ನಮ್ಮ ಮೆಟ್ರೋಗೆ ಪ್ರಯಾಣಿಕರ ಸಂಖ್ಯೆ ಏರಿಕೆ: 6 ಕೋಟಿ ಹೆಚ್ಚು ಆದಾಯ
ಬಿಸಿಲ ಬೇಗೆ, ಹೊಸದಾದ ವೈಟ್‌ಫೀಲ್ಡ್ ಐಟಿ ಕಾರಿಡಾರ್, ಐಪಿಎಲ್ ಕ್ರೀಡಾಕೂಟ ಸೇರಿ ಇತರೆ ಕಾರಣದಿಂದ ‘ನಮ್ಮ ಮೆಟ್ರೋ’ದಲ್ಲಿ ಕಳೆದ ಮೂರು ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ಆದಾಯವೂ ಹೆಚ್ಚಳವಾಗಿದೆ.
ಬೆಂಗಳೂರು (ಮೇ.26): ಬಿಸಿಲ ಬೇಗೆ, ಹೊಸದಾದ ವೈಟ್‌ಫೀಲ್ಡ್ ಐಟಿ ಕಾರಿಡಾರ್, ಐಪಿಎಲ್ ಕ್ರೀಡಾಕೂಟ ಸೇರಿ ಇತರೆ ಕಾರಣದಿಂದ ‘ನಮ್ಮ ಮೆಟ್ರೋ’ದಲ್ಲಿ ಕಳೆದ ಮೂರು ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ಆದಾಯವೂ ಹೆಚ್ಚಳವಾಗಿದೆ. ಕಳೆದ ಫೆಬ್ರವರಿಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ 25 ಲಕ್ಷಕ್ಕೂ ಅಧಿಕ ಜನ (25,03,193) ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು, .6.19 ಕೋಟಿ ಹೆಚ್ಚುವರಿ ಆದಾಯ ಬಿಎಂಆರ್‌ಸಿಎಲ್ ಬೊಕ್ಕಸ ಸೇರಿದೆ.
ಬಿಸಿಲ ಬೇಗೆಗೆ ಬೇಸತ್ತ ಜನತೆ ಬೈಕ್ ಬಿಟ್ಟು ಮೆಟ್ರೋದಲ್ಲಿ ಸಂಚರಿಸುವುದು ಹೆಚ್ಚಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾಟಗಳ ವೇಳೆ ರೈಲುಗಳ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿತ್ತು. ಈ ವೇಳೆ ನಿತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ಮೆಟ್ರೋ ಬಳಸಿದ್ದಾರೆ. ಇದರಲ್ಲದೆ ಐಟಿ ಕಾರಿಡಾರ್ ಕೂಡ ಹೆಚ್ಚಿನ ಪ್ರಯಾಣಿಕರನ್ನು ಮೆಟ್ರೋಗೆ ಒದಗಿಸಿದೆ. ಕಳೆದ ಫೆಬ್ರವರಿಯಲ್ಲಿ 1.46 ಕೋಟಿ ಜನರು ಪ್ರಯಾಣಿಸಿದ್ದು, .34.90 ಕೋಟಿ ಆದಾಯಗಳಿಸಿತ್ತು. ಫೆ.6ರಂದು ಒಂದೇ ದಿನ .1.48 ಕೋಟಿ ಆದಾಯ ಗಳಿಸಿತ್ತು. ಈ ವೇಳೆ ಶೇ.60.35 ಪ್ರಯಾಣಿಕರು ಸ್ಮಾರ್ಟ್ ಕಾರ್ಡ್‌ಗಳನ್ನು ಶೇ.39.59 ಟೋಕನ್‌ಗಳನ್ನು, ಮತ್ತು ಶೇ.0.06 ಗ್ರೂಪ್ ಟಿಕೆಟನ್ನು ಬಳಸಿದ್ದರು.
ಆರ್‌ಎಸ್‌ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ: ಪ್ರಿಯಾಂಕ್ ವಿರುದ್ಧ ನಳಿನ್ ವಾಗ್ದಾಳಿ
ಮಾರ್ಟ್‌ನಲ್ಲಿ 1.60 ಕೋಟಿ ಜನರು ಪ್ರಯಾಣಿಸಿದ್ದು, .38.36 ಕೋಟಿ ಆದಾಯ ಗಳಿಸಿತ್ತು. ಮಾ.4ರಂದು ಒಂದೇ ದಿನದಲ್ಲಿ .1.48 ಕೋಟಿ ಆದಾಯ ಹರಿದುಬಂದಿತ್ತು. ಶೇ.59.85 ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ಗಳನ್ನು, ಶೇ.40.09 ಟೋಕನ್‌ಗಳನ್ನು ಮತ್ತು ಶೇ.0.06 ಗ್ರೂಪ್ ಟಿಕೆಟ್ ಬಳಸಿದ್ದಾರೆ. ಕಳೆದ ತಿಂಗಳಲ್ಲಿ 1.71 ಕೋಟಿ ಪ್ರಯಾಣಿಕರು ಮೆಟ್ರೋ ಬಳಸಿದ್ದು .41.10 ಕೋಟಿ ಆದಾಯ ಗಳಿಸಿದೆ. ಏ.3ರಂದು 1.64 ಕೋಟಿ ಆದಾಯ ಗಳಿಸಿದೆ. ಶೇ.54.50 ಸ್ಮಾರ್ಟ್ ಕಾರ್ಡ್‌ಗಳನ್ನು, ಶೇ.45.45 ಟೋಕನ್‌ಗಳನ್ನು ಮತ್ತು ಶೇ.0.05 ಗ್ರೂಪ್ ಟಿಕೆಟನ್ನು ಬಳಸಿದ್ದಾರೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಲೋಕಸಭೆ ರಿಸಲ್ಟ್ ಮೇಲೆ ಕಾಂಗ್ರೆಸ್ ಸರ್ಕಾರದ ಭವಿಷ್ಯ: ಎಚ್‌ಡಿಕೆ
ಇದರ ಜೊತೆಗೆ ಮೆಟ್ರೋದ ಮೊದಲ ಟೆಕ್ ಕಾರಿಡಾರ್ ಆಗಿರುವ ಕೆ.ಆರ್.ಪುರ ಹಾಗೂ ವೈಟ್‌ಫೀಲ್ಡ್ ಮಾರ್ಗ ತೆರೆದುಕೊಂಡಿರುವುದು ಕೂಡ ಪ್ರಯಾಣಿಕರು ಹಾಗೂ ಆದಾಯ ಹೆಚ್ಚಳವಾಗಲು ಕಾರಣ ಎನ್ನುತ್ತಾರೆ ಬಿಎಂಆರ್‌ಸಿಎಲ್ ಅಧಿಕಾರಿಗಳು. ಜುಲೈ ಮಧ್ಯಂತರದ ವೇಳೆಗೆ ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರದವರೆಗೆ ಕಾಮಗಾರಿ ಪೂರ್ಣಗೊಂಡು ಈ ಮಾರ್ಗ ಪೂರ್ಣವಾದಲ್ಲಿ ನಿತ್ಯ ಒಂದೂವರೆ ಲಕ್ಷ ಹೆಚ್ಚುವರಿ ಪ್ರಯಾಣಿಕರು ಮೆಟ್ರೋ ಬಳಸುವ ನಿರೀಕ್ಷೆಯಿದ್ದು, ಪ್ರಯಾಣಿಕರ ಸಂಖ್ಯೆ ಮತ್ತಷ್ಟುಏರಿಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.