ಶೀಘ್ರದಲ್ಲೇ ನೇಮಕವಾಗಲಿದೆ ಎಂಬ ಹೇಳಿಕೆ ರಾಜ್ಯ ಬಿಜೆಪಿ ನಾಯಕರಿಂದ ಕೇಳಿಬರುತ್ತಲೇ ಇದೆಯೇ ಹೊರತು ಪಕ್ಷದ ವರಿಷ್ಠರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡು ಬಂದಿಲ್ಲ. ಶಾಸಕಾಂಗ ಪಕ್ಷದ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಯ್ಕೆ ಒಂದಕ್ಕೊಂದು ಥಳಕು ಹಾಕಿಕೊಂಡಿರುವುದರಿಂದ ಪಕ್ಷದ ವರಿಷ್ಠರು ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. 

ಬೆಂಗಳೂರು(ಜೂ.13): ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ಮಂಗಳವಾರಕ್ಕೆ ಒಂದು ತಿಂಗಳು ಪೂರ್ಣವಾಗುತ್ತಿದ್ದು, ಬಿಜೆಪಿಗೆ ಇದುವರೆಗೆ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ.

ಶೀಘ್ರದಲ್ಲೇ ನೇಮಕವಾಗಲಿದೆ ಎಂಬ ಹೇಳಿಕೆ ರಾಜ್ಯ ಬಿಜೆಪಿ ನಾಯಕರಿಂದ ಕೇಳಿಬರುತ್ತಲೇ ಇದೆಯೇ ಹೊರತು ಪಕ್ಷದ ವರಿಷ್ಠರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡು ಬಂದಿಲ್ಲ. ಶಾಸಕಾಂಗ ಪಕ್ಷದ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಯ್ಕೆ ಒಂದಕ್ಕೊಂದು ಥಳಕು ಹಾಕಿಕೊಂಡಿರುವುದರಿಂದ ಪಕ್ಷದ ವರಿಷ್ಠರು ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಲೆಕ್ಕಾಚಾರ ಬಹುತೇಕ ತಿಂಗಳಾಂತ್ಯದ ಒಳಗೆ ಪೂರ್ಣಗೊಂಡು ಬಿಜೆಪಿಗೆ ಹೊಸ ಸಾರಥಿಗಳು ಬರಬಹುದು ಎಂಬ ಮಾತು ಕೇಳಿಬರುತ್ತಿದೆ.

ಮೋದಿ ಅವ​ರ​ಷ್ಟು ಕೆಲಸ ಮಾಡ​ಲಾ​ಗದೇ ಕರ್ನಾ​ಟ​ಕ​ದಲ್ಲಿ ಸೋಲು: ಸಿ.ಟಿ. ರವಿ

ವಿಧಾನಮಂಡಲದ ಅಧಿವೇಶನ ಬರುವ ಜು.3ರಿಂದ ಆರಂಭಗೊಳ್ಳಲಿದೆ. ಅಷ್ಟರೊಳಗೆ ಪ್ರತಿಪಕ್ಷದ ನಾಯಕ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿರುವ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದು ನಿಶ್ಚಿತವಾಗಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಪ್ರಮುಖವಾಗಿ ಕೇಳಿಬರುತ್ತಿದ್ದರೂ ಪಕ್ಷದ ತಳಮಟ್ಟದಲ್ಲಿ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಲಿಂಗಾಯತ ಸಮುದಾಯದಿಂದ ಬೊಮ್ಮಾಯಿ ಅವರಿಗೆ ಪರ್ಯಾಯವಾಗಿ ಬಸನಗೌಡ ಪಾಟೀಲ ಯತ್ನಾಳ, ಅರವಿಂದ್‌ ಬೆಲ್ಲದ ಅವರ ಹೆಸರುಗಳು ಪ್ರಸ್ತಾಪವಾಗಿವೆ. ಒಕ್ಕಲಿಗ ಸಮುದಾಯದಿಂದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರ್‌.ಅಶೋಕ್‌ ಅವರ ಹೆಸರುಗಳು, ಇತರ ಹಿಂದುಳಿದ ವರ್ಗದಿಂದ ವಿ.ಸುನೀಲ್‌ಕುಮಾರ್‌ ಅವರ ಹೆಸರುಗಳು ಪರಿಶೀಲನೆಯಲ್ಲಿವೆ.

ಕಳೆದ ವಾರ ಚುನಾವಣೆಯ ಸೋಲಿನ ಪರಾಮರ್ಶೆ ನಡೆಸುವ ಸಲುವಾಗಿ ಆಯೋಜಿಸಿದ್ದ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಪ್ರತ್ಯೇಕ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಶಾಸಕರೊಂದಿಗೆ ಮಾತನಾಡಿ ಯಾರು ನಾಯಕನಾಗಬಹುದು ಎಂಬುದರ ಬಗ್ಗೆ ವೈಯಕ್ತಿಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಹಲವು ಶಾಸಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಮಾಹಿತಿಯನ್ನು ಕ್ರೋಢಿಕರಿಸಿ ಅರುಣ್‌ ಸಿಂಗ್‌ ಅವರು ಪಕ್ಷದ ವರಿಷ್ಠರಿಗೆ ವರದಿ ನೀಡಿದ್ದಾರೆ. ಅದರ ಆಧಾರದ ಮೇಲೆ ಪಕ್ಷದ ವರಿಷ್ಠರು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ.