ಸೋನಿಯಾ ಗಾಂಧಿ ತಮ್ಮ 'Belonging: A Journey of Love' ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಕಾರ್ಯಕ್ರಮದಲ್ಲಿ ಇಂಡಿಯಾ ಮೈತ್ರಿಕೂಟದ ಹಲವು ನಾಯಕರು ಭಾಗಿಯಾಗಿದ್ದರು. ರಾಹುಲ್ ಗಾಂಧಿ ತಮ್ಮ ತಂದೆ-ತಾಯಿಯ ಭೇಟಿಯ ಬಗ್ಗೆ ಭಾವುಕವಾಗಿ ಮಾತನಾಡಿದರು.
ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇವತ್ತು ತಮ್ಮ 'Belonging: A Journey of Love' ಪುಸ್ತಕವನ್ನು ಬಿಡುಗಡೆ ಮಾಡಿದರು. ಐಟಿಸಿ ಮೌರ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಮೈತ್ರಿಕೂಟದ ಹಲವಾರು ನಾಯಕರು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಐದನೇ ಸಾಲಿನಲ್ಲಿ ಸಿದ್ದರಾಮಯ್ಯ
ಈ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮದ ಮೊದಲ ಸಾಲಿನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಇಂಡಿಯಾ ಒಕ್ಕೂಟದ ನಾಯಕರುಗಳು ಕೂತಿದ್ದರು. ಎರಡನೇ ಸಾಲಿನಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ರೇವಂತ್ ರೆಡ್ಡಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಹಲವು ನಾಯಕರು ಆಸೀನರಾಗಿದ್ದರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಐದನೇ ಸಾಲಿನಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಫೋಟೋಗಳು ಸುದ್ದಿ ಆಗ್ತಿವೆ
ಇನ್ನು ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಫೋಟೋಗಳು ಸುದ್ದಿಯಲ್ಲಿವೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಈ ಕಾರ್ಯಕ್ರಮದ ಮುಂಚೂಣಿಯಲ್ಲಿ ಪಂಜಾಬ್ನ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಉಪಸ್ಥಿತಿಯೂ ಗಮನ ಸೆಳೆದಿದೆ. ಬೆನ್ನಲ್ಲೇ, ಅಮರಿಂದರ್ ಸಿಂಗ್ ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂಬ ಚರ್ಚೆ ಶುರುವಾಗಿದೆ. ನಾವು ಒಂದು ಸಾಮಾಜಿಕ ಕಾರ್ಯಕ್ರಮಕ್ಕಾಗಿ ಇಲ್ಲಿದ್ದೇವೆ, ಇದು ಒಂದು ಸಾಮಾಜಿಕ ಕಾರ್ಯಕ್ರಮ. ನಾನು ನನ್ನ ಪುಸ್ತಕಗಳನ್ನು ಬಿಡುಗಡೆ ಮಾಡಿದಾಗ ಸೋನಿಯಾ ಗಾಂಧಿ ಭಾಗವಹಿಸಿದ್ದರು ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಇಂಡಿಯಾ ಬ್ಲಾಕ್ ನಾಯಕರಿಗೆ ಮೊದಲ ಸಾಲಿನಲ್ಲಿ ಸ್ಥಾನ ನೀಡಲಾಗಿತ್ತು. ಕಾಂಗ್ರೆಸ್ ಮುಖ್ಯಮಂತ್ರಿ ಎರಡನೇ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ಡಿಂಪಲ್ ಯಾದವ್ ಕೂಡ ಹಾಜರಿದ್ದರು.
ಭಾವನಾತ್ಮಕ ಘಟನೆ ನೆನಪಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಮಾತನ್ನಾಡಿ.. ನನಗೆ ಕಟ್ಟುನಿಟ್ಟಿನ ಸೂಚನೆಗಳು ಸಿಕ್ಕಿವೆ, ಅವುಗಳನ್ನು ನಾನು ಪಾಲಿಸುತ್ತೇನೆ. ರಾಜಕೀಯದ ಬಗ್ಗೆ ನಾನು ಯಾವುದೇ ಮಾತನಾಡುವುದಿಲ್ಲ. ಆದರೆ ಒಬ್ಬ ಮಗನಾಗಿ, ನಾವೆಲ್ಲ ಮಕ್ಕಳಲ್ಲಿ ಒಬ್ಬರಾದರೂ ನಮ್ಮ ಅಮ್ಮನ ಬಗೆಗಿನ ಒಂದು ಸಣ್ಣ ನೋಟವನ್ನು (ಝಲಕ್) ಜನರಿಗೆ ತೋರಿಸಬೇಕು ಎಂದು ನಾನು ಯೋಚಿಸಿದೆ.
ನಾನು ಆ ಫೋಟೋವನ್ನು ನೋಡುತ್ತಿದ್ದೆ. ಅಮ್ಮನ ಇನ್ನೊಂದು ಫೋಟೋ ಇದೆ. ಅದರಲ್ಲಿ ಅವರು ಉಯ್ಯಾಲೆಯಲ್ಲಿ ತಲೆಕೆಳಗಾಗಿ (ಉಲ್ಟಾ) ನೇತಾಡುತ್ತಿದ್ದಾರೆ. ಇದು ಕೇಂಬ್ರಿಡ್ಜ್ನ ಫೋಟೋ. ಆಗ ನಾವು ಚಿಕ್ಕವರಿದ್ದೆವು. ಅಂದಿನಿಂದಲೂ ನಮ್ಮ ಅಮ್ಮ ಹೀಗೆಯೇ ಇದ್ದರು. ನನ್ನ ತಂದೆ-ತಾಯಿಯ ಮೊದಲ ಭೇಟಿಯ ಬಗ್ಗೆ ಹಲವು ಕಥೆಗಳು ಪ್ರಚಲಿತದಲ್ಲಿವೆ. ಹಲವು ವರ್ಷಗಳ ನಂತರ ಒಮ್ಮೆ ನಾನು ಕೇಂಬ್ರಿಡ್ಜ್ಗೆ ಹೋಗಿದ್ದೆ. ಆಗ ನನ್ನ ಗರ್ಲ್ಫ್ರೆಂಡ್ಗೆ, ನಿನಗೆ ಗೊತ್ತಾ, ಬಾ ವರ್ಸಿಟಿ ರೆಸ್ಟೋರೆಂಟ್ಗೆ ಹೋಗೋಣ ಎಂದು ಹೇಳಿದೆ. ಆಕೆಗೆ ಆ ಜಾಗದ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ.
ನಾವು ಅಲ್ಲಿಗೆ ಹೋದೆವು. ನನ್ನ ತಂದೆ-ತಾಯಿ ಎಲ್ಲಿ ಭೇಟಿಯಾಗಿದ್ದರು ಎಂಬುದನ್ನು ನೋಡಬೇಕು ಅಷ್ಟೇ ನನ್ನ ಆಸೆಯಾಗಿತ್ತು. ನಾವು ರೆಸ್ಟೋರೆಂಟ್ ಒಳಗೆ ಹೋದೆವು. ನನಗೆ ಈಗಲೂ ಅಲ್ಲಿದ್ದ ಆ ಹಳದಿ ಬಣ್ಣದ ಬಾಗಿಲು ನೆನಪಿದೆ. ಅಲ್ಲಿ ಒಬ್ಬ ವ್ಯಕ್ತಿ ನಿಂತಿದ್ದರು. ಎಷ್ಟು ಜನ ಇದ್ದೀರಿ? ಎಂದು ಅವರು ಕೇಳಿದರು. ನಾನು 'ಇಬ್ಬರು' ಎಂದೆ. 'ಹೋಗಿ ಕೂತುಕೊಳ್ಳಿ' ಎಂದು ಅವರು ಹೇಳಿದರು.

ಆಗ ನಾನು ಅವರಿಗೆ, 'ಗೊತ್ತಾ, ನನ್ನ ತಂದೆ-ತಾಯಿ ಇದೇ ರೆಸ್ಟೋರೆಂಟ್ನಲ್ಲಿ ಭೇಟಿಯಾಗಿದ್ದರು' ಎಂದೆ. ಆ ವ್ಯಕ್ತಿ ನನ್ನ ಕಡೆ ನೋಡಿ, 'ಓಹ್-ಅವರಿಬ್ಬರಾ? ನನಗೆ ಅವರು ಗೊತ್ತು' ಎಂದರು. 'ನೀವು ಅವರ ಬಗ್ಗೆ ಏನು ತಿಳಿದಿದ್ದೀರಿ?' ಎಂದು ನಾನು ಕೇಳಿದೆ. ಅದಕ್ಕೆ ಅವರು, 'ಅಯ್ಯೋ, ಅವರಿಬ್ಬರು! ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ' ಎಂದು ಭಾವುಕರಾಗಿ ಮಾತನ್ನಾಡಿದರು.










