ಪವಾರ್ ಕದನ: ಅಜಿತ್ ಅನರ್ಹತೆಗೆ ಶರದ್ ಅಸ್ತ್ರ: ಶರದ್ ಬಣದ ಪ್ರಮುಖರ ಅನರ್ಹತೆಗೆ ಅಜಿತ್ ಮೊರೆ; ಯಾರ ಪಾಲಾಗುತ್ತೆ ಪಕ್ಷ?
ಶರದ್ ಪವಾರ್ ಹಾಗೂ ಅವರ ವಿರುದ್ಧ ಬಂಡೆದ್ದಿರುವ ಸೋದರ ಸಂಬಂಧಿ ಅಜಿತ್ ಪವಾರ್ ಬಣಗಳ ಮಧ್ಯೆ ಸೋಮವಾರ ಸಂಘರ್ಷ ತಾರಕಕ್ಕೇರಿದೆ. ಉಭಯ ಬಣಗಳು ಉಚ್ಚಾಟನೆ, ಶಿಸ್ತುಕ್ರಮ, ಅನರ್ಹತೆ ಅರ್ಜಿ ಹಾಗೂ ನೋಟಿಸ್‌ಗಳ ಭರಾಟೆ ಮೂಲಕ ಪರಸ್ಪರ ಭರ್ಜರಿಯಾಗಿ ಕತ್ತಿ ಮಸೆದಿವೆ.
ಮುಂಬೈ (ಜುಲೈ 4, 2023): ಮಹಾರಾಷ್ಟ್ರದಲ್ಲಿ ಭಾನುವಾರ ನಡೆದ ರಾಜಕೀಯ ಕ್ಷಿಪ್ರಕ್ರಾಂತಿಯ ಬಳಿಕ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಪರಮೋಚ್ಚ ನಾಯಕ ಶರದ್ ಪವಾರ್ ಹಾಗೂ ಅವರ ವಿರುದ್ಧ ಬಂಡೆದ್ದಿರುವ ಸೋದರ ಸಂಬಂಧಿ ಅಜಿತ್ ಪವಾರ್ ಬಣಗಳ ಮಧ್ಯೆ ಸೋಮವಾರ ಸಂಘರ್ಷ ತಾರಕಕ್ಕೇರಿದೆ. ಉಭಯ ಬಣಗಳು ಉಚ್ಚಾಟನೆ, ಶಿಸ್ತುಕ್ರಮ, ಅನರ್ಹತೆ ಅರ್ಜಿ ಹಾಗೂ ನೋಟಿಸ್‌ಗಳ ಭರಾಟೆ ಮೂಲಕ ಪರಸ್ಪರ ಭರ್ಜರಿಯಾಗಿ ಕತ್ತಿ ಮಸೆದಿವೆ.
ಒಂದೆಡೆ ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಕಾರಣ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ವಜಾ ಮಾಡಿದ್ದಾರೆ. ಅಲ್ಲದೆ ಅಜಿತ್ ಪವಾರ್ ಜೊತೆ ಕಾಣಿಸಿಕೊಂಡ ಮೂವರು ಜಿಲ್ಲಾ ಮಟ್ಟದ ನಾಯಕರನ್ನೂ ವಜಾ ಮಾಡಲಾಗಿದೆ. ಇದೇ ವೇಳೆ, ಅಜಿತ್ ಪವಾರ್ ಸೇರಿ 9 ಶಾಸಕರ ಅನರ್ಹತೆಗೆ ಶರದ್ ಬಣವು ವಿಧಾನಸಭಾ ಸ್ಪೀಕರ್‌ಗೆ ಮನವಿ ಮಾಡಿದೆ.
ಇದನ್ನು ಓದಿ: ಶರದ್ ಪವಾರ್ ‘ಪುತ್ರಿ ಪ್ರೇಮ’ ಅಜಿತ್ ಬಂಡಾಯಕ್ಕೆ ಕಾರಣ: 2 ವರ್ಷದಲ್ಲಿ 2ನೇ ಮಹಾ ವಿಪಕ್ಷ ಹೋಳು; ವಿಭಜನೆಯ ಲಾಭ ಬಿಜೆಪಿಗೆ
ಇನ್ನೊಂದೆಡೆ, ಇದಕ್ಕೆ ಅಜಿತ್ ಪವಾರ್ ಬಣವೂ ಸಡ್ಡು ಹೊಡೆದಿದೆ. ಹಾಲಿ ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ ಪಾಟೀಲ್‌ರನ್ನು ಬದಲಿಸಿ ಸಂಸದ ಸುನೀಲ್ ತತ್ಕರೆ ಅವರನ್ನು ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷರಾಗಿ ಘೋಷಿಸಿದೆ ಹಾಗೂ ಅಜಿತ್ ಪವಾರ್ ವಿಧಾನಸಭೆಯ ಎನ್‌ಸಿಪಿ ಶಾಸಕಾಂಗ ನಾಯಕ ಎಂದು ಪ್ರಕಟಿಸಿದೆ. ಇನ್ನು ಪವಾರ್ ಬಣದ ಎನ್‌ಸಿಪಿ ಶಾಸಕರಾದ ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಅವ್ಹಾಡ್ (ನೂತನ ವಿಪಕ್ಷ ನಾಯಕ) ಅವರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದೆ.
ಪವಾರ್ ಬಣ ಗುಡುಗು:
9 ಶಾಸಕರು ಮತ್ತು ಇಬ್ಬರು ಸಂಸದರ ದಿಢೀರ್ ಬಂಡಾಯದಿಂದ ತಲ್ಲಣಗೊಂಡಿದ್ದ ಶರದ್ ಪವಾರ್ ತಿರುಗೇಟು ಪ್ರಕ್ರಿಯೆ ಆರಂಭಿಸಿದ್ದಾರೆ. ಅಜಿತ್ ಪವಾರ್ ಸೇರಿದಂತೆ 9 ಶಾಸಕರನ್ನು ಅನರ್ಹಗೊಳಿಸುವಂತೆ ವಿಧಾನಸಭೆಯ ಸ್ಪೀಕರ್‌ಗೆ ಪಕ್ಷ ಮನವಿ ಮಾಡಿದೆ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿಯವರಾದ ರಾಹುಲ್ ನಾರ್ವೇಕರ್ ಸ್ಪೀಕರ್ ಹುದ್ದೆ ಹೊಂದಿದ್ದಾರೆ. ಅವರು ಕೈಗೊಳ್ಳುವ ನಿರ್ಧಾರದ ಮೇಲೆ 9 ಶಾಸಕರ ಅನರ್ಹತೆ ವಿಷಯ ನಿರ್ಧಾರವಾಗಲಿದೆ. ನಾರ್ವೇಕರ್ ಕೂಡ ಕೋರಿಕೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಹೀಗಾಗಿ ಎಲ್ಲರ ಕಣ್ಣು ಇದೀಗ ಸ್ಪೀಕರ್‌ರತ್ತ ನೆಟ್ಟಿದೆ.
ಇದನ್ನೂ ಓದಿ: ಅಜಿತ್ ಪವಾರ್ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ: ಚುನಾವಣಾ ಆಯೋಗಕ್ಕೂ ಮಾಹಿತಿ
ಇದೇ ವೇಳೆ, ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಹಾಗೂ ಸಂಸದ ಸುನೀಲ್ ತತ್ಕರೆ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪಕ್ಷದಿಂದ ವಜಾಗೊಳಿಸಲಾಗಿದೆ. ಅಲ್ಲದೆ, ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್‌ಗೆ ಪತ್ರವೊಂದನ್ನು ಬರೆದಿದ್ದು, ಸುನೀಲ್ ತತ್ಕರೆ ಅವರನ್ನು ಲೋಕಸಭಾ ಸದಸ್ಯತ್ವದಿಂದ ಮತ್ತು ಪ್ರಫುಲ್ ಪಟೇಲ್ ಅವರನ್ನು ರಾಜ್ಯಸಭಾ ಸದಸ್ಯತ್ವದಿಂದ ಅನರ್ಹ ಮಾಡುವಂತೆ ಉಭಯ ಸದನಗಳ ಸಭಾಧ್ಯಕ್ಷರಿಗೆ ಕೋರಬೇಕು ಎಂದು ಕೋರಿದ್ದಾರೆ.
ಭಾನುವಾರ ಅಜಿತ್ ಪವಾರ್ ಜೊತೆ ಕಾಣಿಸಿಕೊಂಡ ಮುಂಬೈ ವಿಭಾಗೀಯ ಎನ್‌ಸಿಪಿ ಮುಖ್ಯಸ್ಥ ನರೇಂದ್ರ ರಾಥೋಡ್, ಅಕೋಲಾ ಜಿಲ್ಲಾ ಎನ್‌ಸಿಪಿ ಮುಖ್ಯಸ್ಥ ವಿಜಯ್ ದೇಶ್‌ಮುಖ್ ಮತ್ತು ಮಾಜಿ ಸಚಿವ ಶಿವಾಜಿರಾವ್ ಗರ್ಜೆ ಅವರನ್ನೂ ಪಕ್ಷದಿಂದ ವಜಾಗೊಳಿಸಲಾಗಿದೆ.
ಇದನ್ನೂ ಓದಿ: ಶಿವಸೇನೆ ಬಳಿಕ ಎನ್‌ಸಿಪಿಯೂ ಹೋಳು: ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಕ್ಷಿಪ್ರಕ್ರಾಂತಿ; ವಿಪಕ್ಷಗಳ ಮೈತ್ರಿಕೂಟಕ್ಕೆ ಹಿನ್ನಡೆ
ಆಯೋಗಕ್ಕೂ ಮಾಹಿತಿ:
ಇದೇ ವೇಳೆ ಅಜಿತ್ ಪವಾರ್ ಬಣ, ತನ್ನದೇ ಮೂಲ ಎನ್‌ಸಿಪಿ ಎಂದು ಯಾವುದೇ ಕ್ಷಣದಲ್ಲಿ ಹಕ್ಕು ಮಂಡಿಸುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ರವಾನಿಸಿರುವ ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್, ಎನ್‌ಸಿಪಿಯ ಎಲ್ಲಾ ನಾಯಕರೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಬೆಂಬಲಕ್ಕಿದ್ದಾರೆ ಎಂದು ಖಚಿತಪಡಿಸುವ ಮೂಲಕ, ಪಕ್ಷದ ಹೆಸರು ಮತ್ತು ಚಿಹ್ನೆ ಉಳಿಸಿಕೊಳ್ಳುವ ಯತ್ನ ಆರಂಭಿಸಿದ್ದಾರೆ.
ಅಜಿತ್ ಪವಾರ್ ತಿರುಗೇಟು:
ಶರದ್ ಪವಾರ್‌ಗೆ ಅಜಿತ್ ಪವಾರ್ ಬಣ ಇದರ ಬೆನ್ನಲ್ಲೇ ದಿಟ್ಟ ಎದಿರೇಟು ನೀಡಿದೆ, ಲೋಕಸಭಾ ಸದಸ್ಯ ಸುನಿಲ್ ತತ್ಕರೆ ಅವರನ್ನು ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷರಾಗಿ ಮತ್ತು ಶಾಸಕ ಅಜಿತ್ ಪವಾರ್ ಅವರನ್ನು ವಿಧಾನಸಭೆಯಲ್ಲಿ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿದೆ ಎಂದು ಬಂಡುಕೋರ ನಾಯಕ, ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್ ಘೋಷಿಸಿದ್ದಾರೆ. ಆದರೆ ಶರದ್ ಪವಾರ್ ಅವರೇ ನಮ್ಮ ರಾಷ್ಟ್ರೀಯ ಅಧ್ಯಕ್ಷ. ಅವರ ಸ್ಥಾನಮಾನಕ್ಕೆ ಯಾವುದೇ ಚ್ಯುತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: 'ಮಹಾ' ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರ; ಶರದ್ ಪವಾರ್‌ಗೆ ಮತ್ತೆ ಸೆಡ್ಡು; 9 ಎನ್‌ಸಿಪಿ ನಾಯಕರ ಸಾಥ್
ಅಜಿತ್ ಪವಾರ್ ಮಾತನಾಡಿ, ‘ನಮಗೆ ಪಕ್ಷದ ಬಹುತೇಕ ಶಾಸಕರ ಬೆಂಬಲ ಇದೆ. ಹೀಗಾಗಿ ನಮ್ಮದೇ ಮೂಲ ಎನ್‌ಸಿಪಿ. ನಾವು ಎನ್‌ಸಿಪಿ ಶಾಸಕರಾದ ಜಯಂತ್ ಪಾಟೀಲ್ ಮತ್ತು ನೂತನ ವಿಪಕ್ಷನಾಯಕ ಜಿತೇಂದ್ರ ಅವ್ಹಾಡ್ ಅವರನ್ನು ಅನರ್ಹಗೊಳಿಸುವಂತೆ ಈಗಾಗಲೇ ಸ್ಪೀಕರ್‌ಗೆ ಮನವಿ ಮಾಡಿದ್ದೇವೆ’ ಎಂದಿದ್ದಾರೆ.
ಜಯಂತ್ ಪಾಟೀಲ್, ಹಾಲಿ ರಾಜ್ಯ ಎನ್‌ಸಿಪಿ ಘಟಕದ ಮುಖ್ಯಸ್ಥರಾಗಿದ್ದಾರೆ. ಇನ್ನು ಅಜಿತ್ ಪವಾರ್ ಬಂಡಾಯದ ಬಳಿಕ ಜಿತೇಂದ್ರ ಅವ್ಹಾಡ್ ಅವರನ್ನು ರಾಜ್ಯ ವಿಧಾನಸಭೆಯಲ್ಲಿ ಎನ್‌ಸಿಪಿಯ ಶಾಸಕಾಂಗ ಪಕ್ಷದ ನೂತನ ನಾಯಕನನ್ನಾಗಿ ನೇಮಿಸಲಾಗಿತ್ತು.
ಅಜಿತ್‌ಗೆ ನನ್ನ ಶ್ರೀರಕ್ಷೆ ಇಲ್ಲ
ಅಜಿತ್ ಪವಾರ್ ಬಂಡಾಯಕ್ಕೆ ನನ್ನ ಶ್ರೀರಕ್ಷೆ ಇಲ್ಲ. ನೀಚ ಮನಸ್ಥಿತಿಯವರು ಮಾತ್ರ ಇಂತಹ ಆರೋಪ ಮಾಡಬಹುದು. ನಮ್ಮವರು ಬಿಜೆಪಿ ತಂತ್ರಕ್ಕೆ ಬಲಿಪಶು ಆಗಿದ್ದಾರೆ. ಕಾರ್ಯಕರ್ತರು ವಿಚಲಿತ ಆಗಬಾರದು. ರಾಜ್ಯ ಸುತ್ತಿ ಹೊಸದಾಗಿ ಪಕ್ಷ ಕಟ್ಟುವೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.