ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಸರ್ಕಾರದ ಯಾವುದೇ ಭತ್ಯೆ ಪಡೆಯದೆ ಸ್ವಂತ ಖರ್ಚಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳನ್ನು ಬಗೆಹರಿಸದ ಸರ್ಕಾರದ ವೈಖರಿಯನ್ನು ಖಂಡಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಯಾದಗಿರಿ (ನ.19): ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದಿಂದ ನೀಡುವ ವಸತಿ, ಊಟೋಪಚಾರ ಹಾಗೂ ಯಾವುದೇ ಭತ್ಯೆಯನ್ನು ಸ್ವೀಕರಿಸದೆ, ಸ್ವಂತ ಖರ್ಚಿನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿರುವುದಾಗಿ ಜಿಲ್ಲೆಯ ಗುರುಮಠಕಲ್ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರ ಅವರು ವಿಧಾನಸಭೆ ಸಭಾಧ್ಯಕ್ಷರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಕಳೆದ ಚಳಿಗಾಲದ ಅಧಿವೇಶನದಲ್ಲಿಯೂ ಇದೇ ರೀತಿ ಪ್ರತಿಭಟನಾತ್ಮಕವಾಗಿ ಸರ್ಕಾರದ ಯಾವುದೇ ಸೌಲಭ್ಯ ಪಡೆಯದೆ, ಒಂದು ದಿನವೂ ತಪ್ಪದೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಶಾಸಕ ಕಂದಕೂರ, ಈ ಬಾರಿಯೂ ಅದೇ ನಿಲುವನ್ನು ಮುಂದುವರಿಸುವುದಾಗಿ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸದ್ದಕ್ಕೆ ಸರ್ಕಾರದ ಸೌಲಭ್ಯಗಳ ತಿರಸ್ಕಾರ

ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಪ್ರಾದೇಶಿಕ ಸಮತೋಲನ ಕಾಪಾಡುವ ಉದ್ದೇಶದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಪರಂಪರೆ ಉತ್ತಮವಾಗಿದೆ. ಆದರೆ, ಹಲವು ವರ್ಷಗಳಿಂದ ಅಧಿವೇಶನ ನಡೆದರೂ, ಚರ್ಚೆಯಾದ ವಿಷಯಗಳು ಜಾರಿಗೊಳ್ಳದೆ, ಈ ಭಾಗದ ಜನತೆಗೆ ಕಣ್ಣೊರೆಸುವ ತಂತ್ರವಾಗಿದೆ ಎಂದು ಕಂದಕೂರ ಬೇಸರ ವ್ಯಕ್ತಪಡಿಸಿದ್ದಾರೆ.

ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಜನತೆ ಬರಗಾಲವನ್ನು ತಮ್ಮ ಬದುಕಿನ ಭಾಗವಾಗಿ ಸ್ವೀಕರಿಸಿದ್ದಾರೆ. ಒಮ್ಮೆ ಅತೀವೃಷ್ಟಿಯಿಂದ ಬೆಳೆ ಕೊಚ್ಚಿ ಹೋದರೆ, ಮತ್ತೊಮ್ಮೆ ಅನಾವೃಷ್ಟಿಯಿಂದ ಬಿತ್ತಿದ ಬೀಜವೇ ಭೂಮಿಯಲ್ಲಿ ಉಳಿದು ಹೋಗುತ್ತದೆ. ಹಸಿವು, ಬಡತನ, ನಿರುದ್ಯೋಗ, ಶಾಲೆ, ಆಸ್ಪತ್ರೆ, ಕುಡಿಯುವ ನೀರಿನ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಜನತೆ, ಹೊಟ್ಟೆಪಾಡಿಗಾಗಿ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್‌ನಂತಹ ನಗರಗಳಿಗೆ ಗುಳೆ ಹೋಗುತ್ತಿರುವ ದೃಶ್ಯ ಕರುಳು ಹಿಂಡುತ್ತದೆ ಎಂದು ಶಾಸಕರು ಪತ್ರದಲ್ಲಿ ನೋವು ವ್ಯಕ್ತಪಡಿಸಿದ್ದಾರೆ.