ಷರತ್ತು ರಹಿತ ಗ್ಯಾರಂಟಿ ಜಾರಿ ಆಗದಿದ್ರೆ ಹೋರಾಟ: ನಳಿನ್ ಕುಮಾರ್ ಕಟೀಲ್
ಚುನಾವಣಾ ಪೂರ್ವ ಘೋಷಿಸಿದಂತೆ ಕಾಂಗ್ರೆಸ್ ಈಗ ಗ್ಯಾರಂಟಿ ಯೋಜನೆಗಳನ್ನು ಷರತ್ತು ರಹಿತವಾಗಿ ಜಾರಿಗೆ ತರದಿದ್ದರೆ ರಾಜ್ಯಾವ್ಯಾಪಿ ಬಿಜೆಪಿ ಹೋರಾಟ ನಡೆಸುವುದಾಗಿ ದ.ಕ. ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರು (ಜೂ.02): ಚುನಾವಣಾ ಪೂರ್ವ ಘೋಷಿಸಿದಂತೆ ಕಾಂಗ್ರೆಸ್ ಈಗ ಗ್ಯಾರಂಟಿ ಯೋಜನೆಗಳನ್ನು ಷರತ್ತು ರಹಿತವಾಗಿ ಜಾರಿಗೆ ತರದಿದ್ದರೆ ರಾಜ್ಯಾವ್ಯಾಪಿ ಬಿಜೆಪಿ ಹೋರಾಟ ನಡೆಸುವುದಾಗಿ ದ.ಕ. ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಹೆಸರಿನಲ್ಲಿ ಪೊಳ್ಳು ಯೋಜನೆಗಳ ಆಶ್ವಾಸನೆ ನೀಡುವ ಮೂಲಕ ಕಾಂಗ್ರೆಸ್ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಈಗ ಘೋಷಣೆ ಈಡೇರಿಸಲಾಗದೆ ಷರತ್ತುಗಳನ್ನು ವಿಧಿಸುತ್ತಿದೆ. ಇದು ಜನತೆಗೆ ವಂಚಿಸುವ ಕ್ರಮವಾಗಿದ್ದು, ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣೆ ಬಂದಾಗ ಗ್ಯಾರಂಟಿ ಘೋಷಿಸಿತ್ತು. ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಪ್ರಿಯಾಂಕ, ಸೋನಿಯಾ, ಸಿದ್ದರಾಮಯ್ಯ, ಡಿಕೆಶಿ ಘೋಷಣೆ ಮಾಡಿದ್ದರು. ಗ್ಯಾರಂಟಿ ಕಾರ್ಡ್ ಹಿಡಿದು ರಾಜ್ಯದ ಎಲ್ಲ ಜನರಿಗೂ ಕೊಡುತ್ತೇವೆ ಎಂದರು. 24 ಗಂಟೆಯಲ್ಲಿ ಗ್ಯಾರಂಟಿ ಜಾರಿ ಎಂದರೂ ಈಗ ಅಧಿಕಾರಕ್ಕೆ ಬಂದು 20 ದಿನಗಳಾಗುತ್ತಾ ಬಂದಿದೆ. ಕಾಂಗ್ರೆಸ್ ಸುಳ್ಳುಗಾರರ ಮತ್ತು ಮೋಸಗಾರರ ಪಾರ್ಟಿಯಾಗಿದ್ದು, ಕೇವಲ ಮೀಟಿಂಗ್‌ಗಳನ್ನೇ ಮಾಡುತ್ತಿದ್ದು, ಇನ್ನೂ ಜಾರಿಗೆ ಬಂದಿಲ್ಲ. ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿ ಜನರಿಗೆ ಗೊಂದಲ ಮೂಡಿಸುತ್ತಿದ್ದಾರೆ ಎಂದು ನಳಿನ್ ಕುಮಾರ್ ಟೀಕಿಸಿದರು.
ಯುವಜನಾಂಗಕ್ಕೆ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸುವಂತೆ ಮಾಡಲಿರುವ ನಾಸಾದ 'ಮಾರ್ಸ್ ಆಪರ್ಚುನಿಟಿ ರೋವರ್'!
ಹೀಗೆ ಜನರನ್ನು ಕಾಂಗ್ರೆಸ್ ಮೂರ್ಖರನ್ನಾಗಿ ಮಾಡಿದೆ, ಈ ಬಗ್ಗೆ ಕಾಂಗ್ರೆಸ್ ಜನತೆಯ ಕ್ಷಮೆ ಕೇಳಬೇಕು, ಜನತೆ ಕರೆಂಟ್ ಬಿಲ್ ಪಾವತಿಸುತ್ತಿಲ್ಲ, ಬಸ್‌ಗಳಲ್ಲಿ ಟಿಕೆಟ್ ತಗೆದುಕೊಳ್ಳುತ್ತಿಲ್ಲ. ಅಡ್ಡ ದಾರಿ ಹಿಡಿದು ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಈ ಹಿಂದೆ ಹಣಕಾಸು ಸಚಿವರೂ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಗೊತ್ತಿದ್ದೂ ಸುಳ್ಳು ಹೇಳಿದ್ದಾರೆ.
ಹಣಕಾಸು ಇಲಾಖೆ ಈ ಯೋಜನೆ ಜೋಡಿಸಲು ಆಗುವುದಿಲ್ಲ ಎಂದಿದೆ. ಈಗ ಈ ವಿಚಾರ ಹಾದಿ ತಪ್ಪಿಸಲು ಮೋದಿ 15 ಲಕ್ಷ ರು. ಪ್ರತಿಯೊಬ್ಬರಿಗೂ ನೀಡುತ್ತೇನೆ ಎಂದಿದ್ದಾರೆ. ಆದರೆ ಮೋದಿ ಎಲ್ಲೂ 15 ಲಕ್ಷ ರು. ನೀಡುವ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ. ಇವತ್ತು ಬೀದಿಯಲ್ಲಿ ನೌಕರರು ಏಟು ತಿನ್ನುವ ಹಾಗೆ ಕಾಂಗ್ರೆಸ್ ಮಾಡಿದೆ. ಹಳ್ಳಿಗಳಲ್ಲಿ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಜಾರಿಗೆ ತರುವಲ್ಲಿ ಮನೆಯ ಯಜಮಾನನ ಹೆಸರಿನಲ್ಲಿ ಅತ್ತೆ, ಸೊಸೆ ನಡುವೆ ಜಗಳ ತರುತ್ತಿದ್ದಾರೆ. ಈ ಮೂಲಕ ಮನೆಗಳಲ್ಲಿ ಬೆಂಕಿ ಹತ್ತಿಸಿ ಕಾಂಗ್ರೆಸ್ ಆಟ ಆಡುತ್ತಿದೆ ಎಂದು ನಳಿನ್ ಕುಮಾರ್ ಆರೋಪಿಸಿದರು.
ಎನ್‌ಐಎ ಪೂರ್ಣ ತನಿಖೆ: ಬಿಹಾರದಲ್ಲಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕಕ್ಕೆ ಸಂಚು ರೂಪಿಸಿರುವುದು ಸೇರಿದಂತೆ ಉಗ್ರ ಚಟುವಟಿಕೆ ಸಂಪರ್ಕ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ ಕರಾವಳಿಯಲ್ಲೂ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದೆ. ಉಗ್ರ ಕೃತ್ಯಗಳಿಗೆ ಕರಾವಳಿಯಿಂದಲೇ ಹಣದ ಪೂರೈಕೆಯಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ಅನೇಕ ಬಾರಿ ಕಾರ್ಯಾಚರಣೆ ನಡೆಸಿದೆ. ಉಗ್ರವಾದ ಹತ್ತಿಕ್ಕುವಲ್ಲಿ ಎನ್‌ಐಎ ಸಂಪೂರ್ಣ ತನಿಖೆ ನಡೆಸಿ ಅದನ್ನು ಮಟ್ಟಹಾಕುವ ವಿಶ್ವಾಸವಿದೆ ಎಂದು ನಳಿನ್ ಕುಮಾರ್ ಹೇಳಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಮುಖಂಡರಾದ ರವಿಶಂಕರ್ ಮಿಜಾರ್, ರಾಧಾಕೃಷ್ಣ, ರಾಮದಾಸ್, ಸುಧೀರ್ ಶೆಟ್ಟಿ, ಸಂದೇಶ್ ಶೆಟ್ಟಿಇದ್ದರು.
ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಸಹಕರಿಸಿ: ಶಾಸಕ ಸಿ.ಎಸ್.ನಾಡಗೌಡ
ಶಿರಾಡಿ ಘಾಟ್ ಚತುಷ್ಪಥದಲ್ಲೇ ಸುರಂಗ ಮಾರ್ಗ: ಶಿರಾಡಿ ಘಾಟ್‌ನಲ್ಲಿ ನೇರ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾಪವನ್ನು ಕೈಬಿಟ್ಟು ಉದ್ದೇಶಿತ ಚತುಷ್ಪಥದಲ್ಲೇ ಸುರಂಗ ಮಾರ್ಗವೂ ಒಳಗೊಳ್ಳಗೊಳ್ಳಲಿದೆ. ನೇರ ಸುರಂಗ ಮಾರ್ಗ ರಚಿಸಲು 12 ಸಾವಿರ ಕೋಟಿ ರು. ಬೇಕು, ಅದರ ಬದಲು ಹಾಲಿ ಹೆದ್ದಾರಿಯನ್ನು ಚತುಷ್ಪಥಕ್ಕೆ ಪರಿವರ್ತಿಸುವಾಗ ಅದು ಮೂರು ಸುರಂಗವನ್ನು ಹಾದುಹೋಗಲಿದೆ. ಉಳಿದ ಕಡೆಗಳಲ್ಲಿ ಮೇಲ್ಸೇತುವೆ ಬರಲಿದೆ. ಈ ಯೋಜನೆಗೆ 2.50 ಸಾವಿರ ಕೋಟಿ. ರು.ಗಳ ಡಿಪಿಆರ್ ಪೂರ್ಣಗೊಳಿಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಮೈಸೂರು-ಸುಬ್ರಹ್ಮಣ್ಯ ಮಾರ್ಗ ಹಾಗೂ ಪುತ್ತೂರು-ಮಂಗಳೂರು ನಡುವಿನ ರೈಲು ಹಳಿ ವಿದ್ಯುದೀಕರಣ ಬಳಿಕ ವಂದೇ ಭಾರತ್ ರೈಲು ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸಲಿದೆ ಎಂದರು.