ಕರ್ನಾಟಕ ಕಾಂಗ್ರೆಸ್‌ನಲ್ಲಿನ ನಾಯಕತ್ವದ ಗೊಂದಲ ಮತ್ತು ಅಧಿಕಾರ ಹಂಚಿಕೆ ಕುರಿತ ಗೊಂದಲದ ನಡುವೆಯೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ದಿಢೀರ್‌ ಆಗಿ ದೆಹಲಿಗೆ ಭೇಟಿ ನೀಡಿದ್ದಾರೆ.

ನವದೆಹಲಿ : ಕರ್ನಾಟಕ ಕಾಂಗ್ರೆಸ್‌ನಲ್ಲಿನ ನಾಯಕತ್ವದ ಗೊಂದಲ ಮತ್ತು ಅಧಿಕಾರ ಹಂಚಿಕೆ ಕುರಿತ ಗೊಂದಲದ ನಡುವೆಯೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ದಿಢೀರ್‌ ಆಗಿ ದೆಹಲಿಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಸಮಯ ಸಿಕ್ಕರೆ ಹೈಕಮಾಂಡ್‌ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ದೆಹಲಿಯಲ್ಲಿ ಸುಪ್ರೀಂಕೋರ್ಟ್‌, ಹೈಕೋರ್ಟ್ ಹೇಗಿದೆ ಎಂಬುದರ ಅಧ್ಯಯನಕ್ಕೆ ಬಂದಿದ್ದೇವೆ. 3 ಗಂಟೆ ಕಾಲ ಹೈಕೋರ್ಟ್‌ ಕಟ್ಟಡ ವೀಕ್ಷಣೆ ಮಾಡಿದ್ದೇವೆ. ಧಾರವಾಡ ಹೈಕೋರ್ಟ್‌ನ್ನೂ ಆ ಮಾದರಿಯಲ್ಲಿಯೇ ಮಾಡೋಕೆ ಸಾಧ್ಯವೇ ಎಂಬುದರ ಬಗ್ಗೆ ಮತ್ತಷ್ಟು ಅಧ್ಯಯನ ಮಾಡುತ್ತೇವೆ. ನಮ್ಮ ಸರ್ಕಾರ ಇದಕ್ಕೆ ಅಗತ್ಯವಿರುವ ಎಲ್ಲಾ ಸಹಾಯ ಮಾಡಲು ಸಿದ್ಧವಿದೆ. ಬಜೆಟ್‌ನಲ್ಲೂ ವಿಶೇಷ ಹಣ ಒದಗಿಸುವ ಪ್ರಯತ್ನ ಮಾಡ್ತೇವೆ ಎಂದರು.

‌ವಕೀಲರಿಗೆ ಚೇಂಬರ್‌ಗಳನ್ನು ನಿರ್ಮಾಣ

ಹುಬ್ಬಳ್ಳಿ-ಧಾರವಾಡ ಹೈಕೋರ್ಟ್‌ನಲ್ಲಿ ‌ವಕೀಲರಿಗೆ ಚೇಂಬರ್‌ಗಳನ್ನು ನಿರ್ಮಾಣ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ವಕೀಲರ ಚೇಂಬರ್‌ಗಳ ವೀಕ್ಷಣೆಗೆ 12 ಶಾಸಕರು, ವಕೀಲರ ಜತೆ ಬಂದಿದ್ದೇನೆ. ಸುಪ್ರೀಂಕೋರ್ಟ್‌ಗೆ ಭೇಟಿ ನೀಡಿ, ವೀಕ್ಷಣೆ ಮಾಡ್ತೀವಿ. ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಸುಪ್ರೀಂಕೋರ್ಟ್‌ ಭೇಟಿ ಬಳಿಕ ಹೈಕಮಾಂಡ್ ನಾಯಕರ ಭೇಟಿ ಮಾಡುವ ಅವಕಾಶ ಸಿಕ್ಕರೆ ಮಾಡ್ತೀವಿ. ಇಲಾಖೆ ಕೆಲಸಗಳಿವೆ. ಹೀಗಾಗಿ, ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ ಎಂದರು.

ಡಿಕೆಶಿಯವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಸಾಮಾನ್ಯ

ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಡಿಕೆಶಿಯವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಸಾಮಾನ್ಯ. ಇನ್ನು, ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಅಧಿಕಾರ ಹಂಚಿಕೆ ಕುರಿತ ಗೊಂದಲವನ್ನು ಬೇಗ ಬಗೆಹರಿಸಿ ಎಂದು ನಾವು ಹೈಕಮಾಂಡನ್ನು ಕೇಳಿದ್ದೇವೆ ಎಂದರು.