ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ ಸಿದ್ದರಾಮಯ್ಯ
ಅದನ್ನು ಒಪ್ಪಿಕೊಂಡದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಧನ್ಯವಾದ ತಿಳಿಸಿದ್ದಾರೆ.
ಬೆಂಗಳೂರು, (ಜೂನ್.30): ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿ ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆ ನವಂಬರ್ ವರೆಗೆ ವಿಸ್ತರಿಸಿ ಘೋಷಿಸಿದರು.
ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಮೋದಿ ಮಹತ್ವದ ಘೋಷಣೆ: ದೀಪಾವಳಿವರೆಗೂ 80 ಕೋಟಿ ಬಡವರಿಗೆ ಉಚಿತ ರೇಷನ್!
ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆ ನವಂಬರ್ ವರೆಗೆ ಮುಂದುವರಿಸಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾಗಾಂಧಿಯವರು ತಿಂಗಳ ಹಿಂದೆಯೇ ಈ ಬೇಡಿಕೆ ಇಟ್ಟಿದ್ದರು. ಅದನ್ನು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
ಮೋದಿ ಭಾಷಣಕ್ಕೆ ಕಿಡಿಕಾರಿದ ಸಿದ್ದು
ಹೌದು...ಬಡವರಿಗೆ ಉಚಿತ ಆಹಾರ ಧಾನ್ಯ ಘೋಷಣೆ ಮಾಡಿರುವುದನ್ನು ಸ್ವಾಗತಿಸಿದ, ಸಿದ್ದರಾಮಯ್ಯ ಉನ್ನುಳಿದಂತೆ ಮೋದಿ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದೆ ಪ್ರಧಾನಿ ನರೇಂದ್ರ ಮೋದಿ ಭಾಷಣಗಳು. ನಿಯಂತ್ರಣ ಮೀರಿ ಹರಡುತ್ತಿರುವ ಕೊರೋನಾ ಸೋಂಕಿನಿಂದ ತತ್ತರಕ್ಕೀಡಾಗಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಯಾವ ನಿರ್ದಿಷ್ಠ ಯೋಜನೆಗಳ ಪ್ರಸ್ತಾವಗಳೇ ಇಲ್ಲದ ಪ್ರಧಾನಿ ಭಾಷಣ ಕೈಲಾಗದ ನಾಯಕನ ಗೋಳಾಟದಂತಿತ್ತು ಎಂದು ಜರಿದಿದ್ದಾರೆ.
ಆಸ್ಪತ್ರೆಗಳು ತುಂಬಿಹೋಗಿವೆ, ಆಮ್ಲಜನಕ ಪೂರೈಕೆ ವ್ಯವಸ್ಥೆ, ವೆಂಟಿಲೇಟರ್‌ಗಳ ತೀವ್ರ ಕೊರತೆ ಇದೆ. ದುಬಾರಿ ಚಿಕಿತ್ಸೆ ವೆಚ್ಚದಿಂದಾಗಿ ಕೊರೋನಾ ಸೋಂಕಿಗಿಂತ ಕೊರೋನಾ ಚಿಕಿತ್ಸೆಗೆ ಜನ ಹೆದರುವಂತಾಗಿದೆ. ಈ ಬಗ್ಗೆ ರಾಜ್ಯಗಳಿಗೆ ಕೇಂದ್ರ ನೆರವು ಘೋಷಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಿಎಂ ಕೇರ್ಸ್ ನಿಧಿಗೆ ನೆರವಾಗಲು ದೇಶದ ಜನರನ್ನು ವಿನಂತಿಸಿದ್ದ ನರೇಂದ್ರ ಮೋದಿ, ಅದರ ಖರ್ಚು-ವೆಚ್ಚದ ವಿವರವನ್ನು ದೇಶದ ಮುಂದಿಟ್ಟು ಪಾರದರ್ಶಕವಾಗಿ ನಡೆದುಕೊಳ್ಳಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ. ಇದಕ್ಕೆ ಚೀನಾದಿಂದಲೂ ದೇಣಿಗೆ ಪಡೆಯಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಿತ್ತು ಎಂದು ಸಲಹೆಯನ್ನೂ ಸಹ ಕೊಟ್ಟಿದ್ದಾರೆ.
ಸತತ 23ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದ್ದು, ಆಹಾರಧಾನ್ಯ,ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಯೂ ಏರುತ್ತಿದೆ. ಈ ತೈಲಬೆಲೆ ಇನ್ನೆಷ್ಟು ದಿನಗಳ ಕಾಲ ಏರಲಿದೆ ಎಂದಾದರೂ ಮೋದಿ ಹೇಳಿಬಿಟ್ಟಿದ್ದರೆ ಜನ ಕೆಟ್ಟ ದಿನಗಳಿಗೆ ಹೊಂದಿಕೊಳ್ಳಲು ಸಿದ್ದವಾಗುತ್ತಿದ್ದರು ಎಂದು ಟಾಂಗ್ ಕೊಟ್ಟರು.