ಅಜಿತ್‌ ಸಭೆಗೆ 32, ಪವಾರ್‌ ಸಭೆಗೆ 18 ಶಾಸಕರು ಹಾಜರು; ಎನ್‌ಸಿಪಿ, ಚಿಹ್ನೆ ಹೆಸರು ಬಿಟ್ಟುಕೊಡಲ್ಲ: ಶರದ್‌ ಪವಾರ್ ಖಡಕ್‌ ನುಡಿ

ಅನರ್ಹತೆಯಿಂದ ಪಾರಾಗಲು 36 ಶಾಸಕರ ಬೆಂಬಲ ಅಜಿತ್‌ ಬಣಕ್ಕೆ ಅಗತ್ಯವಿದೆ. 40 ಶಾಸಕರ ಬೆಂಬಲ ತನಗಿದೆ ಎಂದು ಅಜಿತ್‌ ಹೇಳಿಕೊಂಡಿದ್ದರೂ ಬಂದವರು 32 ಶಾಸಕರು ಮಾತ್ರ.

uncle vs nephew 32 mlas at ajit pawar s meet 18 at sharad pawar s ash

ಮುಂಬೈ (ಜುಲೈ 6, 2023): ಬುಧವಾರ ಮುಂಬೈನಲ್ಲಿ ಎನ್‌ಸಿಪಿಯ ಅಜಿತ್‌ ಪವಾರ್‌ ಬಣ ಹಾಗೂ ಶರದ್‌ ಪವಾರ್‌ ಬಣ ಭರ್ಜರಿ ಬಲಪ್ರದರ್ಶನ ನಡೆಸಿವೆ. ಆದರೆ ಶಾಸಕರ ಬೆಂಬಲದ ಲೆಕ್ಕಾಚಾರದಲ್ಲಿ ಅಜಿತ್‌ ಪವಾರ್‌ ಬಣ ಮೇಲುಗೈ ಸಾಧಿಸಿದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ 53 ಶಾಸಕರನ್ನು ಹೊಂದಿದ್ದು ಅಜಿತ್‌ ಬಣದ ಸಭೆಯಲ್ಲಿ 32 ಶಾಸಕರು ಭಾಗಿಯಾಗಿದ್ದರು. ಶರದ್‌ ಪವಾರ್‌ ಸಮಾವೇಶದಲ್ಲಿ ಬಂದಿದ್ದು 18 ಶಾಸಕರು ಮಾತ್ರ. ಇನ್ನು 3 ಶಾಸಕರು ಯಾವುದೇ ಸಭೆಗೂ ಹೋಗದೆ ಗೈರು ಹಾಜರಾಗಿದ್ದರು.

ಅನರ್ಹತೆಯಿಂದ ಪಾರಾಗಲು 36 ಶಾಸಕರ ಬೆಂಬಲ ಅಜಿತ್‌ ಬಣಕ್ಕೆ ಅಗತ್ಯವಿದೆ. 40 ಶಾಸಕರ ಬೆಂಬಲ ತನಗಿದೆ ಎಂದು ಅಜಿತ್‌ ಹೇಳಿಕೊಂಡಿದ್ದರೂ ಬಂದವರು 32 ಶಾಸಕರು ಮಾತ್ರ. ಹೀಗಾಗಿ ಮ್ಯಾಜಿಕ್‌ ಸಂಖ್ಯೆ ‘36’ನ್ನು ಅಜಿತ್‌ ಅವರು ಇನ್ನು ಮುಂದಾದರೂ ತಲುಪುತ್ತಾರಾ ಎಂಬುದು ಯಕ್ಷಪ್ರಶ್ನೆಯಾಗೇ ಉಳಿಯಿತು. ಆದರೂ ಶರದ್‌ ಪವಾರ್‌ ವಿರುದ್ಧ 32 ಶಾಸಕರು ಸಿಡಿದೆದ್ದಿದ್ದು ಗಮನಾರ್ಹ ಎನ್ನಿಸಿತು.

ಇದನ್ನು ಓದಿ: ಬಿಜೆಪಿಗರು 75ಕ್ಕೆ ನಿವೃತ್ತಿ ಆಗ್ತಾರೆ, ನಿಮ್ದು 83 ಆಯ್ತು, ಇನಿಂಗ್ಸ್‌ ಮುಗಿಸಿ: ಶರದ್‌ ಪವಾರ್‌ಗೆ ಅಜಿತ್‌ ಟಾಂಗ್‌

ಎನ್‌ಸಿಪಿ ಚಿಹ್ನೆ, ಹೆಸರನ್ನು ಬಿಟ್ಟುಕೊಡುವುದಿಲ್ಲ: ಶರದ್‌
ಎನ್‌ಸಿಪಿಯಲ್ಲಿ ಬಂಡಾಯ ಎದ್ದು, ತಮ್ಮದೇ ನಿಜವಾದ ಪಕ್ಷ ಎಂದು ಹಕ್ಕು ಸಾಧಿಸಲು ಹೊರಟಿರುವ ಅಜಿತ್‌ ಪವಾರ್‌ ವಿರುದ್ಧ ಗುಡುಗಿರುವ ಪಕ್ಷದ ಸಂಸ್ಥಾಪಕ ಹಾಗೂ ಅಧ್ಯಕ್ಷ ಶರದ್‌ ಪವಾರ್‌, ‘ನಾನೆಂದೂ ಎನ್‌ಸಿಪಿ ಚಿಹ್ನೆ ಹಾಗೂ ಪಕ್ಷದ ಹೆಸರು ಬಿಟ್ಟುಕೊಡಲ್ಲ’ ಎಂದು ಗುಡುಗಿದ್ದಾರೆ. ಅಲ್ಲದೆ, ‘ಒಂದೊಮ್ಮೆ ಎನ್‌ಸಿಪಿಯಲ್ಲಿದ್ದ 68 ಶಾಸಕರ ಪೈಕಿ 62 ಜನರು ಬಿಟ್ಟು ಹೋಗಿದ್ದರು. ಆ ಬಗ್ಗೆ ನಾನೇನೂ ಚಿಂತಿಸಿರಲಿಲ್ಲ. ಈಗಲೂ ಅಷ್ಟೆ. ಹೋದವರ ಬಗ್ಗೆ ನನಗೆ ಚಿಂತೆ ಇಲ್ಲ. ಆದರೆ ಒಂದಂತೂ ಖಚಿತ, ಬಿಜೆಪಿ ಜತೆಯಾದವರೆಲ್ಲಾ ಕಾಲಾನುಕ್ರಮದಲ್ಲಿ ರಾಜಕೀಯವಾಗಿ ನಶಿಸಿ ಹೋಗಿದ್ದಾರೆ. ಇದೇ ಗತಿ ಇದೀಗ ಬಂಡೆದ್ದವರಿಗೂ ಆಗಲಿದೆ’ ಎಂದಿದ್ದಾರೆ.

ಬುಧವಾರ ಇಲ್ಲಿ ಕರೆಯಲಾಗಿದ್ದ ಪಕ್ಷದ ಶಾಸಕರ ಸಭೆಯಲ್ಲಿ ಮಾತನಾಡಿದ ಶರದ್‌ ಪವಾರ್‌, ‘ಸುದೀರ್ಘ ಕತ್ತಲೆಯ ಬಳಿಕ ಸೂರ್ಯೋದಯವಾಗುತ್ತದೆ. ಹೀಗಾಗಿ ಪಕ್ಷದ ಕಾರ್ಯಕರ್ತರು, ಪಕ್ಷ ಬಿಟ್ಟವರ ಬಗ್ಗೆ ಚಿಂತಿಸಬೇಕಿಲ್ಲ. ನಾವು ಹೊಸದಾಗಿ ಪಕ್ಷ ಕಟ್ಟೋಣ, ಹೊಸ ಆರಂಭ ಮಾಡೋಣ’ ಎಂದು ಧೈರ್ಯ ತುಂಬಿದರು.

ಇದನ್ನೂ ಓದಿ: ಶಿವಸೇನೆ, ಎನ್‌ಸಿಪಿ ಬಳಿಕ ಕಾಂಗ್ರೆಸ್‌ ಹೋಳು? ಬಿಜೆಪಿ ಸಂಪರ್ಕದಲ್ಲಿ 'ಕೈ' ನಾಯಕರು!

ಆದರೆ, ಪಕ್ಷ ಬಿಟ್ಟು ಹೋದರೂ ಬ್ಯಾನರ್‌ಗಳಲ್ಲಿ ತಮ್ಮ ಭಾವಚಿತ್ರ ಬಳಸಿದ ಅಜಿತ್‌ ಪವಾರ್‌ ಬಣದ ವಿರುದ್ಧ ಕಿಡಿಕಾರಿರುವ ಶರದ್‌, ‘ಅವರು ಪಕ್ಷ ಬಿಟ್ಟು ಹೋದ ಮೇಲೆ ನನ್ನ ಭಾವಚಿತ್ರ ಬಳಸುವುದು ಏಕೆ? ನಾನು ನನ್ನ ಪಕ್ಷದ ಹೆಸರು ಮತ್ತು ಚಿಹ್ನೆ ಅವರ ಕೈ ಸೇರಲು ಬಿಡುವುದಿಲ್ಲ’ ಎಂದು ಗುಡುಗಿದರು.

‘ತನ್ನ ಜತೆ ಸೇರಿದವರನ್ನು ರಾಜಕೀಯವಾಗಿ ಮುಗಿಸುವುದು ಬಿಜೆಪಿ ನೀತಿ. ಒಂದೊಮ್ಮೆ ಬಿಜೆಪಿ ಜತೆಯಲ್ಲಿದ್ದ ಅಕಾಲಿದಳ ಇದೀಗ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ಬಿಹಾರದಲ್ಲೂ ಇದೇ ರೀತಿಯ ಘಟನಾವಳಿಗಳು ನಡೆದವು. ಹೀಗಾಗಿಯೇ ಎಚ್ಚೆತ್ತ ನಿತೀಶ್‌ ಆರ್‌ಜೆಡಿ ಸಂಗ ಮಾಡಿದರು’ ಎಂದು ಪವಾರ್‌ ಹೇಳಿದರು.

ಇದನ್ನೂ ಓದಿ: ಇಂದು ಪವಾರ್‌ ಬಣಗಳ ಶಕ್ತಿ ಪ್ರದರ್ಶನ: ಶರದ್‌, ಅಜಿತ್‌ ಬಣದಿಂದ ಪ್ರತ್ಯೇಕ ಸಭೆ ಆಯೋಜನೆ; ಶಾಸಕರ ಮೇಲೆ ಎಲ್ಲರ ಚಿತ್ತ

ಬಿಜೆಪಿ ಏಕಿಲ್ಲ?:

‘ಶಿವಸೇನೆ ಜತೆಗೇ ಇದ್ದೀರಿ. ಬಿಜೆಪಿಯನ್ನು ಏಕೆ ಬೆಂಬಲಿಸುವುದಿಲ್ಲ’ ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿದ ಶರದ್‌, ‘ಶಿವಸೇನೆ ಹಿಂದುತ್ವಕ್ಕೂ, ಬಿಜೆಪಿ ಹಿಂದುತ್ವಕ್ಕೂ ವ್ಯತ್ಯಾಸವಿದೆ. ಶಿವಸೇನೆಯದ್ದು ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುವ ಮನಸ್ಥಿತಿಯಾದರೆ, ಬಿಜೆಪಿಯದ್ದು ಧರ್ಮ, ಜಾತಿಯ ಆಧಾರದಲ್ಲಿ ಜನರನ್ನು ಒಡೆದು ಆಳುವ ನೀತಿ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಲವು ಹಿಂಸಾಕೃತ್ಯಗಳಲ್ಲಿ ಯಾರ ಕೈವಾಡ ಇದೆ ಎಂದು ಎಲ್ಲರಿಗೂ ಗೊತ್ತು. ಹೀಗಾಗಿಯೇ ನಾವು ಎಂದೂ ಬಿಜೆಪಿ ಜತೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು.

‘ವ್ಯಕ್ತಿಯೊಬ್ಬರು ಕಳೆದ ಚುನಾವಣೆಗೆ ಮುನ್ನ ಜೈಲಿಗೆ ಹೋಗಿದ್ದರು. ಚುನಾವಣೆ ವೇಳೆ ಅವರಿಗೆ ಟಿಕೆಟ್‌ ಬೇಡ ಎಂದು ನಮ್ಮ ಕೆಲ ನಾಯಕರು ಸಲಹೆ ನೀಡಿದರು. ಆದರೆ ಅವರಿಗೆ ಅನ್ಯಾಯ ಆಗಿದೆ ಎಂದು ನಾನೇ ಅವರಿಗೆ ಟಿಕೆಟ್‌ ಕೊಟ್ಟೆ. ನಮ್ಮ ಸರ್ಕಾರ ರಚನೆಯಾದಾಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಅವರೇ ಮೊದಲಿಗರಾಗಿ. ಅದೇ ವ್ಯಕ್ತಿಯಿಂದ 3 ದಿನಗಳ ಹಿಂದೆ ನನಗೆ ಕರೆ ಬಂದಿತ್ತು. ಈ ವೇಳೆ ಏನಾಗುತ್ತಿದೆ ಎಂದು ಪ್ರಶ್ನಿಸಿದಾಗ, ‘ನೋಡಿ ಹೇಳುತ್ತೇನೆ’ ಎಂದು ಮಾಹಿತಿ ನೀಡಿದ್ದರು. ಆದರೆ ಅದೇ ದಿನ ಮಧ್ಯಾಹ್ನ 3 ಗಂಟೆಗೆ ಅದೇ ವ್ಯಕ್ತಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವುದನ್ನು ಕಂಡೆ’ ಎಂದು ಹೆಸರು ಹೇಳದೆ ಛಗನ್‌ ಭುಜಬಲ್‌ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ಪವಾರ್‌ ಕದನ: ಅಜಿತ್‌ ಅನರ್ಹತೆಗೆ ಶರದ್‌ ಅಸ್ತ್ರ: ಶರದ್‌ ಬಣದ ಪ್ರಮುಖರ ಅನರ್ಹತೆಗೆ ಅಜಿತ್ ಮೊರೆ; ಯಾರ ಪಾಲಾಗುತ್ತೆ ಪಕ್ಷ?

Latest Videos
Follow Us:
Download App:
  • android
  • ios