ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ರಾಜೀನಾಮೆ ಮತ್ತು ವಿದಾಯ ತನಗೆ ನೋವು ನೀಡಿದೆ ಎಂದು ಬಿಜೆಪಿ ನಾಯಕ ಬಿ.ಸಿ.ಪಾಟೀಲ್ ಹೇಳಿದ್ದಾರೆ. ತಮ್ಮ ಹಿಂದಿನ ಒಡನಾಟ, ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, , ನೇರ ನುಡಿಯ ಹೃದಯವಂತ ರಾಜಕಾರಣಿ ಎಂದು ಬಣ್ಣಿಸಿದರು.
ಬೆಂಗಳೂರು(ಮೇ.29): ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ಮತ್ತು ವಿದಾಯ ಎಲ್ಲೋ ಒಂದು ಕಡೆ ನನಗೆ ಗೊತ್ತಿಲ್ಲದೆ ನೋವು ಕೊಡುತ್ತಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು. ಆದರೆ, ಅವರೊಂದಿಗೆ ಒಡನಾಟ ಮರೆಯುವಂತದ್ದಲ್ಲ. ನಾನು ಅವರನ್ನು ಪೊಲೀಸ್ ಅಧಿಕಾರಿಯಾಗಿ ನೋಡಿದ್ದೇನೆ. 2004ರಿಂದ ಅವರೊಂದಿಗೆ ಶಾಸಕನಾಗಿದ್ದೆ. 2006ರಲ್ಲಿ ಅವರು ಕಾಂಗ್ರೆಸ್ಸಿಗೆ ಹೋಗಿ ಚುನಾವಣೆಗೆ ಸ್ಪರ್ಧಿಸಿದಾಗ ನಾನು ವಿರೋಧಿಸಿದ್ದೂ ಇದೆ. ಆದರೆ ನಾನು 2008ರಲ್ಲಿ ಕಾಂಗ್ರೆಸಿಗೆ ಬಂದ ಮೇಲೆ ಅದಾವುದನ್ನೂ ಅವರು ಮನಸ್ಸಿನಲ್ಲಿ ಇರಿಕೊಳ್ಳದೆ ನನ್ನ ಎಲ್ಲ ಚುನಾವಣೆಗಳಿಗೂ ಸಹಾಯ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಸ್ಮರಿಸಿದ್ದಾರೆ.
ನನ್ನನ್ನು ‘ಬಿಸಿ’ ಎಂದೇ ಕರೆಯುತ್ತಿದ್ದ ಸಿದ್ದರಾಮಯ್ಯನವರು
ಮುಂದುವರೆದು, ನನ್ನನ್ನು ಅತ್ಯಂತ ಹತ್ತಿರದಿಂದ ‘ಬಿ.ಸಿ’ ಎಂದೇ ಕರೆಯುತ್ತಿದ್ದರು. 2013ರಲ್ಲಿ ನಾನು ಸೋತಾಗ ನನ್ನ ಕ್ಷೇತ್ರಕ್ಕೆ 4 ನೀರಾವರಿ ಯೋಜನೆಗಳನ್ನು ನೀಡಿದ್ದಾರೆ. ನಾನು ಎಂದಿಗೂ ಅದನ್ನು ಮರೆತಿಲ್ಲ. ನನ್ನ ಕ್ಷೇತ್ರದ ಜನ ಕೂಡ ಎಂದೂ ಅದನ್ನು ಮರೆಯುವುದಿಲ್ಲ. ಸಿದ್ದರಾಮಯ್ಯ ಅವರ ಗತ್ತು ಮತ್ತು ಗಾಂಭೀರ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತಂದು ಕೊಟ್ಟಿತ್ತು. ಅಧಿಕಾರ ಶಾಶ್ವತವಲ್ಲ. ಅವರು ಅಧಿಕಾರ ಬಿಟ್ಟು ಇಳಿದಾಗ ನನಗೆ ನೋವುಂಟಾಗಿದೆ ಎಂದು ತಿಳಿಸಿದ್ದಾರೆ.
ಪ್ರೀತಿ ಹಂಚಿಕೊಳ್ಳುತ್ತಿದ್ದರು:
ನನಗೆ ಅವರ ಬಗ್ಗೆ ಇದ್ದಂತಹ ಗೌರವ ಮತ್ತು ಪ್ರೀತಿ, ನನ್ನ ಮನೆಗೆ ಎಷ್ಟು ಬಾರಿ ಬಂದಿದ್ದಾರೋ ಗೊತ್ತಿಲ್ಲ. ಕರೆದಾಗಲೆಲ್ಲ ಬಂದು ಪ್ರೀತಿ ಹಂಚಿಕೊಳ್ಳುತ್ತಾ ಇದ್ದರು. ಅವರು ಮುಖ್ಯಮಂತ್ರಿಯಾದ ಮೇಲೆ 2023ರ ನಂತರ ಹೋಗಿ ಭೇಟಿಯಾಗಲಿಲ್ಲ. ಒಂದು ಬಾರಿ ದೆಹಲಿಯಲ್ಲಿ ಭೇಟಿಯಾದಾಗ ಅತ್ಯಂತ ಪ್ರೀತಿ ವಿಶ್ವಾಸದಿಂದ ಮಾತನಾಡಿ ನನಗೆ ಬೆನ್ನು ತಟ್ಟಿದರು ಎಂದು ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ.
ಸಿದ್ದರಾಮಯ್ಯ ಒಬ್ಬ ಇತಿಹಾಸಕಾರ, ಅರ್ಥಶಾಸ್ತ್ರಜ್ಞ, ಚಾಣಾಕ್ಷ, ಹೃದಯವಂತ, ನೇರ ನಿಷ್ಠುರ ನುಡಿಗೆ ಹೆಸರಾದವರು. ಇಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭಗವಂತ ಅವರಿಗೆ ಆಯುರಾರೋಗ್ಯ ಭಾಗ್ಯವನ್ನು ಕೊಡಲಿ. ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ನೀಡಲಿ. ಯುವಕರಿಗೆ ಮಾರ್ಗದರ್ಶನ ಮಾಡಲಿ ಎಂದು ಬಿ.ಸಿ.ಪಾಟೀಲ್ ಆಶಿಸಿದ್ದಾರೆ.


