ಕಾಂಗ್ರೆಸ್ ಗ್ಯಾರಂಟಿಯೀಗ ಎಚ್.ಡಿ.ಕುಮಾರಸ್ವಾಮಿಗೆ ಅಸ್ತ್ರ
ಅಧಿಕಾರಕ್ಕೆ ಬರುವ ಮುನ್ನ ಐದು ಗ್ಯಾರಂಟಿಗಳ ಬಗ್ಗೆ ಭರವಸೆ ನೀಡಿದ ಕಾಂಗ್ರೆಸ್ ಪಕ್ಷವು ಸರ್ಕಾರ ರಚನೆಯಾದ ಬಳಿಕ ಷರತ್ತು ಅನ್ವಯ ಎಂದು ಹೇಳುತ್ತಿದ್ದು, ಮಾರ್ಗಸೂಚಿಗಳನ್ನು ಹಿಡಿದುಕೊಂಡು ಪಕ್ಷದ ಕಾರ್ಯಕರ್ತರು ಆಂದೋಲನ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಬೆಂಗಳೂರು (ಮೇ.26): ಅಧಿಕಾರಕ್ಕೆ ಬರುವ ಮುನ್ನ ಐದು ಗ್ಯಾರಂಟಿಗಳ ಬಗ್ಗೆ ಭರವಸೆ ನೀಡಿದ ಕಾಂಗ್ರೆಸ್ ಪಕ್ಷವು ಸರ್ಕಾರ ರಚನೆಯಾದ ಬಳಿಕ ಷರತ್ತು ಅನ್ವಯ ಎಂದು ಹೇಳುತ್ತಿದ್ದು, ಮಾರ್ಗಸೂಚಿಗಳನ್ನು ಹಿಡಿದುಕೊಂಡು ಪಕ್ಷದ ಕಾರ್ಯಕರ್ತರು ಆಂದೋಲನ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ. ಗುರುವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್‌ನ ಆತ್ಮಾವಲೋಕನ ಸಭೆಯಲ್ಲಿ ಅವರು ಸುದೀರ್ಘವಾಗಿ ಮಾತನಾಡಿದರು.
ನಾವು ಹಣದಿಂದ ಚುನಾವಣೆ ನಡೆಸಲು ಸಾಧ್ಯವಿಲ್ಲ. ರಾಜಕೀಯವನ್ನೂ ಮಾಡಲಾಗುವುದಿಲ್ಲ. ಜನರ ಮನಸ್ಸು ಗೆದ್ದು ರಾಜಕಾರಣ ಮಾಡಬೇಕು. ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿದೆ. ಪ್ರತಿಯೊಬ್ಬರಿಗೂ ಉಚಿತ ಎಂದು ಹೇಳಿದವರು ಈಗ ಷರತ್ತುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹೇಳಿದ್ದನ್ನು ಇಟ್ಟುಕೊಂಡು ಜನರ ಮುಂದೆ ಹೋಗಬೇಕು. ಜನತೆಯನ್ನೇ ಆಂದೋಲನದಲ್ಲಿ ಧುಮುಕುವಂತೆ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್‌ನ ಗ್ಯಾರಂಟಿಯೀಗ ಗಳಗಂಟಿ: ಮಾಜಿ ಸಿಎಂ ಬೊಮ್ಮಾಯಿ ಕಿಡಿ
ಹಣವಿಲ್ಲದೇ ಸೋಲು: ಗೆದ್ದರೆ ನಾವು ಗೆಲುವಿನ ಕಾರಣಗಳನ್ನು ಹುಡುಕಲು ಹೋಗುವುದಿಲ್ಲ. ಸೋಲನುಭವಿಸಿದರೆ ಕಾರಣ ಹುಡುಕಬೇಕಾಗುತ್ತದೆ. ನಾನು ಆ ಕೆಲಸವನ್ನೇ ಮಾಡುತ್ತಿದ್ದೇನೆ. ಕಾರಣಗಳೇನು ಎಂಬುದು ನನಗೆ ಗೊತ್ತಿದೆ. ಕೊನೆ ಕ್ಷಣದಲ್ಲಿ ನಾನು ನನ್ನ ಅಭ್ಯರ್ಥಿಗಳಿಗೆ ನಿರೀಕ್ಷಿತ ಆರ್ಥಿಕ ನೆರವು ಕೊಡಲಾಗಲಿಲ್ಲ. ಅಂತಿಮ ಕ್ಷಣದಲ್ಲಿ ನನ್ನ ಪಕ್ಷಗಳ ಅಭ್ಯರ್ಥಿಗಳಿಗೆ ನೆರವು ಕೊಡುವುದು ಕಷ್ಟವಾಯಿತು. ನಿಮ್ಮ ಸಹಾಯಕ್ಕೆ ನಿಲ್ಲದೆ ಹೋದ ಕಾರಣಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೇರಳವಾಗಿ ಹಣ ವೆಚ್ಚ ಮಾಡಿದವು. ಆಮಿಷಗಳನ್ನೊಡ್ಡಿದವು. ಅವುಗಳಿಗೆ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ವೈಯಕ್ತಿಕ ನೆಲೆಗಟ್ಟಿನಲ್ಲಿ ಯಾರನ್ನೂ ಟೀಕೆ ಮಾಡಲಿಲ್ಲ, ತೇಜೋವಧೆ ಮಾಡಲಿಲ್ಲ. ಅಭಿವೃದ್ಧಿ ವಿಷಯವನ್ನಿಟ್ಟುಕೊಂಡು ಹೋದೆವು. ಅದಕ್ಕಾಗಿ ನಾವು ಸೋಲಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ನಂಬಿದವರ ಬೆಂಬಲ ಇಲ್ಲ: ಬಿಜೆಪಿಯಿಂದ ನಲುಗಿದ ಒಂದು ಸಮಾಜದ ಪರವಾಗಿ ನಾವು ದನಿ ಎತ್ತಿದೆವು. ಅಚಲವಾಗಿ ಬೆಂಬಲ ಕೊಟ್ಟೆವು. ಹೆಜ್ಜೆ ಹೆಜ್ಜೆಗೂ ಅವರಿಗೆ ಬಿಜೆಪಿ ಸರ್ಕಾರ ತೊಂದರೆ ಕೊಟ್ಟಾಗ ಧೈರ್ಯವಾಗಿ ನಿಂತೆವು. ಆದರೆ, ಅವರು ನಮ್ಮ ಪಕ್ಷದ ಪರವಾಗಿ ನಿಲ್ಲದೆ ಹೊದರು. ಆರ್ಥಿಕ ಸಮಸ್ಯೆಗಳೂ ನಮ್ಮ ಸೋಲಿಗೆ ಕಾರಣ. ಅಭ್ಯರ್ಥಿಗಳ ಖರ್ಚಿಗೆ ನಾವು ಹಣ ಕೊಡಲಿಲ್ಲ. ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ಸರಿ ಸಮವಾಗಿ ಖರ್ಚು ಮಾಡಲು ನಮ್ಮಿಂದ ಆಗಲಿಲ್ಲ ಎಂದರು. ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜೆಡಿಎಸ್ ಬೆಂಗಳೂರು ನಗರ ಘಟಕ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ ಸೇರಿದಂತೆ ಎಲ್ಲಾ ನೂತನ ಶಾಸಕರು, ಮಾಜಿ ಶಾಸಕರು, ಸೋತ ಅಭ್ಯರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಜೂ.1ರಿಂದ ವಿದ್ಯುತ್ ಬಿಲ್ ಕಟ್ಟಬೇಡಿ: ಸಂಸದ ಪ್ರತಾಪ್ ಸಿಂಹ
ಕಪ್ಪು ಚುಕ್ಕೆ ಇಲ್ಲದಂತೆ ಸಂಘಟನೆ: ಜೆಡಿಎಸ್ ಪಕ್ಷವು ಎಚ್.ಡಿ.ದೇವೇಗೌಡ ಕುಟುಂಬದ ಪಕ್ಷ ಎಂಬ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಈ ಕಪ್ಪುಚುಕ್ಕೆ ಇಲ್ಲದಂತೆ ಪಕ್ಷವನ್ನು ಸಂಘಟಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕುಮಾರಸ್ವಾಮಿ ಹೇಳಿದರು. ಪಕ್ಷ ಸಂಘಟನೆ ಮಾಡಲು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇವೆ. ಪಕ್ಷವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವವರಿಗೆ ಹೊಣೆಗಾರಿಕೆಯನ್ನು ನೀಡಲಾಗುವುದು. ಆದರೆ ಎಲ್ಲವನ್ನು ನನ್ನೊಬ್ಬನ ತೆಲಗೆ ಕಟ್ಟಬೇಡಿ. ಪ್ರತಿ ಸಮಾಜದ ಮುಖಂಡರು ಪಕ್ಷವನ್ನು ಸಂಘಟಿಸಲು ಮುಂದಾಗಬೇಕು. ಈಗ ಯಾರ ಮನೆಯನ್ನಾದರೂ ಹಾಳು ಮಾಡಬೇಕಾದರೆ, ಅವರನ್ನು ರಾಜಕೀಯಕ್ಕೆ ಕರೆದುಕೊಮಡು ಬಂದು ಅಭ್ಯರ್ಥಿ ಮಾಡು ಎನ್ನುವಂತಾಗಿದೆ. ಈ ಚುಆನವಣೆಯಲ್ಲಿ ಕಂಡಂತಹ ಕಟು ಸತ್ಯ ಇದು. ನಿಮ್ಮನ್ನು ಮತ್ತೆ ಅಭ್ಯರ್ಥಿಗಳಾಗಿ ಎಂದು ಹೇಳುವ ಧೈರ್ಯ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.