ಸ್ಪೀಕರ್‌ ಹುದ್ದೆ ಮಂತ್ರಿ ಸ್ಥಾನಕ್ಕಿಂತ ಮಹತ್ವದ್ದು: ಯು.ಟಿ.ಖಾದರ್‌

ವಿಧಾನಸಭಾಧ್ಯಕ್ಷ ಸ್ಥಾನ ಸಿಕ್ಕಿದ ಬಳಿಕ ಉಳ್ಳಾಲ ಕ್ಷೇತ್ರದ ಜನರಿಂದ ದೂರವಾಗುತ್ತೇನೆ ಎನ್ನುವ ಭಾವನೆ ಬೇಡ. ಈ ಸ್ಥಾನದಲ್ಲಿ ಇದ್ದುಕೊಂಡೇ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎಂದು ವಿಧಾನಸಭೆ ನೂತನ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದ್ದಾರೆ. 

The post of Speaker is more important than the post of Minister Says UT Khader gvd

ಮಂಗಳೂರು (ಮೇ.26): ವಿಧಾನಸಭಾಧ್ಯಕ್ಷ ಸ್ಥಾನ ಸಿಕ್ಕಿದ ಬಳಿಕ ಉಳ್ಳಾಲ ಕ್ಷೇತ್ರದ ಜನರಿಂದ ದೂರವಾಗುತ್ತೇನೆ ಎನ್ನುವ ಭಾವನೆ ಬೇಡ. ಈ ಸ್ಥಾನದಲ್ಲಿ ಇದ್ದುಕೊಂಡೇ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎಂದು ವಿಧಾನಸಭೆ ನೂತನ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದ್ದಾರೆ. ಸ್ಪೀಕರ್‌ ಆದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ಪೀಕರ್‌ ಆಗಿದ್ದರೂ ಕ್ಷೇತ್ರದ ಜನರ ಜತೆ ನಿರಂತರ ಒಡನಾಟ, ಸಂಪರ್ಕ ಇಟ್ಟುಕೊಳ್ಳುತ್ತೇನೆ. ಕ್ಷೇತ್ರದ ಜನರಿಗೆ ನಾನು ಮಂತ್ರಿಯಾಗಬೇಕು ಎನ್ನುವ ಬೇಡಿಕೆ ಇರಬಹುದು. 

ಆದರೆ ಸ್ಪೀಕರ್‌ ಸ್ಥಾನ ಮಂತ್ರಿ ಸ್ಥಾನಕ್ಕಿಂತ ಮಹತ್ವದ್ದು. ಮಂತ್ರಿಯಾದರೆ ಒಂದೇ ಇಲಾಖೆಗೆ ಮಾತ್ರ ಮಂತ್ರಿ. ಈಗ ಎಲ್ಲ ಇಲಾಖೆಗಳು ನನ್ನ ವ್ಯಾಪ್ತಿಗೆ ಬರುತ್ತವೆ. ಜನರಿಗೆ ಯಾವ ಕೆಲಸ ಆಗಬೇಕೋ ಆಯಾ ಇಲಾಖೆ ಸಚಿವರ ಜತೆ ಮಾತುಕತೆ ನಡೆಸಿ ಕಾರ್ಯಗತಗೊಳಿಸುತ್ತೇನೆ. ನನ್ನ ಸ್ಥಾನ ಜನರ ಸೇವೆಗೆ ಅಡ್ಡಿ ಬರಲ್ಲ, ಅದನ್ನು ಕಾರ್ಯಗಳ ಮೂಲಕವೇ ತೋರಿಸಿಕೊಡುತ್ತೇನೆ, ಕೆಲವೇ ತಿಂಗಳಲ್ಲಿ ಇದು ಜನರಿಗೆ ಅರಿವಾಗಲಿದೆ ಎಂದು ಖಾದರ್‌ ಹೇಳಿದರು.

ನಮ್ಮ ಮೆಟ್ರೋಗೆ ಪ್ರಯಾಣಿಕರ ಸಂಖ್ಯೆ ಏರಿಕೆ: 6 ಕೋಟಿ ಹೆಚ್ಚು ಆದಾಯ

ಜನರ ಪ್ರೀತಿಯೇ ಪ್ರೋಟೊಕಾಲ್‌: ಸ್ಪೀಕರ್‌ ಆದ ಬಳಿಕವೂ ಪ್ರೋಟೋಕಾಲ್‌ ಅಂತ ಏನಿಲ್ಲ. ಜನರ ಪ್ರೀತಿಯೇ ನನಗೆ ಪ್ರೋಟೋಕಾಲ್‌. ಸಾಮಾನ್ಯ ಜನರು ನನ್ನನ್ನು ತಲುಪಲು ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದರು.

ಪೀಠದ ಗೌರವ ಉಳಿಸುತ್ತೇನೆ: ವಿಧಾನ ಸಭೆಯಲ್ಲಿ ದ್ವೇಷ, ಆವೇಶ ಇಲ್ಲದೆ ಹಿರಿಯ ಕಿರಿಯ ಸದಸ್ಯರ ವಿಶ್ವಾಸದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ನೆಮ್ಮದಿಯ ಬದುಕು ನಡೆಸಲು ಬೇಕಾಗಿರುವ ಚರ್ಚೆ ಹಾಗೂ ಅದಕ್ಕೆ ಪೂರಕವಾಗಿರುವ ಫಲಿತಾಂಶವನ್ನು ತರಲು ಪೂರಕವಾದ ವಾತಾವರಣ ಸೃಷ್ಟಿಮಾಡಲು ಪ್ರಯತ್ನ ಮಾಡುತ್ತೇನೆ. ಈ ಮೂಲಕ ವಿಧಾನಸಭಾಧ್ಯಕ್ಷ ಪೀಠಕ್ಕೆ ಚ್ಯುತಿ ಬರದಂತೆ ಗೌರವ ತಂದುಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಸ್ಪೀಕರ್‌ ಸ್ಥಾನ ವಹಿಸಿಕೊಳ್ಳಲು ಪಕ್ಷದ ಹೈ ಕಮಾಂಡ್‌ ತಿಳಿಸಿತ್ತು. ಅದಕ್ಕೆ ಬದ್ಧನಾಗಿ ಸ್ವೀಕಾರ ಮಾಡಿದ್ದೇನೆ. ನಾನು ವಯಸ್ಸಿನಲ್ಲಿ ಕಿರಿಯನಾಗಿರಬಹುದು, ಆದರೆ ಅನುಭವದಲ್ಲಿ ಹಿರಿಯನಾಗಿದ್ದೇನೆ. ಈ ಹುದ್ದೆಯ ಮೂಲಕ ಇನ್ನೂ ಕಲಿಯಲು ಸಾಕಷ್ಟಿದೆ ಎಂದರು.

ರಾಜೀನಾಮೆ ಕೊಟ್ಟು ಸ್ಪೀಕರ್‌: ಹಿಜಾಬ್‌ ಸೇರಿದಂತೆ ಹಿಂದಿನ ಸರ್ಕಾರ ತಂದ ವಿವಿಧ ಯೋಜನೆಗಳನ್ನು ಹೊಸ ಸರ್ಕಾರ ಬಂದ ಬಳಿಕ ತೆಗೆಯಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಖಾದರ್‌, ನಾನು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ ಬಳಿಕ ಸ್ಪೀಕರ್‌ ಹುದ್ದೆ ಅಲಂಕರಿಸಿದ್ದೇನೆ. ಈಗ ನಾನು ನನ್ನ ವಿಧಾನಸಭಾ ವ್ಯಾಪ್ತಿ ಹಾಗೂ ನನ್ನ ಸಭಾಧ್ಯಕ್ಷತೆಯ ವ್ಯಾಪ್ತಿಯ ವಿಚಾರದಲ್ಲಿ ಮಾತ್ರ ಮಾತನಾಡಬಹುದು ಎಂದು ಹೇಳಿದರು.

ಸುನಿಲ್‌ ಕುಮಾರ್‌ಗೆ ಟಾಂಗ್‌: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಳೆದ ಸರ್ಕಾರದ ಸಮಯದಲ್ಲಿ ತುಳುನಾಡಿನವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದರೂ ಅವರಿಗೆ ಏನೂ ಮಾಡಲಾಗಿಲ್ಲ. ಮುಂದೆ ಎಲ್ಲರ ಅಭಿಪ್ರಾಯ ಪಡೆದುಕೊಂಡು ಈ ಕುರಿತು ಸಹಕಾರ ನೀಡುವುದಾಗಿ ತಿಳಿಸಿದರು.

ಹೊಸ ಶಾಸಕರಿಗೆ ತರಬೇತಿ: ನೂತನವಾಗಿ ಆಯ್ಕೆಯಾಗಿ ಬಂದಿರುವ ಶಾಸಕರಿಗೆ ಮೂರು ದಿನಗಳ ತರಬೇತಿ ಆಯೋಜಿಸಲಾಗುತ್ತದೆ. ಅಲ್ಲದೆ, ಹೊಸ ಶಾಸಕರಿಗೆ ಹೆಚ್ಚಿನ ಅವಕಾಶ ನೀಡಲು ಆದ್ಯತೆ ನೀಡುವುದಾಗಿ ಯು.ಟಿ. ಖಾದರ್‌ ತಿಳಿಸಿದ್ದಾರೆ. ರಾಜ್ಯದಲ್ಲಿ ಈಗ 70ರಷ್ಟುಹೊಸ ಶಾಸಕರು ಇದ್ದಾರೆ. ಅವರಿಗೆ ವಿಧಾನಸಭೆಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು, ಸಂಸದೀಯ ನೀತಿ ನಿಯಮಗಳನ್ನು ಪಾಲಿಸುವುದು ಹೇಗೆ, ಸಭೆಯನ್ನು ಗೌರವಿಸುವ ವಿಚಾರದಲ್ಲಿ ತರಬೇತಿ ಆಯೋಜಿಸಲಾಗುತ್ತದೆ. ಜತೆಗೆ ಹಿರಿಯ ಶಾಸಕರಿಗೂ ರಿಫ್ರೆಶ್‌ ತರಬೇತಿ ಆಯೋಜಿಸುವ ಯೋಜನೆ ಇದೆ ಎಂದು ಖಾದರ್‌ ಮಾಹಿತಿ ನೀಡಿದರು.

ಕಾಂಗ್ರೆಸ್‌ ಗ್ಯಾರಂಟಿಯೀಗ ಎಚ್‌.ಡಿ.ಕುಮಾರಸ್ವಾಮಿಗೆ ಅಸ್ತ್ರ

ಅಭಿಮಾನಿಗಳಿಂದ ಭವ್ಯ ಸ್ವಾಗತ: ವಿಧಾನಸಭಾಧ್ಯಕ್ಷರಾಗಿ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಯು.ಟಿ. ಖಾದರ್‌ ಅವರನ್ನು ನೂರಾರು ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು. ಬೆಳಗ್ಗಿನಿಂದಲೇ ನಗರದ ಸಕ್ರ್ಯೂಟ್‌ ಹೌಸ್‌ನಲ್ಲಿ ಜನರು, ಮುಖಂಡರ ದಂಡೇ ಕಂಡುಬಂದಿತ್ತು. ಖಾದರ್‌ ಆಗಮಿಸಿದ ಕೂಡಲೆ ಮುಗಿಬಿದ್ದು ಅಭಿನಂದಿಸಿದರು. ನೂರಾರು ಮಂದಿ ಸರಣಿಯಲ್ಲಿ ಸಾಗಿ ಖಾದರ್‌ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಅಭಿಮಾನಿಗಳ ನೂಕುನುಗ್ಗಲು ಕಂಡುಬಂತು.

Latest Videos
Follow Us:
Download App:
  • android
  • ios