ಕರ್ನಾಟಕ ನೂತನ ಸಂಪುಟ ರಚನೆ ಕುರಿತ ಕಾಂಗ್ರೆಸ್ ವರಿಷ್ಠರ ದೆಹಲಿ ಸಭೆಯು ಸೋಮವಾರದ ಬದಲು ಮಂಗಳವಾರ ನಡೆಯಲಿದೆ. ಈ ನಡುವೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತಮ್ಮ ಪ್ರತ್ಯೇಕ ಪಟ್ಟಿಗಳೊಂದಿಗೆ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇಂದು ಸಭೆಯಲ್ಲಿ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆಯಿದೆ.
ಬೆಂಗಳೂರು (ಜೂ.2): ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಅವರ ಸಂಪುಟ ರಚನೆ(Cabinet Reshuffle) ಸಂಬಂಧ ದೆಹಲಿಯಲ್ಲಿ ಸೋಮವಾರ ನಡೆಯಬೇಕಿದ್ದ ಕಾಂಗ್ರೆಸ್ ವರಿಷ್ಠರ ಸಭೆ ಮಂಗಳವಾರಕ್ಕೆ ಮುಂದೂಡಿಕೆ ಕಂಡಿದೆ.
ವರಿಷ್ಠ ರಾಹುಲ್ ಗಾಂಧಿ ಅವರ ಅಲಭ್ಯತೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಂಜೆ ತಡವಾಗಿ ಆಗಮಿಸಿದ ಕಾರಣ ಸಭೆ ಮಂಗಳವಾರ ಬೆಳಗ್ಗೆ 11ಕ್ಕೆ ಮುಂದೂಡಿಕೆಯಾಗಿದೆ.
ರಾಜಸ್ಥಾನ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ(Rajasthan) ಅವರು ಸೋಮವಾರ ತಡವಾಗಿ ದೆಹಲಿ(Delhi)ಗೆ ತಲುಪಿದ್ದರಿಂದ ಹಾಗೂ ವಿಮಾನ ರದ್ದಾದ ಕಾರಣ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ(KC Venugopal) ಅವರು ಸಂಜೆ ವೇಳೆ ದೆಹಲಿಗೆ ಆಗಮಿಸಿದ್ದರಿಂದ ಸಭೆಯನ್ನು ಮುಂದೂಡಲಾಯಿತು ಎಂದು ಮೂಲಗಳು ಹೇಳಿವೆ.
ಆದಾಗ್ಯೂ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕವಾಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದರು. ಸಿದ್ದರಾಮಯ್ಯ ಅವರು ವೇಣುಗೋಪಾಲ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರೆ, ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಪ್ರತ್ಯೇಕ ಪಟ್ಟಿಯೊಂದಿಗೆ ದೆಹಲಿಗೆ ತಲುಪಿರುವ ಈ ನಾಯಕರು ತಮ್ಮ ಪಟ್ಟಿಯ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದು, ಮಂಗಳವಾರ ಬೆಳಗ್ಗೆ 11ಕ್ಕೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ವೇಣುಗೋಪಾಲ್, ಸುರ್ಜೇವಾಲಾ ಅವರು ಸಭೆ ಸೇರಿ ಪಟ್ಟಿ ಅಖೈರುಗೊಳಿಸುವರು. ಇದಾದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಅಂತಿಮ ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸುವರು ಎಂದು ಹೇಳಲಾಗಿದೆ.


