ಶಾಸಕ ಜಿ.ಟಿ.ದೇವೇಗೌಡರ ಜೆಡಿಎಸ್ ಸ್ಪರ್ಧೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಾರಾ ಮಹೇಶ್, ಕುಮಾರಸ್ವಾಮಿ ಅವರೇ ಜಿಟಿಡಿ ನಮ್ಮ ಜೊತೆ ಇಲ್ಲ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮೈಸೂರು: ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂಬ ಶಾಸಕ ಜಿ.ಟಿ.ದೇವೇಗೌಡರ ಹೇಳಿಕೆಗೆ ಮಾಜಿ ಸಚಿವ ಸಾರಾ ಮಹೇಶ್ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜಿ.ಟಿ ದೇವೇಗೌಡರು ನಮ್ಮ ಜೊತೆಯಲ್ಲಿ ಇಲ್ಲ ಎಂದು ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಎಲ್ಲಾ ವಿಚಾರವೂ ಮುಗಿದಿದೆ. ಇಷ್ಟರ ಮೇಲೂ ಮುಂದಿನ ದಿನದಲ್ಲಿ ಪಕ್ಷರ ವರಿಷ್ಟರು ಬೇರೆ ಏನಾದ್ರು ತೀರ್ಮಾನ ತೆಗೆದುಕೊಂಡರೆ ಅದಕ್ಕು ಕೂಡ ನಾವು ಬದ್ಧವಾಗಿರುತ್ತವೆ ಎಂದು ಸಾ.ರಾ.ಮಹೇಶ್ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಈಗಾಗಲೇ ಪಕ್ಷದ ಕಷ್ಟ ಮತ್ತು ಸುಖ ಎರಡರಲ್ಲೂ ಜೊತೆಯಿರುವ ಮುಖಂಡನನ್ನು ಹುಡುಕುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದು, ಅವರ ನಿರ್ಧಾರವೇ ಅಂತಿಮ. ನಾನು ಈ ಹಿಂದೆ ಬಿಜೆಪಿಯಲ್ಲಿದ್ದೆ, ನಂತರ ಜೆಡಿಎಸ್‌ಗೆ ಬಂದಿದ್ದೇನೆ. ನಾವು ಎಲ್ಲಿದ್ದೇವೊ ಆ ಪಕ್ಷ ನಮಗೆ ತಾಯಿ ಇದ್ದಂತೆ ಎಂದು ಹೇಳುವ ಮೂಲಕ ಜಿಟಿ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದರು.
ಸಹಕಾರ ಚುನಾವಣೆಯಲ್ಲಿ JDS ಸೋಲಿಗೆ ಜಿಟಿಡಿ ಕಾರಣನಾ?
ಜಿ.ಟಿ.ದೇವೇಗೌಡರು ನಮ್ಮ ಪಕ್ಷದಲ್ಲೇ ಇದ್ದು ಕೆ.ಆರ್ ನಗರಕ್ಕೆ ಬಂದು ಏನು ಮಾಡಿದರು ಎಂದು ಗೊತ್ತಿದೆ. ಸಹಕಾರ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಸಹಾಯ ಮಾಡಿದ್ರು. ಇದೆಲ್ಲವೂ ನಮಗೆ ಗೊತ್ತಿದೆ. ಜಿ.ಟಿ.ಡಿಯ ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆ ಎಲ್ಲವನ್ನೂ ಪಕ್ಷದ ಹೈ ಕಮಾಂಡ್ ಗಮನಸಿಯೇ ಮಹತ್ವದ ನಿರ್ಧಾರಗಳನ್ನ ಮಾಡಿದೆ ಎಂದರು.
ಚುಂಚನಕಟ್ಟೆ ಜಾತ್ರೆಯಲ್ಲಿ ಹಣ ಕಬಳಿಕೆಯ ಆರೋಪ
ಮುಂದುವರಿದು ಮಾತನಾಡಿದ ಸಾ.ರಾ.ಮಹೇಶ್, ಜನವರಿಯಲ್ಲಿ ನಡೆದ ಚುಂಚನಕಟ್ಟೆ ರಥೋತ್ಸವ ಜಾತ್ರೆಯಲ್ಲೂ ಹಣ ಕಬಳಿಸಿದ್ದಾರೆ ಎಂದು ಆರೋಪಿಸಿದರು. ಚುಂಚನಕಟ್ಟೆ ಜಾತ್ರೆಯ ವೇಳೆ ಬಣ್ಣ ಹೊಡೆಯಲು ಜಿಎಸ್‌ಟಿ ಹೊರತುಪಡಿಸಿ 5.27 ಲಕ್ಷ ಹಣ ನೀಡಿದ್ದಾರೆ. ಈ ಮೊದಲು ಕೇವಲ ಒಂದು ಲಕ್ಷ ಹಣ ನೀಡಲಾಗ್ತಿತ್ತು. ಬ್ಯಾರಿಕೇಡ್, ಲೈಟಿಂಗ್ ಹಾಕಲು 14 ಲಕ್ಷಕ್ಕೂ ಹೆಚ್ಚು ಹಣ ನೀಡಲಾಗಿದೆ. ಚುಂಚನಕಟ್ಟೆ ಜಾತ್ರೆಗೆ 32 ಲಕ್ಷ ಹಣ ಖರ್ಚು ಮಾಡಲಾಗಿದೆ. ಇದಕ್ಕೂ ಮುನ್ನ ಕೇವಲ ನಾಲ್ಕೂವರೆ ಲಕ್ಷ ಹಣ ನೀಡಲಾಗಿತ್ತು. ಅದರಲ್ಲೇ ಇಡೀ ಜಾತ್ರೆ ಮುಗಿಯುತ್ತಿತ್ತು ಎಂದು ಹೇಳಿದರು.
ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನ ಪ್ರಚಾರದ ಅಖಾಡಕ್ಕಿಳಿದ ಸಮರ್ಥ ಮಲ್ಲಿಕಾರ್ಜುನ!
ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿ ಹೀಗಾದ್ರೆ ಹೇಗೆ?
ಈಗ ದೇವಸ್ಥಾನದಲ್ಲೂ ಲಂಚ ಪಡೆಯುವ ದರಿದ್ರ ಸ್ಥಿತಿ ಬಂದಿದೆ. ಆರತಿ ತಟ್ಟೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಲಾಗುತ್ತಿತ್ತು. ಆದರೆ ಆರತಿ ತಟ್ಟೆ ಹಣದಿಂದಲೇ 32 ಲಕ್ಷ ಹಣ ಕೊಡುವಂತೆ ಕೇಳಿದ್ದಾರೆ. ಹಾಗಾದರೆ 32 ಲಕ್ಷ ಯಾರಿಗೆ ಹೋಗ್ತಿದೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಈ ರೀತಿ ಆದರೆ ಏನು ಮಾಡೋದು. ಇಷ್ಟೆಲ್ಲಾ ಆದರೂ ಅಧಿಕಾರಿಗಳು ಏನು ಮಾಡ್ತಿದ್ದಾರೆ ಎಂದು ಸಾ.ರಾ.ಮಹೇಶ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಸಿಎಂ ಇದ್ದಾಗಲೇ ಸ್ಪೀಕರ್ ಸಭಾತ್ಯಾಗ, ಇದು ಆಡಳಿತ ಅಸಮರ್ಥತೆಗೆ ಸಾಕ್ಷಿ: ಜೋಶಿ


