ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧವಾಗಿರುವ ನಡುವೆ ಸ್ಯಾಂಡಲ್‌ವುಡಡ್‌ನಲ್ಲಿ ಚುನಾವಣೆ ತಯಾರಿ ಜೋರಾಗಿದೆ. ಕೆಲ ನಟ-ನಟಿಯರು ಚುನಾವಣೆಯಲ್ಲಿ ಅಗ್ನಿಪರೀಕ್ಷೆಗೆ ಸಜ್ಜಾಗಿದ್ದರೆ, ಇನ್ನೂ ಕೆಲವರು ತಮ್ಮ ರಾಜಕೀಯ ಮಿತ್ರರ ಪರವಾಗಿ ಪ್ರಚಾರ ಮಾಡಲು ಸಜ್ಜಾಗಿದ್ದಾರೆ.

ಬೆಂಗಳೂರು (ಏ.6): ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು 34 ದಿನಗಳು ಬಾಕಿ ಉಳಿದಿವೆ. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು, ಪ್ರಸ್ತುತ ಟಿಕೆಟ್‌ ಫೈನಲ್‌ ಮಾಡುವ ಟೆನ್ಶನ್‌ನಲ್ಲಿದೆ. ಅದರ ನಡುವೆ ಪ್ರಚಾರ ಯಾವ ರೀತಿ ಮಾಡಬೇಕು ಎನ್ನುವ ಯೋಜನೆಗಳೂ ಕೂಡ ಸಿದ್ಧವಾಗುತ್ತಿವೆ. ಈಗಾಗಲೇ ಬಿಜೆಪಿಯ ಕೆಲ ನಾಯಕರು ಹಾಗೂ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಪರವಾಗಿ ಪ್ರಚಾರ ಮಾಡುವುದಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಘೋಷಣೆ ಮಾಡಿದ ಬೆನ್ನಲ್ಲಿಯೇ ಸ್ಯಾಂಡಲ್‌ವುಡ್‌ ಕೂಡ ಚುನಾವಣೆಗೆ ಹೈ ಅಲರ್ಟ್‌ ಆಗಿದೆ. ಸಾಕಷ್ಟು ಕಲಾವಿದರು ಚುನಾವಣೆಯ ವೇಳೆ ಗ್ಲಾಮರ್‌ ಟಚ್‌ ನೀಡಲು ಈಗಾಗಲೇ ಸಜ್ಜಾಗಿದ್ದಾರೆ. ಸುದೀಪ್‌, ಸಿಎಂ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಲಿದ್ದರೆ ಇನ್ನೂ ಕೆಲವರು ನೇರವಾಗಿ ಕದನ ಕಣದಲ್ಲಿಯೇ ಹೋರಾಟ ಮಾಡಲಿದ್ದಾರೆ. ಅವರ ಪಟ್ಟಿ ಕೂಡ ದೊಡ್ಡದಿದೆ. ಈಗಾಗಲೇ ಮಧು ಬಂಗಾರಪ್ಪ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಕೂಡ ಪಡೆದುಕೊಂಡಿದ್ದಾರೆ. ಬಹುತೇಕ ಕಳೆದ ಬಾರಿಯ ಚುನಾವಣೆಯಂತೆಯೇ ಈ ಬಾರಿಯೂ ತಮ್ಮ ಸಹೋದರ ಕುಮಾರ ಬಂಗಾರಪ್ಪ ವಿರುದ್ಧ ಹೋರಾಟ ಮಾಡುವ ಸಾಧ್ಯತೆ ಇದೆ.
ಶಿವಮೊಗ್ಗದ ಸೊರಬದಿಂದ ಬಿಜೆಪಿಯ ಕುಮಾರ ಬಂಗಾರಪ್ಪ ಅವರನ್ನು ಎದುರಿಸಲಿದ್ದಾರೆ. ಕಳೆದ ಬಾರಿ ಜೆಡಿಎಸ್‌ ಟಿಕೆಟ್‌ನಿಂದ ಸಹೋದರನ ವಿರುದ್ಧ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಸೋಲು ಕಂಡಿದ್ದರು. ಆದರೆ, ಈ ಬಾರಿ ಸೇಡು ತೀರಿಸಿಕೊಳ್ಳುವ ಏಕಮೇಮ ಉದ್ದೇಶದೊಂದಿಗೆ ಅವರು ಸ್ಪರ್ಧೆ ಮಾಡಲಿದ್ದಾರೆ.

ಇನ್ನು ಆಮ್‌ ಆದ್ಮಿ ಪಾರ್ಟಿ ಘೋಷಣೆ ಮಾಡಿದ ಮೊದಲ ಪಟ್ಟಿಯಲ್ಲಿ ಹಾಸ್ಯ ನಟ ಟೆನ್ನಿಸ್‌ ಕೃಷ್ಣ ಹಾಗೂ ನಿರ್ಮಾಪಕ ಸ್ಮೈಲ್‌ ಸೀನುಗೆ (ಶ್ರೀನಿವಾಸ್‌ ಎನ್‌) ಕ್ರಮವಾಗಿ ತುರವೇಕೆರೆ ಹಾಗೂ ಕೂಡ್ಲಿಗಿಯಿಂದ ಟಿಕೆಟ್‌ ನೀಡಿದೆ. ಟೆನಿಸ್‌ ಕೃಷ್ಣ ಇದಕ್ಕೂ ಮುನ್ನ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಭಾಗವಾಗಿದ್ದರು. ಕಳೆದ ಚುನಾವಣೆಯ ಬಳಿಕ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕೂಡ ಆಪ್‌ ಪಕ್ಷವನ್ನು ಸೇರಿದ್ದು, ಟಿಕೆಟ್‌ ಪಡೆಯುವ ಸಾಧ್ಯತೆ ಹೆಚ್ಚಿದೆ.

ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮಾತ್ರವೇ ತನ್ನ ಟಿಕೆಟ್‌ ಪಟ್ಟಿಯನ್ನು ಪ್ರಕಟ ಮಾಡಬೇಕಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈಗಾಗಲೇ ತನ್ನ ಟಿಕೆಟ್‌ನ ಮೊದಲ ಹಾಗೂ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ ಹಿರಿಯ ನಟಿ ಉಮಾಶ್ರೀಗೆ ತೇರದಾಳದಿಂದ ಟಿಕೆಟ್‌ ಸಿಗುವ ಸಾಧ್ಯತೆಗಳಿವೆ. ಕಳೆದ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಗಮನಸೆಳೆದ ನಿರ್ಮಾಪಕ ಉಮಾಪತಿ ಗೌಡ, ಬಹುತೇಕ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡಬಹುದು. ನಿರ್ಮಾಪಕ ಸಿಆರ್‌ ಮನೋಹರ್‌ ಕೂಡ ಟಿಕಟ್‌ ರೇಸ್‌ನಲ್ಲಿದ್ದಾರೆ.

ಉತ್ತಮ ಪ್ರಜಾಕೀಯ ಪಾರ್ಟಿ ಮೂಲಕ ಚುನಾವಣೆ ಎದುರಿಸಲು ಸಜ್ಜಾಗಿರುವ ರಿಯಲ್‌ ಸ್ಟಾರ್‌ ಉಪೇಂದ್ರ ಕೂಡ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್‌ ಮಾಡುವ ಇರಾದೆಯಲ್ಲಿದ್ದಾರೆ. ಆದರೆ, ತಾವು ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಎಂದು ಉಪೇಂದ್ರ ಹೇಳಿದ್ದರೂ, ಕೆಲವೆಡೆ ಪ್ರಚಾರ ಸಭೆಗಳಲ್ಲಿ ಭಾಗವಹಿಸಬಹುದು.

ಸುದೀಪ್‌ ಬೆಂಬಲಕ್ಕೆ ಕಾಂಗ್ರೆಸ್‌ ವ್ಯಂಗ್ಯ, 'ಮೋದಿ ಮುಖ ನೋಡಿದ್ರೂ ಓಟ್‌ ಬರ್ತಿಲ್ಲ, ಅದಕ್ಕೆ ಸಿನಿಮಾದವ್ರ ಹಿಂದೆ ಬಿದ್ದಿದ್ದಾರೆ!

ಇನ್ನು ನಟಿ ಭಾವನಾ ರಾಮಣ್ಣ ಯಶವಂತಪುರದಿಂದ ಟಿಕೆಟ್‌ ನಿರೀಕ್ಷೆಯಲ್ಲಿದ್ದರೂ ಅದು ತಪ್ಪಿಹೋಗಿದೆ. ಆದರೆ, ಕಾಂಗ್ರೆಸ್‌ನಲ್ಲಿಯೇ ಇರುವ ಕೆಲವು ಸಿನಿಮಾ ಸ್ಟಾರ್‌ಗಳು ಚುನಾವಣೆಗೆ ನಿಲ್ಲಬೇಕು ಎನ್ನುವ ಆಸೆಯಲ್ಲಿದ್ದಾರೆ. ಪದ್ಮನಾಭನಗರ ಅಥವಾ ಚೆನ್ನಪಟ್ಟಣದಿಂದ ಸ್ಪರ್ಧೆ ಮಾಡಲು ನಟಿ ರಮ್ಯಾ ನಿರಾಕರಿಸಿದ್ದಾರೆ. ಬಹುಶಃ ಅವರನ್ನು ಬಿಜೆಪಿ ಪಕ್ಷ ಸೆಳೆದುಕೊಳ್ಳಬಹುದು ಎನ್ನುವ ಸುದ್ದಿಯೂ ಇದೆ. ಆದರೆ, ಚುನಾವಣೆಗೆ ನಿಲ್ತಾರಾ?ಇಲ್ವಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

ಕರ್ನಾಟಕ ಕುರುಕ್ಷೇತ್ರದಲ್ಲಿ ಬೊಮ್ಮಾಯಿಗೆ ಬಾದ್‌ಷಾ ಬಲ: ಅಖಾಡಕ್ಕೆ ಅಭಿನಯ ಚಕ್ರವರ್ತಿ ಸುದೀಪ್!


ಇನ್ನು ಬಿಜೆಪಿ ಪರವಾಗಿ ಸುಮಲತಾ ಅಂಬರೀಶ್‌ ಮಂಡ್ಯದಿಂದ ಸ್ಪರ್ಧೆ ಮಾಡೋ ಸಾಧ್ಯತೆ ಇದೆ. ಇನ್ನು ಅಭಿಷೇಕ್‌ ಅಂಬರೀಷ್‌ ಬಗ್ಗೆಯೂ ಕುತೂಹಲಗಳು ಉಳಿದುಕೊಂಡಿದೆ. ಅದರೊಂದಿಗೆ ನಟಿ ಶ್ರುತಿ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ಎಂಎಲ್‌ಸಿ ತಾರಾ ಅನುರಾಧ ಕೂಡ ಟಿಕೆಎಟ್‌ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.