ಆರ್‌ಎಸ್‌ಎಸ್‌ ನಿಷೇಧಿಸಿದರೆ ಕಾಂಗ್ರೆಸ್‌ ನಿರ್ನಾಮ ಆಗಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು ನೀಡಿದ್ದು, ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಆವರಣಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ತಡೆಯುವ ಕುರಿತು ವಿಮರ್ಶಿಸುವುದಾಗಿ ಹೇಳಿಕೆ ನೀಡಿದೆ. 

ಬೆಂಗಳೂರು (ಮೇ.27): ಆರ್‌ಎಸ್‌ಎಸ್‌ ನಿಷೇಧಿಸಿದರೆ ಕಾಂಗ್ರೆಸ್‌ ನಿರ್ನಾಮ ಆಗಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು ನೀಡಿದ್ದು, ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಆವರಣಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ತಡೆಯುವ ಕುರಿತು ವಿಮರ್ಶಿಸುವುದಾಗಿ ಹೇಳಿಕೆ ನೀಡಿದೆ. ಈ ಬಗ್ಗೆ ಅಧಿಕೃತ ಖಾತೆ ಮೂಲಕ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಭಾರತದಲ್ಲಿ ಆರ್‌ಎಸ್‌ಎಸ್‌ ಎಂಬ ವಿಚ್ಛಿದ್ರಕಾರಿ ಸಂಘಟನೆ 3 ಬಾರಿ ನಿಷೇಧಕ್ಕೊಳಪಟ್ಟಿತ್ತು. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರೇ ಭಾರತದ ವಿರೋಧಿ ಸಂಘಟನೆ ಎಂಬ ಪ್ರಮಾಣಪತ್ರ ನೀಡಿದ್ದರು. 

ಕಾಂಗ್ರೆಸ್‌ ಆಗಲೂ ಇತ್ತು ಈಗಲೂ ಇದೆ, ಮುಂದೆಯೂ ಇರಲಿದೆ ಎಂದು ತಿರುಗೇಟು ನೀಡಿದೆ. ತನ್ಮೂಲಕ ಆರ್‌ಎಸ್‌ಎಸ್‌ ನಿಷೇಧಿಸಿದರೆ ಕಾಂಗ್ರೆಸ್‌ ನಿರ್ನಾಮವಾಗಲಿದೆ ಎಂಬ ಕಟೀಲ್‌ ಹೇಳಿಕೆಯನ್ನು ತಳ್ಳಿ ಹಾಕಿದ್ದು, ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ತಡೆಯುವ ಕುರಿತು ವಿಮರ್ಶಿಸಲಾಗುವುದು ಎನ್ನುವ ಮೂಲಕ ಪರೋಕ್ಷವಾಗಿ ಆರ್‌ಎಸ್‌ಎಸ್‌ ನಿಷೇಧ ಕುರಿತು ಪರಿಶೀಲಿಸುವುದಾಗಿ ಹೇಳಿದೆ.

ಗೃಹಲಕ್ಷ್ಮೀ ಯೋಜನೆಗಾಗಿ ಆಧಾರ್‌ ಲಿಂಕ್‌ಗೆ ಮುಗಿಬಿದ್ದ ಮಹಿಳೆಯರು

ನಿಮ್ಮದು ಪ್ರೇಮದ ರಾಜಕಾರಣವೇ?: ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದು ದ್ವೇಷ ರಾಜಕಾರಣ ಎನ್ನುವ ಅಶ್ವತ್ಥನಾರಾಯಣ್‌ ಅವರೇ, ತಾವು ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕೊಲೆಗೆ ಕರೆ ನೀಡಿದ್ದು ಪ್ರೇಮ ರಾಜಕಾರಣ ಎನಿಸಿಕೊಳ್ಳುತ್ತದೆಯೇ?’ ಎಂದು ಪ್ರಶ್ನಿಸಿದೆ. ರಾಜ್ಯದ ಮುತ್ಸದ್ದಿ ನಾಯಕನನ್ನು ಕೊಲೆ ಮಾಡುವಂತೆ ಕರೆ ಕೊಟ್ಟರೂ ಸುಮ್ಮನಿರುವುದು ಕಾನೂನು ಹಾಗೂ ಸಂವಿಧಾನಗಳಿಗೆ ಮಾಡುವ ಅಪಚಾರವಾಗಲಿದೆ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದೆ.

ನಿಷೇಧಕ್ಕೆ ಕೈಹಾಕಿದರೆ ಕಾಂಗ್ರೆಸ್‌ ಇರಲ್ಲ: ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿ, ಆರ್‌ಎಸ್‌ಎಸ್‌ ನಿಷೇಧಿಸಿದಾಗಲೆಲ್ಲಾ ದೇಶದಲ್ಲಿ ಕಾಂಗ್ರೆಸ್‌ ಸರ್ಕಾರವೇ ಬಂದಿಲ್ಲ. ಆರ್‌ಎಸ್‌ಎಸ್‌, ಬಜರಂಗದಳ ನಿಷೇಧಕ್ಕೆ ಕೈಹಾಕಿದರೆ ಕಾಂಗ್ರೆಸ್‌ ಇರುವುದೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯವೇ ಅಂತ್ಯವಾಗುತ್ತದೆ. ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆಗೆ ತಾಕತ್‌ ಇದ್ದರೆ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದವರನ್ನು ಬಂಧಿಸಲಿ. ಆರ್‌ಎಸ್‌ಎಸ್‌ ಈ ದೇಶದಲ್ಲಿ ರಾಷ್ಟ್ರಭಕ್ತಿ ಕಲಿಸಿದೆ. ಈ ದೇಶವನ್ನು ನಡೆಸುವ ಪ್ರಧಾನಿ ಸಹ ಆರ್‌ಎಸ್‌ಎಸ್‌ ಸ್ವಯಂಸೇವಕ. ಕೇಂದ್ರದ ಸಚಿವರು ಮತ್ತು ನಾವೆಲ್ಲರೂ ಆರ್‌ಎಸ್‌ಎಸ್‌ ಸ್ವಯಂ ಸೇವಕರು. ಮಾಜಿ ಪ್ರಧಾನಿಗಳಾದ ಜವಹಾರ್‌ಲಾಲ್‌ ನೆಹರು, ಇಂದಿರಾಗಾಂಧಿ ಮತ್ತಿತರರು ಆರ್‌ಎಸ್‌ಎಸ್‌ ನಿಷೇಧಕ್ಕೆ ಮುಂದಾಗಿ ಕೈ ಸುಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ದ್ವೇಷ, ವಿಭಜನೆಯ ಮೂಲಕ ಕಾಂಗ್ರೆಸ್‌ ಆಡಳಿತ ಮಾಡುತ್ತಿದೆ. ಇವರ ಸಚಿವ ಸಂಪುಟದ ಗಲಾಟೆಯಲ್ಲಿಯೇ ಕಾಂಗ್ರೆಸ್‌ ವಿಭಜನೆಯಾಗುತ್ತದೆ. ಇದರ ಭಯದಲ್ಲಿ ಆರ್‌ಎಸ್‌ಎಸ್‌ ಹೆಸರಲ್ಲಿ ಕಾಂಗ್ರೆಸ್‌ ಆರೋಪ ಮಾಡುತ್ತಿದೆ. ಇವರ ಜಗಳ ಹೊರ ಬಾರದಂತೆ ತಡೆಯಲು ಇದೊಂದು ಷಡ್ಯಂತ್ರವಾಗಿದೆ ಎಂದು ಕಿಡಿಕಾರಿದರು.

ಉಚಿತ ವಿದ್ಯುತ್‌ಗೆ ಬೇಕು ತಿಂಗಳಿಗೆ 2000 ಕೋಟಿ: 5 ಗ್ಯಾರಂಟಿ ಜಾರಿಗೆ ಖರ್ಚಿನ ವರದಿ ಕೇಳಿದ ಸರ್ಕಾರ

ವಿಷಯಾಂತರಕ್ಕಾಗಿ ನಿಷೇಧ ಹೇಳಿಕೆ: ಆರ್‌.ಅಶೋಕ್‌ ಮಾತನಾಡಿ, ಉಚಿತ ವಿಚಾರವನ್ನು ದೂರವಿಟ್ಟು ವಿಷಯಾಂತರ ಮಾಡಲು ಆರ್‌ಎಸ್‌ಎಸ್‌ ನಿಷೇಧ ಮಾಡುವ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ಮತ್ತು ಬಜರಂಗದಳ ಹಿಂದೂಗಳ ಧ್ವನಿ. ಹಿಂದೂಗಳ ಪರವಾಗಿ ನಿಲ್ಲುವ ಸಾರ್ವಜನಿಕ ಸಂಸ್ಥೆಗಳಿವು. ಆರ್‌ಎಸ್‌ಎಸ್‌ ನಿಷೇಧ ಮಾಡಿದರೆ ಗೂಟದ ಕಾರು ಮೂರು ತಿಂಗಳೂ ಇರುವುದಿಲ್ಲ. ದೇಶದ ಪ್ರಧಾನಿ, ಕೇಂದ್ರ ಗೃಹ ಸಚಿವರು, ರಾಷ್ಟ್ರಪತಿಗಳು ಆರ್‌ಎಸ್‌ಎಸ್‌ನವರಾಗಿದ್ದಾರೆ. ನಾವೂ ಆರ್‌ಎಸ್‌ಎಸ್‌ನವರು ಎಂದು ಹೇಳಿದರು. ದೇಶ ವಿರೋಧಿ ಪಿಎಫ್‌ಐ, ಕೆಎಫ್‌ಡಿ, ಹಿಜಾಬ್‌, ಗೋಹತ್ಯೆ ನಿಷೇಧ ರದ್ದು ಮಾಡುವ ಬೇಡಿಕೆ ಇಟ್ಟಅಮ್ನೆಸ್ಟಿಇಂಟರ್‌ನ್ಯಾಷನಲ್‌ನವರು ಕಾಂಗ್ರೆಸ್‌ ಪರ ಇರುವವರು. ಅವರನ್ನು ಸಂತುಷ್ಟಗೊಳಿಸಲು ಆರ್‌ಎಸ್‌ಎಸ್‌ ವಿಚಾರ ಪ್ರಸ್ತಾಪ ಮಾಡಿದ್ದಾರೆ. ನಾವು ಇದಕ್ಕೆ ಸೊಪ್ಪು ಹಾಕುವುದಿಲ್ಲ. ಇದನ್ನು ಬಿಜೆಪಿ ಎದುರಿಸಲಿದೆ ಎಂದರು.