ಇಂದು ಪವಾರ್‌ ಬಣಗಳ ಶಕ್ತಿ ಪ್ರದರ್ಶನ: ಶರದ್‌, ಅಜಿತ್‌ ಬಣದಿಂದ ಪ್ರತ್ಯೇಕ ಸಭೆ ಆಯೋಜನೆ; ಶಾಸಕರ ಮೇಲೆ ಎಲ್ಲರ ಚಿತ್ತ

ರಾಜ್ಯ ವಿಧಾನಸಭೆಯಲ್ಲಿ ಎನ್‌ಸಿಪಿ 53 ಶಾಸಕರನ್ನು ಹೊಂದಿದೆ. ಈ ಪೈಕಿ ಅಜಿತ್‌ ಪವಾರ್‌ ಬಣ ತಮಗೆ 40 ಶಾಸಕರ ಬೆಂಬಲ ಇದೆ ಎಂದು ಹೇಳಿಕೊಂಡಿದೆ. ಆದರೆ ಪವಾರ್‌ ಬಣ ಇದುವರೆಗೂ ತಮ್ಮ ಜೊತೆಯಲ್ಲಿರುವ ಶಾಸಕರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

pawar vs pawar sharad ajit call mlas for meets two hours apart ash

ಮುಂಬೈ (ಜುಲೈ 5, 2023): ಎನ್‌ಸಿಪಿ ಹೋಳಾದ ಬಳಿಕ ಯಾವ ಬಣದಲ್ಲಿ ಎಷ್ಟು ಶಾಸಕರಿದ್ದಾರೆ ಎಂಬುದರ ಕುರಿತು ಬುಧವಾರ ಸ್ಪಷ್ಟವಾದ ಚಿತ್ರಣ ದೊರೆಯುವ ಸಾಧ್ಯತೆ ಇದೆ. ಕಾರಣ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್‌ ಪವಾರ್‌ ಮತ್ತು ಬಂಡಾಯ ಎದ್ದ ಅಜಿತ್‌ ಪವಾರ್‌ ಬಣ ಬುಧವಾರ ಪ್ರತ್ಯೇಕವಾಗಿ ಸಭೆ ಕರೆದಿವೆ. ಈ ಸಭೆಯಲ್ಲಿ ಯಾವ ಬಣದಲ್ಲಿ ಎಷ್ಟು ಶಾಸಕರು ಇರಲಿದ್ದಾರೆ ಎನ್ನುವ ಆಧಾರದಲ್ಲಿ, ಎನ್‌ಸಿಪಿ ಮೇಲೆ ಪವಾರ್‌ ಹಿಡಿತ ಕಳೆದುಕೊಳ್ಳಲಿದ್ದಾರೆಯೇ ಅಥವಾ ಬಂಡೆದ್ದ ಅಜಿತ್‌ ಪವಾರ್‌ ಬಣ ಪಕ್ಷಾಂತರ ವಿರೋಧಿ ಕಾಯ್ದೆಯಡಿ ಸಿಕ್ಕಿ ಬೀಳಲಿದೆಯೋ ಅಥವಾ ಪಾರಾಗಲಿದೆಯೋ ಎಂಬುದು ಗೊತ್ತಾಗಲಿದೆ.

ರಾಜ್ಯ ವಿಧಾನಸಭೆಯಲ್ಲಿ ಎನ್‌ಸಿಪಿ 53 ಶಾಸಕರನ್ನು ಹೊಂದಿದೆ. ಈ ಪೈಕಿ ಅಜಿತ್‌ ಪವಾರ್‌ ಬಣ ತಮಗೆ 40 ಶಾಸಕರ ಬೆಂಬಲ ಇದೆ ಎಂದು ಹೇಳಿಕೊಂಡಿದೆ. ಆದರೆ ಪವಾರ್‌ ಬಣ ಇದುವರೆಗೂ ತಮ್ಮ ಜೊತೆಯಲ್ಲಿರುವ ಶಾಸಕರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಬುಧವಾರದ ಸಭೆಯ ಬಳಿಕ, ಮೂಲ ಪಕ್ಷ ಯಾರು ಎಂಬುದರ ಬಗ್ಗೆ ಸ್ಪೀಕರ್‌ ಕೂಡಾ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಬುಧವಾರ ಸಭೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಇದನ್ನು ಓದಿ: ಪವಾರ್‌ ಕದನ: ಅಜಿತ್‌ ಅನರ್ಹತೆಗೆ ಶರದ್‌ ಅಸ್ತ್ರ: ಶರದ್‌ ಬಣದ ಪ್ರಮುಖರ ಅನರ್ಹತೆಗೆ ಅಜಿತ್ ಮೊರೆ; ಯಾರ ಪಾಲಾಗುತ್ತೆ ಪಕ್ಷ?

ನನ್ನ ಫೋಟೋ ಬಳಸಬಾರದು:
‘ನನ್ನ ಸಿದ್ಧಾಂತಕ್ಕೆ ದ್ರೋಹ ಮಾಡಿದವರು ಮತ್ತು ನನ್ನೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವವರು ನನ್ನ ಫೋಟೊಗಳನ್ನು ಬಳಸಬಾರದು. ನನ್ನ ಭಾವಚಿತ್ರವನ್ನು ಯಾರು ಬಳಸಬೇಕು ಯಾರು ಬಳಸಬಾರದು ಎಂದು ನಿರ್ಧರಿಸುವ ಹಕ್ಕು ನನಗಿದೆ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಪಕ್ಷದ ವಿರುದ್ಧ ಬಂಡೆದ್ದ ಅಜಿತ್‌ ಪವಾರ್‌ ಬಣಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಜಿತ್‌ ಬಣವು ತಾವು ಎನ್‌ಸಿಪಿ ಬಿಟ್ಟು ಹೊರಬಂದಿಲ್ಲ ಹಾಗೂ ಶರದ್‌ ಪವಾರ್‌ ಅವರೇ ನಮ್ಮ ನಾಯಕ ಎಂದು ಹೇಳಿಕೆ ನೀಡಿದ್ದರು.

ಕಾನೂನು ಸಲಹೆ:
ಈ ನಡುವೆ ಪಕ್ಷದ ಮುಂದಿನ ನಡೆಯ ಕುರಿತು ಶರದ್‌ ಪವಾರ್ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶರದ್‌ ಪವಾರ್‌ ‘ಪುತ್ರಿ ಪ್ರೇಮ’ ಅಜಿತ್ ಬಂಡಾಯಕ್ಕೆ ಕಾರಣ: 2 ವರ್ಷದಲ್ಲಿ 2ನೇ ಮಹಾ ವಿಪಕ್ಷ ಹೋಳು; ವಿಭಜನೆಯ ಲಾಭ ಬಿಜೆಪಿಗೆ

ಎನ್‌ಸಿಪಿ ಸ್ಥಾನಮಾನ ಇನ್ನೂ ನಿರ್ಧರಿಸಿಲ್ಲ: ಸ್ಪೀಕರ್‌
ಎನ್‌ಸಿಪಿಯ ಕೆಲವು ನಾಯಕರು ಬಿಜೆಪಿ ಮೈತ್ರಿಕೂಟ ಸೇರ್ಪಡೆಯಾಗಿರುವುದರಿಂದ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ರಾಹುಲ್‌ ನಾರ್ವೇಕರ್‌, ಎನ್‌ಸಿಪಿ ಸರ್ಕಾರದಲ್ಲಿದೆಯೋ ಅಥವಾ ವಿರೋಧ ಪಕ್ಷದಲ್ಲಿದೆಯೋ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.

ಬಂಡಾಯ ಎದ್ದ ಅಜಿತ್‌ ಬಣದ 9 ಶಾಸಕರನ್ನು ಅನರ್ಹಗೊಳಿಸುವಂತೆ ಶರದ್‌ ಪವಾರ್‌ ಬಣವು ಸ್ಪೀಕರ್‌ಗೆ ಮನವಿ ಮಾಡಿದೆ. ಮತ್ತೊಂದೆಡೆ ಶರದ್‌ ಬಣದ ಜಯಂತ್‌ ಪಾಟೀಲ್‌ ಮತ್ತು ಜಿತೇಂದ್ರ ಅವ್ಹದ್‌ ಅವರನ್ನು ಅನರ್ಹಗೊಳಿಸುವಂತೆ ಅಜಿತ್‌ ಬಣ ಮನವಿ ಮಾಡಿದೆ.

ಇದನ್ನೂ ಓದಿ: ಅಜಿತ್‌ ಪವಾರ್‌ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ: ಚುನಾವಣಾ ಆಯೋಗಕ್ಕೂ ಮಾಹಿತಿ

ಅದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ನಾರ್ವೇಕರ್‌, ಈವರೆಗೆ ಎನ್‌ಸಿಪಿ ಶಾಸಕ ಜಯಂತ್‌ ಪಾಟೀಲ್‌ ಅವರು ಮಾತ್ರ 9 ಮಂದಿಯನ್ನು ಅನರ್ಹ ಮಾಡುವಂತೆ ಕೋರಿದ್ದಾರೆ. ಆದರೆ ಯಾವುದೇ ಲಿಖಿತ ಅರ್ಜಿಗಳನ್ನು ಸಲ್ಲಿಸಲಾಗಿಲ್ಲ’ ಎಂದು ಹೇಳಿದ್ದಾರೆ.

ಅಜಿತ್‌ ಬಣದ ಕಚೇರಿ ಉದ್ಘಾಟನೆ ವೇಳೆ ‘ಕೀ’ ಇಲ್ಲದೇ ಮುಜುಗರ
ಅಜಿತ್‌ ಪವಾರ್‌ ಬಣದ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ ಪಕ್ಷದ ನಾಯಕರಿಗೆ ಮುಜುಗರ ತಂದ ಘಟನೆ ಮಂಗಳವಾರ ನಡೆದಿದೆ. ಕಾರ್ಯಕ್ರಮಕ್ಕೆ ಶಾಸಕರು ಮತ್ತು ಕಾರ್ಯಕರ್ತರು ಕಟ್ಟಡದ ಬಳಿ ಆಗಮಿಸಿದಾಗ ಅದರ ಕೀ ಬೇರೆ ಯಾರೋ ತೆಗೆದುಕೊಂಡು ಹೋಗಿದ್ದರು. ಹೀಗಾಗಿ ಕೆಲ ಸಮಯ ಎಲ್ಲರೂ ಹೊರಗೆ ಕಾಯಬೇಕಾಯಿತು. ಬಳಿಕ ಬೀಗ ಒಡೆದು ಹೋದರೆ, ಒಳಗಿನ ಕೊಠಡಿಯ ಬೀಗವೂ ಹಾಕಲಾಗಿತ್ತು. ಹೀಗಾಗಿ ಮತ್ತೊಮ್ಮೆ ನಾಯಕರು ಇರಸು ಮುರಸು ಅನುಭವಿಸಿದರು. ಬಳಿಕ ಸಿಬ್ಬಂದಿ ಕೀ ತಂದು ಕೊಠಡಿಯನ್ನು ಮುಕ್ತಗೊಳಿಸಿದರು.

ಇದನ್ನೂ ಓದಿ: ಶಿವಸೇನೆ ಬಳಿಕ ಎನ್‌ಸಿಪಿಯೂ ಹೋಳು: ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಕ್ಷಿಪ್ರಕ್ರಾಂತಿ; ವಿಪಕ್ಷಗಳ ಮೈತ್ರಿಕೂಟಕ್ಕೆ ಹಿನ್ನಡೆ

 

 

Latest Videos
Follow Us:
Download App:
  • android
  • ios