೆ. ಆದರೆ ಅಲ್ಲಿ ನಮಗೆ ಯಾವುದೇ ಪ್ರತಿಷ್ಠೆಯ ಪ್ರಶ್ನೆ ಇಲ್ಲ, ನಾವು ತಾಳ್ಮೆಯಿಂದ ಇದ್ದೇವೆ, ತಾಳ್ಮೆಯಿಂದ ಇರುತ್ತೇವೆ, ಬಿಜೆಪಿ ಜೆಡಿಎಸ್ ಮೈತ್ರಿ ಮುಂದುವರಿಸಿಕೊಂಡು ಹೋಗುವುದಕ್ಕೆ ಆದ್ಯತೆ ನೀಡುತ್ತೇವೆ ಎಂದರು.
ರಾಹುಲ್ ಹೇಳಿಕೆಗೆ ಮಹತ್ವ ಬೇಕಾಗಿಲ್ಲ:
ದೇಶದಲ್ಲೀಗ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುವ ವಾತಾವರಣವಿಲ್ಲ. ಆದ್ದರಿಂದ ತಮ್ಮ ಫೋನ್ ಕದ್ದಾಲಿಸಲಾಗುತ್ತಿದೆ ಎಂಬ ಅವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
15 ವರ್ಷದ ಮತಗಳ ಬಗ್ಗೆ ಪರಿಶೀಲಿಸೋಣ: ಅಶೋಕ್
ಕಳೆದ 15 ವರ್ಷಗಳಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಗಳಿಸಿರುವ ಪಕ್ಷವಾರು ಮತಗಳನ್ನು ಪರಿಶೀಲನೆ ಮಾಡೋಣ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಮಾರ್ಮಿಕವಾಗಿ ಹೇಳಿದ್ದಾರೆ.
ಮುಂಬರುವ ಹಿರಿಯೂರು ಕ್ಷೇತ್ರದ ಉಪಚುನಾವಣೆಗೆ ಎನ್ಡಿಎ ಮಿತ್ರಕೂಟದ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ತೆರೆಮರೆಯಲ್ಲಿ ಜಿದ್ದಾಜಿದ್ದಿ ನಡೆದಿರುವ ಮಧ್ಯೆಯೇ ಅಶೋಕ್ ಅವರ ಈ ಹೇಳಿಕೆ ಕುತೂಹಲ ಮೂಡಿಸಿದೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯೂರು ಉಪಚುನಾವಣೆ ಟಿಕೆಟ್ ನಾವು ಕೇಳುತ್ತಿರುವುದು ನಿಜ. ಈ ಬಗ್ಗೆ ಉಭಯ ಪಕ್ಷಗಳ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಳೆದ 15 ವರ್ಷಗಳಲ್ಲಿ ಬಂದಿರುವ ಮತಗಳನ್ನು ಪರಿಶೀಲನೆ ಮಾಡೋಣ. ಸಮೀಕ್ಷೆ ವಿವರಗಳನ್ನು ಸಹ ಪರಿಶೀಲನೆ ಮಾಡುತ್ತೇವೆ. ಹಿಂದೆ ಜೆಡಿಎಸ್ಗೆ ಎರಡನೇ ಸ್ಥಾನ ಬಂದಿತ್ತು. ನಂತರ ನಾವು ಗೆದ್ದಿದ್ದೇವೆ. ಇದೆಲ್ಲವನ್ನೂ ನೋಡೋಣ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದೇವೆ. ಕಾಂಗ್ರೆಸ್ಸಿಗರು ಒಂದು ಸ್ಥಾನವನ್ನು ಕೂಡ ಗೆದ್ದಿಲ್ಲ. ಅವರು ಶೂನ್ಯ ಗಳಿಸಿದ್ದಾರೆ. ಆ ಶೂನ್ಯ ತೆಗೆದುಕೊಂಡಿರುವ ಅಂಕಪಟ್ಟಿ ತೆಗೆದುಕೊಂಡು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಹೋಗಿದ್ದಾರೆ. ದೆಹಲಿಯಲ್ಲಿ ಪೋಷಕರು ಇದಕ್ಕೆ ಸಹಿ ಹಾಕಬೇಕು. ಅವರು ಸಹಿ ಹಾಕುವರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕು ಎಂದು ಲೇವಡಿ ಮಾಡಿದರು.










