ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೀರಪ್ಪ ಮೊಯ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಯುಪಿಎ ಸರ್ಕಾರದ ಕೆಲವು ನಾಯಕರು ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧದ ತನಿಖೆಯನ್ನು ತಡೆಯದಿದ್ದರೆ ಅವರು ಜೈಲು ಪಾಲಾಗುತ್ತಿದ್ದರು, ಮೋದಿ ಗಡಿಪಾರಾಗುತ್ತಿದ್ದರು ಎಂದು ಮೊಯ್ಲಿ ಆರೋಪಿಸಿದ್ದಾರೆ.

ದೆಹಲಿ: ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರಾಗಿದ್ದ ಎಂ.ವೀರಪ್ಪ ಮೊಯ್ಲಿ ಮಾತನಾಡುತ್ತಾ, ಕಾಂಗ್ರೆಸ್​ ನಾಯಕರ ವಿರುದ್ಧ ಸಿಕ್ಕಾಪಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಅರ್ಥಾತ್​, ಅವರು ಗುಜರಾತ್​ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿನ ವಿಷಯಗಳನ್ನು ಕೆದಕಿರುವ ಮೊಯ್ಲಿ ಅವರು, ಮೋದಿ ಮತ್ತು ಅಮಿತ್​ ಶಾ ಜೈಲಿಗೆ ಹೋಗುತ್ತಿದ್ದರು. ಆದರೆ ಅದನ್ನು ತಡೆದವರೇ ಕಾಂಗ್ರೆಸ್​ ನಾಯಕರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

2002 ರ ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿಯವರ ಪಾತ್ರದ ತನಿಖೆಯನ್ನು ಯುಪಿಎ ಸರ್ಕಾರದ ಕೆಲವು ನಾಯಕರು ಮುಂದುವರಿಸದಂತೆ ತಡೆದರು. ನಾನು ಆಗ ಕಾನೂನು ಸಚಿವನಾಗಿದ್ದೆ. ಆದರೆ ಈ ಪ್ರಕರಣವನ್ನು ಮುಂದುವರೆಸಲು ಬಿಡಲಿಲ್ಲ. ಗಲಭೆಯ ತನಿಖೆಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರದೊಳಗಿನ ಜನರು ತಡೆಹಿಡಿದರು. ಇಲ್ಲದೇ ಹೋಗಿದ್ದರೆ ಮೋದಿ ಗಡಿಪಾರು ಆಗುತ್ತಿದ್ದರು. ಆದರೆ, ಈ ನಿರ್ಧಾರದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಭಾಗಿಯಾಗಿರಲಿಲ್ಲ. ಆದರೆ ಕೆಲವು ಕಾಂಗ್ರೆಸ್​ ನಾಯಕರೇ ತನಿಖೆ ನಡೆಸಲು ಬಿಡದ ಕಾರಣದಿಂದ ಮೋದಿ ಈ ಮಟ್ಟಿಗೆ ಬೆಳೆದು ನಿಂತರು. ಇಲ್ಲದೇ ಹೋಗಿದ್ದರೆ ಜೈಲಿನಲ್ಲಿ ಇರುತ್ತಿದ್ದರು. ಅವರು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಕಿಡಿ ಕಾರಿದ್ದಾರೆ ಮೊಯ್ಲಿ. (ಈ ಹೇಳಿಕೆಗಳು 2002 ರ ಗುಜರಾತ್ ಗಲಭೆಯ ಹಿಂದಿನ ದೊಡ್ಡ ಪಿತೂರಿಯ ತನಿಖೆಗೆ ಸಂಬಂಧಿಸಿವೆ. 2009 ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ, ವಿಶೇಷ ತನಿಖಾ ತಂಡ (SIT) 2010 ರಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿತ್ತು. ಸುದೀರ್ಘ ವಿಚಾರಣೆಯ ಬಳಿಕ ಇದರಲ್ಲಿ ಮೋದಿ ಅವರ ತಪ್ಪಿಲ್ಲ ಎನ್ನುವುದು ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್​, 2012 ರಲ್ಲಿ SIT ಅವರಿಗೆ ಕ್ಲೀನ್ ಚಿಟ್ ನೀಡಿತ್ತು)

ಅಮಿತ್​ ಷಾ ಕುರಿತು ಮೊಯ್ಲಿ ಹೇಳಿದ್ದೇನು?

ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರ ಬಗ್ಗೆಯೂ ಉಲ್ಲೇಖಿಸಿರುವ ವೀರಪ್ಪ ಮೊಯ್ಲಿ ಅವರು, ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್​ಕೌಂಟರ್​ ಪ್ರಕರಣದಲ್ಲಿ ಅಮಿತ್ ಷಾ ಅವರ ಬಂಧನವನ್ನು ಉಲ್ಲೇಖಿಸಿ, 'ಈ ಕ್ರಮವು ಷಾ ಅವರ ರಾಜಕೀಯ ಪಥದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿತ್ತು. ಅಮಿತ್​ ಷಾ ಜೈಲಿಗೆ ಹೋದ ಮೊದಲ ವ್ಯಕ್ತಿ. ಅದೇ ಮುಂದುವರೆದಿದ್ದರೆ ಅವರು ಗೃಹ ಸಚಿವರಾಗುತ್ತಿರಲಿಲ್ಲ ಮತ್ತು ಅವರು ಈಗಿರುವ ಪ್ರಬಲ ನಾಯಕರಾಗುತ್ತಿರಲಿಲ್ಲ. ಅವರ ಪ್ರಕರಣವನ್ನು ಗುಜರಾತ್ ಹೊರಗೆ ವಿಚಾರಣೆ ನಡೆಸಲಾಯಿತು. ಹಾಗೆ ಮಾಡಲು ಬಿಟ್ಟಿದ್ದೇ ತಪ್ಪಾಯಿತು. ಕಾಂಗ್ರೆಸ್​ ನಾಯಕರು ಹಾಗೆ ಮಾಡಲು ಬಿಡದಿದ್ದರೆ ಮೋದಿ ಜೊತೆ ಅಮಿತ್​ ಷಾನೂ ಜೈಲಿನಲ್ಲಿ ಇರುತ್ತಿದ್ದರು' ಎಂದಿದ್ದಾರೆ. (ಅಮಿತ್​ ಷಾ ಪ್ರಕರಣಕ್ಕೆ ಸಂಬಂಧಿಸಿದಂತೆ 2010 ರಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಅಮಿತ್​ ಷಾ ಅವರನ್ನು ಬಂಧಿಸಿತು. ಮುಂಬೈನ ವಿಶೇಷ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಡಿಸೆಂಬರ್ 2014 ರಲ್ಲಿ ಅವರನ್ನು ಬಿಡುಗಡೆ ಮಾಡಿತು. ಮೊಯ್ಲಿ 2010 ಮತ್ತು 2011 ರ ನಡುವೆ ಕೇಂದ್ರ ಕಾನೂನು ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು)

ಸೋನಿಯಾ ಹೇಳಿದಂತೆ ಕೇಳಿದ್ದರೆ ಮೋದಿ ಅಧಿಕಾರಕ್ಕೆ ಬರ್ತಿರಲಿಲ್ಲ

UPA ಅವಧಿಯಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿರ್ಣಯಿಸಲು ಮತ್ತು ಪಕ್ಷದೊಳಗೆ ಅಗತ್ಯವಿರುವ ಬದಲಾವಣೆಗಳನ್ನು ಗುರುತಿಸಲು ಸೋನಿಯಾ ಗಾಂಧಿ ಅವರು ಪ್ರಾರಂಭಿಸಿದ ಯೋಜನೆಯ ಬಗ್ಗೆಯೂ ಮೊಯ್ಲಿ ಮಾತನಾಡಿದರು. ಅವರ ಪ್ರಕಾರ, ಸೋನಿಯಾ ಗಾಂಧಿಯವರು ಈ ಉದ್ದೇಶಕ್ಕಾಗಿ ತಮ್ಮ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದರು. ರಾಹುಲ್ ಗಾಂಧಿ, ದಿಗ್ವಿಜಯ ಸಿಂಗ್ ಮತ್ತು ಗುಲಾಮ್ ನಬಿ ಆಜಾದ್ ಅದರ ಸದಸ್ಯರಲ್ಲಿ ಸೇರಿದ್ದರು. ಸಮಿತಿಯ ಮೊದಲ ವರದಿಯನ್ನು ಸ್ವೀಕರಿಸಿದ ನಂತರ, ಕೆಲವು ಕಾಂಗ್ರೆಸ್ ನಾಯಕರು ಅದರ ಶಿಫಾರಸುಗಳನ್ನು ವಿರೋಧಿಸುತ್ತಿದ್ದಾರೆ ಎಂದು ಸೋನಿಯಾ ತಮಗೆ ತಿಳಿಸಿದ್ದರು ಎಂದು ಮೊಯ್ಲಿ ಹೇಳಿದರು. "ನಮ್ಮ ಪಕ್ಷದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಬಯಸುವ ಮತ್ತು ಬದಲಾವಣೆಯನ್ನು ಬಯಸದ ನಾಯಕರು ಇದ್ದರು. ಸೋನಿಯಾ ಗಾಂಧಿ ಬಯಸಿದಂತೆ ಸುಧಾರಣೆಗಳನ್ನು ಜಾರಿಗೆ ತಂದಿದ್ದರೆ ಮೋದಿ ಅಧಿಕಾರಕ್ಕೆ ಬರುತ್ತಿರಲಿಲ್ಲ" ಎಂದರು