ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಸಚಿವ ಬಾಲಕೃಷ್ಣ ತೀವ್ರ ತಿರುಗೇಟು ನೀಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದಾಗ ಇವರೇಕೆ ಅಭಿವೃದ್ಧಿ ಮಾಡಲಿಲ್ಲ? ಈಗ ಬಂದು ತೆವಲಿಗೆ ಮಾತನಾಡ್ತಾರಾ? ಎಂದು ಟಾಂಗ್ ಕೊಟ್ಟಿದ್ದಾರೆ.
ಕೋಲಾರ (ನ.25): ಅಖಂಡ ಕರ್ನಾಕವನ್ನು ಮುಂದಿನ ಐದಾರು ವರ್ಷಗಳಲ್ಲಿ ಪ್ರತ್ಯೇಕ ರಾಜ್ಯ ಮಾಡುತ್ತೇವೆ ಎಂದು ಅವರು ತೆವಲಿಗೆ ಹೇಳುತ್ತಾರೆ. ಡಬಲ್ ಇಂಜಿನ್ ಸರ್ಕಾರವಿದ್ದಾಗ ಅಭಿವೃದ್ಧಿ ಏಕೆ ಮಾಡಲಿಲ್ಲ. ಇಂಥವರಿಗೆಲ್ಲಾ ನಾವು ಉತ್ತರ ಕೊಡಲಾಗಲ್ಲ ಎಂದು ಸಚಿವ ಹೆಚ್.ಸಿ. ಬಾಲಕೃಷ್ಣ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಉತ್ತರ ಕರ್ನಾಟಕ ಅಭಿವೃದ್ಧಿಗೆ ಕೊಡುಗೆಯನ್ನೇ ನೀಡಿಲ್ಲ. ಮುಂದಿನ 5 ವರ್ಷಗಳನ್ನು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದು ಬೆಳಗಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ಅವರ ಹೇಳಿಕೆಗೆ ಕೋಲಾರದಲ್ಲಿ ತಿರುಗೇಟು ನೀಡಿದ ಸಚಿವ ಬಾಲಕೃಷ್ಣ, 'ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ (ರಾಜ್ಯ ಮತ್ತು ಕೇಂದ್ರದಲ್ಲೂ ಬಿಜೆಪಿ ಸರ್ಕಾರ) ಇದ್ದಾಗ ಉತ್ತರ ಕರ್ನಾಟಕವನ್ನು ಏಕೆ ಅಭಿವೃದ್ಧಿಪಡಿಸಲಿಲ್ಲ? ಅವರು ಆಗ ಅಭಿವೃದ್ಧಿ ಮಾಡಿದ್ದರೆ ಈಗ ಅಭಿವೃದ್ಧಿಯ ಬಗ್ಗೆ ಪ್ರಶ್ನೆಯೇ ಬರುತ್ತಿರಲಿಲ್ಲ. ಅವರವರ ತೆವಲಿಗೆ ಮಾತನಾಡುತ್ತಾರೆ, ಅದಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ' ಎಂದು ಕಿಡಿಕಾರಿದ್ದಾರೆ.
ಅಭಿವೃದ್ಧಿಗೆ ಅನುದಾನದ ಲೆಕ್ಕ ಕೊಟ್ಟ ಸಚಿವರು:
ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ವಿರೋಧ ಪಕ್ಷದವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಆರೋಪ ಮಾಡುವುದೇ ಅವರ ಕೆಲಸವಾಗಿದೆ ಎಂದರು. 'ಮುಖ್ಯಮಂತ್ರಿಗಳು ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಅಲ್ಲದೆ, ಪುರಸಭೆಗೆ 40 ಕೋಟಿ ಹಾಗೂ ನಗರಸಭೆಗೆ 60 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಿ-ಖಾತೆಯಿಂದ ಎ-ಖಾತೆ ಮಾಡಲು ತೀರ್ಮಾನಿಸಲಾಗಿದ್ದು, ಅಕ್ರಮ-ಸಕ್ರಮ ಯೋಜನೆಗೂ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದರು.
HDK ನಾಮಫಲಕ ವಿವಾದಕ್ಕೆ ಪ್ರತಿಕ್ರಿಯೆ:
ಮಂಡ್ಯದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಾಮಫಲಕ ತೆರವುಗೊಳಿಸಿದ ವಿಚಾರವಾಗಿ ಮಾತನಾಡಿದ ಸಚಿವರು, "ಈ ವಿಚಾರವನ್ನು ಶಾಸಕ ಉದಯ್ ಅವರನ್ನೇ ಕೇಳಬೇಕು. ಅದು ಕೇವಲ ಮಂಡ್ಯ ಜಿಲ್ಲೆಗೆ ಮಾತ್ರ ಸೀಮಿತವಾದ ವಿಚಾರವೇ ಹೊರತು, ಇಡೀ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಮಂಡ್ಯದಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಉದಯ್ ಹಾಗೆ ಹೇಳಿರಬಹುದು. ಈ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದವರೆಲ್ಲಾ ಕೆಲಸ ಮಾಡಿದ್ದಾರಾ?" ಎಂದು ಪ್ರಶ್ನಿಸಿದರು.
ಶಾಸಕರ ರಾಜೀನಾಮೆ ಬೆದರಿಕೆ ಬ್ಲ್ಯಾಕ್ಮೇಲ್ ಅಲ್ಲ:
ಚಿಕ್ಕಮಗಳೂರು ಭಾಗದ ಶಾಸಕರು ರಾಜೀನಾಮೆ ಬೆದರಿಕೆ ಹಾಕಿರುವ ಕುರಿತು ಪ್ರತಿಕ್ರಿಯಿಸಿದ ಬಾಲಕೃಷ್ಣ, "ಕ್ಷೇತ್ರದ ಕೆಲಸಗಳಿಗೆ ಸರಿಯಾಗಿ ಸ್ಪಂದನೆ ಸಿಗದಿದ್ದರೆ ರಾಜೀನಾಮೆ ನೀಡುತ್ತೇವೆ ಎಂದು ಶಾಸಕರು ಹೇಳಿರುವುದು ಬ್ಲ್ಯಾಕ್ಮೇಲ್ ಅಲ್ಲ. ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ, ಅದರಲ್ಲಿ ಯಾವುದೇ ತಪ್ಪಿಲ್ಲ. ರಾಜಕೀಯದಲ್ಲಿ ಇದೆಲ್ಲಾ ಸಹಜ. ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಹಿರಿಯ ಸಚಿವರು ಅವರೊಂದಿಗೆ ಮಾತನಾಡಿ ಸಮಾಧಾನಪಡಿಸಿದ್ದಾರೆ, ಸಿಎಂ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ" ಎಂದು ತಿಳಿಸಿದರು.
















