ರಾಜ್ಯಸಭಾ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು, ಬಿಜೆಪಿ ಪಾಳಯದಿಂದ ಸುಮಲತಾ ಅಂಬರೀಷ್ ಅವರ ಹೆಸರು ಮುಂಚೂಣಿಯಲ್ಲಿದೆ. ಜೆಡಿಎಸ್‌ನ ದೇವೇಗೌಡರಿಗೆ ಬೆಂಬಲ ನೀಡದಿದ್ದರೆ, ಸುಮಲತಾ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ಬೆಂಗಳೂರು (ಜೂ.2): ರಾಜ್ಯಸಭಾ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ ಪಾಳೆಯದಿಂದ ಮಾಜಿ ಸಂಸದೆ ಸುಮಲತಾ ಅಂಬರೀಷ್(Sumalata Ambareesh) ಅವರ ಹೆಸರು ಮುಂಚೂಣಿಗೆ ಬಂದಿದೆ.
ಹಲವು ದಿನಗಳ ಹಿಂದೆ ನಡೆದ ರಾಜ್ಯ ಬಿಜೆಪಿ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ(DV Sadanandagowda) ಹಾಗೂ ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಅವರ ಹೆಸರುಗಳು ಪ್ರಮುಖವಾಗಿ ಪ್ರಸ್ತಾಪವಾಗಿ ವರಿಷ್ಠರಿಗೆ ರವಾನಿಸಲಾಗಿತ್ತು.
ಇದೀಗ ಆಡಳಿತಾರೂಢ ಕಾಂಗ್ರೆಸ್(Congress) ಪಾಳೆಯದಲ್ಲಿ ಮಹತ್ತರ ಬದಲಾವಣೆಯಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ.ಶಿವಕುಮಾರ್(DK Shivakumar) ಅವರು ಮುಖ್ಯಮಂತ್ರಿ ಗಾದಿ ಏರಲು ಸಜ್ಜಾಗುತ್ತಿದ್ದಂತೆಯೇ ಸುಮಲತಾ ಅಂಬರೀಷ್ ಅವರ ಹೆಸರು ಬಲವಾಗಿ ಕೇಳಿಬಂದಿದ್ದು, ಖುದ್ದು ಬಿಜೆಪಿ ವರಿಷ್ಠರೇ ಆಸಕ್ತಿ ತೋರಿದ್ದಾರೆ ಎಂದು ತಿಳಿದು ಬಂದಿದೆ.
ಗೌಡರ ಆಯ್ಕೆ ಬಗ್ಗೆ ಬಗೆಹರಿಯದ ಗೊಂದಲ:
ಈ ನಡುವೆ ಸಿಗುವ ಒಂದು ಸ್ಥಾನಕ್ಕೆ ಮಾಜಿ ಪ್ರಧಾನಿ ಹಾಗೂ ಮಿತ್ರ ಪಕ್ಷವಾದ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ(HD Devegowda)ರನ್ನು ಪರಿಗಣಿಸಲು ವರಿಷ್ಠರ ಮಟ್ಟದಲ್ಲಿ ಚರ್ಚೆ ನಡೆಸುತ್ತಿದೆಯಾದರೂ ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ದೇವೇಗೌಡರಿಗೆ ಬೆಂಬಲ ನೀಡುವುದು ಬೇಡ ಎಂದಾದಲ್ಲಿ ಬಿಜೆಪಿಯಿಂದಲೇ ಸುಮಲತಾ ಅಂಬರೀಷ್ ಹೆಸರು ಅಂತಿಮಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ.
ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಬೆಂಬಲ ನೀಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸದಸ್ಯರಾಗಿದ್ದ ಸುಮಲತಾ ಅವರು ಜೆಡಿಎಸ್ ಪಕ್ಷ ಎನ್‌ಡಿಎ ಭಾಗವಾದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆ ಬಳಿಕ ಸುಮಲತಾ ಅವರಿಗೆ ಎರಡು ವರ್ಷಗಳಾದರೂ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಇದೀಗ ಅವರ ವರ್ಚಸ್ಸು ಮತ್ತು ರಾಜಕೀಯ ಶಕ್ತಿ ಬಳಸಿಕೊಳ್ಳುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಚಿಂತನೆ ನಡೆದಿದೆ. ಅಂತಿಮವಾಗಿ ಟಿಕೆಟ್ ಘೋಷಣೆಯಾಗುವವರೆಗೆ ಕಾದು ನೋಡಬೇಕಿದೆ.


